ಹಿರಿಯ ಕಾಂಗ್ರೆಸ್ಸಿಗರ ಮಾಸ್ಟರ್ ಸ್ಟೋಕ್ ಗೆ ಮಿಥುನ್ ರೈ ಬಲಿ!!
ನಮಗೇನೂ ಕೆಲಸ ಇಲ್ಲ ಎಂದು ಕಾಯುತ್ತಾ ಇರಬೇಕಾ ಎಂದು ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ ಜೋರು ಮಾಡುತ್ತಲೇ ಅಲ್ಲಿಯೇ ಇದ್ದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಹಾಗೂ ಕಾಂಗ್ರೆಸ್ ಮುಖಂಡರು ಕೂಡಲೇ ಮಾಧ್ಯಮದವರಿಗೆ, ಮೊಬೈಲಿನಲ್ಲಿ ವಿಡಿಯೋ ಮಾಡುತ್ತಿದ್ದವರಿಗೆ ಬಂದ್ ಮಾಡಿ ಎಂದು ಸಿಗ್ನಲ್ ತೋರಿಸಿದರು. ಜನಾರ್ಧನ ಪೂಜಾರಿ ಜೋರು ಮಾಡಿದ್ದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ. ಪೂಜಾರಿಯವರ ಶಿಸ್ತು ಬಹುಶ: ಜಿಲ್ಲೆಯ ಯಾವುದೇ ರಾಜಕಾರಣಿಗೆ ಸುಲಭವಾಗಿ ಬರಲು ಸಾಧ್ಯವಿಲ್ಲ. ಅದರಲ್ಲಿಯೂ ಯುಟಿ ಖಾದರ್ ಅವರಿಗೆ ಸಮಯದ ಪರಿಪಾಲನೆ ಎನ್ನುವುದು ಅವರ ಡಿಕ್ಷನರಿಯಲ್ಲಿಯೇ ಇಲ್ಲ. ಹಾಗೆ ಇವತ್ತು ಕೂಡ ತಮಗೆ ಪುರುಸೊತ್ತು ಆದಾಗ ಖಾದರ್, ಮಿಥುನ್ ರೈ ಅವರನ್ನು ಕರೆದುಕೊಂಡು ಜನಾರ್ಧನ ಪೂಜಾರಿಯವರ ಬಳಿ ಹೋಗಿದ್ದಾರೆ. ಅಲ್ಲಿಯೇ ಪೂಜಾರಿ ಎಲ್ಲರನ್ನು ಜೋರು ಮಾಡಿದ್ದು. ನಂತರ ಪೂಜಾರಿಯವರು ಮೀಡಿಯಾದವರಿಗೆ ಬೈಟ್ ಕೊಡುವಾಗ ಖಾದರ್ ಅವರಿಗೆ ಹೋಗಲು ಅವಸರವಾಗಿದೆ. ಅದನ್ನು ಖಾದರ್ ಪರೋಕ್ಷವಾಗಿ ತೋರಿಸಿಕೊಂಡಿದ್ದಾರೆ. ಅದು ಮತ್ತೊಮ್ಮೆ ಪೂಜಾರಿಯವರನ್ನು ಕೆರಳಿಸಿದೆ. ಅಲ್ಲಿಯೇ ಖಾದರ್ ಅವರಿಗೆ ಶಾಪ ಹಾಕಿದ್ದಾರೆ. ಮಿಥುನ್ ರೈ ಗೆಲ್ಲಲ ಎಂದು ಕಿಡಿಕಾರಿದ್ದಾರೆ. ಅದಕ್ಕೆ ಯುಟಿ ಖಾದರ್ ಅವರೇ ಕಾರಣರಾಗುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ದೊಡ್ಡ ಜನ ಎನ್ನುವುದು ಖಾದರ್ ತಲೆಗೆ ಹೋಗಿದೆ, ಅದನ್ನು ತೆಗೆಯಬೇಕು ಎಂದಿದ್ದಾರೆ. ಅದನ್ನು ಕೇಳಿ ಖಾದರ್ ತಪ್ಪಾಯಿತು ಎಂದು ಕೈ ಜೋಡಿಸಿದ್ದಾರೆ. ಒಟ್ಟಿನಲ್ಲಿ ಪೂಜಾರಿ ಇವತ್ತಿಗೂ ತಾವು ಹುಲಿ ಎಂದು ಸಾಬೀತುಪಡಿಸಿದ್ದಾರೆ.
