ಪೂಜಾರಿಯವರನ್ನು ಬೈದವನನ್ನು ವಿರೋಧಿಸಲು ಯಾವ ಕಾಂಗಿಗೂ ಧೈರ್ಯ ಇಲ್ಲ!!
ಕಾಂಗ್ರೆಸ್ ಪಕ್ಷಕ್ಕೆ ಈ ರೀತಿಯ ಗತಿ ಬರಬಾರದಿತ್ತು. ತಮ್ಮ ಪಕ್ಷವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಸಿದ, ಕರಾವಳಿಯಲ್ಲಿ ಅರಳಿಸಿದ, ರಾಜ್ಯದಲ್ಲಿ ಕಟ್ಟಿದ, ರಾಷ್ಟ್ರಮಟ್ಟದಲ್ಲಿ ತಮ್ಮದೇ ಛಾಪನ್ನು ಒತ್ತಿದ ಒಬ್ಬ ನಾಯಕನಿಗೆ ಅವರ ಇಳಿವಯಸ್ಸಿನಲ್ಲಿ ತಮ್ಮದೇ ಪಕ್ಷದವ ಎಂದು ಹೇಳಿಕೊಳ್ಳುತ್ತಿರುವ ಒಬ್ಬ ವ್ಯಕ್ತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಕಾಂಗ್ರೆಸ್ಸಿನ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬನೆ ಒಬ್ಬ ಕಾಂಗ್ರೆಸ್ಸಿಗ ಕೂಡ ಪತ್ರಿಕಾಗೋಷ್ಟಿ ಕರೆದು ಖಂಡಿಸುತ್ತಿಲ್ಲವಲ್ಲ. ಹಾಗಾದರೆ ಕಾಂಗ್ರೆಸ್ಸಿಗೆ ಹಿರಿಯ ನಾಯಕನೊಬ್ಬ ಅಪ್ರಸ್ತುತವಾಗಿ ಹೋಗಿ ಬಿಟ್ಟರಾ?
ಜನಾರ್ಧನ ಪೂಜಾರಿಯವರನ್ನು ಎನ್ ಕೌಂಟರ್ ಮಾಡಬೇಕು ಎಂದು ಒಬ್ಬ ವ್ಯಕ್ತಿ ಹೇಳುತ್ತಾನೆ ಎಂದರೆ ಮತ್ತು ಅದನ್ನು ಕೇಳಿ ಕೂಡ ಕಾಂಗ್ರೆಸ್ಸಿಗರು ಮೌನವಾಗಿ ಕುಳಿತುಕೊಳ್ಳುತ್ತಾರೆ ಎಂದರೆ ಅದರ್ಥ ಅವರು ಅದಕ್ಕೆ ಮೌನಸಮ್ಮತಿ ಸೂಚಿಸಿದ್ದಾರೆ ಎಂದಲ್ಲವೆ? ಪೂಜಾರಿಯವರನ್ನು ಆವತ್ತೆ ಪಕ್ಷದಿಂದ ಹೊರಗೆ ಹಾಕಬೇಕು ಎಂದು ಹೇಳುತ್ತಿರುವ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ಸಿಗರು ತುಟಿಪಿಟಿಕ್ ಎನ್ನುತ್ತಿಲ್ಲ ಎಂದರೆ ಅದರ್ಥ ಇಲ್ಲಿ ಕಾಂಗ್ರೆಸ್ಸಿಗರು ಪೂಜಾರಿಯವರನ್ನು ಪಕ್ಷದಿಂದ ಹೊರಗೆ ಹಾಕುವುದಕ್ಕೆ ಅಂಕಿತ ಒತ್ತಿ ಬಿಟ್ಟಿದ್ದಾರೆ ಎಂದು ತಿಳಿದುಕೊಳ್ಳಬೇಕಾ? ಅಷ್ಟಕ್ಕೂ ಹಾಗೆ ಮಾತನಾಡಿದ ವ್ಯಕ್ತಿ ತಾನು ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಘಟಕದವನು ಎನ್ನುತ್ತಿರುವುದರಿಂದ ಆ ವ್ಯಕ್ತಿ ಯಾರು ಎಂದು ಕಾಂಗ್ರೆಸ್ಸಿನ ದಕ ಜಿಲ್ಲಾ ಅಲ್ಪಸಂಖ್ಯಾತ ಘಟಕಕ್ಕೆ ಗೊತ್ತಿಲ್ಲದೇ ಇರಲು ಸಾಧ್ಯವಿಲ್ಲ. ಅದರೊಂದಿಗೆ ಆ ವ್ಯಕ್ತಿ ಜನಾರ್ಧನ ಪೂಜಾರಿಯವರ ವಯಸ್ಸಿನ ಬಗ್ಗೆ ಮಾತನಾಡುತ್ತಿದ್ದಾನೆ ಎಂದರೆ ಜಿಲ್ಲಾ ಕಾಂಗ್ರೆಸ್ಸಿನ ಒಳಗೆ ಪೂಜಾರಿಯವರ ಆಯುಷ್ಯದ ಬಗ್ಗೆ ಯಾರೋ ಹಗುರವಾಗಿ ಮಾತನಾಡಿದ್ದಾರೆ ಎಂದೇ ಅರ್ಥ. ಇದು ಏನನ್ನು ಸೂಚಿಸುತ್ತದೆ.
