ಅಂಗನವಾಡಿ ಮಕ್ಕಳಿಗೆ ಮೊಟ್ಟೆ, ಹಾಲು ಸರಿಯಾಗಿ ಸಿಗುತ್ತಿಲ್ಲ, ಮೊದಲು ಅದನ್ನು ನೋಡಿ!
ಹಿಂದುತ್ವಪರ ಮನಸ್ಸಿರುವ ಅಧಿಕಾರಿಗಳನ್ನು ಹತ್ತಿಕ್ಕುವೆ ಎಂದು ಬೆಂಗಳೂರಿನಲ್ಲಿ ನಡೆದ ಅಂಬೇಡ್ಕರ್ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಿಸಿದ್ದಾರೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಮೊದಲು ಅದನ್ನು ಮಾಡಿ ಸಿದ್ಧರಾಮಯ್ಯನವರೇ. ಅದಕ್ಕಾಗಿ ಪ್ರತಿ ತಾಲೂಕಿನಲ್ಲಿ ಒಂದೊಂದು ಸ್ಕ್ಯಾನರ್ ಘಟಕವನ್ನು ಆರಂಭಿಸಿ. ಅಲ್ಲಿ ತಿಂಗಳಿಗೊಮ್ಮೆ ಅಧಿಕಾರಿಗಳು ಹೋಗಿ ತಮ್ಮ ತಮ್ಮ ಬ್ರೇನ್ ಅನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಫರ್ಮಾನು ಹೊರಡಿಸಿ. ಅದರ ನಂತರ ಯಾರ ಮನಸ್ಸಿನಲ್ಲಿ ಏನಿದೆ ಎಂದು ವರದಿ ತರಿಸಿ. ಅದಕ್ಕಾಗಿ ಒಂದು ಇಲಾಖೆಯ ಮಂತ್ರಿಗೆ ಜವಾಬ್ದಾರಿ ಕೊಡಿ. ಯಾವ ಅಧಿಕಾರಿಯ ಮನಸ್ಸಿನಲ್ಲಿ ಹಿಂದುತ್ವ ಇದೆ ಅವರನ್ನು ನಿಮಗೆ ಬೇಡವಾದ ಕಡೆ ಎತ್ತಂಗಡಿ ಮಾಡಿಸಿ. ಯಾರ ಮನಸ್ಸಿನಲ್ಲಿ ಹಿಂದುತ್ವದ ವಿರೋಧದ ಭಾವನೆ ಇದೆಯೋ ಅವರನ್ನು ನಿಮ್ಮ ಪಕ್ಕ ಕೂಡಿಸಿ. ಆ ಮೂಲಕ ಸರಕಾರವನ್ನು ಮುಂದುವರೆಸಿ. ಈಗಲೇ ಈ ಕೆಲಸ ಮಾಡಿ. ಆಗ ನಿಮಗೆ ಚುನಾವಣೆಗೆ ಹೋಗುವಾಗ ಸುಲಭವಾಗುತ್ತದೆ.
ನೀವು ಚುನಾವಣೆಯ ಸಂದರ್ಭದಲ್ಲಿ ಆಡಳಿತ ಯಂತ್ರವನ್ನು ದುರುಪಯೋಗ ಮಾಡುವುದಿಲ್ಲ ಎಂದು ಯಾವ ಗ್ಯಾರಂಟಿ ಈಗ ಉಳಿದಿದೆ. ಹಿಂದುತ್ವ ಪರ ಮನಸ್ಸು ಎಂದರೇನು? ಹಿಂದೂಗಳನ್ನು ಹೊಡೆದು, ಸುಳ್ಳು ಕೇಸ್ ಹಾಕಿ ಒಳಗೆ ಹಾಕುವುದೇ ನಿಮ್ಮ ಪ್ರಕಾರ ಜಾತ್ಯಾತೀತ ನಡೆಯಾ? ಅಷ್ಟಕ್ಕೂ ನೀವು ಹೀಗೆ ಹೇಳಿ ದಲಿತರನ್ನು ಖುಷಿ ಪಡಿಸಲು ಹೋಗುತ್ತಿದ್ದಿರಾ? ನಿಮಗೆ ಅಹಿಂದ ಸಿಎಂ ಎಂದು ಹೇಳಿಸಿಕೊಳ್ಳಲು ಯಾವುದೇ ಭಯವಾಗಲಿ, ಮುಜುಗರವಾಗಲೀ ಇಲ್ಲ ಎಂದು ಹೇಳುತ್ತಿರಿ. ಮೂರು ದೊಡ್ಡ ವೋಟ್ ಬ್ಯಾಂಕ್ ಅನ್ನು ದೃಷ್ಟಿಯಲ್ಲಿಟ್ಟು ನೀವು ಹೀಗೆ ಹೇಳುತ್ತಿದ್ದಿರಿ ಎನ್ನುವ ಸಂಶಯ ನೀವು ಶಾಲೆಯ ಮಕ್ಕಳಲ್ಲಿ ಕೆಲವು ಜಾತಿಯ ಮಕ್ಕಳನ್ನು ಮಾತ್ರ ಟೂರಿಗೆ ಕಳುಹಿಸುವಾಗಲೇ ಉಳಿದ ಮಕ್ಕಳಿಗೆ ಸಾಬೀತಾಗಿದೆ. ಅದನ್ನು ನೀವು ಪುನ: ಹೇಳಬೇಕಾಗಿಲ್ಲ.
