ಕರಾವಳಿಗರ ವಿರುದ್ಧ ಬಜೆಟ್ ಮೂಲಕ ಹಗೆ ತೀರಿಸಿಕೊಂಡ ಕಾಂಗ್ರೆಸ್-ಜೆಡಿಎಸ್
ಮಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಲಾಗಿದೆ. ಬಜೆಟ್ ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಹಳೆ ಮೈಸೂರು ಭಾಗಕ್ಕೆ ಮಾತ್ರ ಬಜೆಟ್ ಸೀಮಿತವಾಗಿಸಿದ್ದಾರೆ ಎಂಬ ಆಕ್ರೋಶ ಕರಾವಳಿಯಾದ್ಯಂತ ವ್ಯಕ್ತವಾಗುತ್ತಿದೆ.
ಬಜೆಟ್ ನಲ್ಲಿ ಎಲ್ಲಿಯೂ ಕರಾವಳಿ ಅಭಿವೃದ್ಧಿಗೆ ಒತ್ತು ನೀಡದಿರುವುದು ಕರಾವಳಿ ಭಾಗದ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಪೂರ್ಣ ಬಜೆಟ್ ನಲ್ಲಿ ಎಲ್ಲಿಯೂ “ಕರಾವಳಿ ” ಅನ್ನುವ ಪದವನ್ನೇ ಬಳಸದ ಕುಮಾರ ಸ್ವಾಮಿ ಚುನಾವಣೆಯ ಫಲಿತಾಂಶದ ಪ್ರತಿಕಾರ ತೀರಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಈ ಬಜೆಟ್ ನಲ್ಲಿ ಕರಾವಳಿಯ ಅಡಿಕೆ , ರಬ್ಬರ್ ಬೆಳೆಗಾರರನ್ನು ಕಡೆಗಣಿಸಲಾಗಿದೆ. ಅಡಿಕೆ ಮತ್ತು ರಬ್ಬರ್ ಬೆಳೆಗಾಗರರು ಈ ಬಜೆಟ್ ನಲ್ಲಿ ಬೆಂಬಲ ಬೆಲೆ ಘೋಷಣೆ ಯಾಗುವ ನಿರೀಕ್ಷೆಯಲ್ಲಿದ್ದರು . ರಾಜ್ಯ ಸರ್ಕಾರ ಅಡಿಕೆ ಹಾಗು ರಬ್ಬರ್ ಬೆಳೆಗಾರರ ಹಿತಕಾಪಾಡಲಿದೆ ಎಂಬ ಭರವಸೆಯನ್ನು ಕೃಷಿಕರು ಹೊಂದಿದ್ದರು ಆದರೆ ಅಡಿಕೆ ಹಾಗು ರಬ್ಬರ್ ಬೆಳೆಗಾರರ ನಿರೀಕ್ಷೆಯನ್ನು ಕುಮಾರಸ್ವಾಮಿ ಹುಸಿಯಾಗಿಸಿದ್ದಾರೆ. ಈ ಬಜೆಟ್ ನಲ್ಲಿ ಯೋಜನೆಗಳ ಘೋಷಣೆ ಆಗುವ ನಿರೀಕ್ಷೆಯಲ್ಲಿದ್ದ ಎಂಡೋ ಪೀಡಿತರಿಗೆ ನಿರಾಶೆಯುಂಟಾಗಿದೆ. ಕರಾವಳಿ ಭಾಗದಲ್ಲಿ ಪ್ರತ್ಯೇಕ ಮರಳು ನೀತಿ ಘೋಷಣೆ ಯಾಗುವ ನಿರೀಕ್ಷೆಯಲ್ಲಿದ್ದ ಕರಾವಳಿಗರಿಗೆ ಮುಖ್ಯಮಂತ್ರಿ ಮಂಡಿಸಿದ ಇಂದಿನ ಬಜೆಟ್ ಶಾಕ್ ನೀಡಿದೆ.
ಕರಾವಳಿ ಭಾಗದ ಅಭಿವೃದ್ಧಿಗೆ ಯೋಜನೆಗಳ ಘೋಷಣೆಯಾಗದಿರುವುದರ ವಿರುದ್ಧ ಕರಾವಳಿ ಭಾಗದ ಶಾಸಕರು ಕಿಡಿಕಾರಿದ್ದಾರೆ.
ಕಳೆದ ಚುನಾವಣೆಯಲ್ಲಿ ಕರಾವಳಿಯುದ್ದಕ್ಕೂ ಕಾಂಗ್ರೆಸ್ ಹಾಗು ಜೆಡಿಎಸ್ ಗೆ ಹಿನಾಯ ಸೋಲನುಭವಿಸಿದ್ದೇ ಈ ನಿರ್ಲಕ್ಷಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಉಡುಪಿಯ ಎಲ್ಲಾ 5 ವಿಧಾನಸಭಾ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ನ ಈ ಹೀನಾಯ ಸೋಲಿಗೆ ಬಜೆಟ್ ನಲ್ಲಿ ಹಗೆ ತೀರಿಸಿಕೊಳ್ಳಲಾಗಿದೆ ಎಂದು ಅರೋಪಿಸಲಾಗಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮುಖಾಂತರ ಕರಾವಳಿಗೆ ಯಾವುದೇ ಅಭಿವೃದ್ದಿ ಯೋಜನೆಗಳು ಬಾರದಂತೆ ಕಾಂಗ್ರೆಸ್ ನೇತೃತ್ವ ವಹಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಬಜೆಟ್ ನಲ್ಲಿ ಕರಾವಳಿ ಭಾಗದ ಈ ನಿರ್ಲಕ್ಷ್ಯ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರಾವಳಿಗರೂ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಮರ್ಶಿಸಲಾಗುತ್ತಿದೆ.
Leave A Reply