ತೇಜಸ್ಸು ಕಳೆದುಕೊಂಡ ತೇಜಸ್ವಿ. ವಿಶ್ವಾಸ ಮತದಲ್ಲಿ ನಿತೀಶ್ ಗೆಲುವು. ಬಿಹಾರದಲ್ಲಿನ್ನು ನಿತೀಶ್-ಮೋದಿ ಸರ್ಕಾರ್.
ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ಪರ ಒಟ್ಟು 131 ಶಾಸಕರು ಮತ ಚಲಾಯಿಸಿದ್ದು, ಸರ್ಕಾರದ ವಿರುದ್ಧ 108 ಶಾಸಕರು ಮತ ಚಲಾಯಿಸಿದ್ದಾರೆ.ಸರ್ಕಾರದ ಉಳಿವಿಗಾಗಿ 122 ಶಾಸಕರ ಬೆಂಬಲದ ಅಗತ್ಯವಿದ್ದು, ನಿತೀಶ್ ಕುಮಾರ್ ಸರ್ಕಾರಕ್ಕೆ 131 ಶಾಸಕರು ಬೆಂಬಲ ನೀಡಿರುವುದರಿಂದ ಸಿಎಂ ಆಗಿ ನಿತೀಶ್ ಕುಮಾರ್ ಮುಂದುವರೆಯಲಿದ್ದಾರೆ.
ಹೀಗಾಗಿ ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದ ಆರ್ ಜೆಡಿ ಪಕ್ಷದ ತೇಜಸ್ವಿ ಯಾದವ್ ವಿಪಕ್ಷ ನಾಯಕರಾಗಿ ಮುಂದುವರೆಯಲಿದ್ದು, ವಿಪಕ್ಷ ನಾಯಕರಾಗಿದ್ದ ಸುಶೀಲ್ ಕುಮಾರ್ ಮೋದಿ ಉಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಆರ್ ಜೆಡಿ, ಕಾಂಗ್ರೆಸ್ ಪಕ್ಷಗಳನ್ನೊಳಗೊಂಡ ಮಹಾಘಟ್ ಬಂಧನ್ ಮೈತ್ರಿಕೂಟದಿಂದ ಹೊರ ಬಂದಿದ್ದ ನಿತೀಶ್ ಕುಮಾರ್ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ಬಿಜೆಪಿ ಜೊತೆಗೂಡಿ ಸರ್ಕಾರ ರಚನೆ ಮಾಡಿದ್ದಾರೆ. ವಿಧಾನಸಭೆ ಹೊರಗಿದ್ದ ಜೆಡಿಯು ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ವಿಶ್ವಾಸ ಮತ ಯಾಚನೆಗೂ ಮುನ್ನ ಬಿಹಾರ ವಿಧಾನಸಭೆಯಲ್ಲಿ ದೊಡ್ಡ ಡ್ರಾಮಾವೇ ನಡೆದಿದ್ದು, ಭಾರಿ ಕೋಲಾಹಲದ ನಡುವೆಯೇ ವಿಶ್ವಾಸ ಮತ ಯಾಚನೆಗೆ ನಿರ್ಣಯ ಮಂಡಿಸಲಾಯಿತು. ಇದಕ್ಕೂ ಮೊದಲು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲು ಮುಂದಾದಾಗ ಆರ್ ಜೆಡಿ ಸದಸ್ಯರು ಭಾರಿ ಕೋಲಾಹಲವೆಬ್ಬಿಸಿದರು. ಇದರ ನಡುವೆಯೂ ಮಾತನಾಡಿದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು, ಮೊದಲಿಗೆ ಆರ್ ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರ ಕಾರ್ಯಗಳಿಂದಾಗಿಯೇ ನಾನು ಇಂದು ಈ ಸ್ಥಾನದಲ್ಲಿ ನಿಂತಿದ್ದೇನೆ ಎಂದು ಹೇಳಿದರು.
ಇದೇ ವೇಳೆ ತೇಜಸ್ವಿಯಾದವ್ ವಿರುದ್ಧ ಕಿಡಿಕಾರಿದ ಸುಶೀಲ್ ಕುಮಾರ್ ಮೋದಿ ಅವರು, ಬಿಹಾರದ ಜನತೆ ತಮ್ಮ ಜನಾದೇಶ ನೀಡಿರುವುದು. ಉತ್ತಮ ಆಡಳಿತ ನೀಡಲಿ ಎಂದು. ಆದರೆ ಕೆಲವರು ಜನಾದೇಶವನ್ನು ತಪ್ಪು ತಪ್ಪಾಗಿ ಕಲ್ಪಿಸಿಕೊಂಡು ಜನಾದೇಶವನ್ನು ತಮ್ಮ ಬೇನಾಮಿ ಆಸ್ತಿ ರಕ್ಷಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 26 ವರ್ಷಗಳಲ್ಲಿ 26 ಬೇನಾಮಿ ಆಸ್ತಿಗಳಿಗೆ ಮಾಲೀಕರಾಗಿದ್ದಾರೆ. ಇದಕ್ಕಾಗಿ ಜನ ಬೆಂಬಲ ನೀಡಿರಲಿಲ್ಲ ಎಂದು ಅವರು ಕಿಡಿಕಾರಿದರು.
Leave A Reply