ಪಾಲಿಕೆ ಚುನಾವಣೆ ಮುಂದಕ್ಕೆ ಹೋದರೆ ಕಾಂಗ್ರೆಸ್ಸಿಗೆ ಮತ್ತು ಬಿಜೆಪಿಗೆ ಎಷ್ಟೆಷ್ಟು ಲಾಭ??

ಇದೇ ಫೆಬ್ರವರಿ ಅಂತ್ಯದೊಳಗೆ ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಹೋಗುತ್ತಾ ಎನ್ನುವ ದೊಡ್ಡ ಪ್ರಶ್ನೆಗೆ ಬಹುತೇಕ ನಾಳೆ ಅಥವಾ ನಾಡಿದ್ದಿನ ಒಳಗೆ ಉತ್ತರ ಸಿಗಲಿದೆ. ಒಂದು ವೇಳೆ ಫೆಬ್ರವರಿಯಲ್ಲಿ ಚುನಾವಣೆ ನಡೆಯುತ್ತದೆ ಎಂದಾದರೆ ಕೋರ್ಟ್ ಈಗ ಇರುವ ಮೀಸಲಾತಿಯನ್ನು ಬದಲಾಯಿಸುವುದು ಬೇಡಾ ಎನ್ನುವ ತೀರ್ಪನ್ನು ಕೊಡಬೇಕಾಗುತ್ತದೆ. ಒಂದು ವೇಳೆ ಈಗ ಇರುವ ಮೀಸಲಾತಿಯಲ್ಲಿ ಲೋಪದೋಷಗಳಿವೆ ಎಂದು ಕೋರ್ಟ್ ಹೇಳಿದರೆ ಅದನ್ನು ಸರಿಪಡಿಸಿ ಚುನಾವಣೆಗೆ ಹೋಗಬೇಕಾಗುತ್ತದೆ. ಅದು ಸರಿ ಮಾಡುವಾಗ ಇನ್ನೊಂದೆರಡು ತಿಂಗಳು ಕಳೆದರೆ ನಂತರ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಸಮಯ ಬರುತ್ತದೆ. ಒಂದು ವೇಳೆ ಅಧಿಸೂಚನೆ ಹೊರಡಿಸಿದರೆ ನಂತರ ಪಾಲಿಕೆಯ ಚುನಾವಣೆ ನಡೆಯಲು ಲೋಕಸಭಾ ಚುನಾವಣೆ ನಡೆದ ನಂತರವೇ ಆಯಿತು. ಲೋಕಸಭಾ ಚುನಾವಣೆ ನಡೆದು ಫಲಿತಾಂಶ ಬಂದು ಅಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುವಾಗ ಇಲ್ಲಿ ಮಳೆ ಬರುತ್ತದೆ. ಒಮ್ಮೆ ಮಳೆ ಬಂದರೆ ನಂತರ ಅದು ನಿಂತ ನಂತರವೇ ಆಯಿತು. ಆದ್ದರಿಂದ ಮುಂದಿನ ಪಾಲಿಕೆ ಚುನಾವಣೆ ಚೌತಿ ಕಳೆದ ನಂತರವೇ ಇಟ್ಟುಕೊಳ್ಳಬೇಕಾಗುತ್ತದೆ. ಹೀಗೆ ಆಗುತ್ತಾ ಎನ್ನುವ ಪ್ರಶ್ನೆಗೆ ಇವತ್ತು ಉತ್ತರ ಇಲ್ಲ. ಆದರೆ ಹೀಗೆ ಆದರೆ ರಾಜ್ಯದ ನಗರಾಭಿವೃದ್ಧಿ ಸಚಿವರಾಗಿರುವ ಯುಟಿ ಖಾದರ್ ಒಂದು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ. ಅದರೊಂದಿಗೆ ಮಂಗಳೂರು ನಗರ ಉತ್ತರ ಮತ್ತು ದಕ್ಷಿಣದ ಶಾಸಕರಿಗೂ ಒಂದಿಷ್ಟು ನಿರಾಳಭಾವ ಮೂಡಬಹುದು.
ಯಾರಿಗೆ ಎಷ್ಟು ಲಾಭ?
