ರಾಜ್ಯಕ್ಕೆ ಆಗಮಿಸಿದ ಕೇಂದ್ರ ತಂಡ: ಎರಡು ದಿನ ಮಳೆ ಹಾನಿ ಪರಿಶೀಲನೆ
ಮಂಗಳೂರು: ಕರಾವಳಿಯಲ್ಲಿ ಮಳೆಹಾನಿ ಅಧ್ಯಯನಕ್ಕೆ ಕೇಂದ್ರದಿಂದ ತಂಡ ಬಂದಿದ್ದು, ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ, ಉಡುಪಿಗೆ ತೆರಳಿದ್ದಾರೆ. ಅಧ್ಯಯನ ತಂಡವು ಇಂದು ಸಂಜೆ 6:30ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಿದ್ದು. ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಲಿದ್ದಾರೆ.
ಎರಡು ದಿನ ಮಳೆ ಹಾನಿ ಪರಿಶೀಲನೆ ನಡೆಸುವ ಕೇಂದ್ರ ತಂಡ ನಾಳೆ (ಸೆಪ್ಟೆಂಬರ್ 13) ರಂದು ಬಂಟ್ವಾಳದ ಮುಲ್ಲರಪಟ್ನ , ವಿಟ್ಲ ಪಡ್ನೂರು, ಕಾಣಿಯೂರು, ಸುಬ್ರಹ್ಮಣ್ಯ, ಗುಂಡ್ಯದಿಂದ ಹಾಸನಕ್ಕೆ ತೆರಳಲಿದ್ದಾರೆ. ಇತ್ತೀಚೆಗಷ್ಟೆ ಕುಮಾರಸ್ವಾಮಿ ಹಾಗೂ ದೇವೇಗೌಡ ಅವರ ನಿಯೋಗವು ದೆಹಲಿಗೆ ತೆರಳಿ ಮೋದಿ ಅವರಿಗೆ ಮಳೆ ಹಾನಿ ವರದಿ ನೀಡಿ ನೆರವಿಗೆ ಮನವಿ ಮಾಡಿದ್ದರು. ಹಾಗಾಗಿ ಕೇಂದ್ರವು ಅಧ್ಯಯನ ತಂಡವನ್ನು ಕಳುಹಿಸಿದೆ.
ಅಧ್ಯಯನ ತಂಡವು ಎರಡು ದಿನಗಳ ಕಾಲ ಕೊಡಗು, ದಕ್ಷಿಣ ಕನ್ನಡ, ಹಾಸನ, ಉತ್ತರ ಕನ್ನಡ ಇನ್ನೂ ಕೆಲವು ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ. ವರದಿ ಆಧರಿಸಿ ಕೇಂದ್ರವು ಪರಿಹಾರ ಬಿಡುಗಡೆ ಮಾಡಲಿದೆ. ಕೇಂದ್ರದ ತಂಡದಲ್ಲಿ ಆರ್ಥಿಕ ಸಚಿವಾಲಯದ ಉಪ ಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್, ಹೈವೇ ಪ್ರಾಧಿಕಾರದ ಸದಾನಂದ ಬಾಬು ಹಾಗೂ ಇನ್ನೂ ಕೆಲವು ತಜ್ಞರಿದ್ದಾರೆ.
Leave A Reply