ಮೋದಿ ಹಾಕಿಕೊಂಡಿರುವ ಕ್ಯಾಶ್ ಲೆಸ್ ಭಾರತಕ್ಕೆ ಇನ್ನೊಂದು ಹೆಜ್ಜೆ!
ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ತಿಂಗಳ ಅಂತ್ಯದಿಂದ ಹೊಸ 200 ರೂಪಾಯಿ ನೋಟನ್ನು ಚಲಾವಣೆಗೆ ತರಲು ಸಂಪೂರ್ಣ ಸಿದ್ಧತೆ ನಡೆಸಿದೆ. ಈ ಮೂಲಕ ಬರುವ ದಿನಗಳಲ್ಲಿ ನೀವು 200 ರೂಪಾಯಿ ನೋಟನ್ನು ನಿಮ್ಮ ವ್ಯವಹಾರದಲ್ಲಿ ಬಳಸಬಹುದು. ಅಷ್ಟಕ್ಕೂ 200 ರೂಪಾಯಿ ನೋಟ್ ಜಾರಿಗೆ ತರುವ ಉದ್ದೇಶ ಏನು? ಸಿಂಪಲ್, ಬ್ಯಾಂಕುಗಳಲ್ಲಿ ಕೊರತೆ ಇರುವ ನೋಟುಗಳನ್ನು ಪೂರೈಸುವ ಅನಿವಾರ್ಯ ಒತ್ತಡ ಆರ್. ಬಿ.ಐ ಮೇಲಿದೆ. ಇದರೊಂದಿಗೆ ಆರ್. ಬಿ.ಐ 2000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಈ ವರ್ಷದ ಆದಿಯಲ್ಲಿಯೇ ನಿಲ್ಲಿಸಿದೆ.
2000 ನೋಟು ಮುದ್ರಣ ನಿಲ್ಲಿಸಿ 200 ರೂಪಾಯಿ ಪ್ರಿಂಟ್ ಮಾಡುವ ಉದ್ದೇಶ ಏನು? ಭ್ರಷ್ಟ್ರಾಚಾರಕ್ಕೆ ಅಂಕಿತ ಹಾಕುವುದು. ಅದು ಹೇಗೆ? ಭವಿಷ್ಯದ ಭಾರತದಲ್ಲಿ ಹೆಚ್ಚೆಚ್ಚು ಆರ್ಥಿಕ ಸಂವಹನಗಳು ಕ್ರೆಡಿಟ್ ಕಾರ್ಡ್ ಮೂಲಕವೇ ಆಗಬೇಕು ಎನ್ನುವುದು ಕೇಂದ್ರ ಸರಕಾರದ ತೀರ್ಮಾನ. ಅದಕ್ಕಾಗಿ ದೊಡ್ಡ ದೊಡ್ಡ ಮುಖಬೆಲೆಯ ನೋಟುಗಳನ್ನು ಮುಖ್ಯ ವಾಹಿನಿಯಿಂದ ನಿಧಾನವಾಗಿ ಹಿಂದಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಶುರು ಮಾಡುವುದು ಕೇಂದ್ರ ಸರಕಾರದ ಚಿಂತನೆ. ಆದರೆ ಏಕಾಏಕಿ ನಾಳೆಯಿಂದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆದು 200 ರೂಪಾಯಿ ಅಥವಾ 100 ರೂಪಾಯಿ ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳಿ ಎಂದು ಘೋಷಿಸಿದರೆ ಮತ್ತೊಮ್ಮೆ ಜನರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಬಹುದು ಮತ್ತು ಇದನ್ನೇ ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ರಣಾಸ್ತ್ರವನ್ನಾಗಿ ಬಳಸಬಹುದು ಎಂದು ಕೇಂದ್ರದ ಬಿಜೆಪಿ ನಾಯಕರಿಗೆ ಗೊತ್ತಿದೆ. ಅದಕ್ಕೆ ಅವರು ಈ ಬಾರಿ ಹೆಜ್ಜೆ ಹೆಜ್ಜೆಯಾಗಿ 2000 ಮತ್ತು 500 ರೂಪಾಯಿ ನೋಟುಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಾರೆ. ಅದಕ್ಕೆ 200 ರೂಪಾಯಿ ನೋಟು ಪ್ರಾರಂಭಿಕ ಹೆಜ್ಜೆ. ಒಂದೆರಡು ವರ್ಷದ ನಂತರ 200 ರೂಪಾಯಿ ನೋಟುಗಳು ಕೂಡ ಹಿಂದಕ್ಕೆ ಸರಿದು ಕೊನೆಗೆ ಕೇವಲ ನೂರು ರೂಪಾಯಿ ಮಾತ್ರ ಉಳಿಯಲಿದೆ. ಅದು ಕೂಡ ಒಂದೆರಡು ವರ್ಷ ಅಷ್ಟೇ. ಅಂತಿಮವಾಗಿ 50 ರೂಪಾಯಿ ನೋಟನ್ನು ಮಾತ್ರ ಉಳಿಸಿಕೊಂಡು ಉಳಿದ ಎಲ್ಲ ವ್ಯವಹಾರಗಳು ಕ್ಯಾಶ್ ಲೆಸ್ ಆಗಿ ನಡೆಯಬೇಕು ಎಂದು ಆರ್ಥಿಕ ಪಂಡಿತರು ಹೇಳಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅನುಷ್ಟಾನಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ 15 ಲಕ್ಷ ಕೋಟಿ ರುಪಾಯಿಗಳನ್ನು ಹಿಂದಕ್ಕೆ ಪಡೆದುಕೊಂಡು ನಂತರ ಈಗ 14.5 ಲಕ್ಷ ಕೋಟಿ ರೂಪಾಯಿಗಳನ್ನು ಮತ್ತೆ ಮುಖ್ಯ ವಾಹಿನಿಯಲ್ಲಿ ಸೇರುವಂತೆ ನೋಡಿಕೊಂಡಿರುವ ಆರ್. ಬಿ.ಐ ಗೆ ಈ ಹೊಸ ಐನೂರು ಮತ್ತು 2000 ರೂಪಾಯಿ ನೋಟನ್ನು ಕೂಡ ಕಳ್ಳನೋಟನ್ನಾಗಿ ಮಾಡಲು ಕೆಲವರು ಸಂಚು ಹೂಡಿದ್ದು ಗಮನಕ್ಕೆ ಬಂದಿದೆ. ಅದರಿಂದ ತಪ್ಪಿಸಿಕೊಳ್ಳಲು ಈ ಬಾರಿ 200 ರೂಪಾಯಿ ನೋಟಿಗೆ ಹೆಚ್ಚುವರಿ ಜಾಗ್ರತೆ ತೆಗೆದುಕೊಂಡು ಪ್ರಿಂಟ್ ಮಾಡುವ ಪ್ರಕ್ರಿಯೆಗಳು ನಡೆದಿವೆ. ಭ್ರಷ್ಟಾಚಾರವನ್ನು ನಿಲ್ಲಿಸಲು ಕಡಿಮೆ ಡಿನೋಮಿನೇಶನ್ ನೋಟುಗಳು ಜಾರಿಗೆ ಬರುವುದು ಅಗತ್ಯ ಯಾಕೆ? ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಮುಖಬೆಲೆಯ ನೋಟುಗಳಿದ್ರೆ ಹಂಚುವುದು ಸುಲಭ. ಅದೇ ಕಡಿಮೆ ಮೌಲ್ಯದ ನೋಟಿದ್ದರೆ ಸಿಕ್ಕಿಬೀಳುವುದು ಸುಲಭ. ಹಾಗೆ ಅಧಿಕಾರಿಗಳಿಗೆ ಲಂಚ ಕೊಡುವಾಗಲು ಎಲ್ಲಾ ಕಡೆ ಕಡಿಮೆ ಮುಖಬೆಲೆಯ ನೋಟುಗಳು ಇದ್ದರೆ ಅದರಿಂದ ಲಂಚಾವತಾರಕ್ಕೆ ಅಂಕುಶ ಬೀಳಲಿದೆ. ಮೋದಿ ಹಾಕಿಕೊಂಡಿರುವ ಮುಂದಿನ ಏಳೆಂಟು ವರ್ಷದ ಯೋಜನೆಯಲ್ಲಿ ಕಪ್ಪು ಹಣವುಳ್ಳವರು ಕಂಬಳಿ ಹೊದ್ದು ಮಲಗುವುದು ಲೇಸು.
Leave A Reply