ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ “ಬುದ್ಧಿ” ಕಲಿಸಲು ಬಿಜೆಪಿಯಿಂದ ಅಧಿಕಾರ ತ್ಯಾಗ!
ಜಮ್ಮು-ಕಾಶ್ಮೀರದಲ್ಲಿ ಮೂರುವರೆ ವರ್ಷದಿಂದ ಒಲ್ಲದ ಮನಸ್ಸಿನಿಂದಲೇ ಸಂಸಾರ ನಡೆಸುತ್ತಿದ್ದ ಭಾರತೀಯ ಜನತಾ ಪಾರ್ಟಿ ಮಂಗಳವಾರ ಪಿಡಿಪಿಗೆ ವಿಚ್ಚೇದನ ಕೊಟ್ಟು ಹೊರಗೆ ನಡೆದಿದೆ. ಕಣಿವೆ ರಾಜ್ಯದಲ್ಲಿ ನಿತ್ಯ ಹೆಚ್ಚುತ್ತಿರುವ ಕೌರ್ಯ, ದೌರ್ಜನ್ಯವನ್ನು ಕಣ್ಣು ಮುಚ್ಚಿ ಪ್ರೋತ್ಸಾಹಿಸುತ್ತಿರುವ ಪಿಡಿಪಿಯ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಜಾಣ ಕುರುಡನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ದೇಶದ ತುತ್ತತುದಿ ರಾಜ್ಯದಲ್ಲಿ ಇನ್ನು ಸಮ್ಮಿಶ್ರ ಸರಕಾರ ನಡೆಸಲ್ಲ ಎಂದು ಅಂದುಕೊಂಡು ಹೊರಗೆ ನಡೆದಿದೆ.
ಮೂರುವರೆ ವರ್ಷಗಳ ಮೊದಲು ಬಿಜೆಪಿಗೂ ಪಿಡಿಪಿಗೂ ಜಮ್ಮು-ಕಾಶ್ಮೀರದಲ್ಲಿ ಮದುವೆಯಾದಾಗ ಇದು ತುಂಬಾ ದಿನ ಬಾಳುವುದಿಲ್ಲ ಎಂದು ರಾಜಕೀಯ ಪಂಡಿತರು ಅಂದುಕೊಂಡಿದ್ದರು. ಯಾಕೆಂದರೆ ಮದುವೆ ಆದ್ರೂ ಕನಿಷ್ಟ ವಧು-ವರರ ಜಾತಕ ನೋಡಿ ತಾಳೆಯಾದರೆ ಮಾತ್ರ ಮುಂದುವರೆಯಲಾಗುತ್ತದೆ. ಆದರೆ ಇಲ್ಲಿ ಹಾಗಲ್ಲ. ಪಿಡಿಪಿಯ ಸಿದ್ಧಾಂತಕ್ಕೂ ಬಿಜೆಪಿಯ ಸಿದ್ಧಾಂತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿ ರಾಷ್ಟ್ರೀಯವಾದದ ಮೇಲೆ ನಡೆದರೆ ಪಿಡಿಪಿ ಪಕ್ಕಾ ಪ್ರಾದೇಶಿಕ ಸಿದ್ಧಾಂತದ ಮೇಲೆ ಹುಟ್ಟಿದ ಪಕ್ಷ. 2014ರ ಕೊನೆಯ ತಿಂಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆದಾಗ ಹಿಂದೂಗಳು ಬಹುಸಂಖ್ಯಾತರಿರುವ ಜಮ್ಮುವಿನಲ್ಲಿ 25 ಸೀಟು ಬಿಜೆಪಿ ಗೆದ್ದಿತ್ತು. ಮುಸಲ್ಮಾನರು ಬಹುಸಂಖ್ಯಾತರಿರುವ ಕಾಶ್ಮೀರದಲ್ಲಿ ಪಿಡಿಪಿ 28 ಸ್ಥಾನ ಪಡೆದಿತ್ತು. ಕಾಂಗ್ರೆಸ್ ಪಿಡಿಪಿಯೊಂದಿಗೆ ಮೈತ್ರಿ ಮಾಡಿದರೂ ಅಧಿಕಾರ ಹಿಡಿಯುವ ಸಾಧ್ಯತೆ ಇರಲಿಲ್ಲ. ಏಕೆಂದರೆ ಬಹುಮತಕ್ಕೆ 44 ಬೇಕಾಗಿತ್ತು. ಸಣ್ಣಪುಟ್ಟ ಪಕ್ಷ ಮತ್ತು ಪಕ್ಷೇತರರನ್ನು ಹಿಡಿದು ಕಾಂಗ್ರೆಸ್ ಅಧಿಕಾರ ಹಿಡಿಯುವುದಕ್ಕೆ ಹೋಗಲಿಲ್ಲ. ನ್ಯಾಶನಲ್ ಕಾನ್ಫರೆನ್ಸ್ ಪಿಡಿಪಿಯ ಬದ್ಧ ವೈರಿಯಾಗಿದ್ದ ಕಾರಣ ಪರಸ್ಪರ ಒಟ್ಟಾಗಲು ಸಾಧ್ಯವೇ ಇರಲಿಲ್ಲ. ಜಮ್ಮುವಿನಲ್ಲಿ ಕೇಸರಿಮಯ ಎನ್ನುವ ರೀತಿಯಲ್ಲಿ ಇದ್ದ ಕಾರಣ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಮಾಧವ ಮಧ್ಯಸ್ತಿಕೆಯಲ್ಲಿ ಮುಫ್ತಿ ನೇತೃತ್ವದ ಪಿಡಿಪಿ ಬಿಜೆಪಿಯೊಂದಿಗೆ ಸರಕಾರ ರಚಿಸಿ ದೊಡ್ಡ ಪಕ್ಷವಾಗಿದ್ದ ಪಿಡಿಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಾಗಿತ್ತು.
