ಮಲೇಶ್ಯಾದಲ್ಲಿ ಸಿಕ್ಕಿಬಿದ್ದ ಝಾಕೀರ್ ನೈಕ್ ಗೆ ಇನ್ಯಾವ ಧರ್ಮವೂ ರಕ್ಷಿಸಲಾರದು!!
ಝಾಕೀರ್ ನೈಕ್ ಪಾಪದ ಕೊಡ ತುಂಬಿದೆ. ಹಾಗಾಗಿ ಮಲೇಶ್ಯಾದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಅವನನ್ನು ಭಾರತಕ್ಕೆ ಕರೆದು ತರುವ ರಾಜತಾಂತ್ರಿಕ ಕೆಲಸ ನಡೆಯುತ್ತಿದೆ. ಎಲ್ಲವೂ ಸರಿಯಾದರೆ ಝಾಕೀರ್ ನೈಕ್ ಶೀಘ್ರದಲ್ಲಿ ಭಾರತದ ಜೈಲಿನ ಕಂಬಿಗಳ ಒಳಗೆ ಕುಳಿತುಕೊಳ್ಳಲಿದ್ದಾನೆ. ಅಷ್ಟಕ್ಕೂ ಝಾಕೀರ್ ನೈಕ್ ಯಾರು?
ಝಾಕೀರ್ ನೈಕ್ ಮೂಲತ: ವೈದ್ಯ. ಮುಂಬೈಯಲ್ಲಿ ವೈದ್ಯವೃತ್ತಿ ಮಾಡುತ್ತಿದ್ದವನಿಗೆ ಮುಸ್ಲಿಂ ಧರ್ಮ ಭೋದಕನಾಗುವ ಹಪಾಹಪಿ ಯಾವಾಗ ಶುರುವಾಯಿತೋ ಗೊತ್ತಿಲ್ಲ. ಆದರೆ ಮುಸ್ಲಿಂ ಧರ್ಮವನ್ನು ಪ್ರಪಂಚಕ್ಕೆ ಸಾರಲು ಹೊರಟ ಝಾಕೀರ್ ನೈಕ್ ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಸಾಕ್ಷಾತ್ ಅವಧೂತನಂತೆ ಕಂಡ. ಝಾಕೀರ್ ನೈಕ್ ಅಷ್ಟೇ ಮಾಡಿದಿದ್ದರೆ ಅದು ಅವನ ಕರ್ಮ ಮತ್ತು ಅವನ ಧರ್ಮ ಎಂದು ಸುಮ್ಮನೆ ಬಿಡಬಹುದಿತ್ತು. ಆದರೆ ಝಾಕೀರ್ ನೈಕ್ ಕೇವಲ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ಹೊರಡಲಿಲ್ಲ. ಅವನಿಗೆ ಗೊತ್ತಿತ್ತು. ಕೇವಲ ಇಸ್ಲಾಂ ಧರ್ಮವನ್ನು ಭೋದಿಸಲು ಹೊರಟರೆ ಆ ಧರ್ಮದವರು ಮಾತ್ರ ಕೇಳುತ್ತಾರೆ. ತಾನು ಇಸ್ಲಾಂ ಧರ್ಮವನ್ನು ವಿಸ್ತರಿಸಬೇಕು ಎಂದರೆ ಬೇರೆ ಧರ್ಮದವರನ್ನು ಇಸ್ಲಾಂ ಧರ್ಮಕ್ಕೆ ಸೆಳೆಯಬೇಕು ಎಂದು ನಿರ್ಧರಿಸಿಬಿಟ್ಟ. ಗಣಪತಿ ದೇವರನ್ನು ಹೀಯಾಳಿಸಿದ, ಶಿವ ಪರಮಾತ್ಮನ ಬಗ್ಗೆ ಕೆಟ್ಟದಾಗಿ ಮಾತನಾಡಿದ, ಪಾರ್ವತಿ ದೇವಿಯ ಬಗ್ಗೆ ಅಸಹ್ಯಕರವಾಗಿ ಕಥೆ ಕಟ್ಟಿದ, ಹೀಗೆ ಹಿಂದೂ ದೇವರ ಬಗ್ಗೆ ನಿಂದಿಸುತ್ತಾ ಹೋದ. ಅದನ್ನು ವಿಡಿಯೋ ಮಾಡಿದ, ಪೀಸ್ ಎನ್ನುವ ಚಾನೆಲ್ ಇಟ್ಟರೆ ಸಾಕು, ಯಾವುದೋ ಹಿಂದೂ ಹೆಣ್ಣುಮಗಳಿಂದ ಕಣ್ಣೀರು ಹಾಕಿಸುವುದು, ಅವಳಿಂದ ಯಾವುದೋ ಅಸಬಂದ್ಧ ಪ್ರಶ್ನೆ ಕೇಳಿಸುವುದು, ಅದಕ್ಕೆ ಝಾಕೀರ್ ನೈಕ್ ಹಿಂದೂ ಧರ್ಮದಲ್ಲಿ ಇದ್ದ ಕಾರಣ ಹೀಗೆ ಆಗಿದೆ ಎಂದು ಪರೋಕ್ಷವಾಗಿ ಹೇಳುವುದು, ನಂತರ ಅವಳು ಇಸ್ಲಾಂ ಧರ್ಮಕ್ಕೆ ಬರುತ್ತೇನೆ ಎಂದು ಹೇಳುವುದು, ಹೀಗೆ ನಡೆಯುತ್ತಲೇ ಇತ್ತು. ಆ ಕಾರ್ಯಕ್ರಮಗಳನ್ನು ನೋಡಿದ ಜನರಿಗೆ ಹಿಂದೂವಾಗಿ ಇರುವುದಕ್ಕಿಂತ ಮುಸ್ಲಿಂ ಆಗಿ ಇರುವುದೇ ಒಳ್ಳೆಯದು ಎಂದು ಅನಿಸುವಂತೆ ಝಾಕೀರ್ ನೈಕ್ ಮಾತನಾಡುತ್ತಿದ್ದ.
