ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ ಈ ಹೊತ್ತಿನಲ್ಲಿ ನೆನಪಿಸಿಕೊಳ್ಳಬೇಕಾದ ಐದು ಯೋಜನೆಗಳು…
ಅದು ಮೇ 26, 2018. ಇಡೀ ದೇಶ ಒಗ್ಗಟ್ಟಾಗಿ ಒಬ್ಬ ನಂಬಿಕಸ್ಥ ಪ್ರಧಾನಿಯನ್ನು ಆಯ್ಕೆ ಮಾಡಿ, ದೇಶದ ಗದ್ದುಗೆ ಮೇಲೆ ಕುಳ್ಳಿರಿಸಿದ ದಿನ. ಮೂರು ದಶಕದ ನಂತರ ಒಂದೇ ಒಂದು ಪಕ್ಷಕ್ಕೆ ಬಹುಮತ ನೀಡಿ, ಒಬ್ಬ ವ್ಯಕ್ತಿಯನ್ನು ಅತಿಯಾಗಿ ನಂಬಿದ ದಿನ, ಒಬ್ಬ ಟೀ ಮಾರುವವರೂ ಭಾರತದ ಪ್ರಧಾನಿಯಾಗಬಹುದು, ಇದು ಪ್ರಜಾಪ್ರಭುತ್ವಕ್ಕೆ ಸಾರಿ ಸಾರಿ ಹೇಳಿದ ದಿನ. ಹೌದು, ಅದು ನರೇಂದ್ರ ದಾಮೋದರ್ ದಾಸ್ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಿದ. ಇಂದಿಗೆ ಮೋದಿ ಅವರು ಪ್ರಧಾನಿಯಾಗಿ ನಾಲ್ಕು ವರ್ಷಗಳಾಗಿವೆ. ಈ ಅವಧಿಯಲ್ಲಿ ಮೋದಿ ಹಲವು ಯೋಜನೆ ಜಾರಿಗೊಳಿಸಿದ್ದಾರೆ. ಅವುಗಳಲ್ಲಿ ದೇಶದ ಚಹರೆಯನ್ನೇ ಬದಲಾಯಿಸುವ ಶಕ್ತಿಯಿದ್ದ ಐದು ಯೋಜನೆಗಳ ಕುರಿತು ಇಲ್ಲಿ ವಿವರಿಸಲಾಗಿದೆ.
ನೋಟು ನಿಷೇಧ
2016ರ ನವೆಂಬರ್ 8. ಈ ದಿನವನ್ನು ಯಾವ ಕಾಳಧನಿಕನೂ ಮರೆಯುವುದಿಲ್ಲ. ಐನೂರು, ಸಾವಿರ ರೂಪಾಯಿ ನೋಟುಗಳನ್ನು ನಿಷೇಧ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರಿಗಳಿಗೆ ಆಘಾತ ನೀಡಿದರು. ಹೀಗೆ ನೋಟು ನಿಷೇಧ ಮಾಡಿದ ಕಾರಣ ಪ್ರಸ್ತುತ ದೇಶ ಡಿಜಿಟಲ್ ಆಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ಕಪ್ಪು ಹಣ ಸರ್ಕಾರದ ಪಾಲಾಗಿದೆ. ಅಷ್ಟೇ ಅಲ್ಲ, ನೋಟು ನಿಷೇಧದ ಬಳಿಕ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಶೇ.25ರಷ್ಟು ಏರಿಕೆಯಾಗಿದ್ದು, ಸುಮಾರು 91 ಲಕ್ಷ ನೂತನ ತೆರಿಗೆದಾರರ ನೋಂದಣಿಯಾಗಿದೆ. ಬ್ಯಾಂಕಿನಲ್ಲಿ ಲಕ್ಷ ಲಕ್ಷ ಹಣ ಠೇವಣಿ ಮಾಡುವವರು, ವರ್ಗಾವಣೆ ಮಾಡುವವರು ತಮ್ಮ ಹಣಕ್ಕೆ ದಾಖಲೆ ತೋರಿಸುವಂತೆ ಮಾಡಿದ್ದು, ಇದೇ ನೋಟು ನಿಷೇಧ ಎಂಬ ದಿಟ್ಟ ನಿರ್ಧಾರ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)
