ಅಕ್ರಮ ಮರಳುಗಾರಿಕೆಗೆ ಮೂಲರಪಟ್ನದ ಸೇತುವೆ ಕುಸಿತ ಆರೋಪ : ಮಾಜಿ ಸಚಿವ ರಮಾನಾಥ ರೈ ಸಹಿತ ಗಣಿ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಪರಿಸರ ಪ್ರೇಮಿಗಳು!
ಮಂಗಳೂರು: ಕರಾವಳಿ ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಬಲಿಯಾಗಿದ್ದ ಮೂಲರಪಟ್ನದ ಸೇತುವೆ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆಯಲ್ಲಿ ಕುಸಿದು ಬಿದ್ದಿದೆ. ಈ ಅಕ್ರಮ ಮರಳುಗಾರಿಕೆಯ ಕುರಿತು ಅನೇಕ ಸಮಯದಿಂದ ಹೋರಾಟ ಮಾಡಿಕೊಂಡು ಬಂದಿರುವ ಪರಿಸರ ಪ್ರೇಮಿಗಳು ಇದೀಗ ಮಾಜಿ ಅರಣ್ಯ ಸಚಿವ ರಮಾನಾಥ ರೈ ಹಾಗೂ ಗಣಿ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಮಾತ್ರವಲ್ಲದೇ ಈ ಸೇತುವೆ ಕುಸಿತಕ್ಕೆ ಅಧಿಕಾರಿಗಳು ಮತ್ತು ಮಾಜಿ ಸಚಿವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಪರಿಸರ ಪ್ರೇಮಿಗಳ ಆರೋಪ ಮಾಡಿರುವ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಘಟನೆಯ ವಿವರ: ಬಂಟ್ವಾಳ-ಕುಪ್ಪೆಪದವು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಮೂಲರಪಟ್ನ ಎಂಬಲ್ಲಿ ಫಲ್ಗುಣಿ ನದಿಗೆ ಕಟ್ಟಲಾಗಿದ್ದ ಸೇತುವೆ ಏಕಾಏಕಿ ಕುಸಿದು ಬಿದ್ದಿದೆ.ಸುಮಾರು 35 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ಸೇತುವೆ ಕುಸಿಯುವ ಭೀತಿಯನ್ನು ಸ್ಥಳಿಯ ನಿವಾಸಿಗಳು ವ್ಯಕ್ತಪಡಿಸಿದ್ದರು . ಈ ವಿಚಾರವನ್ನು ಸ್ಥಳೀಯರು ಜಿಲ್ಲಾಡಳಿತದ ಗಮನಕ್ಕೂ ತಂದಿದ್ದರು. ಫಲ್ಗುಣಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯಿಂದ ಸೇತುವೆ ಶಿಥಿಲಗೊಂಡಿದೆ ಎಂದು ಆರೋಪಿಸಲಾಗಿತ್ತು.
ಫಲ್ಲುಣಿ ನದಿಯಲ್ಲಿ ಇಂದು ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಇಂದು ಏಕಾಏಕಿ ಸೇತುವೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಯಾವುದೇ ವಾಹನಗಳ ಸೇತುವೆಯಲ್ಲಿ ಸಂಚರಿಸದೇ ಇದ್ದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಈ ಸೇತುವೆ ಕೆಳ ಭಾಗದಲ್ಲಿ ಅಕ್ರಮವಾಗಿ ಮರಳುಗಾರಿಕೆಯೂ ನಡೆಯುತ್ತಿದ್ದು, ಹಲವು ಬಾರಿ ಈ ಅಕ್ರಮಕ್ಕೆ ಕಡಿವಾಣ ಹಾಕಲಾಗಿದ್ದರೂ ರಾಜಕೀಯ ಪ್ರಭಾವ ಬಳಸಿ ಅಕ್ರಮ ಮರಲುಗಾರಿಕೆಯನ್ನು ನಡೆಸಲಾಗುತ್ತಿತ್ತು ಎಂದು ದೂರಲಾಗಿದೆ . ಸೇತುವೆ ಕುಸಿದು ಬೀಳಲು ಇದು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಸೇತುವೆ ಕುಸಿದಿರುವ ಸ್ಥಳಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆ ಯ ಎರಡೂ ತುದಿಗಳಲ್ಲಿ ಪೊಲೀಸ್ ಭಧ್ರತೆ ನಿಯೋಜಿಸಲಾಗಿದ್ದು, ಸಾರ್ವಜನಿಕರು ಮುರಿದ ಸೇತುವೆ ಸನಿಹ ಬರದಂತೆ ತಡೆಹಿಡಿಯಲಾಗುತ್ತಿದೆ
Leave A Reply