ಕುಮಾರಸ್ವಾಮಿಯವರೇ, 11 ವರ್ಷದ ಹಿಂದೆ ಈ ಮೈಸೂರು ಮಹಿಳೆಗೆ ನೀವು ನೀಡಿದ ಭರವಸೆ ನೆನಪಿದೆಯಾ?

ಹಿಂದೆ ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಸ್ಥಾನಗಳನ್ನು ಪಡೆದರೂ, ಅದರ ಮುಖ್ಯಸ್ಥರೊಬ್ಬರು ಪ್ರಧಾನಿಯಾಗಬಹುದು ಎಂಬುದನ್ನು ಎಚ್.ಡಿ.ದೇವೇಗೌಡರು ತೋರಿಸಿಕೊಟ್ಟಿದ್ದರು. ಅದೇ ರೀತಿ, ತಂದೆಗೆ ತಕ್ಕ ಮಗನಂತೆ ವರ್ತಿಸಿದ ಕುಮಾರಸ್ವಾಮಿಯವರು ಅದೃಷ್ಟ ಹಾಗೂ ಕಾಂಗ್ರೆಸ್ಸಿನ ಬಲದಿಂದ ಜೆಡಿಎಸ್ ಕೇವಲ 38 ವಿಧಾನಸಭೆ ಸ್ಥಾನ ಪಡೆದರೂ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿದ್ದಾರೆ.
ಆದರೆ ಪ್ರಜಾಪ್ರಭುತ್ವದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರಿಗೆ ಈ ಹಿಂದೆಯೂ ಮುಖ್ಯಮಂತ್ರಿ ಆಗಿದ್ದಾಗ ನೀಡಿದ ಹಲವು ಭರವಸೆಗಳನ್ನು ನಾವೇ ನೆನಪಿಸಬೇಕಾಗಿರುವುದು ದುರಂತ. ಈಗ ಅಧಿಕಾರದಲ್ಲಿರುವುದರಿಂದ, ಇನ್ನಾದರೂ ಅವರು ನೀಡಿದ ಭರವಸೆ ಈಡೇರಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಹೌದು, 11 ವರ್ಷದ ಹಿಂದೆ, ಅಂದರೆ 2007ರಲ್ಲಿ ಮೈಸೂರಿನ ಮೇದಾರ್ ಬ್ಲಾಕ್ ಗೆ ಕುಮಾರಸ್ವಾಮಿ ತೆರಳಿದ್ದರು. ಈ ವೇಳೆ ಒಂದು ಪುಟ್ಟ ಮನೆಯಲ್ಲಿ 12 ಜನ ವಾಸಿಸುತ್ತಿರುವುದನ್ನು ಕಂಡಿದ್ದ ಕುಮಾರಸ್ವಾಮಿ, ಅವರ ಪರಿಸ್ಥಿತಿ ನೋಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಇದರಿಂದ ಮನೆಯೊಡತಿ ಲಕ್ಷ್ಮಮ್ಮ ಖುಷಿಯಾಗಿದ್ದರು. ಆದರೆ ಭರವಸೆ ನೀಡಿ 11 ವರ್ಷವಾದರೂ ಇದುವರೆಗೆ ಮನೆ ನಿರ್ಮಿಸಿಕೊಟ್ಟಿಲ್ಲ.
ನಾವು ಪುಟ್ಟ ಮನೆಯಲ್ಲಿ 12 ಜನ ವಾಸಿಸುತ್ತಿದ್ದು, ಮನೆಯಿಲ್ಲದೆ ಪರದಾಡುತ್ತಿದ್ದೇವೆ. 2007ರಲ್ಲಿ ಕುಮಾರಸ್ವಾಮಿಯವರು ನಮ್ಮ ಮನೆಗೆ ಬಂದು, ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಇದರಿಂದ ನಾವು ನಮ್ಮ ಕಷ್ಟವೆಲ್ಲ ನೀಗಿತು ಎಂದು ಖುಷಿಪಟ್ಟಿದ್ದೆವು. ಆದರೆ ಇದುವರೆಗೂ ಮನೆ ನಿರ್ಮಿಸಿಕೊಟ್ಟಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಲಕ್ಷ್ಮಮ್ಮ.
ಕುಮಾರಸ್ವಾಮಿಯವರೇ, 2006ರಲ್ಲಿ ನಿಮ್ಮ ಪಕ್ಷ ಬಹುಮತ ಪಡೆಯದಿದ್ದರೂ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದಿರಿ. ಯಡಿಯೂರಪ್ಪರಿಗೆ ಕೊಟ್ಟ ಮಾತಿನಂತೆ ಅಧಿಕಾರ ನೀಡದೆ ಜನರಿಂದ ತಿರಸ್ಕಾರಕ್ಕೀಡಾದಿರಿ. ಈಗಲೂ ಅದೃಷ್ಟದಿಂದಲೇ ಮುಖ್ಯಮಂತ್ರಿಯಾಗಿದ್ದೀರಿ, ಇನ್ನಾದರೂ ಜನರಿಗೆ ನೀಡಿರುವ ಭರವಸೆ ಈಡೇರಿಸಿ. ಇಲ್ಲವಾದರೆ ಮತ್ತೊಂದು ದಶಕ ನೀವು ಅಧಿಕಾರವಿಲ್ಲದೆ ಸುಮ್ಮನೆ ಕೂರಬೇಕಾದೀತು, ಎಚ್ಚರ!
Leave A Reply