ನಿಮ್ಮ ಮಕ್ಕಳೇ ಆ ಜಾಗದಲ್ಲಿದ್ದಿದ್ದರೆ ಹೀಗೆ ಬಿಸ್ಕೆಟ್ ಎಸೆಯುತ್ತಿದ್ರಾ ರೇವಣ್ಣನವರೇ?
ಈ ಎಚ್.ಡಿ.ರೇವಣ್ಣನವರಿಗೆ ಏನಾಗಿದೆ? 38 ಸೀಟು ಪಡೆದು ಸರ್ಕಾರ ರಚಿಸಿದ ಇವರ ಪಕ್ಷದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡ ರೇವಣ್ಣನವರಿಗೆ ಏಕಿಂಥಾ ಬೇಜವಾಬ್ದಾರಿತನ? ಪುಟ್ಟ ಕಂದಮ್ಮಗಳತ್ತ ಬಿಸ್ಕೆಟ್ಟು ಬಿಸಾಕುವ ಇವರ ತಲೆಯಲ್ಲಿ ಏನು ತುಂಬಿಕೊಂಡಿದೆ? ಒಬ್ಬ ಮಾಜಿ ಪ್ರಧಾನಿಯವರ ಮಗನಾಗಿ ಹೀಗೆ ವರ್ತಿಸುವುದು ಎಂದರೆ ಪುಡಿ ರಾಜಕಾರಣಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?
ಸ್ವಾಮಿ ಎಚ್.ಡಿ.ರೇವಣ್ಣನವರೇ, ಭಾರಿ ಮಳೆಯಿಂದ ಸಂತ್ರಸ್ತರಾದವರ ಬಳಿ ಬಂದು ನೀವು ಮಹಿಳೆಯರು-ಮಕ್ಕಳು ಎನ್ನದೆ ಬಿಸ್ಕೆಟ್ ಪ್ಯಾಕೆಟ್ ಎಸೆದುಹೋಗಿದ್ದೀರಲ್ಲ ನೀವೊಬ್ಬ ಜನಸೇವಕರೋ? ಸರ್ವಾಧಿಕಾರಿಯೋ? ನಿಮ್ಮ ತಂದೆಯವರು ಹೀಗೆಯೇ ಜನಸೇವೆ ಮಾಡಬೇಕು ಎಂದು ಹೇಳಿಕೊಟ್ಟಿದ್ದಾರಾ ಅಥವಾ ನಾನು ಮಾಜಿ ಪ್ರಧಾನಿ ಮಗ ಎಂಬ ಅಹಂಕಾರವೇ? 2008ರ ಚುನಾವಣೆಯಲ್ಲಿ ರಾಜ್ಯದ ಜನ ನಿಮ್ಮನ್ನು ಹೀಗೆಯೇ ಬಿಸ್ಕತ್ತಿನ ಬ್ಯಾಕೆಟ್ ನಂತೆಯೇ ಬಿಸಾಡಿದರಲ್ಲ? ಆಗೆಲ್ಲಿ ಹೋಗಿತ್ತು ನಿಮ್ಮ ಈ ಅಹಂಕಾರ?
ನೀವು ಹಾಗೂ ನಿಮ್ಮ ಪಕ್ಷದವರು ನಮಗೆ ಜನರೇ ಜನಾರ್ದನ ಎನ್ನುತ್ತಾರೆ. ನಿಮ್ಮ ತಂದೆಯವರಂತೂ ಬಡವರ ಅಭ್ಯುದಯವೇ ನನ್ನ ಗುರಿ ಎಂದು ದಶಕಗಳಿಂದಲೂ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ನಿಮ್ಮ ಸಹೋದರ, ಮುಖ್ಯಮಂತ್ರಿಯವರಂತೂ ನಾನು ಜನರ ಅಭಿವೃದ್ಧಿಯ ಪರ ಎನ್ನುತ್ತಾರೆ. ಆದರೆ ನೀವೇನು ಮಾಡುತ್ತಿದ್ದೀರಿ ರೇವಣ್ಣನವರೇ? ನಿಮ್ಮ ಈ ದುರಹಂಕಾರದ ವರ್ತನೆಯಿಂದ ಜನರ ಮನಸ್ಸಿನಲ್ಲಿ ಉಳಿಯುತ್ತೇನೆ ಎಂದುಕೊಂಡಿದ್ದೀರಾ?
