ಮಂಗಳೂರು ವಿವಿಯಲ್ಲಿ ದಕ್ಷ ರಿಜಿಸ್ಟ್ರಾರ್ ಸ್ಥಾನಕ್ಕೆ ಭ್ರಷ್ಟರನ್ನು ತರಲು ಯುಟಿ ಖಾದರ್, ಫಾರೂಕ್ ಪ್ರಯತ್ನ!!
ಮಂಗಳೂರು ವಿಶ್ವವಿದ್ಯಾಲಯ ಎನ್ನುವ ಶಿಕ್ಷಣ ಕ್ಷೇತ್ರದ ಮಹಾನ್ ದೇಗುಲಗಳಲ್ಲಿ ಒಂದಾಗಿರುವ ಸಂಸ್ಥೆಯನ್ನು ನಿಕಟಪೂರ್ವ ಕುಲಪತಿಯವರು ಹೇಗೆ ಹಾಳು ಮಾಡಿಟ್ಟು ಹೋಗುತ್ತಿದ್ದಾರೆ ಎನ್ನುವುದನ್ನು ಕಳೆದ ವಾರ ಇಡೀ ಪ್ರಪಂಚ ನೋಡಿದೆ. ತಮಗೆ ಬೇಕಾದವರಿಗೆ ಹೇಗೆ ಎಲ್ಲದರಲ್ಲಿಯೂ ಹಣ ಹೊಡೆಯಲು ಭೈರಪ್ಪ ಅವಕಾಶ ಮಾಡಿಕೊಟ್ಟರು ಎನ್ನುವುದು ಎಲ್ಲರಿಗೂ ತಿಳಿದಿದೆ. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೂಲಕ ಮಂಗಳೂರು ವಿಶ್ವವಿದ್ಯಾಲಯ ವಾಸ್ತವ ಜಗಜ್ಜಾಹೀರವಾಗಿದೆ. ನ್ಯೂಸ್ 18 ಮತ್ತು ದಿಗ್ವಿಜಯ ವಾಹಿನಿಗಳು ಸತ್ಯವನ್ನು ಜನರ ಮುಂದೆ ಇಟ್ಟವು. ಯಾವುದರಲ್ಲಿ ಯಾರೆಲ್ಲ ಸೇರಿ ಹಣ ಗುಳುಂ ಮಾಡಿದರು ಎನ್ನುವುದು ಗೊತ್ತಾಗಿದೆ. ಇನ್ನೇನೂ ಈ ಬಗ್ಗೆ ತನಿಖೆ ಶುರುವಾದರೂ ಆಗಬಹುದು ಎನ್ನುವ ಆತಂಕ ಇಲ್ಲಿನ ಭ್ರಷ್ಟರಲ್ಲಿ ಉಂಟಾಗಿದೆ. ಅದಕ್ಕಾಗಿ ಭ್ರಷ್ಟರ ಗ್ಯಾಂಗ್ ಸೇರಿ ಒಂದು ಪ್ಲಾನ್ ಮಾಡುತ್ತಿದ್ದಾರೆ. ಅದೇನೆಂದರೆ ಮಂಗಳೂರು ವಿವಿಯಲ್ಲಿ ತಮ್ಮ ಭ್ರಷ್ಟಾಚಾರದ ಬಗ್ಗೆ ಎಲ್ಲಾ ಗೊತ್ತಿರುವವರನ್ನು ಅಲ್ಲಿಂದ ಓಡಿಸಿ ತಮಗೆ ಅನುಕೂಲ ಇರುವವರನ್ನು ನಿರ್ಣಾಯಕ ಸ್ಥಾನಕ್ಕೆ ತರುವುದು, ಅದರಿಂದ ತಮ್ಮ ಭ್ರಷ್ಟಾಚಾರ ಹೊರಗೆ ಬರುವುದಿಲ್ಲ ಎನ್ನುವ ಉಪಾಯ ಅವರದ್ದು.