ಸೈಬರ್ ಪೊಲೀಸರ ಜವಾಬ್ದಾರಿ ಇದೆ..
ಎಲ್ಲೋ ಒಂದು ಕಡೆ ಬಿರುವೆರ್ ಕುಡ್ಲದಂತಹ ಸಂಘಟನೆಗಳು ಈ ಬಗ್ಗೆ ಸೈಬರ್ ಪೊಲೀಸ್ ಅಧಿಕಾರಿಗಳಿಗೆ ದೂರು ಕೊಡಲು ಹೊರಟಿವೆ ಎಂದರೆ ಕಾಂಗ್ರೆಸ್ಸಿಗರಿಗೆ ಯಾಕೆ ಅದು ಆಗ್ತಾ ಇಲ್ಲ. ಇದರ್ಥ ಇಷ್ಟೇ, ಪೂಜಾರಿಯವರು ಕಾಂಗ್ರೆಸ್ಸಿಗರಿಗೆ ಭಾರವಾಗಿದ್ದಾರೆ. ಅವರು ಹೇಳುವ ಸತ್ಯ ಅರಗಿಸಿಕೊಳ್ಳುವ ಧೈರ್ಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬನೇ ಒಬ್ಬ ಕಾಂಗ್ರೆಸ್ಸಿನವನಲ್ಲಿಯೂ ಕಾಣ್ತಾ ಇಲ್ಲ. ಇನ್ನು ಕಳೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಜನಾರ್ಧನ ಪೂಜಾರಿಯವರನ್ನು ಎದುರಿಗೆ ಇಟ್ಟು ಮತಯಾಚನೆ ಮಾಡಿ ಗೆದ್ದಿದ್ದರು. ಈ ಬಾರಿಯೂ ಪಾಲಿಕೆಯ ಕಾಂಗ್ರೆಸ್ಸಿಗರಿಗೆ ಗತಿ ಪೂಜಾರಿಯವರು ಮಾತ್ರ. ಪೂಜಾರಿಯವರ ಋಣ ಕಾಂಗ್ರೆಸ್ಸಿನ ಪಾಲಿಕೆಯ ಸದಸ್ಯರ ಮೇಲಿದೆ. ಅವರು ಕೂಡ ಮಾತನಾಡುತ್ತಿಲ್ಲ. ಹಾಗಾದರೆ ಪೂಜಾರಿಯವರನ್ನು ನಮ್ಮ ಕಾಂಗ್ರೆಸ್ಸಿಗರು ಈ ಪರಿ ನಿರ್ಲಕ್ಷಿಸಲು ಕಾರಣವೇನು?
ಮೊದಲನೇಯದಾಗಿ ಮಾತನಾಡಿದ ವ್ಯಕ್ತಿ ಮುಸ್ಲಿಂ ಎಂದು ಆತನ ಮಾತಿನ ಶೈಲಿ, ಉಚ್ಚಾರದ ರೀತಿ ಮತ್ತು ಆತನೇ ಹೇಳಿದ ಹಾಗೆ ಅಲ್ಪಸಂಖ್ಯಾತ ಘಟಕದವನು ಆದ್ದರಿಂದ ಮುಸ್ಲಿಂ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಮುಂದಿನದು ಒಂದು ವೇಳೆ ತಾವು ಇದನ್ನು ಖಂಡಿಸಿದರೆ ಮುಸ್ಲಿಮರಿಗೆ ಬೇಸರವಾಗುತ್ತದೆ ಎನ್ನುವ ಭಾವನೆ. ಈಗಾಗಲೇ ತಮಗೆ ಲೋಕಸಭಾ ಟಿಕೆಟ್ ಕೊಡದಿದ್ದರೆ ತಾವು ಮುಂದಿನ ದಾರಿ ನೋಡಬೇಕಾಗುತ್ತದೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಬಹಿರಂಗ ವೇದಿಕೆಯಲ್ಲಿ ಹೇಳಿಯಾಗಿದೆ. ಆದ್ದರಿಂದ ಈಗಲೇ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಸ್ಥಿತಿ ತೂಗುಯ್ಯಾಲೆಯಲ್ಲಿದೆ. ಹಾಗಿರುವಾಗ ಈಗ ಧ್ವನಿ ಮುದ್ರಿಸಿದವನನ್ನು ವಿರೋಧಿಸಿದರೆ ತಾವು ಮುಸ್ಲಿಮರನ್ನು ವಿರೋಧಿಸಿದ ಹಾಗೆ ಆಗುತ್ತದಾ? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಲೋಕಸಭಾ ಅಕಾಂಕ್ಷಿಗಳು ಬಾಯಿಗೆ ಬೆರಳಿಟ್ಟು ಸುಮ್ಮನೆ ಕುಳಿತಿದ್ದಾರೆ.