ಹಾಗೊಂದು ವೇಳೆ ನಿಮಗೆ ಎಲ್ಲ ಕಂದಮ್ಮಗಳ ಬಳಿ ಹೋಗಿ ಕೊಡಲು ಆಗದಿದ್ದರೆ, ಸಾಲಾಗಿ ಬನ್ನಿ ಮಕ್ಕಳೇ ನಾನೇ ನಿಮಗೆ ಬಿಸ್ಕೆಟ್ ಕೊಡುತ್ತೇನೆ ಎಂದಿದ್ದರೆ ಮಕ್ಕಳು ಸಭ್ಯವಾಗಿ ಬಂದು ತಿಂಡಿ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಹೀಗೆ ಎಸೆಯುವ ಮೂಲಕ ನೀವು ದುರಹಂಕಾರಿಯಾಗಿ ವರ್ತಿಸಿದಿರಲ್ಲ ರೇವಣ್ಣನವರೇ, ನಿಮ್ಮ ಮಕ್ಕಳೇ ಆ ಸ್ಥಾನದಲ್ಲಿದ್ದರೆ ಹೀಗೆ ಬಿಸ್ಕೆಟ್ ಎಸೆದು ಹೋಗುತ್ತಿದ್ದಿರಾ?
ಎಚ್.ಡಿ.ರೇವಣ್ಣನವರೇ, ನೀವು ಒಬ್ಬ ಮಾಜಿ ಪ್ರಧಾನಿಯ ಮಗನಾಗಿರಬಹುದು. ಮುಖ್ಯಮಂತ್ರಿಯ ಸಹೋದರನಾಗಿರಬಹುದು. ನೀವೂ ಲೋಕೋಪಯೋಗಿ ಸಚಿವನಾಗಿರಬಹುದು. ಆದರೆ ನಿಮ್ಮ ತಂದೆಯವರಿಗೆ ಪ್ರಧಾನಿಗಿರಿ, ನಿಮ್ಮ ಸಹೋದರನಿಗೆ ಮುಖ್ಯಮಂತ್ರಿ ಸ್ಥಾನ, ನಿಮಗೆ ಸಚಿವ ಸ್ಥಾನ ಸಿಕ್ಕಿರುವುದು ಸಾಮಾನ್ಯ ಜನರು ಹಾಕಿದ ಮತಭಿಕ್ಷೆಯಿಂದ ಎಂಬುದನ್ನು ಮರೆಯದಿರಿ.
ಇನ್ನಾದರೂ ಸಭ್ಯವಾಗಿ ವರ್ತಿಸಿ. ಮತ ಬೇಡುವಾಗ ವಿನಯದಿಂದ ಜನರ ಕಾಲಿಗೆ ಎರಗಿ, ಗೆದ್ದ ಮೇಲೆ ಬಿಸ್ಕೆಟ್ ಬಿಸಾಕುವುದಕ್ಕೂ, ಊಸರವಳ್ಳಿಗೂ ಏನೂ ವ್ಯತ್ಯಾಸವಿರುವುದಿಲ್ಲ ರೇವಣ್ಣನವರೇ. ಲೋಕಜ್ಞಾನವಿರುವ ನಿಮಗೆ ಈ ಸೂಕ್ಷ್ಮ ಅರ್ಥವಾಗಿದೆ ಎಂದು ಭಾವಿಸುತ್ತೇವೆ.
Leave A Reply