ಈಗ ಯಾಕೆ ಬೆಂಬಲ ಹಿಂತೆಗೆತ…
ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾದ ಮುಫ್ತಿ ಇದನ್ನು ಗ್ರಾಂಟೆಡ್ ಆಗಿ ತೆಗೆದುಕೊಂಡರು. ಆ ಹೆಂಗಸು ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಾಶ್ಮೀರದಲ್ಲಿ ಕಲ್ಲು ನೆಲದಲ್ಲಿ ಕಡಿಮೆ ಗಾಳಿಯಲ್ಲಿ ಜಾಸ್ತಿ ಹಾರಾಡತೊಡಗಿದವು. ತಮ್ಮ ರಕ್ಷಣೆಗೆಂದು ನಿಂತಿದ್ದ ಮಿಲಿಟರಿ ಯೋಧರ, ಪೊಲೀಸರ ಮೇಲೆ ಮೂಲಭೂತವಾದಿಗಳು ಕಲ್ಲು ಬಿಸಾಡುತ್ತಿದ್ದರು. ಇತ್ತೀಚೆಗೆ ರೈಸಿಂಗ್ ಕಾಶ್ಮೀರದ ಸಂಪಾದಕ ಬುಖಾರಿ ಅವರ ಹತ್ಯೆಯ ನಂತರ ಜಮ್ಮು-ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹಾಳಾಗಿದೆ ಎಂದು ಭಾರತದ ಯಾವುದೇ ಮೂಲೆಯಲ್ಲಿದ್ದ ಸಾಮಾನ್ಯ ನಾಗರಿಕ ಕೂಡ ಯೋಚಿಸಬಹುದಾಗಿದ್ದ. ಔರಂಗಾಜೇಬ್ ಎನ್ನುವ ಯೋಧನನ್ನು ಅಪಹರಣ ಮಾಡಿ ಕೊಂದು ಬಿಸಾಡಿದ ಭಯೋತ್ಪಾದಕರ ನಡೆಯ ನಂತರ ಒಂದು ವಿಷಯ ಗ್ಯಾರಂಟಿಯಾಗಿತ್ತು. ಇನ್ನು ಹೀಗೆ ಪಿಡಿಪಿಯ ಕಪಟ, ಕೆಟ್ಟ, ಕೊಳಕು ರಾಜಕೀಯ ಮತ್ತು ಆಡಳಿತವನ್ನು ನೋಡುತ್ತಾ ಕೈ ಕಟ್ಟಿ ಕುಳಿತರೆ ಆತ್ಮದ್ರೋಹ ಮಾಡಿದಂತಾಗುತ್ತದೆ ಎಂದು ನಿರ್ಧಾರ ಮಾಡಿದ ಕೂಡಲೇ ಇನ್ನು ಇಲ್ಲಿಯೇ ಇದ್ದರೆ ಜನ ಅಪಾರ್ಥ ಮಾಡಿಕೊಂಡಾರು ಎಂದು ಬಿಜೆಪಿಗೆ ಅನಿಸಿದೆ. 2019 ರಲ್ಲಿ ಲೋಕಸಭೆ ಚುನಾವಣೆ ಆಗುವಾಗ ಬಿಜೆಪಿ- ಪಿಡಿಪಿಯ ಸಂಬಂಧ ತೋರಿಸಿ ಬಿಜೆಪಿಯ ಮುಖಂಡರನ್ನು ಅಡಕತ್ತರಿಗೆ ಸಿಲುಕಿಸಬೇಕೆನ್ನುವ ಐಡಿಯಾದಲ್ಲಿ ಇದ್ದ ಕಾಂಗ್ರೆಸ್ಸಿಗೆ ಬಿಜೆಪಿಯ ಈ ನಡೆಯಿಂದ ತನ್ನ ಭತ್ತಲಿಕೆಯ ಒಂದು ಬಾಣ ಅಲ್ಲಿಯೇ ಠುಸ್ ಆಗಿದೆ.
