443 ವರ್ಷಗಳ ನಂತರ ಅಲಹಾಬಾದ್ ಗೆ ಪ್ರಯಾಗ್ ರಾಜ್ ಎಂದು ಮರುನಾಮಕರಣ!!
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗುತ್ತಲೇ ಆ ರಾಜ್ಯ ತನ್ನ ಸನಾತನ ಧರ್ಮದ ಬೇರುಗಳನ್ನು ಗಟ್ಟಿಗೊಳಿಸುವಂತೆ ಕಾಣುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಅಲಹಾಬಾದ್ ಹೆಸರಿನ ಬದಲಾವಣೆ. ಉತ್ತರ ಪ್ರದೇಶದ ಅತ್ಯಂತ ಹಳೆಯ ನಗರವಾಗಿರುವ ಅಲಹಾಬಾದ್ ಸದ್ಯದಲ್ಲಿಯೇ ಪ್ರಯಾಗ್ ರಾಜ್ ಎನ್ನುವ ಹೆಸರನ್ನು ಹೊಂದಲಿದೆ. ಇಂತಹ ಒಂದು ಪ್ರಸ್ತಾವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನಸ್ಸಿನಲ್ಲಿದೆ. ಅದನ್ನು ಶೀಘ್ರದಲ್ಲಿಯೇ ಅವರು ಕ್ಯಾಬಿನೆಟ್ ನಲ್ಲಿ ಮಂಡಿಸಲಿದ್ದಾರೆ. ಸಚಿವ ಸಂಪುಟದಲ್ಲಿ ಮಂಜೂರಾತಿ ಪಡೆದ ನಂತರ ಉಳಿದ ಕಾನೂನು ಪ್ರಕ್ರಿಯೆ ಮುಗಿದು ಹೋದರೆ ಭವಿಷ್ಯದಲ್ಲಿ ಅಲಹಾಬಾದ್ ಹೆಸರು ಇತಿಹಾಸ ಪುಟ ಸೇರಲಿದೆ. ಅದರ ನಂತರ ಸನಾತನ ಸಂಸ್ಕೃತಿಯ ಮೂಲ ಹೆಸರು ಪ್ರಯಾಗ್ ರಾಜ್ ಹೆಸರು ಮತ್ತೊಮ್ಮೆ ತನ್ನ ಗತವೈಭವವನ್ನು ಮೆರೆಯಲಿದೆ.
ಹಾಗಂತ ಅಲಹಾಬಾದ್ ನಗರಕ್ಕೆ ಪ್ರಯಾಗ್ ರಾಜ್ ಎನ್ನುವ ಹೆಸರನ್ನು ಇಡುವ ಮೂಲಕ ಹೊಸ ನಾಮಕರಣ ಆಗುತ್ತಿದೆಯೇನೋ ಎಂದು ನಿಮಗೆ ಅನಿಸಬಹುದು. ಆದರೆ ವಾಸ್ತವ ಎಂದರೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಮಾಡುತ್ತಿರುವುದು ಹಳೆ ಮತ್ತು ನೈಜ ಹೆಸರನ್ನು ಮತ್ತೆ ಇಡುವ ಪ್ರಕ್ರಿಯೆ ಅಷ್ಟೇ. 443 ವರ್ಷಗಳ ಹಿಂದೆ ಅಲಹಾಬಾದ್ ಎನ್ನುವ ಹೆಸರೇ ಇರಲಿಲ್ಲ. ಆಗ ಆ ಊರನ್ನು ಕರೆಯುತ್ತಿದ್ದದ್ದೇ ಪ್ರಯಾಗ್ ರಾಜ್ ಎನ್ನುವ ಹೆಸರಿನಲ್ಲಿ.
