ಮಳೆ ಕಡಿಮೆ ಬಿದ್ದ ಕಾರಣ ಚುನಾವಣೆ ಬೇಗ! ಜುಲೈ 23 ಕ್ಕೆ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ?
ರಾಜ್ಯ ಸರಕಾರ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಧಾನಸಭೆಯನ್ನು ವಿಸರ್ಜಿಸುವ ಪ್ರಕ್ರಿಯೆಗೆ ಕೈ ಹಾಕಲಿದೆ ಎಂದು ಕಾಂಗ್ರೆಸ್ಸಿನ ಒಳಗಿನ ಮೂಲಗಳು ಹೇಳಿವೆ. ಅದಕ್ಕೆ ಕಾರಣ ಮಳೆ. ರಾಜ್ಯದ ಅನೇಕ ತಾಲೂಕುಗಳಲ್ಲಿ ಜುಲೈ ಮುಗಿಯುತ್ತಾ ಬರುತ್ತಿದ್ದರೂ ನಿರೀಕ್ಷಿದಷ್ಟು ಮಳೆ ಬಂದಿಲ್ಲ. ಇದರಿಂದ ಮುಂದೆ ಮಾರ್ಚ್ ನಲ್ಲಿ ರಾಜ್ಯದಲ್ಲಿ ನೀರಿನ ಹಾಹಾಕಾರ ಏಳಲಿದೆ. ಫೆಬ್ರವರಿ, ಮಾರ್ಚ್ ಹೊತ್ತಿಗೆ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಲ್ಲಿ ಜನರನ್ನು ನಿಯಂತ್ರಿಸುವುದು ಕಷ್ಟದ ಮಾತು. ಜನರಿಗೆ, ಜಾನುವಾರುಗಳಿಗೆ ನೀರು ಸಿಗದೆ ಹೋದರೆ ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು. ಚುನಾವಣೆಗೆ ದಿನಗಣನೆ ಆರಂಭವಾಗುವ ಸಮಯದಲ್ಲಿ ನೀರಿನ ಬವಣೆಯಿಂದ ತತ್ತರಿಸುತ್ತಿರುವ ಕರ್ನಾಟಕ ಎಂದು ಮಾಧ್ಯಮಗಳಲ್ಲಿ ಬಂದರೆ ಜನರ ಮನೆ ಬಾಗಿಲಿಗೆ ವೋಟು ಕೇಳಲು ಹೋಗುವುದು ಕೂಡ ಕಷ್ಟ. ಹಾಗಿರುವಾಗ ಅದನ್ನೆಲ್ಲ ತಪ್ಪಿಸಬೇಕಾದರೆ ಡಿಸೆಂಬರ್ ಮುಗಿಯುವ ಹೊತ್ತಿಗೆ ಹೊಸ ಸರಕಾರ ರಚಿಸಬೇಕು ಎನ್ನುವುದು ರಾಜ್ಯದ ಉನ್ನತ ನಾಯಕರ ಚಿಂತನೆ.
ಯಾವತ್ತೂ ಬರ ಜಿಲ್ಲೆ ಎಂದು ಘೋಷಣೆಯಾಗಿರದ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೂಡ ಈ ಬಾರಿ ಬರಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದೆ. ಮಡಿಕೇರಿಯಲ್ಲಿ ಜುಲೈ ಉತ್ತರಾರ್ಧದಲ್ಲಿ ಮಳೆ ಸುರಿದಿದೆ ಬಿಟ್ಟರೆ ಇಲ್ಲಿಯ ತನಕ ಅಲ್ಲಿ ಮಳೆಯ ಸುಳಿವೇ ಇರಲಿಲ್ಲ. ಅನೇಕ ತಾಲೂಕುಗಳು ನೀರಿಗಾಗಿ ಬಾಯಿ ಬಾಯಿ ಬಡಿದುಕೊಳ್ಳುತ್ತಾ ಇದೆ. ಬಿಎಸ್ ವೈ ಟೀಂ ಈಗಾಗಲೇ ಬರಪೀಡಿತ ತಾಲೂಕುಗಳ ಸರ್ವೆ ಮಾಡಿ ಮುಗಿಸಿದೆ. ಹೀಗಿರುವಾಗ ಇದು ಮುಂದುವರೆದರೆ ಫೆಬ್ರವರಿ, ಮಾರ್ಚ್ ಹೊತ್ತಿಗೆ ರೈತರ ಬಗ್ಗೆ ಜೆಡಿಎಸ್ ವಿಪರೀತ ಕಾಳಜಿ ತೋರಿಸುವ ರೀತಿಯಲ್ಲಿ ಎನಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮುಂದಿನ ಬಾರಿ ವಿಪಕ್ಷ ಸ್ಥಾನ ಸಿಗುವುದು ಕೂಡ ಕಷ್ಟ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅನಿಸಿದೆ ಎಂದು ಬಲ್ಲ ಮೂಲಗಳು ಹೇಳಿವೆ.
