ನಂಬರ್ ಕೊಟ್ಟಿದ್ದೇನೆ, ದಾರಿದೀಪ ನಿಮ್ಮ ಹಕ್ಕು ನೆನಪಿರಲಿ!
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳು ಯಾಕೆ ಉಳಿಯುತ್ತಿಲ್ಲ ಎನ್ನುವುದನ್ನು ಹಿಂದೆನೂ ಅನೇಕ ಬಾರಿ ಹೇಳಿದ್ದೇನೆ. ಅದಕ್ಕೆ ತಾಜಾ ಉದಾಹರಣೆ ಪಾಲಿಕೆಯಲ್ಲಿ ಇಂಜಿನಿಯರಿಂಗ್ ಸೆಕ್ಷನ್ ನಲ್ಲಿ ಇಲೆಕ್ಟ್ರಿಕಲ್ ವ್ಯವಸ್ಥೆ ಉಸ್ತುವಾರಿ ಹೊತ್ತಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ ಕಾಮತ್.
ಯಶವಂತ ಕಾಮತ್ ಅವರು ಮೆಸ್ಕಾಂನಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದರು. ಅವರ ದಕ್ಷತೆ ಮತ್ತು ಕಾರ್ಯಕ್ಷಮತೆ ನೋಡಿ ಆಗ ಪಾಲಿಕೆಯಲ್ಲಿ ಮೇಯರ್ ಆಗಿದ್ದ ಮಹಾಬಲ ಮಾರ್ಲಾ ಅವರು ಅವರನ್ನು ಎರವಲು ಸೇವೆಯ ಪಾಲಿಕೆಗೆ ಕರೆಸಿಕೊಂಡಿದ್ದರು. ಅವರು ಪಾಲಿಕೆಗೆ ಬರುವಾಗ ವಿದ್ಯುತ್ ವಿಭಾಗಕ್ಕೆ ಎಇಇ ಯಾರೂ ಇರಲಿಲ್ಲ. ಇದ್ದ ಜೆಇಇಗಳಿಗೆ ದೊಡ್ಡ ಜವಾಬ್ದಾರಿ ಹೊತ್ತುಕೊಳ್ಳುವ ಸಾಮರ್ತ್ಯ ಇರಲಿಲ್ಲ. ಅಂತಹ ಸಮಯದಲ್ಲಿ ಯಶವಂತ ಕಾಮತ್ ಸುಸೂತ್ರವಾಗಿ ಜವಾಬ್ದಾರಿ ವಹಿಸಿಕೊಂಡರು. ಆದರೆ ನಮ್ಮ ಪಾಲಿಕೆಯಲ್ಲಿ ಒಂದು ಕೆಟ್ಟ ಸಂಪ್ರದಾಯ ಇದೆ. ಅದೇನೆಂದರೆ ತಾವು ಏನು ತಪ್ಪು ಮಾಡಿದರೂ, ಎಷ್ಟೇ ನಿರ್ಲಕ್ಷ್ಯ ಮಾಡಿದರೂ ತಮಗೆ ಬಿಲ್ ಪಾಸ್ ಆಗುವಾಗ ಅಧಿಕಾರಿಗಳು ತಡೆಹಿಡಿದರೆ ತಮ್ಮ ರಕ್ಷಣೆಗೆ ಕಾರ್ಪೋರೇಟರ್ ಗಳು ಬರುತ್ತಾರೆ ಎನ್ನುವ ಧೈರ್ಯ ಗುತ್ತಿಗೆದಾರರಿಗೆ ಇದೆ. ನಮ್ಮ ಪಾಲಿಕೆಯಲ್ಲಿ ಅನೇಕ ಜನ ಕಾರ್ಪೋರೇಟರ್ ಗಳು ಗುತ್ತಿಗೆದಾರರ ಕೈಗೊಂಬೆಯಾಗಿದ್ದಾರೆ. ಅವರು ಹೇಳಿದಂತೆ ಇವರು ಆಡುತ್ತಾರೆ. ಯಾಕೆಂದರೆ ಕಮೀಷನ್ ತೆಗೆದುಕೊಳ್ಳುವಾಗ ಅಷ್ಟಾದರೂ ಮಾಡದಿದ್ದರೆ ಹೇಗೆ ಎನ್ನುವ ಸಂಕೋಚ ಮತ್ತು ಋಣ ಸಂದಾಯ ಮಾಡುವುದಾಗಿ ಪಾಲಿಕೆಯಲ್ಲಿ ಗುತ್ತಿಗೆದಾರರ ಪರವಾಗಿ ಹೋರಾಟ. ಆದರೆ ಯಶವಂತ ಕಾಮತ್ ಅವರು ಅಷ್ಟು ಸುಲಭವಾಗಿ ಬಗ್ಗುವ ಜಾಯಮಾನದವರಲ್ಲ. ಬೀದಿದೀಪ ನಿರ್ವಹಣೆ ಸರಿಯಾಗಿ ಮಾಡದ ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಲು ಇವರು ಒಪ್ಪಲೇ ಇಲ್ಲ. ಒಪ್ಪಂದದಂತೆ ಸರಿಯಾಗಿ ಕರ್ತವ್ಯ ನಿರ್ವಹಿಸದ ಗುತ್ತಿಗೆದಾರರಿಗೆ ಹಣ ಕೊಡಲು ಇವರು ಸಿದ್ಧರಿರದಿದ್ದಾಗ ಇವರ ಬೆಂಬಲಕ್ಕೆ ಇವರ ಮೇಲಾಧಿಕಾರಿಗಳು ಬರಬೇಕಿತ್ತು. ನೀವು ಒಳ್ಳೆಯ ಕಾರ್ಯ ಮಾಡುತ್ತಿದ್ದಿರಿ, ನಿಮ್ಮ ಹಿಂದೆ ನಾವಿದ್ದೇವೆ. ಜನರ ತೆರಿಗೆಯ ಹಣ ವ್ಯರ್ಥ ಮಾಡಲು ಬಿಡಬೇಡಿ ಎಂದು ಹೇಳಿದಿದ್ದರೆ ಯಶವಂತ ಕಾಮತ್ ಅವರಿಗೆ ಇನ್ನಷ್ಟು ಧೈರ್ಯ ಬರುತ್ತಿತ್ತು. ನಿರ್ಲಕ್ಷ್ಯ ಗುತ್ತಿಗೆದಾರರ ವಿರುದ್ಧ ಚಾಟಿ ಬೀಸಲು ಅವರಿಗೆ ಇನ್ನಷ್ಟು ಉಮೇದು ಬರುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಅದರಿಂದ ತೀವ್ರ ನೊಂದಕೊಂಡ ಅಧಿಕಾರಿ ಯಶವಂತ ಕಾಮತ್ ತಮ್ಮ ಮಾತೃ ಇಲಾಖೆ ಮೆಸ್ಕಾಂಗೆ ವರ್ಗಾವಣೆ ತೆಗೆದುಕೊಂಡು ಹಿಂತಿರುಗಿದ್ದಾರೆ. ಈ ಮೂಲಕ ಪಾಲಿಕೆ ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ.