ಆದರೆ ಕಾಲಕ್ರಮೇಣ ನಮ್ಮ ದೇಶದ ಮೇಲೆ ದಂಡೆತ್ತಿ ಬಂದ ಇಸ್ಲಾಂ ಮೂಲಭೂತವಾದಿ ರಾಜರು ಪ್ರಯಾಗ್ ರಾಜ್ ಎನ್ನುವ ಹೆಸರನ್ನು ಅಳಿಸಿ ಅಲಹಾಬಾದ್ ಎಂದು ಕರೆದರು. ಅದೇ ಹೆಸರು ಇಲ್ಲಿಯ ತನಕ ಚಾಲ್ತಿಯಲ್ಲಿತ್ತು. ಈ ಊರನ್ನು ಅಕ್ಬರ್ ಮೊದಲ ಬಾರಿ ಅಲಹಾಬಾದ್ ಎಂದು ಕರೆದ ಎನ್ನಲಾಗುತ್ತದೆ. ಜಹಾಂಗೀರ್ ಮತ್ತು ಷಹಾಜಹಾನ್ ಕಾಲದಲ್ಲಿಯೂ ಇದನ್ನು ಅಲಹಾಬಾದ್ ಎಂದು ಹೇಳಲಾಗುತ್ತಿತ್ತು. ಆ ಬಳಿಕ ಪ್ರಯಾಗ್ ರಾಜ್ ಎನ್ನುವ ಹೆಸರು ಹಾಗೆ ಕಾಲಗರ್ಭದಲ್ಲಿ ಮರೆಯಾಗಿ ಹೋಗಿತ್ತು.
ಆದರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ 2014, ಮೇ 28 ಕ್ಕೆ ತಮ್ಮ ಟ್ವಿಟ್ ನಲ್ಲಿ ಮೊದಲ ಬಾರಿ ರಾಜ್ಯಸಭಾ ಸಂಸದ ಡಾ|ಸುಬ್ರಹ್ಮಣ್ಯನ್ ಸ್ವಾಮಿಯವರು ಈ ವಿಷಯವನ್ನು ಉಲ್ಲೇಖಿಸಿ ಅಲಹಾಬಾದ್ ಗೆ ಪ್ರಯಾಗ್ ಎಂದು ಕರೆಯುವ ಸಮಯ ಹತ್ತಿರ ಬಂದಿದೆ ಎಂದು ಬರೆದಿದ್ದರು. ಈಗ ಅದು ಅನುಷ್ಟಾನಕ್ಕೆ ಬರುತ್ತಿರುವುದು ಸ್ಪಷ್ಟವಾಗಿದೆ.
ಈ ಕುರಿತು ಬೇರೆ ಸಂಘಟನೆಗಳು ಹಿಂದೆ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಸಲ್ಲಿಸಿ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಮರು ನಾಮಕರಣ ಮಾಡುವಂತೆ ಒತ್ತಾಯಿಸಿದ್ದವು. ಯಮುನಾ ನದಿ ತೀರದಲ್ಲಿರುವ ಈ ನಗರವನ್ನು ಪ್ರಯಾಗ್ ರಾಜ್ ಎಂದು ಕರೆದರೆ ಈ ಸ್ಥಳದ ಪಾವಿತ್ರತೆ ಹೆಚ್ಚಾಗುತ್ತದೆ ಎಂದು ಅಖಿಲ ಭಾರತೀಯ ಆಖಾರ ಪರಿಷದ್ ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಿತ್ತು. ಇವತ್ತಿಗೂ ಅಲ್ಲಿ ಪ್ರಯಾಗ್ ಸಂಗೀತ್ ಸಮಿತಿ ಎನ್ನುವ ಸಂಘಟನೆಗಳು ಆ ಸ್ಥಳದ ಮೂಲ ಹೆಸರಿನಲ್ಲಿಯೇ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡಿದೆ. ಇಲ್ಲಿರುವ ಉಪ ರೈಲು ನಿಲ್ದಾಣವೊಂದಕ್ಕೆ ಪ್ರಯಾಗ್ ರೈಲ್ವೆ ನಿಲ್ದಾಣ ಎಂದೇ ಕರೆಯಲಾಗುತ್ತದೆ.
ಪ್ರಯಾಗ್ ಎಂದರೆ ಸಮರ್ಪಣೆ ಎಂದರ್ಥ. ಬ್ರಹ್ಮ ದೇವರು ಭೂಮಿಯನ್ನು ಸೃಷ್ಟಿಸಿದ ನಂತರ ಇದೇ ಜಾಗದಲ್ಲಿ ನಿಂತು ಸಮರ್ಪಣ ಕಾರ್ಯ ನಡೆಸಿದರು ಎಂದು ಹೇಳಲಾಗುತ್ತದೆ.
Leave A Reply