ಕೇಂದ್ರ ಸರ್ಕಾರ ದೇಶದ ತೆರಿಗೆ ಸುಧಾರಣೆಗಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ಕಳೆದ ವರ್ಷದ ಜುಲೈ 1ರಂದು ಜಾರಿಗೊಳಿಸಿದಾಗ ದೇಶದ ವಿತ್ತೀಯ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ಪ್ರತಿಪಕ್ಷಗಳು ಸೇರಿ ಹಲವರು ಬೊಬ್ಬೆ ಹಾಕಿದರು. ಆದರೆ ಮೋದಿ ಸರ್ಕಾರ ಜಾರಿಗೊಳಿಸಿದ ಜಿಎಸ್ಟಿ ಭಾರತದ ವಿತ್ತೀಯ ಸ್ಥಿತಿ ಸುಧಾರಣೆಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ವಿಶ್ವಸಂಸ್ಥೆಯೇ ಹೇಳಿದೆ. ಅಲ್ಲದೆ ಭಾರತದ ಜಿಡಿಪಿ ಏಳರ ಗಡಿ ದಾಟಿದೆ. ಅಕ್ಕಿ, ಬೇಳೆ ಸೇರಿ ಹಲವು ನಿತ್ಯ ಬಳಕೆಯ ವಸ್ತುಗಳ ಮೇಲೆ ಸರ್ಕಾರ ತೆರಿಗೆಯನ್ನೇ ವಿಧಿಸದೆ ಬಡವರಿಗೆ ಅನುಕೂಲ ಮಾಡಿಕೊಟ್ಟಿದೆ. ದಲ್ಲಾಳಿಗಳು ತೆರಿಗೆ ಹೆಸರಲ್ಲಿ ಜನರ ದುಡ್ಡು ತಿನ್ನುವುದು ನಿಂತಿದೆ. ಹೇಳಿ, ಒಂದು ಯೋಜನೆಯಿಂದ ಇಷ್ಟು ಲಾಭವಾದರೆ ಜಿಎಸ್ಟಿಯನ್ನೇಕೆ ವಿರೋಧಿಸಬೇಕು?
ಮೇಕ್ ಇನ್ ಇಂಡಿಯಾ
ಸ್ವಾತಂತ್ರ್ಯ ಬಂದು 60 ವರ್ಷವಾದರೂ ಭಾರತ ಯಾವುದೇ ಪ್ರಮುಖ ವಸ್ತು, ಶಸ್ತ್ರಾಸ್ತ್ರ ಸೇರಿ ಹಲವು ವಿಷಯಗಳಿಗೆ ವಿದೇಶವನ್ನೇ ಅವಲಂಬಿಸುವಂತಾಗಿತ್ತು. ಆದರೆ ಮೋದಿ ಅವರು ಪ್ರಧಾನಿಯಾದ ಬಳಿಕ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಳಿಸಿದ್ದು, ಭಾರತದಲ್ಲೇ ಉತ್ಪನ್ನ ಉತ್ಪಾದಿಸಲು ಅನುಕೂಲವಾಗಿದೆ. ಪ್ರಸ್ತುತ ಮೇಕ್ ಇನ್ ಇಂಡಿಯಾಗೆ ವಿದೇಶಗಳೇ ದುಡ್ಡು ಹೂಡುತ್ತಿವೆ. 2025ರ ವೇಳೆಗೆ ಭಾರತದ ಜಿಡಿಪಿ ಶೇ.25ಕ್ಕೆ ಹಾಗೂ 10 ಕೋಟಿ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ಮುದ್ರಾ ಬ್ಯಾಂಕ್ ಯೋಜನೆಯನ್ವಯ ಭಾರತದಲ್ಲಿ 70 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ.
ಆಧಾರ್ ಯೋಜನೆ
ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ನೀಡುವ ಯೋಜನೆಯನ್ನು ಯುಪಿಎ ಸರ್ಕಾರವೇ ಜಾರಿಗೊಳಿಸಿದ್ದರೂ, ಎಲ್ಲರಿಗೂ ಆಧಾರ್ ಕಾರ್ಡ್ ವಿತರಿಸುವಲ್ಲಿ ಕಾಂಗ್ರೆಸ್ ಎಡವಿತ್ತು. ಆದರೆ ನರೇಂದ್ರ ಮೋದಿ ಅವರು ಈ ಯೋಜನೆಗೆ ಹೊಸ ರೂಪ ಕೊಟ್ಟು, ಪ್ರತಿಯೊಬ್ಬರಿಗೂ ಆಧಾರ್ ಸಿಗುವಂತೆ ಮಾಡಿದರು. ಅಷ್ಟೇ ಅಲ್ಲ, ಮೊಬೈಲ್, ಬ್ಯಾಂಕ್ ಗಳಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಸುವ ಮೂಲಕ ಭ್ರಷ್ಟಾಚಾರ ತಡೆಗೂ ಮೋದಿ ಮುಂದಾಗಿದ್ದಾರೆ. ಮೊದಲೆಲ್ಲ ಒಂದು ಸಿಮ್ ತೆಗೆದುಕೊಳ್ಳಲು ಚುನಾವಣೆ ಗುರುತಿನ ಚೀಟಿ ನೀಡಬೇಕಿತ್ತು. ಆದರೆ ಈಗ ಹಾಗಲ್ಲ, ಆಧಾರ್ ನಂಬರ್ ನೀಡಿದರೂ ಸಾಕು, ನಮ್ಮ ಸಿಮ್ ಆ್ಯಕ್ಟಿವೇಟ್ ಆಗುತ್ತದೆ.