ನಾಗೇಂದ್ರ ಪ್ರಕಾಶ್ ಭ್ರಷ್ಟರಿಗೆ ಬೇಡಾ…
ಅರ್ಹತೆ ಮತ್ತು ಜೇಷ್ಟತೆಯ ಆಧಾರದಲ್ಲಿ ನೋಡಿದರೆ ಈಗ ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಬಿಎಸ್ ನಾಗೇಂದ್ರ ಪ್ರಕಾಶ್ ಅವರು ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದರೆ ಭ್ರಷ್ಟಾಚಾರಿಗಳ ಆಟ ನಡೆಯುವುದಿಲ್ಲ. ಅಂದರೆ ಅವರು ರಿಜಿಸ್ಟ್ರಾರ್ ಆಗಿಯೇ ಇದ್ದರೆ ಇಲ್ಲಿಯ ತನಕ ನಡೆದ ಭ್ರಷ್ಟಾಚಾರ ಎಲ್ಲ ಹೊರಗೆ ಬರಲಿದೆ. ಅದಕ್ಕಾಗಿ ಹೆದರಿದ ಭ್ರಷ್ಟರ ಪಡೆ ಎ ಎಂ ಖಾನ್ ಅವರನ್ನು ರಿಜಿಸ್ಟ್ರಾರ್ ಮಾಡಲು ಷಡ್ಯಂತ್ರ ರೂಪಿಸಿದೆ. ನಾಗೇಂದ್ರ ಪ್ರಕಾಶ್ ಅವರನ್ನು ಮಂಗಳೂರು ವಿವಿಯಿಂದ ವರ್ಗಾವಣೆ ಮಾಡಲು ಸಂಚು ರೂಪಿಸಲಾಗಿದೆ. ಎಎಂ ಖಾನ್ ಅವರು ನಿಕಟಪೂರ್ವ ಕುಲಪತಿ ಭೈರಪ್ಪನವರ ಅಷ್ಟೂ ಭ್ರಷ್ಟಾಚಾರಗಳಲ್ಲಿ ನೇರ ಪಾಲು ಪಡೆಯುತ್ತಿದ್ದವರು. ಮಂಗಳೂರು ವಿವಿಯ ಪರೀಕ್ಷೆಯ ಮೌಲ್ಯಮಾಪನದಲ್ಲಿ ಅಕ್ರಮ ಎಸಗಿರುವ ಆರೋಪ ಎಎಂ ಖಾನ್ ಅವರ ಮೇಲಿದೆ. ಕೋಟ್ಯಾಂತರ ರೂಪಾಯಿಯ ಹಗರಣ ಅದು. ಇನ್ನೊಂದು ಉದಾಹರಣೆ ಎಂದರೆ ಮಂಗಳೂರು ವಿವಿಯ ಹೊರಗೆ ಯಾವುದೇ ಅಧ್ಯಯನ ಪೀಠ ತೆರೆಯುವಂತಿಲ್ಲ. ಆದರೆ ಭ್ರಷ್ಟರು ಕುಶಾಲನಗರದಲ್ಲಿ ಒಂದು ದೂರಶಿಕ್ಷಣ ಕೇಂದ್ರ ತೆರೆದಿದ್ದಾರೆ. ಅಲ್ಲಿ ಪರೀಕ್ಷೆಗಳನ್ನು ನಡೆಸುತ್ತೇವೆ ಎನ್ನುತ್ತಾರೆ. ಆದರೆ ಸಡನ್ನಾಗಿ ಅಲ್ಲಿ ಹೋಗಿ ನೋಡಿದರೆ ಅಲ್ಲಿ ಯಾವ ಅಧ್ಯಯನ ಕೇಂದ್ರವೂ ಇಲ್ಲ, ಪರೀಕ್ಷೆಗಳು ಕೂಡ ನಡೆಯುವುದಿಲ್ಲ. ಇತ್ತೀಚೆಗೆ ಇವರು ಕೊಟ್ಟ ವಿಳಾಸಕ್ಕೆ ವಿಟ್ಲದವರೊಬ್ಬರು ಹೋಗಿ ನೋಡಿದಾಗ ಕುಶಾಲನಗರದಲ್ಲಿ ಏನೂ ಇಲ್ಲ ಎನ್ನುವುದು ಪತ್ತೆಯಾಗಿದೆ. ಇದೆಲ್ಲ ನಿಲ್ಲಿಸಿ ಮಂಗಳೂರು ವಿವಿಯಲ್ಲಿ ಶಿಕ್ಷಣದ ಹೆಸರಿನಲ್ಲಿ ನಡೆಯುವ ವ್ಯಾಪಾರ ತಡೆಯಬೇಕಾದರೆ ಅಲ್ಲಿ ದಕ್ಷ, ಪ್ರಾಮಾಣಿಕ ರಿಜಿಸ್ಟ್ರಾರ್ ಅಗತ್ಯ ಇದೆ. ನಾಗೇಂದ್ರ ಪ್ರಕಾಶ ಆ ಸ್ಥಾನದಲ್ಲಿ ಇದ್ದರೆ ಒಳ್ಳೆಯದು. ಆದರೆ ಅಲ್ಲಿನ ಭ್ರಷ್ಟರಿಗೆ ಅದು ಬೇಕಾಗಿಲ್ಲ. ಅದಕ್ಕೆ ಅವರು ಏನು ಮಾಡಿದ್ದಾರೆ ಎಂದರೆ ಹೇಗಾದರೂ ಮಾಡಿ ಎಎಂ ಖಾನ್ ಅವರನ್ನು ರಿಜಿಸ್ಟ್ರಾರ್ ಮಾಡಲು ಹೊರಟಿದ್ದಾರೆ. ಎಎಂ ಖಾನ್ ಪರವಾಗಿ ಸಚಿವ ಯುಟಿ ಖಾದರ್ ಹಾಗೂ ವಿಧಾನಪರಿಷತ್ ಸದಸ್ಯ ಫಾರೂಕ್ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡರ ಅವರಿಗೆ ದಂಬಾಲು ಬೀಳುತ್ತಿದ್ದಾರೆ. ಜಿಟಿ ದೇವೆಗೌಡರು ಒಪ್ಪಿಕೊಂಡರೆ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಸ್ಥಾನಕ್ಕೆ ಎಎಂ ಖಾನ್ ಬರಲಿದ್ದಾರೆ. ಇತ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿವಿಯ ಭ್ರಷ್ಟಾಚಾರ ತಡೆಯಲು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಆಗ್ರಹಿಸಿದೆ.
Leave A Reply