ಕಾರ್ಪೋರೇಟರ್ ಗಳ ವೇಷ ಹಾಕಿರುವ ಬ್ರೋಕರ್ ಗಳಿಂದ ಮತ್ತೊಂದು ಬಿಲ್ಡರ್ ಸೇವೆ!!
ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಮೇಲೆ ದೊಡ್ಡದಾಗಿ “ಮಂಗಳೂರು ಮಹಾನಗರ ಪಾಲಿಕೆ” ಎಂದು ಬೋರ್ಡ್ ಇದೆಯಲ್ಲ, ಅಲ್ಲಿಯೇ ಅದಕ್ಕೆ ತಾಗಿ ಮತ್ತೊಂದು ಬೋರ್ಡ್ ಹಾಕಬೇಕು. ಅದರಲ್ಲಿ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಬರೆದು ಹಾಕಬೇಕು. ಯಾಕೆಂದರೆ ಪಾಲಿಕೆಯಲ್ಲಿ ಕಾರ್ಪೋರೇಟರ್ಸ್ ಗಳ ಮುಖವಾಡ ಹಾಕಿರುವ ಐದಾರು ಜನರ ಮುಖ್ಯ ಉದ್ಯೋಗವೇ ಬಿಲ್ಡರ್ ಗಳಿಗೆ ಬಕೆಟ್ ಹಿಡಿಯುವುದು. ಪಾಲಿಕೆಯಲ್ಲಿ ಬಿಲ್ಡರ್ ಗಳ ಮತ್ತು ಕೆಲವು ಪಾಲಿಕೆ ಸದಸ್ಯರ ನಡುವೆ ಇರುವ ಅಪವಿತ್ರ ಮೈತ್ರಿಯ ಬಗ್ಗೆ ಹಿಂದೆನೂ ಬರೆದಿದ್ದೆ. ಈಗ ಅದಕ್ಕೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ. ಎಷ್ಟರಮಟ್ಟಿಗೆ ಬಿಲ್ಡರ್ ಗಳು ಪಾಲಿಕೆಯ ಕೆಲವು ಬಿಳಿ ಶರ್ಟ್ ಮತ್ತು ಬಿಳಿ ಪ್ಯಾಂಟುಗಳೊಂದಿಗೆ ಕ್ಲೋಸ್ ಆಗಿರುತ್ತಾರೆ ಎಂದರೆ ಇಬ್ಬರಿಗೂ ತಂದೆ ಒಬ್ಬನೇ ಏನೋ ಎನಿಸುವ ಮಟ್ಟಿಗೆ ಸಂಬಂಧ ಇರುತ್ತದೆ. ಇಲ್ಲದೆ ಹೋದರೆ 87 ವರ್ಷಗಳ ಹಿರಿಯ ಜೀವ ಅನಂತ ಪೈ ಹಾಗೂ 83 ವರ್ಷಗಳ ಅವರ ಹೆಂಡತಿ ಲಕ್ಷ್ಮಿದೇವಿ ಪೈಯವರಂತಹ ವಯೋವೃದ್ಧರನ್ನು ಪಾಲಿಕೆಯ ಬಿಲ್ಡರ್ ಶ್ರೇಯೋಭಿವೃದ್ಧಿ ಕಾರ್ಪೋರೇಟರ್ ಗಳು ಹಾಗೆ ಮಾಡಬಾರದಿತ್ತು.
ಬಿಲ್ಡರ್ ಹೇಳಿದ ಕೂಡಲೇ ಪಾಲಿಕೆ ಕೇಳುತ್ತೆ…
ಡೊಂಗರಕೇರಿ ಸಮೀಪದ ಭೋಜರಾವ್ ಲೇನ್ ನಲ್ಲಿ ಅನಂತ ಪೈ ದಂಪತಿಗಳು ನೆಲೆಸಿದ್ದಾರೆ. ಅವರು ಕಳೆದ 38 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ. ಅವರ ಜಾಗದ ವಿವಾದ ಕಳೆದ ಏಳು ವರ್ಷಗಳಿಂದ ನ್ಯಾಯಾಲಯದಲ್ಲಿದೆ. ಆ ಜಾಗವನ್ನು ಮಂಗಳೂರಿನ ಬಿಲ್ಡರ್ ಒಬ್ಬರು ಖರೀದಿಸಿದ್ದಾರಂತೆ. ಹಾಗಂತ ಬಿಲ್ಡರ್ ಬಳಿ ಸೂಕ್ತ ದಾಖಲೆಗಳಿಲ್ಲ. ಮೊನ್ನೆ ಅಕ್ಟೋಬರ್ 30ರಂದು ಪಾಲಿಕೆಯ ಅಧಿಕಾರಿಗಳು ಅಲ್ಲಿನ ರಸ್ತೆಯನ್ನು ಅಗಲ ಮಾಡಲು ಬಂದು ಈ ವೃದ್ಧ ದಂಪತಿಗಳ ಮನೆಯ ಆವರಣ ಗೋಡೆಯನ್ನು ಜೆಸಿಬಿ ತಂದು ಕೆಡವಿ ಬಿಟ್ಟಿದ್ದಾರೆ. ಇವರು ಹೇಳದೇ ಕೇಳದೆ ಮನಸ್ಸಿಗೆ ಬಂದ ರೀತಿಯಲ್ಲಿ ಗೋಡೆಯನ್ನು ಕೆಡವಿದ ಪರಿಣಾಮವಾಗಿ ಮನೆಯ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮತ್ತು ನೀರು ಹೋಗುವ ಪೈಪ್ ಕೂಡ ಜೆಸಿಬಿ ಹೋದ ರಭಸಕ್ಕೆ ತುಂಡಾಗಿವೆ. ಇದರಿಂದ ಮನೆಯ ನೀರಿನ ಮತ್ತು ವಿದ್ಯುತ್ ಸಂಪರ್ಕ ಹಠಾತ್ ಕಟ್ ಆಗಿದೆ. ಇದರಿಂದ ಆ ಹಿರಿಯ ಜೀವಗಳು ಒಮ್ಮಿದೊಮ್ಮೆಲೆ ಗಾಬರಿಗೆ ಬಿದ್ದಿವೆ. ಅನಂತ ಪೈ ಅವರಿಗೆ ಈ ವಯಸ್ಸಿನಲ್ಲಿ ಧ್ವನಿ ಎತ್ತಿ ಪಾಲಿಕೆಯವರೊಂದಿಗೆ ಗಲಾಟೆ ಮಾಡಲು ಆಗುತ್ತಾ? ಅವರ ಪತ್ನಿಯವರು ಇದ್ದುದ್ದರಲ್ಲಿ ಒಂದಿಷ್ಟು ಶಕ್ತಿ ಒಟ್ಟು ಮಾಡಿ ಮನೆಯ ಹೊರಗೆ ಬಂದು ಮಾತನಾಡಿದ್ದಾರೆ. ನಂತರ ಸ್ಥಳೀಯರು ಅಲ್ಲಿ ಬಂದಿದ್ದಾರೆ. ಇದು ಮಾಧ್ಯಮಗಳಿಗೆ ಗೊತ್ತಾಗಿದೆ. ದೊಡ್ಡ ದೊಡ್ಡ ಪತ್ರಿಕೆಗಳು, ಸ್ಥಳೀಯ ಟಿವಿ ಮಾಧ್ಯಮಗಳಲ್ಲಿ ಈ ವಿಷಯ ಪ್ರಸಾರವಾದ ನಂತರ ಪಾಲಿಕೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿದೆ. ನಂತರ ಮೆಸ್ಕಾಂ ಸಿಬ್ಬಂದಿಗಳನ್ನು ಕಳಿಸಿ ವಿದ್ಯುತ್ ಸಂಪರ್ಕ ಸಿಕ್ಕಿದೆ. ಅದರೊಂದಿಗೆ ನೀರಿನ ಪೈಪನ್ನು ತುಂಡಾದ ಕಡೆ ಸೈಕಲ್ ರಬ್ಬರ್ ಬಳಸಿ ಕಟ್ಟಿ ಹಾಕಿದ್ದಾರೆ. ಇದರಿಂದ ಏನಾಗುತ್ತಿದೆ ಎಂದರೆ ಯಾವುದಾದರೂ ಘನ ವಾಹನಗಳು ಆ ನೀರಿನ ಪೈಪ್ ಮೇಲಿನ ರಸ್ತೆಯಲ್ಲಿ ಹೋದಾಗ ಆ ರಬ್ಬರ್ ಮತ್ತೆ ಲೂಸಾಗುತ್ತದೆ. ಈ ಮೂಲಕ ನೀರು ಮತ್ತೆ ಲೀಕ್ ಆಗುತ್ತದೆ. ಇದರಿಂದ ಅಕ್ಕಪಕ್ಕದವರಿಗೆ ಮತ್ತು ಪೈ ದಂಪತಿಗಳಿಗೆ ಆಗುತ್ತಿರುವ ನೀರಿನ ಸಮಸ್ಯೆಗೆ ಪಾಲಿಕೆಯಲ್ಲಿ ಉತ್ತರ ಕೊಡುವುದು ಯಾರು?
ತಪ್ಪಿನ ಅರಿವಾದ ನಂತರ ಪಾಲಿಕೆ ಮಾಡಿದ್ದೇನು?
ನನ್ನ ಮೊದಲ ಪ್ರಶ್ನೆ: ಒಂದು ರಸ್ತೆ ಅಗಲ ಮಾಡುವಾಗ ಆ ರಸ್ತೆಯಲ್ಲಿರುವ ಮನೆಗಳಲ್ಲಿ ಯಾರ ಜಾಗ ಎಷ್ಟೆಷ್ಟು ಹೋಗುತ್ತದೆ ಎನ್ನುವ ಸ್ಕೆಚ್ ಅನ್ನು ಪಾಲಿಕೆಯವರು ಆ ಜಾಗದ ಮಾಲೀಕರಿಗೆ ಕೊಡಬೇಕು. ಅಂತಹ ಯಾವ ಸ್ಕೆಚ್ ಕೂಡ ಪಾಲಿಕೆ ಅನಂತ ಪೈ ಅವರಿಗೆ ತೋರಿಸಿಲ್ಲ, ಕೊಟ್ಟಿಲ್ಲ. ಹಾಗಿರುವಾಗ ಅಚಾನಕ್ ಆಗಿ ಬಂದು ಮನೆಯ ಆವರಣ ಗೋಡೆಯನ್ನು ಕೆಡವಲು ಪಾಲಿಕೆಯವರಿಗೆ ಯಾವ ಹಕ್ಕಿದೆ. ನಾವೇನೂ ಭಾರತದಲ್ಲಿ ವಾಸಿಸುತ್ತಿದ್ದೇವಾ ಅಥವಾ ಪಾಕಿಸ್ತಾನದಲ್ಲಿದ್ದೆವಾ? ಅಷ್ಟಕ್ಕೂ ಇಲ್ಲಿ ಕೇಳಿ ಬಂದಿರುವ ಮಾಹಿತಿ ಏನೆಂದರೆ ಪಾಲಿಕೆಯವರು ಬಿಲ್ಡರ್ ಒಬ್ಬರಿಗೆ ಕೇಳಿ ಗೋಡೆಯನ್ನು ಕೆಡವಿದ್ದಾರೆ ಎನ್ನುವುದು. ಬಿಲ್ಡರ್ ಓಕೆ ಎಂದದ್ದಕ್ಕೆ ಗೋಡೆ ಬಿಳಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಗೋಡೆಯನ್ನು ಬೀಳಿಸಿ ಎಂದು ಪರ್ಮಿಷನ್ ಕೊಡಲು ಬಿಲ್ಡರ್ ಯಾರು? ಅದು ಬಿಲ್ಡರ್ ನ ತಂದೆಯ ಜಾಗವಾ? ಇನ್ನು ಪಾಲಿಕೆಯವರು ಬಿಲ್ಡರ್ ಗೆ ಕೇಳಿ ಗೋಡೆ ಬೀಳಿಸಲು ಬಿಲ್ಡರ್ ನಿಂದ ಎಷ್ಟು ಎಂಜಲು ಪ್ರಸಾದವನ್ನು ತೆಗೆದುಕೊಂಡಿದ್ದಾರೆ. ಆ ಗೋಡೆಯನ್ನು ಮುಟ್ಟಲು ಕೂಡ ಪಾಲಿಕೆಗಾಗಲಿ, ಬಿಲ್ಡರ್ ಗಾಗಲೀ ಅಧಿಕಾರ ಇಲ್ಲ. ಹಾಗಿರುವಾಗ ಕೆಡವುದು ಎಂದರೆ ಅದೆಂತಹ ಭಂಡ ಧೈರ್ಯ ಇದೆ? ಆ ಧೈರ್ಯ ಬರಲು ಕಾರಣ ಬಿಲ್ಡರ್ಸ್ ಕೃಪಾಪೋಷಿತ ಬ್ರೋಕರ್ಸ್ ಕಾರ್ಪೋರೇಟರ್ಸ್. ನಮ್ಮ ಪಾಲಿಕೆಯಲ್ಲಿ ಅಂತಹ ಐದಾರು ಕಾರ್ಫೋರೇಟರ್ಸ್ ಇದ್ದಾರೆ. ಅವರು ಫುಲ್ ಟೈಮ್ ಕೆಲಸ ಬಿಲ್ಡರ್ಸ್ ಸೇವೆ. ಕಾನೂನಾತ್ಮಕವಾಗಿ ಮಾಡುತ್ತಾರಾ ಅದು ಇಲ್ಲ, ಎಲ್ಲಾ ಹಿಂದಿನ ಬಾಗಿಲಿನ ಸೇವೆ. ಯಾರು ಎಂದು ನಾನು ಬಾಯಿ ಬಿಟ್ಟು ಹೇಳುವುದಿಲ್ಲ. ಬೇಕಾದರೆ ಮಂಗಳೂರಿನ ಯಾವುದೇ ಬಿಲ್ಡರ್ ಅವರ ಹೊಸ ಕಟ್ಟಡದ ಭೂಮಿ ಪೂಜೆ, ಕಟ್ಟಡ ಹಸ್ತಾಂತರ, ಉದ್ಘಾಟನೆಯ ಫೋಟೋ ನೋಡಿ. ಅದರಲ್ಲಿ ಕಾಯಂ ಆಗಿ ಪಾಲಿಕೆಯ ಕೆಲವು ಸದಸ್ಯರು ಇರುತ್ತಾರೆ. ನೀವು ಬೇಕಾದರೆ ಹಿಂದಿನ ಯಾವುದಾದರೂ ಪತ್ರಿಕೆ ಸಿಕ್ಕಿದರೆ ಅದರಲ್ಲಿ ಬಿಲ್ಡರ್ ಗಳ ಗುದ್ದಲಿ ಪೂಜೆಯಿಂದ ಹಿಡಿದು ಕಟ್ಟಡ ಮುಗಿಯುವ ತನಕದ ಯಾವುದೇ ಕಾರ್ಯಕ್ರಮ ನೋಡಿ, ಇದೇ ಕಾರ್ಪೋರೇಟರ್ ಗಳು ಇರುತ್ತಾರೆ. ಬಿಲ್ಡರ್ ಗಳು ತುಂಬಾ ನಡೆದರೆ ಕಾಲು ಸವೆಯುತ್ತೇನೋ ಎಂದು ಓಡಾಡಿ ಎಲ್ಲ ಕೆಲಸಗಳನ್ನು ಸುಲಭವಾಗಿ ಟೇಬಲ್ಲಿನ ಕೆಳಗಿನಿಂದ ಮಾಡಿಕೊಡುತ್ತಾರೆ. ನಂತರ ಬಿಲ್ಡರ್ ಗಳು ಹಾಕಿದ ಬಿಸ್ಕಿಟ್ ತಿನ್ನುತ್ತಾರೆ.
ಮೊನ್ನೆ ಪಾಲಿಕೆಯ ಈ ಆವಾಂತರ ಮಾಧ್ಯಮಗಳಲ್ಲಿ ಸುದ್ದಿ ಆದ ನಂತರ ಕೆಡವಿದ ಗೋಡೆಯನ್ನು ಕಟ್ಟಲು ಪಾಲಿಕೆ ಮುಂದಾಗಿದೆ. ಕೇವಲ ಇವರ ಮನೆಯ ಆವರಣ ಗೋಡೆಯನ್ನು ಕಟ್ಟಿದರೆ ತಾವು ತಪ್ಪು ಮಾಡಿದ್ದು ಒಪ್ಪಿಕೊಂಡಂತೆ ಆಗುತ್ತದೆ ಎನ್ನುವುದಕ್ಕೆ ಆ ರಸ್ತೆಯಲ್ಲಿದ್ದ ಬೇರೆ ಮನೆಗಳ ಆವರಣ ಗೋಡೆಯನ್ನು ಕೂಡ ಕಟ್ಟುವ ಕೆಲಸ ಮಾಡಲಾಗಿದೆ. ಇದರ ಅಗತ್ಯ ಇದೆಯಾ? ಸುಮ್ಮನೆ ನಮ್ಮ ತೆರಿಗೆಯ ಹಣವನ್ನು ಪೋಲು ಮಾಡಲು ಇವರಿಗೆ ಅವಕಾಶ ಕೊಟ್ಟವರು ಯಾರು? ಎಲ್ಲಿಯ ತನಕ ಇಲ್ಲಿನ ಕೆಲವು ಕಾರ್ಪೋರೇಟರ್ ಗಳು ಶ್ರೀಮಂತ ಬಿಲ್ಡರ್ ಗಳ ಬೂಟ್ ಪಾಲಿಶ್ ಮಾಡುತ್ತಾ ಇರುತ್ತಾರೋ ಅಲ್ಲಿಯವರೆಗೆ ಬಡ, ಮಧ್ಯಮ ಜನ ಇವರಿಂದ ಸಂಕಷ್ಟ ಅನುಭವಿಸುತ್ತಲೇ ಇರಬೇಕು!
Leave A Reply