ಯಕ್ಷಗಾನ ಕಲಾವಿದನ ಮೇಲೆ ಬ್ರಹ್ಮಾಸ್ತ್ರ ಬಿಟ್ಟ ರೈಗಳು ಮಾಡಿದ್ದು ಸರಿಯಾ ಪೊಲೀಸರೇ?
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಮಾಜಿ ಸಚಿವ ರಮಾನಾಥ ರೈ ಸಿದ್ಧರಾಗಿರುವಂತಿದೆ. ಅದಕ್ಕಾಗಿ ಎಲ್ಲಿಯಾದರೂ ಮೋ ಅಥವಾ ದಿ ಎಂದು ಶಬ್ದ ಕೇಳಿ ಬಂದರೂ ಅದನ್ನು ಮೋದಿ ಎಂದು ಜೋಡಿಸಿ ಆ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂದ್ರ ಎನ್ನುವ ಶಬ್ದ ಕೇಳಿ ಬಂದರೂ ಅದು ನರೇಂದ್ರ ಎಂದು ಇರಬೇಕು, ಅದು ಮೋದಿಯವರ ಬಗ್ಗೆ ಇರಬೇಕು ಎಂದು ಅಂದುಕೊಂಡು ಆ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಗೋವು ಕದಿಯುವವರು ಇದ್ದಾರೆ ಎಂದು ಕೇಳಿದ ಕೂಡಲೇ ಅದು ತಮ್ಮ ಪಕ್ಷದವರಿಗೆನೆ ಹೇಳಿದ್ದು ಎಂದು ಅಂದುಕೊಂಡು ಕೋಪಗೊಳ್ಳುತ್ತಿದ್ದಾರೆ. ಕೇಸರಿ ಪಡೆ ಎಂದ ಕೂಡಲೇ ಆ ಶಬ್ದವೇ ಅಸಂವಿಧಾನಿಕ ಎನ್ನುವ ಶೈಲಿಯಲ್ಲಿ ವರ್ತಿಸುತ್ತಿದ್ದಾರೆ. ಇಲ್ಲದೇ ಹೋದಲ್ಲಿ ಒಬ್ಬ ಯಕ್ಷಗಾನ ಕಲಾವಿದನನ್ನು ಕರೆದು ಎಚ್ಚರಿಕೆ ಕೊಡಿ ಎಂದು ರಮಾನಾಥ ರೈ ಅವರು ಹೇಳುವಂತಹ ಅಗತ್ಯವೇ ಇರಲಿಲ್ಲ. ಒಬ್ಬ ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವ ಮೂಲಕ ವಿದ್ಯುಕ್ತವಾಗಿ ಲೋಕಸಭಾ ಚುನಾವಣಾ ರಣರಂಗಕ್ಕೆ ಇಳಿಯುವ ಸೂಚನೆಯನ್ನು ರೈ ನೀಡಿದ್ದಾರೆ. ಅಷ್ಟಕ್ಕೂ ಅವರಿಗೆ ತಪ್ಪು ಕಾಣಿಸಿದ್ದು ಶಿವಾಜಿ ಮಹಾರಾಜರ ಬಗ್ಗೆ ನಡೆಯುತ್ತಿದ್ದ ಯಕ್ಷಗಾನ ಪ್ರಸಂಗದಲ್ಲಿ. ಕಲಾವಿದನ ಹೆಸರು ಗಣರಾಜ ಭಟ್ ಬಡಕಿಲ. ಇವರು ದೇಂದಡ್ಕ ಎನ್ನುವ ಮೇಳದವರು. ಹವ್ಯಾಸಿ ಯಕ್ಷಗಾನ ಕಲಾವಿದರು. ಇತ್ತೀಚೆಗೆ ಶಿವಾಜಿ ಮಹಾರಾಜರ ಜೀವನದ ಯಕ್ಷಗಾನ ಪ್ರಸಂಗದಲ್ಲಿ ಗಣರಾಜ್ ಭಟ್ ಅವರು ಶಿವಾಜಿಯ ಗುರು ಸಮರ್ಥ ರಾಮದಾಸರ ಪಾತ್ರ ನಿರ್ವಹಿಸುತ್ತಿದ್ದರು. ಒಂದು ಹಂತದಲ್ಲಿ ಪಾತ್ರ ಮಾಡುತ್ತಿದ್ದಾಗ ಗಣರಾಜ್ ಭಟ್ “ಭಾರತ ದೇಶದಲ್ಲಿ ಸುಭಿಕ್ಷೆ, ಸ್ವಚ್ಚತೆ ಮೂಡಲು ನರೇಂದ್ರನಂತೆ ಕೇಸರಿ ಪಡೆ ಕಟ್ಟಬೇಕು. ರಾತ್ರಿಯ ಹೊತ್ತಿನಲ್ಲಿ ಗೋವುಗಳನ್ನು ಹೊರಗೆ ಬಿಡಬಾರದು. ಗೋಕಳ್ಳರ ಸದೆಬಡಿಯಲು ಜಾಗೃತ ಯುವಕರ ಪಡೆ ತಯಾರು ಮಾಡಬೇಕು. ಹಿಂದೂ ವೇದಿಕೆಗಳನ್ನು ನಿರ್ಮಾಣ ಮಾಡಬೇಕು” ಈ ಅರ್ಥದ ಮಾತುಗಳನ್ನು ಹೇಳಿದ್ದಾರೆ. ಅದು ರಮಾನಾಥ ರೈ ಅವರ ಕಿವಿಗೆ ಬಿದ್ದಿದೆ. ತಕ್ಷಣ ದಕ್ಷಿಣ ಕನ್ನಡ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಯಕ್ಷಗಾನದಲ್ಲಿ ಹೀಗೆ ಹೇಳುವುದರಿಂದ ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆ ಸೃಷ್ಟಿಯಾಗುತ್ತದೆ. ಯಕ್ಷಗಾನ ಕಲಾವಿದನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಂದ ಬಂಟ್ವಾಳ ನಗರ ಠಾಣೆಗೆ ಮಾಹಿತಿ ಹೋಗಿದೆ. ಮರುದಿನವೇ ಗಣರಾಜ್ ಭಟ್ಟರನ್ನು ಪೊಲೀಸರು ಕರೆದಿದ್ದಾರೆ. ಅವರಿಂದ ಹೀಗೆಲ್ಲ ಮಾತನಾಡಬಾರದು ಎಂದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಈ ಮೂಲಕ ಇನ್ನು ಮುಂದಿನ ಚುನಾವಣೆಯ ತನಕ ಕಲಾವಿದರು ಮೋದಿಯನ್ನು ಹೊಗಳುವ ಅರ್ಥ ಬರುವ ರೀತಿಯಲ್ಲಿ ಕೂಡ ಮಾತನಾಡಬಾರದು ಎಂದು ಉಳಿದವರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಯಾವ ಬುದ್ಧಿವಂತ ಕಲಾವಿದ ಕೂಡ ರಾಹುಲ್ ಗಾಂಧಿಯನ್ನು ಹೋಗಲಿಲ್ಲ.
ಒಬ್ಬ ಕಲಾವಿದನ ವಾಕ್ ಸ್ವಾತಂತ್ರ್ಯ ದಮನವಾದ ಬಗ್ಗೆ ಯಾವ ಬುದ್ಧಿಜೀವಿಯೂ ಮಾತನಾಡುತ್ತಿಲ್ಲ. ಯಾವ ಕಮ್ಯೂನಿಸ್ಟ್ ಮುಖಂಡರ ಹೇಳಿಕೆ ಬಂದಿಲ್ಲ. ಗೌರಿ ಲಂಕೇಶ್ ಮನಸ್ಕರು ಇಲ್ಲಿ ವಾಸಿಸಲು ಯೋಗ್ಯ ವಾತಾವರಣ ಇಲ್ಲ ಎಂದು ಹೇಳಿಲ್ಲ. ಯಾಕೆಂದರೆ ಇಲ್ಲಿ ಎಚ್ಚರಿಕೆ ಕೊಟ್ಟಿರುವುದು ಒಬ್ಬ ಪಾಪದ ಕಲಾವಿದನಿಗೆ. ಅಷ್ಟಕ್ಕೂ ಗಣರಾಜ್ ಭಟ್ ಅವರು ಹೇಳಿದ್ದು ತಮ್ಮ ಪಕ್ಷದವರಿಗೆ ಎಂದು ರೈಗಳು ಅಂದುಕೊಂಡಿರುವುದನ್ನು ನೋಡುವಾಗ ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ರೈಗಳು ನೋಡುವ ಅವಶ್ಯಕತೆ ಆದರೂ ಏನಿತ್ತು ಎಂದು ಗೊತ್ತಾಗುತ್ತಿಲ್ಲ. ಹವ್ಯಾಸಿ ಕಲಾವಿದರು ತಮ್ಮ ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡುವಾಗ ಆ ಕಥೆಗೆ ಅನುಗುಣವಾಗಿ ಮಾತನಾಡುತ್ತಾರೆ. ಅದರಲ್ಲಿ ಯಾರನ್ನೋ ಹೊಗಳುವುದು, ಸಂದರ್ಭಕ್ಕೆ ತಕ್ಕಂತೆ ಯಾರಿಗೋ ಟಾಂಗ್ ಕೊಡುವುದು ಎಲ್ಲಾ ಸಾಮಾನ್ಯವಾಗಿರುತ್ತದೆ. ಗಣರಾಜ್ ಭಟ್ ಅವರು ಇದನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ್ದು ಅಲ್ಲ ಅಥವಾ ಅವರಿಂದ ಮುಚ್ಚಳಿಕೆ ಬರೆಸಿದ ಬಳಿಕ ಇಂತಹುವುದು ಕೊನೆಗೊಳ್ಳುವುದು ಇಲ್ಲ. ಮೋದಿಯವರನ್ನು ಬಹಿರಂಗವಾಗಿ ಯಕ್ಷಗಾನ ಪ್ರಸಂಗದಲ್ಲಿ ಹೊಗಳಿದ ಕಲಾವಿದರನ್ನು ಇತಿಹಾಸ ನೋಡಿದೆ. ಇಲ್ಲಿಯವರೆಗೆ ಯಾವ ಯಕ್ಷಗಾನ ಕಲಾವಿದ ಕೂಡ ತಮ್ಮ ಪಾತ್ರದಲ್ಲಿ ರಾಹುಲ್ ಗಾಂಧಿಯವರನ್ನು ಹೊಗಳಿಲ್ಲ. ಬೇಕಾದರೆ ರೈ ಅವರು ಯಾವುದಾದರೂ ಯಕ್ಷಗಾನ ಮೇಳಕ್ಕೆ ಹೇಳಿಸಿ ರಾಹುಲ್ ಗಾಂದಿಯವರನ್ನು ಹೊಗಳುವ ಪ್ರಸಂಗ ಇಡಲಿ. ಅವರ ಇಷ್ಟ.
ಪೊಲೀಸರ ವಿಪರೀತ ಆಸಕ್ತಿ ಅನುಮಾನಸ್ಪದ…
ಇನ್ನು ಪೊಲೀಸ್ ಇಲಾಖೆ ಕೂಡ ಈ ವಿಷಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಆಸಕ್ತಿ ವಹಿಸಿದೆ. ರೈಗಳು ಮಾಜಿ ಸಚಿವರಾಗಿರಬಹುದು. ಆದರೆ ಅವರು ಈಗ ಶಾಸಕರೂ ಅಲ್ಲ. ಅವರು ನಮ್ಮ ನಿಮ್ಮ ಹಾಗೆ ಸಾಮಾನ್ಯ ನಾಗರಿಕರು. ಅವರು ಫೋನ್ ನಲ್ಲಿ ಹೇಳಿದ ಕೂಡಲೇ ಕಲಾವಿದನನ್ನು ಕರೆಸಿ ಮುಚ್ಚಳಿಕೆ ಬರೆಸಲು ಹೇಗೆ ಸಾಧ್ಯ? ಒಂದು ಲಿಖಿತ ದೂರು ಇಲ್ಲದೇ ಯಾರನ್ನು ಬೇಕಾದರೂ ಕರೆದು ಮುಚ್ಚಳಿಕೆ ಬರೆಯಲು ಆಗುತ್ತಾ? ಲಿಖಿತವಾಗಿ ದೂರು ಕೊಟ್ಟರೆ ತಾವು ವಿವಾದಕ್ಕೆ ಸಿಲುಕಿಕೊಳ್ಳುತ್ತೇವೆ ಎಂದು ಹೆದರಿದ ರಮಾನಾಥ ರೈಗಳು ಫೋನಿನಲ್ಲಿಯೇ ಎಸ್ ಪಿಯವರಿಗೆ ಏನು ಮಾಡಬೇಕು ಎಂದು ಸೂಚಿಸಿದ್ದಾರೆ. ಈಗ ನಾನು ನನಗೆ ಆಗದವನ ಮೇಲೆ ಫೋನಿನಲ್ಲಿ ದೂರು ಕೊಟ್ಟರೆ ನಾಳೆ ಆ ವ್ಯಕ್ತಿಯನ್ನು ಕರೆದು ಪೊಲೀಸರು ಮುಚ್ಚಳಿಕೆ ಬರೆಸುತ್ತಾರಾ? ನಾನು ಹತ್ತು ಸಲ ಪೊಲೀಸ್ ಸ್ಟೇಶನಿಗೆ ಹೋಗಿ ಲಿಖಿತವಾಗಿ ಬರೆದು ಕೊಟ್ಟು ಅದರ ಹತ್ತು ಝೆರಾಕ್ಸ್ ಮಾಡಿ ಇಡೀ ಸ್ಟೇಶನ್ನಿನ ಗೋಡೆಗೆ ಅಂಟಿಸಿದರೂ ಪೊಲೀಸರು ಏನೂ ಮಾಡಲಿಕ್ಕಿಲ್ಲ. ಹಾಗಿರುವಾಗ ಗಣರಾಜ್ ಭಟ್ ಅವರಿಂದ ಮುಚ್ಚಳಿಕೆ ಬರೆಸಿದ್ದು ಸರಿಯಾ?
Leave A Reply