ಶ್ರೀನಿವಾಸ್ ಕಾಲೇಜಿನವರೇ ನಿಮ್ಮ ಅಂಗೈ ಅಗಲದ ಜಾಗದಲ್ಲಿ ರಸ್ತೆ ಅಗಲ ಮಾಡೋಕೆ ಆಗಲ್ಲ!!
ಶ್ರೀನಿವಾಸ್ ಗ್ರೂಪ್ ಆಫ್ ಇನ್ಸಿಟ್ಯೂಶನ್ ಆರಾಮವಾಗಿ ರಂಗೋಲಿ ಕೆಳಗೆ ತೂರಿದ್ದಾರೆ. ಅವರಿಂದ ಕಾನೂನುಬದ್ಧವಾಗಿ ಎಷ್ಟು ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಿತ್ತೋ ಅಷ್ಟು ಸ್ವಾಧೀನಪಡಿಸಿಕೊಳ್ಳದೇ ಮಂಗಳೂರು ಮಹಾನಗರ ಪಾಲಿಕೆ ಚಾಪೆ ಮೇಲೆ ಮಲಗಿದೆ. ಮೇಯರ್ ಭಾಸ್ಕರ ಮೊಯಿಲಿ ಅವರ ಬಳಿ ಕೇಳಿದರೆ ಶ್ರೀನಿವಾಸ ಕಾಲೇಜಿನವರು ಜಾಗ ಬಿಟ್ಟುಕೊಟ್ಟಿದ್ದಾರಲ್ಲ, ಇನ್ನೇನು ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಶ್ರೀನಿವಾಸ ಗ್ರೂಪಿನವರು ಜಾಗ ಬಿಟ್ಟುಕೊಟ್ಟಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಆದರೆ ಶ್ರೀನಿವಾಸ್ ಹೋಟೇಲಿನವರು ಅಂಗೈಯಷ್ಟು ಅಗಲದ ಜಾಗ ಬಿಟ್ಟುಕೊಟ್ಟು ತಾವು ಮಾಡಿರುವ ತ್ಯಾಗವನ್ನು ಹೇಳಿಕೊಳ್ಳಬೇಕಿಲ್ಲ. ಚಮಚಾ ನೀರು ಕೊಟ್ಟು ಬಕೇಟ್ ನೀರು ಪಡೆದುಕೊಳ್ಳುವ ಅವರ ಜಾಯಮಾನ ಎಲ್ಲರಿಗೆ ಗೊತ್ತಿರುವಂತಹ ವಿಷಯ. ನಾನು ಹೇಳುತ್ತಿರುವುದು ಗಣಪತಿ ಹೈಸ್ಕೂಲ್ ರಸ್ತೆಯ ಅಗಲೀಕರಣದ ಬಗ್ಗೆ. ಮಂಗಳೂರಿನ ಪ್ರಮುಖ ರಸ್ತೆಯಾಗಿರುವ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ತಾರಾ ಕ್ಲಿನಿಕ್, ಲಕ್ಷ್ಮಿಗಣಪತಿ ದೇವಸ್ಥಾನದವರು ಈಗಾಗಲೇ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟಿದ್ದಾರೆ. ಈ ರಸ್ತೆಯಲ್ಲಿ ಇನ್ನು ಇರುವ ದೊಡ್ಡ ಬಿಲ್ಡಿಂಗ್ ಗ ಪೈಕಿ ಶ್ರೀನಿವಾಸ್ ಹೋಟೇಲ್ ಮತ್ತು ಅದರ ಎದುರಿನಲ್ಲಿ ಇರುವ ಅವರದ್ದೇ ಕೃಷ್ಣ ಭವನ ಮುಖ್ಯವಾದದ್ದು. ಇವರಿಗೆ ಎಷ್ಟು ಸಲ ರಸ್ತೆಗೆ ಜಾಗ ಬಿಟ್ಟುಕೊಡಿ ಎಂದು ಹೇಳಿದರೂ ದಪ್ಪ ಚರ್ಮದವರಾಗಿರುವುದರಿಂದ ಬಿಟ್ಟುಕೊಟ್ಟಿರಲಿಲ್ಲ.