ರಾಮ ಮಂದಿರದ ಬಗ್ಗೆ ಕಾಂಗ್ರೆಸ್ ನಿಲುವು ಗೊತ್ತಾಯಿತು…
ಅಷ್ಟಕ್ಕೂ ಜನಾರ್ಧನ ಪೂಜಾರಿಯವರು ಹೇಳಿದ್ದರಲ್ಲಿ ಏನು ತಪ್ಪಿದೆ. ಅಯೋಧ್ಯೆಯಲ್ಲಿಯೇ ರಾಮ ಮಂದಿರ ಆಗುತ್ತದೆ. ಅದರ ಕ್ರೆಡಿಟ್ ಬಿಜೆಪಿಯವರು ಏನೂ ಪಡೆಯಬೇಕಾಗಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ತಕ್ಷಣ ಪೂಜಾರಿಯವರ ಬೆಂಬಲಕ್ಕೆ ಬಂದು ನಾವು ಕೂಡ ರಾಮ ಮಂದಿರ ಅಲ್ಲಿಯೇ ಆಗಬೇಕು, ಆದರೆ ಅದರ ಕ್ರೆಡಿಟ್ ಬಿಜೆಪಿಯವರಿಗೆ ಹೋಗಬೇಕಾಗಿಲ್ಲ ಎಂದು ಸಮರ್ಥನೆಗೆ ನಿಲ್ಲಬಹುದಿತ್ತು. ರಾಮ ಮಂದಿರ ನಿರ್ಮಾಣದ ಕ್ರೆಡಿಟ್ ಬಿಜೆಪಿಯವರು ಪಡೆಯುತ್ತಾರಾ, ಇಲ್ಲವಾ, ಅವರಿಗೆ ಹೋಗುತ್ತಾ ಇಲ್ವಾ ಎನ್ನುವುದು ಮುಂದಿನ ಮೇಯಲ್ಲಿ ಗೊತ್ತಾಗುತ್ತದೆ. ಅಷ್ಟು ಅಭಿವೃದ್ಧಿ ಮಾಡಿಯೂ ಅಟಲ್ ಬಿಹಾರಿ ವಾಜಪೇಯಿಯವರನ್ನು ಮತ್ತೊಮ್ಮೆ ಗೆಲ್ಲಿಸದ ಜನ ನಾವು. ಹಾಗಿರುವಾಗ ರಾಮ ಮಂದಿರಕ್ಕೆ ಶಿಲಾನ್ಯಾಸ ಆದ ಕೂಡಲೇ ಎನ್ ಡಿಎ ಎರಡನೇ ಅವಧಿಗೆ ಬರುತ್ತೆ ಎನ್ನಲು ಆಗಲ್ಲ. ಆದರೆ ಪೂಜಾರಿಯವರ ಹೇಳಿಕೆಯನ್ನು ಬೆಂಬಲಿಸದೆ ಕಾಂಗ್ರೆಸ್ ತಾವು ರಾಮ ಮಂದಿರದ ವಿರೋಧಿ ಎಂದು ತೋರಿಸಿಕೊಟ್ಟಂತೆ ಆಗಿದೆ. ಅದರೊಂದಿಗೆ ಪೂಜಾರಿಯವರನ್ನು ಬೈದವರನ್ನು ವಿರೋಧಿಸದೇ ತಾವು ಎಂತವರು ಎಂದು ತೋರಿಸಿಕೊಟ್ಟಂತೆ ಆಗಿದೆ. ಆದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅದರ ಮುಖಂಡರಾದರೂ ಪೂಜಾರಿಯವರನ್ನು ಯಾರೋ ಬೈದದ್ದನ್ನು ಅವರು ಗಂಭೀರವಾಗಿ ಪರಿಗಣಿಸುತ್ತಾರಾ!
Leave A Reply