ಕರಾವಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಜೆಟ್- ಶಾಸಕ ಡಿ ವೇದವ್ಯಾಸ ಕಾಮತ್
ಕರಾವಳಿಯ ಬಗ್ಗೆ ಒಂದೇ ಒಂದು ಶಬ್ದವನ್ನು ಹೇಳದೆ, ಕರಾವಳಿಯನ್ನು ಸಂಪೂರ್ಣವಾಗಿ ಕಡೆಗಣಿಸಿ, ದ್ವೇಷ ರಾಜಕೀಯವನ್ನು ಮಾಡಿರುವ ಕುಮಾರಸ್ವಾಮಿಯವರ ಬಜೆಟ್ ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಬಜೆಟ್ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಇಲ್ಲಿಯ ತನಕ ಕರ್ನಾಟಕದಲ್ಲಿ ಹಲವು ಬಜೆಟ್ ಗಳು ಮಂಡನೆಯಾಗಿವೆ. ಆದರೆ ಇಲ್ಲಿಯ ತನಕ ಇಂತಹ ದ್ವೇಷ ರಾಜಕಾರಣವನ್ನು ಕರಾವಳಿಯ ಜನ ನೋಡಿಲ್ಲ. ಸ್ವಾತಂತ್ರ್ಯದ ನಂತರ ಪ್ರಥಮ ಬಾರಿಗೆ ಕಳೆದ ತಿಂಗಳು ಮಂಗಳೂರಿನಲ್ಲಿ ಹಿಂದೆಂದೂ ಕೇಳಿರದಷ್ಟು ಮಳೆ ಸುರಿದು ಕೃತಕ ನೆರೆಯ ಸಮಸ್ಯೆ ಉಂಟಾಗಿತ್ತು. ನೂರಾರು ಸಂಖ್ಯೆಯಲ್ಲಿ ಮನೆಗಳು ಧ್ವಂಸಗೊಂಡು ಸಾವಿರಾರು ಜನ ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸಿದ್ದರು. ಮನೆಗಳ, ಅಂಗಡಿಗಳ ಒಳಗೆ ಮಳೆಯ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಸಾಮಾನು ಸರಂಜಾಮುಗಳು ಹಾನಿಯಾಗಿದ್ದವು. ಜನರ ಸಂಕಷ್ಟವನ್ನು ಸಚಿವರ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ನೀಡಲು ಮನವಿ ಮಾಡಲಾಗಿತ್ತು. ಆದರೆ ಬಜೆಟಿನಲ್ಲಿ ಆ ಬಗ್ಗೆ ಒಂದೇ ಒಂದೂ ಚಿಕ್ಕಾಸು ಕೂಡ ಇಡದೆ ಜನರು ಅನುಭವಿಸಿದ ಸಂಕಷ್ಟವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಮಂಗಳೂರು ತುಂಬೆಯ ಹೊಸ ಅಣೆಕಟ್ಟಿನ ಎತ್ತರದಿಂದ ಭೂಮಿ ಕಳೆದುಕೊಂಡು ಸಂತ್ರಸ್ತರಾಗಿರುವ ಕೃಷಿಕರಿಗೆ 120 ಕೋಟಿ ಪರಿಹಾರದ ಪ್ಯಾಕೇಜ್ ಅನ್ನು ನೀಡುವಂತೆ ತಾನು ಮನವಿ ಮಾಡಿದ್ದೆ. ಅದರ ಉಲ್ಲೇಖವೇ ಇಲ್ಲ.
ಮಂಗಳೂರು ನಗರದ ಒಳಚರಂಡಿ, ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ನೀಡಲು ಕೇಳಿಕೊಂಡದ್ದನ್ನು ಗಣನೆಗೆ ತೆಗೆದುಕೊಂಡಿಲ್ಲ. ಮೀನುಗಾರರ ಸಾಲಮನ್ನಾ, ಹೊಸ ಜೆಟ್ಟಿ ನಿರ್ಮಾಣ, ಬಂದರು ಅಭಿವೃದ್ಧಿಗೆ ಅನುದಾನ, ಮೀನುಗಾರರ ಯಾಂತ್ರೀಕೃತ ದೋಣಿಯ ಇಂಜಿನ್ ನ ಅಶ್ವಶಕ್ತಿಯ ಪ್ರಮಾಣ ಹೆಚ್ಚಿಸಿರುವುದರಿಂದ ದಿನವಹಿ 350 ಲೀಟರ್ ನಿಂದ 500 ಲೀಟರ್ ವರೆಗೆ ಹೆಚ್ಚುವರಿ ಡಿಸೀಲ್ ನೀಡುವಂತೆ ಕೋರಲಾಗಿತ್ತು. ಆಳಸಮುದ್ರದಲ್ಲಿ ಮೀನುಗಾರಿಕಾ ವೃತ್ತಿಯನ್ನು ಮಾಡುವ ಮೀನುಗಾರರು ಆರ್ಥಿಕ ಸಂಕಟವನ್ನು ಅನುಭವಿಸುತ್ತಿರುವುದರಿಂದ ಮೀನುಗಾರರ ಸಾಲಮನ್ನಾವನ್ನು ಮಾಡಲು ಮತ್ತು ಮೀನುಗಾರರ ಅಭಿವೃದ್ಧಿಗೆ ಇನ್ನು ಕೆಲವು ಯೋಜನೆಗಳ ಬಗ್ಗೆ ಕರಾವಳಿಯ ಶಾಸಕರುಗಳ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಕಳೆದ ಋತುವಿನ ಫೆಬ್ರವರಿ ತಿಂಗಳಿನಿಂದ ಈ ಹಣವೂ ಮೀನುಗಾರರಿಗೆ ಇದುವರೆಗೂ ಬಂದಿರುವುದಿಲ್ಲ. ಆದರೆ ಕರಾವಳಿಯ ಬಗ್ಗೆ ಸಿಎಂ ಕುಮಾರಸ್ವಾಮಿ ಕಣ್ಣೆತ್ತಿ ಕೂಡ ನೋಡಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ರೈತರ ಎರಡು ಲಕ್ಷದವರೆಗಿನ ಸಾಲ ಮನ್ನಾ ಎಂದು ಘೋಷಿಸಿರುವ ಕುಮಾರಸ್ವಾಮಿಯವರು 34 ಸಾವಿರ ಕೋಟಿ ಸಾಲಮನ್ನಾ ಎನ್ನುತ್ತಿದ್ದಾರೆ. ಆದರೆ ಇದು ಐದು ವರ್ಷಗಳಲ್ಲಿ ನಡೆಯುವ ಯೋಜನೆ. ಈ ಪ್ರಕಾರ ವರ್ಷಕ್ಕೆ ಆರೂವರೆ ಸಾವಿರ ಕೋಟಿ ಮಾತ್ರ ಸಾಲಮನ್ನಾವಾಗಲಿದೆ. ಆದರೆ ಅದಕ್ಕೆ ಎಲ್ಲಿಂದ ಹಣ ಹೊಂದಿಸುತ್ತಾರೆ ಎನ್ನುವ ಬಗ್ಗೆ ಉಲ್ಲೇಖವಿಲ್ಲ. ಇನ್ನೊಂದು ಕಡೆಯಲ್ಲಿ ಪೆಟ್ರೋಲ್ ಮೇಲಿನ ಸೆಸ್ 32% ಹೆಚ್ಚಳ ಮಾಡಲಾಗಿದೆ. ಇದರಿಂದ ಲೀಟರಿಗೆ 1.14 ರೂ ಹೆಚ್ಚಾಗಲಿದೆ. ಡಿಸೀಲ್ ದರ ಲೀಟರಿಗೆ 1.12 ಪೈಸೆ ಹೆಚ್ಚಾಗಲಿದೆ. ವಿದ್ಯುತ್ ದರ ಯೂನಿಟ್ ಗೆ ಹೆಚ್ಚು ಮಾಡಿದ್ದಾರೆ. ಸಾರಿಗೆ ದರ ಹೆಚ್ಚಿಸಿದ್ದಾರೆ. ಖಾಸಗಿ ವಾಹನ ಸೇವಾ ತೆರಿಗೆಯನ್ನು ಪ್ರತಿ ಚದರ ಮೀಟರ್ ಗೆ 50% ಹೆಚ್ಚಳ ಮಾಡಿದ್ದಾರೆ. ಇದೆಲ್ಲ ಜನಸಾಮಾನ್ಯರ ಮೇಲಿನ ಬರೆ. ಇನ್ನು ತ್ರಿಸ್ಟಾರ್ ಹೋಟೇಲ್, ಸರ್ವಿಸ್ ಅಪಾರ್ಟ್ ಮೆಂಟಿಗೆ ಪ್ರೋತ್ಸಾಹ ಧನದ ಘೋಷಣೆ ಮಾಡಿದ್ದಾರೆ. ಆದ್ದರಿಂದ ಇದು ಜನಸಾಮಾನ್ಯ ವಿರೋಧಿ ಬಜೆಟ್ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಜನರ ಆರೋಗ್ಯ, ನಗರಾಭಿವೃದ್ಧಿ, ನೀರಾವರಿ, ಲೋಕೋಪಯೋಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನು ಕಡೆಗಣಿಸಿರುವ ಕುಮಾರಸ್ವಾಮಿಯವರು ಕೇವಲ ಹಾಸನ, ಮಂಡ್ಯ, ರಾಮನಗರದ ಬಜೆಟ್ ಮಂಡಿಸಿದ್ದಾರೆ. ಕರಾವಳಿಯ ಅಭಿವೃದ್ಧಿಗೆ ಅಡ್ಡಗಾಲು ಹಾಕಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಈ ಬಜೆಟ್ ಗೆ ಬರುವ ದಿನಗಳಲ್ಲಿ ನಡೆಯಲಿರುವ ಮಂಗಳೂರು ಮಹಾನಗರ ಪಾಲಿಕೆ ಮತ್ತು ಲೋಕಸಭಾ ಚುನಾವಣೆಯಲ್ಲಿ ನಾಗರಿಕರು ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು
Leave A Reply