ಹಿಂದೂ ದೇವತೆಗಳ ವಿರುದ್ಧ ಮಾತನಾಡುತ್ತಲೇ ಕುಖ್ಯಾತನಾದ.
ಮತಾಂತರ ಎನ್ನುವ ಶಬ್ದಕ್ಕೆ ಝಾಕೀರ್ ನೈಕ್ ಪರ್ಯಾಯವಾಗಿ ಬೆಳೆಯುತ್ತಾ ಹೋದ. ಯಾರಾದರೂ ಪ್ರಶ್ನೆ ಕೇಳಿದರೆ ಧರ್ಮಗ್ರಂಥಗಳ ಸಾಲುಗಳನ್ನು, ಅವು ಇರುವ ಪೇಜ್ ಗಳನ್ನು ನಿರ್ಗಳವಾಗಿ ಹೇಳುವ ಕಲೆ ಇದ್ದ ಕಾರಣ ಝಾಕೀರ್ ನೈಕ್ ಮಹಾನ್ ವಿದ್ವಾಂಸ ಎಂದು ಎಲ್ಲರೂ ಅಂದುಕೊಂಡರು. ಅವನಿಗೆ ಮತಾಂತರ ಮಾಡಿಸುವ ಗುತ್ತಿಗೆ ಸಿಗಲಾರಂಭಿಸಿತು. ದೇಶ ವಿದೇಶಗಳಿಂದ ಶ್ರೀಮಂತ ಮುಸ್ಲಿಂ ಮುಖಂಡರು, ಅರಬರು ಹಣವನ್ನು ಝಾಕೀರ್ ನೈಕ್ ನ ಜೋಳಿಗೆಗೆ ತುಂಬುತ್ತಲೇ ಹೋದರು. ಝಾಕೀರ್ ನೈಕ್ ಅದಕ್ಕೆ ಸರಿಯಾಗಿ ದೇಶ ವಿದೇಶಗಳಲ್ಲಿ ಮತಾಂತರ ಮಾಡುತ್ತಾ ಅರ್ಹನಿಶಿ ದುಡಿದ. ಇವನ ಆರ್ಭಟವನ್ನು ನೋಡಿ ಒಂದು ಕ್ಷಣ ನಮ್ಮ ರಾಷ್ಟ್ರವೇ ಬೆಚ್ಚಿಬಿದ್ದಿತು. ಇವನ ಪೀಸ್ ಟಿವಿಯನ್ನೇ ನಿಷೇಧ ಮಾಡಲಾಯಿತು. ಆದರೂ ಕಳ್ಳಮಾರ್ಗದ ಮೂಲಕ ಇವನ ಹಿಂಬಾಲಕರು ಪೀಸ್ ಟಿವಿ ಅಲ್ಲಲ್ಲಿ ಸಿಗುವಂತೆ ಮಾಡುತ್ತಿದ್ದರು.