ಆದ್ದರಿಂದ ಡಿಸೆಂಬರ್ ಒಳಗೆ ಚುನಾವಣೆ ಮುಗಿದರೆ ರಾಜ್ಯ ಸರಕಾರವೂ ನಿರಾಳ, ವಿಪಕ್ಷಗಳ ಕಟು ಟೀಕೆಗಳು ಕೂಡ ನೀರಿನ ವಿಷಯದಲ್ಲಿ ಬರುವ ಸಾಧ್ಯತೆಗಳು ಇಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ತಂಡಕ್ಕೂ ಗೊತ್ತಾಗಿದೆ. ಅದಕ್ಕಾಗಿ ಡಿಸೆಂಬರ್ ಒಳಗೆ ಚುನಾವಣೆ ಆಗಬೇಕಾದರೆ ಸೆಪ್ಟೆಂಬರ್ ಮೊದಲ ವಾರ ರಾಜ್ಯ ವಿಧಾನಸಭೆ ವಿಸರ್ಜನೆ ಆಗಲೇಬೇಕು, ಬೇರೆ ಉಪಾಯವಿಲ್ಲ. ಇದೇ ಜುಲೈ 23 ಕ್ಕೆ ನಡಯಲಿರುವ ಕೋರಂ ಟೀಂ ಸಭೆಯಲ್ಲಿ ಟೀಂ ಸದಸ್ಯರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರಕ್ಕೆ ರಾಜ್ಯ ಸರಕಾರ ಬರಲಿದೆ.
ಇದರೊಂದಿಗೆ ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭೆಗೂ ಚುನಾವಣೆ ನಡೆಯಲಿರುವುದರಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕಕ್ಕಿಂತ ಅದು ಪ್ರತಿಷ್ಟೆಯ ಪ್ರಶ್ನೆಯಾಗಿರುವುದರಿಂದ ಇತ್ತ ಕಡೆ ಗಮನ ಕೊಡಲು ಆಗಲಿಕ್ಕಿಲ್ಲ ಎನ್ನುವ ಐಡಿಯಾ ಕೂಡ ಇದೆ. ಅದು ಬಿಟ್ಟು ಗುಜರಾತ್ ಚುನಾವಣೆ ನಡೆದ ನಂತರ ಅಮಿತ್ ಶಾ ಬೆಂಗಳೂರಿಗೆ ಬಂದು ಝಂಡಾ ಊರಿದರೆ ನಂತರ ಅವರು ಇಲ್ಲಿನ ಕಾಂಗ್ರೆಸ್ಸನ್ನು ಗುಡಿಸಿಯೇ ಹೋದರೆ ಕಷ್ಟ ಎನ್ನುವ ಅಭಿಪ್ರಾಯ ತಳಮಟ್ಟದ ಕಾರ್ಯಕರ್ತರಲ್ಲಿ ಇರುವುದನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಪರಮೇಶ್ವರ್ ಕೂಡ ಗಮನಿಸಿದ್ದಾರೆ.
Leave A Reply