ಕೊಟ್ಟು ಗೊತ್ತಿಲ್ಲ, ನುಂಗಿ ಮಾತ್ರ…
ನಾನು ಮಂಗಳೂರು ವೈಜ್ಞಾನಿಕ ಬೆಳವಣಿಗೆ ಆಗಬೇಕು ಎಂದು ಅಂದುಕೊಂಡಿರುವವರ ಪರವಾಗಿ ನನ್ನ ಜಾಗೃತ ಅಂಕಣದಲ್ಲಿ ಈ ಬಗ್ಗೆ ಅನೇಕ ಅಂಕಣಗಳನ್ನು ಬರೆದೆ. ಕೊನೆಗೆ ತುಂಬಾ ದೊಡ್ಡ ಮನಸ್ಸು ಮಾಡಿ, ಭಾರವಾದ ಹೃದಯದಿಂದ, ದೊಡ್ಡ ತ್ಯಾಗ ಮಾಡುತ್ತಿದ್ದೇವೆ ಎನ್ನುವ ಫೋಸ್ ಕೊಟ್ಟು ಒಂದಿಷ್ಟು ಚದರ ಅಡಿ ಜಾಗವನ್ನು ಶ್ರೀನಿವಾಸ್ ಕಾಲೇಜಿನವರು ಬಿಟ್ಟುಕೊಡಲಿಕ್ಕೆ ಒಪ್ಪಿದ್ದಾರೆ. ಆದರೆ ಇದು ರಸ್ತೆ ಅಗಲೀಕರಣಕ್ಕೆ ಯಾವುದಕ್ಕೂ ಸಾಲುವುದಿಲ್ಲ. ಅದು ಹೇಗೆಂದರೆ ಒಂದು ರಸ್ತೆ ಅಗಲವಾಗುವಾಗ ಆ ರಸ್ತೆಯಲ್ಲಿ ಇರುವ ಕಟ್ಟಡದವರು ಜಾಗ ಬಿಟ್ಟುಕೊಡುವಾಗ ಸಮಪ್ರಮಾಣದಲ್ಲಿ ಪಾಲಿಕೆಯವರು ಎಷ್ಟು ಜಾಗ ಕೇಳಿದ್ದಾರೋ ಅಷ್ಟು ಕೊಡಬೇಕು. ಉದಾಹರಣೆಗೆ ಮೂರು ಕಟ್ಟಡಗಳಲ್ಲಿ ಒಂದು ಕಟ್ಟಡದವರು 50 ಫೀಟ್ ಕೊಡುತ್ತೇನೆ, ಇನ್ನೊಬ್ಬರು ಹದಿನೈದು ಫೀಟ್ ಕೊಡುತ್ತೇನೆ, ಮತ್ತೊಬ್ಬರು ಎರಡೇ ಫೀಟ್ ಕೊಡುತ್ತೇನೆ ಎಂದು ಹೇಳಿದರೆ ಆಗ ಏನು ಮಾಡುವುದು. ಕಾಮನ್ ಸೆನ್ಸ್ ಇದ್ದವರು ರಸ್ತೆ ಅಗಲೀಕರಣ ಎಂದರೆ ಏನು ಎಂದು ಅರಿತುಕೊಂಡು ನಂತರ ಹಾಗೆ ನಡೆದುಕೊಳ್ಳುತ್ತಾರೆ. ಆದರೆ ಶ್ರೀನಿವಾಸ ಗ್ರೂಪಿನವರಿಗೆ ಅಕ್ರಮವಾಗಿ ಜಾಗ ಒಳಗೆ ಹಾಕಿ ಮಾತ್ರ ಅಭ್ಯಾಸವಲ್ಲವೇ, ಹಾಗೆ ಅವರಿಗೆ ಜಾಗ ಬಿಟ್ಟುಕೊಟ್ಟು ಗೊತ್ತೇ ಇಲ್ಲ. ಇವರ ಅನಧಿಕೃತವಾಗಿ ಜಾಗ ನುಂಗಿ ಅಲ್ಲಿ ಕಟ್ಟಡಗಳನ್ನು ಕಟ್ಟಿರುವುದನ್ನು ನೋಡಿದರೆ ನೀವೆ ದಂಗಾಗುತ್ತೀರಿ. ಆದರೆ ನಿಯಮಬದ್ಧವಾಗಿ ಜಾಗ ರಸ್ತೆ ಅಗಲೀಕರಣಕ್ಕೆ ಕೊಡಿ ಎಂದರೆ ಇವರ ಆಸ್ತಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯವರು ಅರ್ಧ ಪಾಲು ಕೇಳಿದರೋ ಎನ್ನುವಂತೆ ವರ್ತಿಸುತ್ತಾರೆ. ಹಾಗಂತ ಇವರೇನು ಪುಕ್ಸಟೆ ಬಿಟ್ಟುಕೊಡಬೇಕಾಗಿಲ್ಲ. ಇವರಿಗೆ ನಿಯಮಬದ್ಧವಾಗಿ ಟಿಡಿಆರ್ ಕೊಡಲಾಗುತ್ತದೆ. ಆದರೆ ಇವರಿಗೆ ನುಂಗುವುದರಲ್ಲಿ ಇರುವ ಆಸ್ತಿ ಕೊಡುವುದರಲ್ಲಿ ಇಲ್ಲ. ಇವರು ಎಲ್ಲೆಲ್ಲಿ ಅನಧಿಕೃತವಾಗಿ ಕಟ್ಟಡ ಎಬ್ಬಿಸಿದ್ದಾರೆ ಎಂದು ಈಗ ಹೇಳುತ್ತೇನೆ. ಸೂಟ್ ಬೂಟುಗಳಲ್ಲಿ ಮಿಂಚುವವರು ನಿಯಮ, ಕಾನೂನು ಮೀರಿ ಹೇಗೆ ದೊಡ್ಡ ಜನರಾಗಿದ್ದಾರೆ ಎಂದು ನೋಡೋಣ.
ಇವರ ಅನಧಿಕೃತ ಪಟ್ಟಿ ನೋಡಿ…
ಮೊದಲನೇಯದಾಗಿ ಮಂಗಳೂರಿನ ಮಂಗಳಾದೇವಿ ರಸ್ತೆಯಲ್ಲಿರುವ ಶ್ರೀನಿವಾಸ್ ಗ್ರೂಪಿನವರ ಫಿಸಿಯೋಥೆರಪಿ ಕಾಲೇಜಿನ ಒಂದು ಮಹಡಿ ಸಂಪೂರ್ಣ ಅನಧಿಕೃತವಾಗಿ ಕಟ್ಟಿರುವಂತಹುದು. ಸುರತ್ಕಲ್ ಸಮೀಪದ ಮುಕ್ಕದಲ್ಲಿರುವ ಶ್ರೀನಿವಾಸ್ ಆಸ್ಪತ್ರೆಯ ನೆಲಮಹಡಿ, ಆರು ಮಹಡಿಗಳು, ಅದರ ಪಕ್ಕದ ಇವರದ್ದೇ ಕಟ್ಟಡದ ನೆಲ ಮತ್ತು ನಾಲ್ಕು ಮಹಡಿ, ಇನ್ನೆರಡು ಕಟ್ಟಡಗಳು ಸಂಪೂರ್ಣವಾಗಿ ಲೈಸೆನ್ಸ್ ಇಲ್ಲದೆ ಅನಧಿಕೃತವಾಗಿ ಕಟ್ಟಿರುವಂತದ್ದು. ಇನ್ನು ನಗರದೊಳಗೆ ಬಂದರೆ ಗಣಪತಿ ಹೈಸ್ಕೂಲ್ ರಸ್ತೆಯ ಫೆಲಿಕ್ಸ್ ಪೈ ಬಝಾರ್ ನಲ್ಲಿರುವ ಶ್ರೀನಿವಾಸ್ ಕಾಲೇಜಿನವರ ಆಡಳಿತ ಕಚೇರಿಯ ಮಹಡಿಯನ್ನು ಕೆಡವಲು ಆದೇಶ ಇದೆ. ಆದರೂ ಇನ್ನೂ ಕೆಡವಲು ಬಿಡದೇ ಇವರು ಉಳಿಸಿಕೊಂಡಿದ್ದಾರೆ. ಇನ್ನು ಜಿಎಚ್ ಎಸ್ ರಸ್ತೆಯ ಶ್ರೀನಿವಾಸ ಹೋಟೇಲಿನ ಒಂದು ಮಹಡಿ ಅನಧಿಕೃತ, ಇನ್ನು ಪಾರ್ಕಿಂಗ್ ಜಾಗದಲ್ಲಿ ಇವರು ಹಾಲ್ ತರಹ ಕಟ್ಟಿ ಅಲ್ಲಿ ಬಟ್ಟೆ ಅಂಗಡಿಯವರಿಗೆ ವರ್ಷವೀಡಿ ಮಾರಾಟ ಮತ್ತು ಪ್ರದರ್ಶನಕ್ಕೆ ಬಾಡಿಗೆಗೆ ಕೊಡುತ್ತಾರೆ. ಆದ್ದರಿಂದ ಎಲ್ಲಾ ಕಡೆ ಹಣ ಮಾಡುತ್ತಾರೆ. ಆದರೆ ನಗರದ ಅಭಿವೃದ್ಧಿಗೆ ಸ್ವಲ್ಪ ಜಾಗ ಬಿಡಿ ಅದು ಕೂಡ ಟಿಡಿಆರ್ ಅಂದರೆ ಡಬ್ಬಲ್ ವ್ಯಾಲ್ಯೂ ತೆಗೆದುಕೊಂಡು ಎಂದು ಹೇಳಿದರೆ ಎಷ್ಟು ಕಿರಿಕಿರಿ ಮಾರಾಯ್ರೆ?
ಇನ್ನು ಇದನ್ನು ನೋಡಿಕೊಳ್ಳಬೇಕಾದ ಪಾಲಿಕೆಯ ಅಭಿವೃದ್ಧಿ ಕೋಶದ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ, ಸಹಾಯಕ ಅಭಿಯಂತರ ಗಣಪತಿಯವರ ಬಳಿ ಮಾತನಾಡುವಾಗ ಇಷ್ಟು ಕಡಿಮೆ ಜಾಗ ಬಿಟ್ಟುಕೊಟ್ಟರೂ ಯಾಕೆ ಸುಮ್ಮನಿಸಿದ್ದಿರಿ ಎಂದರೆ ನಮಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎನ್ನುತ್ತಾರೆ. ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ. ಒಟ್ಟಿನಲ್ಲಿ ಶ್ರೀನಿವಾಸ್ ಗ್ರೂಪಿನವರಿಗೆ ಇಷ್ಟು ಧೈರ್ಯ ಬರಲು ಕಾರಣವೇ ಇವರಿಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿರುವುದು. ಚುನಾವಣೆ ಬಂದಾಗ ಇವರು ಬಿಸಾಡುವ ಎಲೆಕ್ಷನ್ ಫಂಡಿಗೆ ಆಸೆ ಪಡುವವರು ಇವರ ತಾಳಕ್ಕೆ ತಕ್ಕಂತೆ ಕುಣಿಯುವಾಗ ಧೈರ್ಯ ಬರದೇ ಮತ್ತೇನೋ!
Leave A Reply