ಅದರ ಬದಲು ನಾನು ಎಲ್ಲರ ಮುಖ್ಯಮಂತ್ರಿ, ತಪ್ಪು ಯಾರೇ ಮಾಡಿದರೂ ಬಿಡುವುದಿಲ್ಲ ಎಂದು ಹೇಳಿದ್ದರೆ ಅಹಿಂದದವರಿಗೆ ಬೇಸರವಾಗುತ್ತಿತ್ತಾ? ಅಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉಜ್ವಲ ಯೋಜನೆಯ ಮೂಲಕ ಎಲ್ಲಾ ಜಾತಿ, ಧರ್ಮದ ಅರ್ವ ಹೆಣ್ಣು ಮಕ್ಕಳಿಗೆ ಗ್ಯಾಸ್ ವಿತರಣೆ ಹಾಗೂ ಮಾಹಿತಿ ಸಮಾವೇಶ ಮಾಡುತ್ತಿದ್ದಾರೆ. ಅದರಲ್ಲಿ ಕೇವಲ ಹಿಂದೂಗಳು ಇಲ್ಲ, ಮುಸ್ಲಿಮರು, ಕ್ರೈಸ್ತರೂ ಇದ್ದಾರೆ. ಯಾಕೆ ಎಲ್ಲರೂ ನಮ್ಮ ದೇಶದ ನಾಗರಿಕರಲ್ಲವೇ. ಒಬ್ಬರಿಗೆ ಮಾತ್ರ ಕೊಟ್ಟು ಇನ್ನೊಬ್ಬರಿಗೆ ಧರ್ಮದ ಆಧಾರದ ಮೇಲೆ ಕೊಡದೇ ಇರಲು ಸಾಧ್ಯ ಎಂದು ನೀವು ಊಹಿಸುತ್ತೀರಲ್ಲ. ನೀವು ಇದನ್ನೆಲ್ಲ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡುವುದು ಯಾವಾಗ?
ಮಕ್ಕಳಲ್ಲಿ ಅಪೌಷ್ಟಿಕಾಂಶವನ್ನು ನಿವಾರಿಸುವ ಉದ್ದೇಶದಿಂದ ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ಮತ್ತು ಐದು ದಿನ ಹಾಲು ವಿತರಿಸುವ ಯೋಜನೆಯನ್ನು ದೊಡ್ಡದಾಗಿ ಘೋಷಿಸಿದ್ದಿರಿ. ಆದರೆ ಈ ಯೋಜನೆ ಮಕ್ಕಳಿಗೆ ಸರಿಯಾಗಿ ಮುಟ್ಟುತ್ತಿದೆಯಾ ಎನ್ನುವುದನ್ನು ಯೋಚಿಸಿದ್ದಿರಾ? ವಾರದಲ್ಲಿ ಎರಡು ಮೊಟ್ಟೆಯ ಬದಲಿಗೆ ಕೆಲವೊಮ್ಮೆ ಒಂದು ಅಥವಾ ಅರ್ಧ ಸಿಕ್ಕರೆ ಹೆಚ್ಚು. ಬೇಯಿಸಿದ ಒಂದು ಮೊಟ್ಟೆಯನ್ನು ಇಬ್ಬರಿಗೆ, ಕೆಲವೊಮ್ಮೆ ನಾಲ್ಕು ಮಕ್ಕಳಿಗೆ ತುಂಡರಿಸಿ ಕೊಡಲಾಗುತ್ತದೆ. ಇನ್ನು ಹಾಲಿನ ವಿಷಯಕ್ಕೆ ಬಂದರೆ ಸುಮಾರು ಅರ್ಧ ಲೀಟರ್ ನಷ್ಟು ಹಾಲನ್ನು ಕಾಯಿಸಿ, ಅದನ್ನು ಹತ್ತರಿಂದ ಹನ್ನೆರಡು ಮಕ್ಕಳಿಗೆ ತಲಾ ಒಂದು ಇಲ್ಲವೇ ಎರಡು ಗುಟುಕಿನಷ್ಟು ವಿತರಿಸುತ್ತಿದ್ದಾರೆ.
ರಾಜ್ಯ ಸರಕಾರ ಬಜೆಟಿನಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಅಧಿಕ ಅಂಗನವಾಡಿ ಮಕ್ಕಳಿಗೆ ಜುಲೈ ತಿಂಗಳಿನಿಂದ ನೀವು ಮೊಟ್ಟೆ, ಹಾಲಿನ ಘೋಷಣೆ ಮಾಡಿದ್ದಿರಿ. ಆದರೆ ಅದು ಅನುಷ್ಟಾನಕ್ಕೆ ಸರಿಯಾಗಿ ಬರುತ್ತಿಲ್ಲ. ಇದೆಲ್ಲಾ ನಿಮಗೆ ಕಾಣುತ್ತಿಲ್ಲ. ಆದರೆ ನೀವು ಮಾತ್ರ ಹಿಂದೂತ್ವದ ಮನಸ್ಸಿರುವ ಅಧಿಕಾರಿಗಳನ್ನು ಶಿಕ್ಷಿಸಲು ಹೊರಟಿದ್ದೀರಿ. ಈ ಮೂಲಕ ಪರೋಕ್ಷವಾಗಿ ಅಧಿಕಾರಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಿರಿ. ನ್ಯಾಯಯುತವಾಗಿ ಸೇವೆ ಮಾಡುವ ಬದಲಿಗೆ ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯಲು ಪ್ರೇರೆಪಿಸುತ್ತಿದ್ದಿರಿ ಎಂದು ಅನಿಸುತ್ತಿಲ್ಲವೇ ಮುಖ್ಯಮಂತ್ರಿಗಳೇ
Leave A Reply