ಸಿದ್ಧಾಂತದ ಮೇಲೆ ಭಾಷಣ ಮಾಡುವುದೆಂದರೆ ಟೆಂಟ್ ನಲ್ಲಿ ಗಿಡಮೂಲಿಕೆ ಮಾರುವುದಲ್ಲ!!
ಕೆಲವು ವ್ಯಕ್ತಿಗಳನ್ನು ನಾವು ಕೇವಲ ಭಾಷಣಕಾರರ ದೃಷ್ಟಿಯಲ್ಲಿ ಮಾತ್ರ ನೋಡಬೇಕು. ಅವರು ಕೇವಲ ಮೈಕಿನ ಮುಂದೆ ನಿಂತಾಗ ಮಾತ್ರ ಯಾವುದೋ ಸಿದ್ಧಾಂತದ ಒಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. ಮೈಕ್ ಬಂದ್ ಆಗಿ ಆವತ್ತಿನ ಗಂಟು ಮೂಟೆಯನ್ನು ಕಟ್ಟಿ ಆಯಿತೋ ಅವರು ನಾಳೆ ಯಾವ ಸಿದ್ಧಾಂತದ ಬಟ್ಟೆಯೊಳಗೆ ನುಸುಳಿಕೊಳ್ಳುತ್ತಾರೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಅಂತಹ ವ್ಯಕ್ತಿಯಲ್ಲಿ ತತ್ವ, ನಿಷ್ಟೆಯನ್ನು ಅರಸುವುದು ಕೇವಲ ನಮ್ಮ ಭ್ರಮೆ. ಅವರದ್ದು ಏನಿದ್ದರೂ ಇವತ್ತು ಟೆಂಟ್ ನಲ್ಲಿ ಗಿಡಮೂಲಿಕೆಗಳನ್ನು ಮಾರುವಂತಹ ಉದ್ಯೋಗ. ಇವತ್ತು ಇಲ್ಲಿ ಟೆಂಟ್ ಹಾಕಿದರೆ ನಾಳೆ ಮತ್ತೆಲ್ಲೋ. ಅವರು ಒಂದೇ ಕಡೆ ಗೂಟ ಹಾಕಿ ಕೂರುವುದಿಲ್ಲ. ಅಂತವರನ್ನು ಇತ್ತೀಚೆಗೆ ಕಮ್ಯೂನಿಸ್ಟರು ಕರೆಸಿ ಮೈಕ್ ಮುಂದೆ ನಿಲ್ಲಿಸಿ ತಮಾಷೆ ನೋಡುತ್ತಿದ್ದಾರೆ. ನಿಕೇತ್ ರಾಜ್ ಮೌರ್ಯ ಅವರನ್ನು ಈಗಲೂ ಕೆಲವರು ನಮೋ ಬ್ರಿಗೇಡಿನ ಮುಖಂಡ ಎಂದೇ ಅಂದುಕೊಂಡಿದ್ದರೆ ಅವರಿಗೆ ಸತ್ಯ ಗೊತ್ತಿರಲಿ ಎನ್ನುವುದಕ್ಕಾಗಿ ಮೇಲಿನ ಪೀಠಿಕೆ ಹಾಕಬೇಕಾಯಿತು.