ಎರವಲು ಸೇವೆಯಲ್ಲಿ ಬಂದವರು ಹೋಗುವುದು ಕಡಿಮೆ…
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವ್ಯವಸ್ಥೆ ಹೇಗಿದೆ ಎಂದರೆ ಅನೇಕ ಜನ ಅಧಿಕಾರಿಗಳು ತಮ್ಮ ಮಾತೃ ಇಲಾಖೆಗಳಿಂದ ಇಲ್ಲಿ ಎರವಲು ಸೇವೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾಲಿಕೆಯಲ್ಲಿ ಅಧಿಕಾರಿಗಳ ಅಗತ್ಯ ಬಂದಾಗ ಹೀಗೆ ಎರವಲು ಸೇವೆ ಪಡೆಯುವ ಅವಕಾಶ ಇದೆ. ಅದರೆ ಹೀಗೆ ಬಂದ ಅನೇಕರು ಇಲ್ಲಿಂದ ಹಿಂತಿರುಗುವ ಮನಸ್ಸೆ ಮಾಡುತ್ತಿಲ್ಲ. ಯಾಕೆಂದರೆ ಪಾಲಿಕೆಯಲ್ಲಿ ತಿನ್ನಲು ಸಿಗುವಷ್ಟು ಅವಕಾಶ ಬೇರೆ ಎಲ್ಲಿಯೂ ಸಿಗುವುದಿಲ್ಲ. ಆದರೆ ಯಶವಂತ ಕಾಮತ್ ಅವರಂತಹ ಪ್ರಾಮಾಣಿಕ ಅಧಿಕಾರಿಗಳು ಇಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಮಾತೃ ಇಲಾಖೆಗೆ ಮರಳುತ್ತಾರೆ ಎಂದರೆ ಪಾಲಿಕೆಯ ಇವತ್ತಿನ ಪರಿಸ್ಥಿತಿ ನಿಮಗೆ ಅರ್ಥವಾಗಬಹುದು.
ನನು ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೇ. ನೀವು ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವವರಾದರೆ ನಿಮ್ಮ ಮನೆಗೆ, ಕಚೇರಿಗೆ ಹೋಗುವ ರಸ್ತೆಯಲ್ಲಿ ದಾರಿದೀಪಗಳು ಸರಿಯಾಗಿ ಉರಿಯುತ್ತವೆಯೋ ಎಂದು ಪರೀಕ್ಷಿಸಿ. ಇನ್ನು ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೆ ನಾನು ಕೊನೆಗೆ ಕೊಟ್ಟಿರುವ ಫೋನ್ ನಂಬ್ರಕ್ಕೆ ಕರೆ ಮಾಡಿ ದೂರು ದಾಖಲಿಸಿ. ಒಂದು ವೇಳೆ ಗುತ್ತಿಗೆದಾರರು ಸೋಡಿಯಂ, ಎಲ್ ಇಡಿ ಅಥವಾ ಬೇರೆ ಉತ್ತಮ ದರ್ಜೆಯ ಅಧುನಿಕ ಸೆಟ್ ತೆಗೆದು ಹಳೆಯ ಟ್ಯೂಬ್ ಲೈಟ್ ಸೆಟ್ ಅಳವಡಿಸಿದ್ದರೆ ಆಗಲೂ ಈ ಸಂಖ್ಯೆಗಳಿಗೆ ಕರೆ ಮಾಡಿ ದೂರು ದಾಖಲಿಸಿ. ಏಕೆಂದರೆ ಬೀದಿದೀಪ ನಿಮ್ಮ ಹಕ್ಕು. ಅದನ್ನು ನಿರ್ವಹಿಸುವುದು ಗುತ್ತಿಗೆದಾರರ ಕರ್ತವ್ಯ. ಅವರಿಗೆ ಪಾವತಿಸುವ ಹಣ ನೀವು ಕಟ್ಟಿದ್ದು ತೆರಿಗೆ!!
ಪಾಲಿಕೆಗೆ ದಾರಿದೀಪ ನಿರ್ವಹಣೆ ಪಾಲಿಕೆ: 08242220306 ಮನೆ: 0824155313
Leave A Reply