ಸದ್ಯ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ. ಆಡಳಿತ ವಿರೋಧಿ ಭಾವನೆ ಎಷ್ಟಿದೆ ಎಂದರೆ ನಾಳೆ ಚುನಾವಣೆ ನಡೆದರೆ ನಾಡಿದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ವಾತಾವರಣ ಇದೆ. ಅದರೊಂದಿಗೆ ಕಾಂಗ್ರೆಸ್ಸಿನ ಬಣಗಳು ಹಿಂದಿಗಿಂತ ಈ ಬಾರಿ ಲೆಕ್ಕಕ್ಕಿಂತ ಹೆಚ್ಚು ಸಕ್ರಿಯವಾಗಿದೆ. ಅದಕ್ಕೆ ಮುಖ್ಯ ಉದಾಹರಣೆ ವಿಜಯಾ ಬ್ಯಾಂಕ್ ವಿಲೀನದ ವಿಷಯವನ್ನು ಎರಡು ಬಣದವರು ಬೇರೆ ಬೇರೆ ದಿನ ತಮ್ಮದೇ ರೀತಿಯಲ್ಲಿ ಪ್ರತಿಭಟ್ಟಿಸಿದ್ದು. ಈಗ ಚುನಾವಣೆ ನಡೆದರೂ ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಬೇಕು, ಸಿಗದಿದ್ದರೆ ಒಳಗಿನಿಂದ ಆಡಬೇಕು ಮತ್ತು ತಮ್ಮ ಪ್ರಾಬಲ್ಯ ಪಾಲಿಕೆಯಲ್ಲಿ ಕಾಣಬೇಕು ಎಂದು ಎರಡೂ ಬಣದವರು ತಯಾರಿ ನಡೆಸಿ ಕೊನೆಗೆ ಸೋಲುವ ಮೂಲಕ ಸಚಿವ ಯುಟಿ ಖಾದರ್ ಅವರ ವರ್ಚಸ್ಸನ್ನು ಮಕಾಡೆ ಮಲಗಿಸಿಬಿಡಲಿದ್ದಾರೆ. ಆ ಹೆದರಿಕೆ ಖಾದರ್ ಅವರಿಗೆ ಇದೆ. ಒಂದು ಕಡೆ ಆಡಳಿತ ವಿರೋಧಿ ವಾತಾವರಣ ಮತ್ತೊಂದು ಕಡೆ ಬಣಗಳ ತಿಕ್ಕಾಟ. ಈ ನಡುವೆ ರಾಜ್ಯದಲ್ಲಿ ಸಂಕ್ರಾತಿ ನಂತರ ರಾಜ್ಯ ಸರಕಾರವೇ ಬೀಳುತ್ತೆ ಎನ್ನುವ ವಾತಾವರಣ ಇರುವಾಗ ಖಾದರ್ ಅಲ್ಲಿ ಕೂಡ ತಲೆ ಕೊಡಬೇಕಾಗಿದೆ. ಈ ಎಲ್ಲದಕ್ಕಿಂತ ಖಾದರ್ ಈ ಬಾರಿ ನಗರಾಭಿವೃದ್ಧಿ ಸಚಿವರು. ಒಂದು ವೇಳೆ ರಾಜ್ಯ ಸರಕಾರ ಬೀಳದಿದ್ದರೂ ಇಲ್ಲಿ ಪಾಲಿಕೆ ಚುನಾವಣೆ ನಡೆದು ಕಾಂಗ್ರೆಸ್ಸು ಸೋತು ಹೋದರೆ ನಗರಾಭಿವೃದ್ಧಿ ಸಚಿವರಿಗೆ ತಮ್ಮ ಕ್ಷೇತ್ರದ ಪಾಲಿಕೆಯನ್ನು ಉಳಿಸಿಕೊಳ್ಳಲಾಗಿಲ್ಲ ಎನ್ನುವ ಕಪ್ಪುಚುಕ್ಕೆ ಉಳಿದುಬಿಡಲಿದೆ. ಇದು ಮುಂದಿನ ದಿನಗಳಲ್ಲಿ ಒಂದು ವೇಳೆ ಸಚಿವ ಸಂಪುಟ ಪುನರಾಚನೆಯಾದರೆ ಖಾದರ್ ಅವರಿಗೆ ದೊಡ್ಡ ಹಿನ್ನಡೆಯನ್ನು ಕೊಡುವ ಸಾಧ್ಯತೆ ಇದೆ. ಈ ಎಲ್ಲಾ ವಿಷಯಗಳ ಮಧ್ಯೆ ಖಾದರ್ ಸುಮ್ಮನೆ ರಿಸ್ಕ್ ತೆಗೆದುಕೊಳ್ಳುವುದು ಬೇಡಾ ಎಂದು ಈ ಚುನಾವಣೆಯನ್ನು ಮುಂದೂಡಲು ತಮ್ಮ ಕೈಲಾದ ಪ್ರಯತ್ನ ಮಾಡಲಿದ್ದಾರೆ. ಒಂದು ವೇಳೆ ಚುನಾವಣೆ ನಡೆದು ಹೋಗಿ ಕಾಂಗ್ರೆಸ್ ಸೋತರೆ ಅದು ಬೆರಳೆಣಿಕೆಯ ತಿಂಗಳಲ್ಲಿ ಬರುವ ಲೋಕಸಭಾ ಚುನಾವಣೆಯ ಮೇಲೆ ದೊಡ್ಡ ಹೊಡೆತ ಕೊಡಲಿದೆ. ಪಾಲಿಕೆಯನ್ನೇ ಉಳಿಸಿಕೊಳ್ಳಲಾಗದ ಕಾಂಗ್ರೆಸ್ ಲೋಕಸಭಾ ಸ್ಥಾನ ಗೆಲ್ಲಲು ಇದೆಯಾ ಎಂದು ಜನ ಅಂದುಕೊಂಡು ಕಾಂಗ್ರೆಸ್ ಗೆ ಮತ ಹಾಕಲು ಮನಸ್ಸೇ ಮಾಡಲಿಕ್ಕಿಲ್ಲ. ಇದರಿಂದ ಕಾಂಗ್ರೆಸ್ ಯುದ್ಧದ ಮೊದಲೇ ಸೋಲುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಬಿಜೆಪಿಯ ಲೆಕ್ಕಾಚಾರ ಏನು?
ಇನ್ನು ಚುನಾವಣೆ ಈಗಲೇ ನಡೆದು ಹೋದರೆ ಬಿಜೆಪಿಗೆ ಯಾಕೆ ತಲೆಬಿಸಿ ಎಂದರೆ ಯಾರಿಗೆ ಟಿಕೆಟ್ ಸಿಕ್ಕಿದೆಯೋ ಅವರು ಮಾತ್ರ ಉತ್ಸಾಹದಿಂದ ಲೋಕಸಭೆಯಲ್ಲಿಯೂ ಕೆಲಸ ಮಾಡುತ್ತಾರೆ. ಯಾರೆಲ್ಲ ಫೆಬ್ರವರಿಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರೋ ಅವರು ಟಿಕೆಟ್ ಸಿಗಲಿಲ್ಲ ಎಂದು ಬೇಸರದಿಂದ ಲೋಕಸಭೆಯಲ್ಲಿ ನಿರ್ಲಿಪ್ತರಾಗುತ್ತಾರೆ. ಒಂದು ವೇಳೆ ಚುನಾವಣೆ ಮುಂದಕ್ಕೆ ಹೋದರೆ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಆದರೂ ಟಿಕೆಟ್ ಸಿಗಬಹುದು ಎಂದು ಆಕಾಂಕ್ಷಿಗಳು ಆಸೆಯಿಂದ ಕೆಲಸ ಮಾಡುತ್ತಾರೆ. ಈ ಬಾರಿ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ನಿರೀಕ್ಷೆಯಿಂದ ಅನೇಕ ಕ್ಷೇತ್ರಗಳಲ್ಲಿ ಹಲವಾರು ಜನ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಚುನಾವಣೆ ಮುಂದಕ್ಕೆ ಹೋದರೆ ಕಾಂಗ್ರೆಸ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ, ಬಿಜೆಪಿ ತನ್ನ ದೋಣಿಯನ್ನು ದಡ ಸೇರಿಸಲು ಸಾಧ್ಯವಾಗುತ್ತದೆ. ಎಲ್ಲವೂ ನ್ಯಾಯಾಲಯದ ಅಂಗಳದಲ್ಲಿದೆ!!
Leave A Reply