ಚುರುಕುಗೊಂಡ ದಕ್ಷಿಣ ಕನ್ನಡದ ಪ್ರಮುಖ ಸೇತುವೆಗಳ ತಪಾಸಣಾ ಕಾರ್ಯ
ಮಂಗಳೂರು: ಮೂಲರಪಟ್ನ ಸೇತುವೆ ಕುಸಿದು ಸಂಪರ್ಕ ಸ್ಥಗಿತಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ದಕ್ಷಿಣಕನ್ನಡ ಜಿಲ್ಲೆ ಪ್ರಮುಖ ಸೇತುವೆಗಳ ತಪಾಸಣಾ ಕಾರ್ಯ ಆರಂಭಿಸಿದೆ. ಇದರ ಮೊದಲ ಭಾಗವಾಗಿ ಜಿಲ್ಲೆಯ ಪ್ರಮುಖ ಸೇತುವೆ ಗುರುಪುರ ಸೇತುವೆಯ ಸಮೀಕ್ಷೆ ಆರಂಭಿಸಿದೆ.
ಮಂಗಳೂರು- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಗುರುಪುರ ಸೇತುವೆ 1923ರಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿತ್ತು. ಅಂದಿನ ಕಾಲದ ವಾಹನಗಳಿಗೆ ತಕ್ಕಂತೆ ನಿರ್ಮಿಸಲಾಗಿದ್ದ ಸೇತುವ ಮೇಲೆ ಈಗ ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತಿರುವ ಹಿನ್ನಲೆಯಲ್ಲಿ ಹೆದ್ದಾರಿ ಸಂಪೂರ್ಣ ಶಿಥಿಲಗೊಂಡಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನಲೆಯಲ್ಲಿ ಇತ್ತೀಚೆಗೆ ಬಂಟ್ವಾಳ ಮತ್ತು ಮಂಗಳೂರು ತಾಲ್ಲೂಕುಗಳ ಗಡಿಭಾಗ ಮುಲ್ಲರಪಟ್ನ ಎಂಬಲ್ಲಿ ಸೇತುವೆ ಕುಸಿದು ಬಿದ್ದಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತಕೊಂಡು ಜಿಲ್ಲಾಡಳಿತ ಜಿಲ್ಲೆಯ ಎಲ್ಲಾ ಸೇತುವೆಗಳ ತಪಾಸಣೆಗೆ ಮುಂದಾಗಿದೆ.
ಸೇತುವೆಗಳ ತಪಾಸಣೆಗೆ ತಂಡವೊಂದನ್ನು ಸಿದ್ದಪಡಿಸಿದ್ದು, ಮೊದಲ ಹಂತವಾಗಿ ಗುರುಪುರ ಸೇತುವೆ ತಪಾಸಣೆ ಕಾರ್ಯ ನಡೆಸಿದೆ.
ಇಂಡಿಯನ್ ರೋಡ್ ಕಾಂರ್ಕಿಟ್ ನಿರ್ಮಾಣಗಳ ತಜ್ಞರ ಸಮಿತಿ ಸದಸ್ಯ ಪ್ರೋ. ಜೈಗೋಪಾಲ್, ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಇಂಜಿನಿಯರ್ ಹಾಗೂ ತಾಂತ್ರಿಕ ಸಮಿತಿ ಮುಖ್ಯಸ್ಥ ಜೈಪ್ರಸಾದ್, ಮಂಗಳೂರು ವಿಭಾಗದ ಅಧೀಕ್ಷಕ ಇಂಜಿನಿಯರ್ ಕಾಂತರಾಜು ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಈ ತಪಾಸಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಈ ತಂಡ ಗುರುಪುರ ಸೇತುವೆ ಮೇಲಿನ ಕಾಂಕ್ರೀಟ್ ಕಬ್ಬಿಣದ ಸಲಾಕೆಗಳ ಪರಿಶೀಲನೆ ನಡೆಸಿದ್ದು, 1923ರಲ್ಲಿ ನಿರ್ಮಾಣವಾಗಿದ್ದರೂ ಮೆಲ್ನೋಟಕ್ಕೆ ಸೇತುವೆಗೆ ಯಾವುದೇ ಆತಂಕ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆ ಮೆಲ್ಬಾಗದಲ್ಲಿರುವ ಕಬ್ಬಿಣ ತುಕ್ಕು ಹಿಡಿದಿದ್ದರೂ ಬಹಳಷ್ಟು ಗಟ್ಟಿಯಾಗಿದೆ, ಅಲ್ಲದೆ ಮಧ್ಯದ ಕಬ್ಬಿಣದ ಕಂಬಕ್ಕೆ ಬೇರಿಂಗ್ ಹಾಕಿದ್ದು , ಅದು ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂದು ತಂಡ ಅಭಿಪ್ರಾಯಪಟ್ಟಿದೆ. ಸೇತುವೆ ತಳಭಾಗದ ಪರಿಶೀಲನೆಗೆ ಬೆಳಗಾವಿಯಿಂದ ಯಂತ್ರ ನಿನ್ನೆ ರಾತ್ರಿ ಮಂಗಳೂರಿಗೆ ಬಂದಿದ್ದು, ಇಂದು ಬೆಳಿಗ್ಗೆಯಿಂದಲೇ ಅಧಿಕಾರಿಗಳ ತಂಡ ಗುರುಪುರ ಸೇತುವೆ ಪರಿಶೀಲನೆಯನ್ನು ಆರಂಭಿಸಿದ್ದಾರೆ. ಬೆಳಗಾವಿಯಿಂದ ಬಂದಿರುವ ಯಂತ್ರವನ್ನು ಬಳಸಿ ತಂಡ ಸೇತುವೆಯ ತಳಭಾಗದವರೆಗೂ ಪರಿಶೀಲನೆ ನಡೆಸಿತು.
ಗುರುಪುರ ಸೇತುವೆಯ ಕಾಂಕ್ರಿಟ್ ತುಂಡನ್ನು ತೆಗೆದು ಅದನ್ನು ಪರಿಶೀಲನೆ ನಡೆಸಲಿರುವ ತಂಡ ಈ ಸೇತುವೆ ಎಷ್ಟು ಭಾರ ಹೊರಲಿದೆ ಹಾಗೂ ಸೇತುವೆಯ ಕಬ್ಬಿಣದ ಬಾಳಿಕೆಯ ಬಗ್ಗೆಯೂ ತಜ್ಞರು ಪರಿಶೀಲನೆ ನಡೆಸಲಿದ್ದಾರೆ. ಸೇತುವೆಯ ಸಂಪೂರ್ಣ ಸಮೀಕ್ಷೆಯ ನಂತರ ಸೇತುವೆಯ ನಿರ್ವಹಣೆಯ ಅಗತ್ಯತೆಯ ಬಗ್ಗೆ ತಂಡ ವರದಿ ನೀಡಲಿದೆ. ಗುರುಪುರ ಸೇತುವೆ ಪರಿಶೀಲನೆ ನಂತರ ಈ ತಂಡ ಜಿಲ್ಲೆಯ ಕೆಲವು ಸೇತುವೆಗಳ ಸಾಮರ್ಥ್ಯ ಪರಿಶೀಲನೆ ನಡೆಸಲಿದೆ.
ಈ ನಡುವೆ ಮಂಗಳೂರು- ಕಾರ್ಕಳ ಮಧ್ಯೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ವಿಳಂಬವಾಗುತ್ತಿದ್ದು, ಈ ಸಂದರ್ಭದಲ್ಲಿ ಇಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯದ ಪ್ರಸ್ತಾಪ ವಿದ್ದರೂ ಅದು ಸಿದ್ದಗೊಳ್ಳಲು ಕನಿಷ್ಟ ಮೂರು ವರ್ಷ ಕಾಯಬೇಕಾದ ಪರಿಸ್ಥಿತಿ ಇದೆ. ಅಲ್ಲಿಯವರೆಗೆ ಇದೇ ಗುರುಪುರ ಸೇತುವೆಯಲ್ಲೇ ವಾಹನಗಳು ಸಂಚರಿಸಬೇಕಾದ ಸ್ಥಿತಿ ಇದೆ.
Leave A Reply