ಸ್ವಂತ ಐಡೆಂಟಿಟಿ ಇಲ್ವಲ್ಲ…
ಈಗಲೂ ನಿಕೇತ್ ರಾಜ್ ಎಲ್ಲಿಯಾದರೂ ಭಾಷಣಕ್ಕೆ ನಿಂತರೆ ಅದು ಮಾಧ್ಯಮಗಳಲ್ಲಿ ನಮೋ ಬ್ರಿಗೇಡಿನ ಮಾಜಿ ಮುಖಂಡ ಎಂದೇ ಬಂದಿರುವುದುಂಟು. ಅನೇಕ ಬಾರಿ ಕಾರ್ಯಕ್ರಮದ ನಿರೂಪಕರೇ “ಈಗ ನಮೋ ಬ್ರಿಗೇಡಿನ ಮಾಜಿ ಮುಖಂಡರು ಭಾಷಣ ಮಾಡುತ್ತಾರೆ” ಎಂದೇ ಹೇಳುತ್ತಾರೆ. ಹಾಗೇ ನನ್ನನ್ನು ಕರೆಯಬೇಡಿ ಎಂದರೆ ನಿರೂಪಕರು ಇನ್ನೇನೆಂದು ಕರೆಯಬೇಕು ಎಂದು ಕೇಳಿದರೆ ಇಂತವರ ಬಳಿ ಉತ್ತರ ಇದೆಯಾ? ಇಲ್ಲ. ಒಬ್ಬ ವ್ಯಕ್ತಿಯನ್ನು ಸಮಾಜ ಹೇಗೆ ನೋಡುತ್ತದೆ ಎಂದರೆ ಆತನ ಹಿನ್ನಲೆಯಿಂದ. ನಮೋಬ್ರಿಗೇಡಿನ ಮಾಜಿ ಯುವಕ ಎನ್ನುವುದು ಬಿಟ್ಟು ನಿಕೇತ್ ರಾಜ್ ಅಂತವರಿಗೆ ಇರುವ ಸ್ವಂತ ಐಡೆಂಟಿಟಿ ಯಾವುದು? ನಿಕೇತ್ ರಾಜ್ ಗೆ ಅಂತಲ್ಲ, ಮಹೇಂದ್ರ ಕುಮಾರ್ ಗಾಗಲೀ, ಸುಧೀರ್ ಕುಮಾರ್ ಅವರಿಗಾಗಲೀ ಬಜರಂಗದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಟ್ಟು ಬೇರೆ ಸ್ವಂತ ಐಡೆಂಟಿಟಿ ಇದೆಯಾ? ಇದನ್ನು ಅವರವರೇ ಪ್ರಶ್ನಿಸಿಕೊಳ್ಳಬೇಕು. ಆ ಮಟ್ಟಿಗೆ ಮುನೀರ್ ಕಾಟಿಪಳ್ಳ ಅವರಿಗಾಗಲೀ, ಸುನೀಲ್ ಕುಮಾರ್ ಬಜಾಲ್ ಅವರಾಗಲಿ ಬೆಳೆದು ಬಂದಿರುವ ರೀತಿ ನೋಡಿದರೆ ಅವರಿಗೆ ಅವರದ್ದೇ ಆಗಿರುವ ಹೆಸರು ಇದೆ. ಐಡೆಂಟಿಟಿ ಇದೆ. ಸುನೀಲ್ ಕುಮಾರ್ ಬಜಾಲ್ ಅಥವಾ ಮುನೀರ್ ಕಾಟಿಪಳ್ಳ ಅವರು ತಮ್ಮ ಹೋರಾಟ, ಪ್ರತಿಭಟನೆಯಿಂದ ಗುರುತಿಸಿಕೊಂಡಿದ್ದಾರೆ. ಆದರೆ ಅವರು ಮೊನ್ನೆ ಕರೆಸಿ ಜನನುಡಿಯಲ್ಲಿ ಮಾತನಾಡಿದ ಕೆಲವರಿಗೆ ಅವರದ್ದೇ ಆಗಿರುವ ಸ್ವಂತ ಐಡೆಂಟಿಟಿ ಇಲ್ಲ.
ಆವತ್ತು ಮೋದಿಗೆ ಜೈ, ಇವತ್ತು..
ಒಮ್ಮೆ ಪುತ್ತೂರಿನಲ್ಲಿ ಸ್ವಚ್ಚ ಭಾರತ್ ಕಾರ್ಯಕ್ರಮ. ಅಲ್ಲಿಯ ತನಕ ರಾಮಕೃಷ್ಣ ಮಿಶನ್ ಅವರು ಮಂಗಳೂರಿನಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮಾಡಿ ದೊಡ್ಡ ಸಾಧನೆ ಮಾಡಿದ್ದಾರಲ್ಲ. ಅದರಿಂದ ಪ್ರೇರೆಪಿತರಾಗಿ ಕೆಲವರು ಪುತ್ತೂರಿನಲ್ಲಿಯೂ ಸ್ವಚ್ಚ ಭಾರತ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲಿಗೆ ರಾಮಕೃಷ್ಣ ಆಶ್ರಮದ ಸ್ವಾಮೀಜಿಯವರು ಹೋಗಿ ಎರಡು ಮಾತಿನಲ್ಲಿ ಶುಭ ಸಂದೇಶ ಕೊಟ್ಟರು. ಆ ಕಾರ್ಯಕ್ರಮಕ್ಕೆ ಧನ್ಯವಾದ ಸಮರ್ಪಣೆ ಮಾಡಲು ಜವಾಬ್ದಾರಿ ಕೊಟ್ಟಿದ್ದು ಇದೇ ನಿಕೇತ್ ರಾಜ್ ಮೌರ್ಯ ಅವರಿಗೆ. ಒಂದೂವರೆ ನಿಮಿಷದಲ್ಲಿ ಮುಗಿಯಬೇಕಾಗಿದ್ದ ನಿಕೇತ್ ಭಾಷಣ ಬರೋಬ್ಬರಿ ಹದಿನೈದು ನಿಮಿಷ ಹೋಗಿತ್ತು. ಮಾತಿನ ಉದ್ದಕ್ಕೂ ನರೇಂದ್ರ ಮೋದಿಯವರನ್ನು ಹೊಗಳಿದ್ದೇ ಹೊಗಳಿದ್ದು. ಮೋದಿಯವರ ಸ್ವಚ್ಚ ಭಾರತದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿದ್ದೇ ಮಾತನಾಡಿದ್ದು. ಇವರೊಂದಿಗೆ ಪುತ್ತೂರಿಗೆ ಹೋಗಿದ್ದ ನಮೋ ಬ್ರಿಗೇಡಿನ ಯುವಕರಿಗೆ ನಿಕೇತ್ ಭಾಷಣ ಮಾಡುತ್ತಿದ್ದರೆ ಮೈಮೇಲೆ ಸ್ವತ: ಮೋದಿಯವರೇ ಬಂದ ಹಾಗೆ ಅನಿಸಿತ್ತೋ ಏನೋ. ಹಾಗೇ ನಿಕೇತ್ ರಾಜ್ ತಮ್ಮ “ಕೆಲಸ” ಮುಗಿಸಿ ಈಗ ಉದ್ಯೋಗ ಬದಲಿಸಿಬಿಟ್ಟಿದ್ದಾರೆ. ಈಗ ಕಾಂಗ್ರೆಸ್ ನಾಯಕರೊಂದಿಗೆ ಕುಳಿತು ತಿಂಡಿ ತಿನ್ನುತ್ತಿದ್ದ ಫೋಟೋ ಎಲ್ಲಿಯೋ ನೋಡಿದಂತೆ ಆಗಿತ್ತು. ಈಗ ಅವರ ಪಾಳಯ ಬದಲಾಗಿರುವುದರಿಂದ ಅವರೀಗ ಕೆಲವು ತಿಂಗಳ ಹಿಂದೆ ಯಾರ ಪರ ಮಾತನಾಡುತ್ತಿದ್ದರೋ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಒಂತರಾ ಹಳೆಯ ಕ್ಯಾಸೆಟ್ ತರಹ. ಎರಡು ದಿಕ್ಕಿನಲ್ಲಿ ಉಪಯೋಗಿಸಬಹುದು ಮತ್ತು ಬೇರೆ ಬೇರೆ ಹಾಡು ಕೇಳಿಬರುತ್ತದೆ. ನಿಕೇತ್ ರಾಜ್ ಅವರನ್ನು ನಾವು ಕೇವಲ ಭಾಷಣಕಾರರಾಗಿಯೇ ನೋಡಬೇಕೆ ವಿನ: ಅವರನ್ನು ಯಾವುದೇ ಸಂಘಟನೆಯ ಮುಖಂಡ ಎಂದು ಬ್ರಾಂಡ್ ಮಾಡುವುದು ಸರಿಯಲ್ಲ. ಮೊನ್ನೆ ಮಹೇಂದ್ರ ಕುಮಾರ್ ಭಾಷಣ ಮಾಡುವಾಗ ತಮಗಿಂತ ಸಂಘದ ಬಗ್ಗೆ ಸುಧೀರ್ ಕುಮಾರ್ ಅವರಿಗೆ ಹೆಚ್ಚು ಗೊತ್ತಿದೆ ಎಂದು ಹೇಳಿದ್ದಾರೆ. ಹೆಚ್ಚು ಗೊತ್ತಿದ್ದವರು ತುಂಬಿದ ಕೊಡ ತರಹ ಇರುತ್ತಾರೆ. ಇಲ್ಲದವರು ಚೆಲ್ಲುತ್ತಾ ಹೋಗುತ್ತಾರೆ!
Leave A Reply