ಕದನ ವಿರಾಮ ಬೇಡವೇ ಬೇಡಾ ಎಂದ ಸೇನೆ…
ರಮ್ಜಾನ್ ತಿಂಗಳಲ್ಲಿ ಇದ್ದ ಕದನ ವಿರಾಮವನ್ನು ಮುಂದುವರೆಸಬೇಕೆನ್ನುವ ಮುಫ್ತಿಯ ಮನವಿಯನ್ನು ತಿರಸ್ಕರಿಸಿ ಕದನ ವಿರಾಮ ರದ್ದುಗೊಳಿಸಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಇತ್ತೀಚೆಗೆ ಸೂಚನೆ ನೀಡಿದ್ದರು. ಔರಂಗಾಜೇಬ್ ನ ಹಂತಕರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕೆಂದು ಆದೇಶಿಸಿದ್ದರು. ಕಲ್ಲು ತೂರಾಟ ಮಾಡಿದವರ ವಿರುದ್ಧ ಎಂಟಿ ಭಯೋತ್ಪಾದಕ ದಳವನ್ನು ಬಳಸಿ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಲಾಗಿತ್ತು. ಯೋಧ ಔರಾಂಗಜೇಬನ ಹಂತಕರನ್ನು ಅದೇ ರೀತಿಯಲ್ಲಿ ನೀವು ಮುಗಿಸದಿದ್ದರೆ ತಮಗೆ ಅವಕಾಶ ನೀಡಿ ನಾವು ಬುದ್ಧಿ ಕಲಿಸುತ್ತೇವೆ ಎಂದು ಔರಾಂಗಜೇಬನ ತಂದೆ ಹೇಳಿದ್ದು ಸಾಮಾಜಿಕ ತಾಣಗಳಲ್ಲಿ ಮನಕಲಕುವ ರೀತಿಯಲ್ಲಿತ್ತು. ಇಷ್ಟೆಲ್ಲ ಆದರೂ ಮುಫ್ತಿ ಕಲ್ಲು ಬಿಸಾಡುವವರ ಮೇಲೆ, ಭಯೋತ್ಪಾದಕರ ಮೇಲೆ ಕ್ರಮ ತೆಗೆದುಕೊಳ್ಳಲು ಏನು ಮಾಡಿರಲಿಲ್ಲ. ಅತ್ತ ಪಾಕಿಸ್ತಾನದಿಂದ ಭಯೋತ್ಪಾದಕರು ನುಸುಳುತ್ತಿದ್ದರೂ ನಮ್ಮ ಸೈನಿಕರನ್ನು ಮುರಾಮೋಸದಿಂದ ಕೊಲ್ಲುತ್ತಿದ್ದರೂ ಸಿಎಂ ಮುಫ್ತಿ ಇನ್ನು ಕೂಡ ಪಾಕಿಸ್ತಾನದ ಜೊತೆ ಶಾಂತಿಯ ಬಗ್ಗೆ ಮಾತುಕತೆಯನ್ನು ಆಡುವ ಮನಸ್ಥಿತಿಯಲ್ಲಿದ್ದರು. ಇವತ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಫ್ತಿ ಕದನ ವಿರಾಮ ಮುಂದುವರೆಯಬೇಕು ಎನ್ನುತ್ತಿದ್ದಾರೆ. ಅದರ್ಥ ಸೈನಿಕರು ಕಲ್ಲು ತೂರುವ ಮೂಲಭೂತವಾದಿಗಳ ಬಗ್ಗೆ ಮೃಧುವಾಗಿ ವ್ಯವಹರಿಸಬೇಕು ಎನ್ನುವುದೇ ತಾನೆ. ಇದೆಲ್ಲ ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಸಮ್ಮಿಶ್ರ ಸರಕಾರದಿಂದ ಹೊರಗೆ ಬಂದಿದೆ. ಒಂದು ರಾಜ್ಯದ ಒಳಿತಿಗಾಗಿ ಅಧಿಕಾರವನ್ನು ದಿಕ್ಕರಿಸುವುದು ಎಂದರೆ ಇದು!
Leave A Reply