ಝಾಕೀರ್ ನೈಕ್ ಎಷ್ಟು ಪ್ರಖ್ಯಾತನಾದ ಎಂದರೆ ವಿದೇಶಗಳಲ್ಲಿ ಅವನಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಸಿಕ್ಕಿತು. ಅವನಿಗೆ ದೇಶ ವಿದೇಶಗಳ ಇಸ್ಲಾಂ ಮೂಲಭೂತವಾದಿಗಳ ಸ್ನೇಹ ದೊರೆಯಿತು. ಇವನು ಹೋದಲೆಲ್ಲ ಜನ ಮುತ್ತಲಾರಂಭಿಸಿತು. ಇವನನ್ನು ಇಸ್ಲಾಂ ಭಯೋತ್ಪಾದಕರು ಹಣದ ವಿಲೇವಾರಿ ಮಾಡಲು, ಹಣದ ವಹಿವಾಟಿಗೆ ಮಧ್ಯವರ್ತಿಯನ್ನಾಗಿ ಮಾಡಿದರು. ಭಯೋತ್ಪಾದಕ ಸಂಘಟನೆಗಳಿಗೆ ಹಣ ಪೂರೈಕೆ ಮಾಡಲು ಇವನು ಬಳಕೆಯಾದ. ಇದನ್ನು ಅಂತರಾಷ್ಟ್ರೀಯ ಗುಪ್ತಚರ ಇಲಾಖೆಗಳು ಪತ್ತೆ ಹಚ್ಚಿದವು. ಝಾಕೀರ್ ನೈಕ್ ಖಾತೆಯಲ್ಲಿ ಲೆಕ್ಕವಿಲ್ಲದಷ್ಟು ಹಣ ಕೈಬದಲಾಗುತ್ತಿರುವುದು ಬೆಳಕಿಗೆ ಬಂತು. ಇನ್ನೇನೂ ಸಿಕ್ಕಿಬೀಳುತ್ತೇನೆ, ತನ್ನ ಬಂಧನವಾಗುತ್ತದೆ ಎಂದು ಸುದ್ದಿ ಬಂದ ಕೂಡಲೇ ಝಾಕೀರ್ ನೈಕ್ ಭಾರತದಿಂದ ಓಡಿಹೋಗಿದ್ದ. ಅವನ ಮೇಲೆ ಅಕ್ರಮವಾಗಿ ಆಸ್ತಿ ಸಂಪಾದನೆ ಸಹಿತ ಹಲವಾರು ಪ್ರಕರಣಗಳು ದಾಖಲಾಗಿವೆ. ಅವನ ಬಂಧನದಿಂದ ಇಸ್ಲಾಂ ಮೂಲಭೂತವಾದಿಗಳ ಪಾಲಿಗೆ ಮಹಾ ಹಿನ್ನಡೆ.
ಮಂಗಳೂರಿಗೆ ಕರೆ ತರುವ ಪ್ಲಾನ್ ಇತ್ತು..
ಆತನನ್ನು ಹಿಂದೆ ಒಮ್ಮೆ ಮಂಗಳೂರಿಗೆ ಕರೆದುಕೊಂಡು ಬರುವ ಕಾರ್ಯಕ್ರಮವನ್ನು ಸ್ಥಳೀಯ ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದವು. ನಾನು ಈ ಬಗ್ಗೆ ವಿರೋಧವಾಗಿ ನನ್ನ ಜಾಗೃತ ಅಂಕಣದಲ್ಲಿ ಬರೆದಿದ್ದೆ, ಟಿವಿ ವಾಹಿನಿಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದೆ. ಆತ ಇಲ್ಲಿ ಬಂದು ಧರ್ಮ ವಿಭಜನೆಯ ಹೇಳಿಕೆ ಅಥವಾ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಅವನ ಶೈಲಿಯಿಂದ ಕರಾವಳಿಯಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಸಾಧ್ಯತೆಯ ಬಗ್ಗೆ ಎಲ್ಲಾ ಸಹೃದಯಿಗಳಂತೆ ನನಗೂ ಆತಂಕವಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಕಮೀಷನರ್ ಗಳಿಗೆ ಮನವಿ ಕೊಟ್ಟು ಆತನ ಮಂಗಳೂರು ಭೇಟಿಯನ್ನು ನಿಷೇಧಿಸಿ ಎಂದು ನಾವು ಒಂದು ನಿಯೋಗ ಹೋಗಿ ಮನವಿ ಕೊಟ್ಟು ಬಂದಿದ್ದೆವು. ಅದರ ನಂತರ ಝಾಕೀರ್ ನೈಕ್ ಮಂಗಳೂರಿಗೆ ಬರಲಿಲ್ಲ. ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತೆಗೆದುಕೊಂಡ ಕಠಿಣ ಆರ್ಥಿಕ ಕ್ರಮಗಳಿಂದ ಭಾರತ ಬಿಟ್ಟು ಓಡಿದವನಿಗೆ ಕೇಂದ್ರ ಸರಕಾರದ ಸಕಾಲಿಕ ಕ್ರಮಗಳಿಂದ ಹೆಡೆಮುರಿ ಕಟ್ಟಿ ಕರೆದುಕೊಂಡು ಬರಲಾಗುತ್ತಿದೆ. ತನ್ನ ಧರ್ಮವನ್ನು ಪ್ರೀತಿಸುತ್ತಾ ಝಾಕೀರ್ ನೈಕ್ ಸುಮ್ಮನೆ ಕುಳಿತುಕೊಂಡಿದ್ದರೆ ಅವನಿಗೆ ಅಲ್ಲಾವನ ಆರ್ಶೀವಾದರೂ ಸಿಗುತ್ತಿತ್ತು. ಆದರೆ ಝಾಕೀರ್ ನೈಕ್ ಹಿಂದೂ ಧರ್ಮದ ದೇವತೆಗಳನ್ನು ನಿಂದಿಸಿ, ಭಯೋತ್ಪಾದಕರಿಗೆ ಪೊರೆಯುತ್ತಾ, ದೇಶದಿಂದ ತಲೆ ಮರೆಸಿಕೊಂಡು ಓಡಿರುವುದರಿಂದ ಅವನಿಗೆ ಇನ್ನು ಯಾವ ದೇವರು ಕೂಡ ರಕ್ಷಿಸಲಾರರು!
Leave A Reply