ಸ್ವಚ್ಛ ಭಾರತ ಅಭಿಯಾನ
ಅರವತ್ತು ವರ್ಷ ಆಳಿದರೂ ದೇಶವನ್ನು ಸ್ವಚ್ಛವಾಗಿಡಬೇಕು, ಮಹಾತ್ಮ ಗಾಂಧೀಜಿಯವರ ಕನಸು ನನಸು ಮಾಡಬೇಕು ಎಂಬ ಕನಿಷ್ಠ ಕಲ್ಪನೆಯೂ ಕಾಂಗ್ರೆಸ್ಸಿಗೆ ಇರದ ಕಾರಣ ನಮ್ಮ ದೇಶ ಕೊಳಕು, ಕಸದಿಂದ ಕೂಡಿತ್ತು. ಆದರೆ ಮೋದಿ ಆಡಳಿತಕ್ಕೆ ಬಂದ ಕೂಡಲೇ ಮೊದಲು ಸ್ವಚ್ಛ ಭಾರತ ಅಭಿಯಾನ ಕೈಗೊಂಡರು. ತಾವೇ ರಸ್ತೆಗೆ ಇಳಿದು, ಕಸ ಗುಡಿಸಿದರು. ಆಗ ಇಡೀ ದೇಶದ ಜನ ಸ್ವಚ್ಛ ಭಾರತದ ಕಲ್ಪನೆಯೊಂದಿಗೆ ರಸ್ತೆ, ಶಾಲೆ ಆವರಣ ಸ್ವಚ್ಛಗೊಳಿಸಿದರು. ಇಂದಿಗೂ ಯಾರಾದರೂ ಬೀದಿಯಲ್ಲಿ ಕಸ ಹಾಕಿದರೆ, ಸ್ವಚ್ಛ ಭಾರತ ಎಂದು ಅವರಲ್ಲಿ ಜಾಗೃತಿ ಮೂಡಿಸುತ್ತೇವೆ. ಅಷ್ಟರಮಟ್ಟಿಗೆ ಸ್ವಚ್ಛ ಭಾರತದ ಕಲ್ಪನೆ ನಮ್ಮಲ್ಲಿ ಅಚ್ಚೊತ್ತಿದೆ. ಅಷ್ಟೇ ಅಲ್ಲ, ಈ ಯೋಜನೆ ಮೂಲಕ ದೇಶಾದ್ಯಂತ 10 ಸಾವಿರ ಕೋಟಿ ಶೌಚಾಲಯ ಕಟ್ಟಿಸಿದ್ದು, ಗ್ರಾಮೀಣ ಜನ ಬಯಲು ಶೌಚದಿಂದ ಮುಕ್ತರಾಗಿದ್ದಾರೆ.
ಇವಿಷ್ಟೇ ಅಲ್ಲ, ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, ಕೃಷಿ ಸಿಂಚಾಯಿ ಯೋಜನೆ ಮೂಲಕ ರೈತರ ನೆರವಿಗೆ ಧಾವಿಸಿದ್ದು, ರೈತರ ಬೆಳೆಗೆ ಒಂದೂವರೆ ಪಟ್ಟು ಬೆಂಬಲ ಬೆಲೆ ನೀಡಿದ್ದು, ಡಿಜಿಟಲ್ ಇಂಡಿಯಾ ಯೋಜನೆ ಜಾರಿಗೊಳಿಸಿದ್ದು, ಮುದ್ರಾ ಬ್ಯಾಂಕ್ ಯೋಜನೆ ಮೂಲಕ ಬಡವರಿಗೆ ಸಾಲ ಒದಗಿಸಿದ್ದು, ಜನಧನ್ ಯೋಜನೆ ಮೂಲಕ ರೈತರಿಗೂ ಒಂದು ಅಕೌಂಟ್ ಮಾಡಿಸಿಕೊಟ್ಟಿದ್ದು ನರೇಂದ್ರ ಮೋದಿ ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
Leave A Reply