ಯುಪಿಎ ದಾಖಲೆ ಮುರಿದ ನರೇಂದ್ರ ಮೋದಿ ಸರ್ಕಾರ, ನಾಲ್ಕು ವರ್ಷದಲ್ಲಿ ಗರಿಷ್ಠ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ!
ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಲವು ಮಹತ್ತರ ಬದಲಾವಣೆಗಳಾಗಿವೆ. ಅದರಲ್ಲೂ ಸರ್ಕಾರಿ ಯೋಜನೆಗಳು, ಕಾಮಗಾರಿಗಳು ತೀವ್ರ ವೇಗ ಪಡೆದಿವೆ. ಸರ್ಕಾರ ರಚನೆಯಾದ ಕಳೆದ ನಾಲ್ಕು ವರ್ಷಗಳಲ್ಲಿ 9 ಕೋಟಿ ಶೌಚಾಲಯ ನಿರ್ಮಾಣ, ಜನಧನ್ ಯೋಜನೆ ಅನ್ವಯ ಖಾತೆ ತೆರೆಯುವುದು ಸೇರಿ ಹಲವು ಯೋಜನೆಗಳು ಕ್ಷಿಪ್ರಗತಿಯಲ್ಲಿ ಸಾಗಿವೆ.
ಇಂತಹ ವೇಗಕ್ಕೆ ಮತ್ತೊಂದು ನಿದರ್ಶನ ದೊರೆತಿದ್ದು, ಯುಪಿಎ ಅವಧಿಯಲ್ಲಿ ನಾಲ್ಕು ವರ್ಷಕ್ಕಿಂತ ವೇಗವಾಗಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ದೇಶಾದ್ಯಂತ ವೇಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ ಕೀರ್ತಿಗೆ ಭಾಜನವಾಗಿದೆ.
ಹೌದು, ಮೋದಿ ಸರ್ಕಾರ ರಚನೆಯಾದ ಬಳಿಕ, ಅಂದರೆ 2014-15ನೇ ಸಾಲಿನಿಂದ 2017-18ನೇ ಸಾಲಿನವರೆಗೆ ದೇಶಾದ್ಯಂತ 28,534 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ ಇಷ್ಟೇ ಅವಧಿಯಲ್ಲಿ ಯುಪಿಎ ಸರ್ಕಾರ ಇದ್ದಾಗ ಕೇವಲ 16,505 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿತ್ತು.
ಅಂದರೆ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಯುಪಿಎ ಅವಧಿಗಿಂತ 12 ಸಾವಿರಕ್ಕೂ ಅಧಿಕ ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ. ಯಾವುದೇ ಒಂದು ಸರ್ಕಾರ ಯೋಜನೆಗಳಿಗೆ ವೇಗ ಕೊಟ್ಟಾಗ ಮಾತ್ರ ಅಭಿವೃದ್ಧಿ ಸಾಧ್ಯ. ಇದೇ ದಿಸೆಯಲ್ಲಿ ಕೇಂದ್ರ ಸರ್ಕಾರ ಸಾಗುತ್ತಿರುವುದು ಶ್ಲಾಘನೀಯವಾಗಿದೆ.
Leave A Reply