ಸಚಿವ ಖಾದರ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಮಿಥುನ್ ರೈ ಅವರನ್ನು ಇಡೀ ಜಿಲ್ಲೆಯಲ್ಲಿ ಓಡಾಡಿಸಿ ತಮ್ಮ ಕೆಲಸ ಪೂರೈಸಲೇಬೇಕಾಗಿದೆ. ಯಾಕೆಂದರೆ ಮಿಥುನ್ ರೈ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿರುವುದರಿಂದ ಗೆಲ್ಲುವ ಗ್ಯಾರಂಟಿ ಖಾದರ್ ಅವರಿಗೆ ಇಲ್ಲವಾದರೂ ಸೋಲುವ ಮಾರ್ಜಿನ್ ಕೂಡ ಖಾದರ್ ವರ್ಚಸ್ಸನ್ನು ನಿರ್ಧರಿಸಲಿದೆ. ಕಳೆದ ಬಾರಿ 1,42,000 ಅಂತರದಿಂದ ನಳಿನ್ ಗೆದ್ದಿರುವುದರಿಂದ ಈ ಬಾರಿ ಶತಾಯಗತಾಯ ಅಂತರ ಕಡಿಮೆ ಮಾಡಬೇಕಾದ ಒತ್ತಡ ಖಾದರ್ ಮೇಲಿದೆ. ಆದ್ದರಿಂದ ಖಾದರ್ ಟೆನ್ಷನ್ ನಲ್ಲಿದ್ದಾರೆ. ಅದನ್ನು ನೋಡಿ ಉಳಿದ ಆರು ಜನ ಕಾಂಗ್ರೆಸ್ಸಿನ ಮಾಜಿ ಶಾಸಕರು ತೆರೆಮರೆಯಲ್ಲಿ ನಗುತ್ತಿದ್ದಾರೆ. ಅವರಿಗೆ ತಮ್ಮ ದಾರಿಯಿಂದ ಒಂದು ಮುಳ್ಳು ಹೋದ ಹಾಗೆ ಹಾಗಿದೆ.
ಮಾಜಿ ಶಾಸಕರು ಸೇಫ್…
ಉಳ್ಳಾಲ ಮತ್ತು ಸುಳ್ಯ ಬಿಟ್ಟರೆ ಉಳಿದ ಆರು ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ಚುನಾವಣೆ ನಡೆದಾಗ ಯಾವುದಾದರೂ ಒಂದು ಕ್ಷೇತ್ರಕ್ಕೆ ಮಿಥುನ್ ರೈ ಟಿಕೆಟಿಗಾಗಿ ತೀವ್ರ ಪ್ರಯತ್ನ ಮಾಡುವುದು ಗ್ಯಾರಂಟಿ ಇತ್ತು. ಲೋಬೋ, ಬಾವ, ಅಭಯ್, ರಮಾನಾಥ ರೈ, ಶಕುಂತಳಾ ಶೆಟ್ಟಿ, ವಸಂತ ಬಂಗೇರ ಅಥವಾ ರಂಜನ್ ಗೌಡ ಯಾರಾದರೂ ಒಬ್ಬರು ತಮ್ಮ ಕ್ಷೇತ್ರ ಬಿಟ್ಟುಕೊಡಲೇಬೇಕಾಗಿತ್ತು. ಅದರಲ್ಲಿಯೂ ಮಂಗಳೂರು ನಗರ ದಕ್ಷಿಣ, ಉತ್ತರ, ಬಂಟ್ವಾಳ, ಮೂಡಬಿದ್ರೆಯಲ್ಲಿ ಒಂದನ್ನು ಹೇಗಾದರೂ ಮಾಡಿ ಮಿಥುನ್ ಪಡೆಯುವುದು ಖಂಡಿತ ಇತ್ತು. ಅದನ್ನು ತಪ್ಪಿಸಿ ತಾವು ಸೇಫ್ ಆಗಬೇಕು ಎಂದುಕೊಂಡ ಈ ನಾಲ್ಕು ಕ್ಷೇತ್ರಗಳ ಮಾಜಿ ಶಾಸಕರು ಏನು ಪ್ಲಾನ್ ಮಾಡಿದ್ರು ಎಂದರೆ ಕಾಂಗ್ರೆಸ್ 28 ವರ್ಷಗಳಿಗೂ ಮಿಕ್ಕಿ ಗೆಲ್ಲಲು ಸಾಧ್ಯವೇ ಇಲ್ಲದ ಲೋಕಸಭಾ ಸ್ಥಾನವನ್ನು ಮಿಥುನ್ ರೈಗೆ ದಯಪಾಲಿಸಿದ್ದಾರೆ. ಈಗ ಮಿಥುನ್ ಸೋತು ವಿಧಾನಸಭಾ ಟಿಕೆಟಿಗೆ ಮತ್ತೆ ಪ್ರಯತ್ನಪಟ್ಟರೆ ನೀನು ನಮ್ಮ ಲೋಕಸಭಾ ಅಭ್ಯರ್ಥಿ ಎಂದು ತಲೆಸವರಿ ಅವರನ್ನು ಪಕ್ಕಕ್ಕೆ ಇಡುವ ಪ್ಲಾನ್ ರೂಪಿಸಿ ಆಗಿದೆ. ಇದು ರಮಾನಾಥ್ ರೈ ಅವರ ಮಾಸ್ಟರ್ ಸ್ಟೋಕ್.
ಇಂಟಕ್ ಪ್ಲಸ್ ಕೇಸರಿ ಕೋಪ..
ಇನ್ನು ಮಿಥುನ್ ರೈ ಕಾಂಗ್ರೆಸ್ಸ್ ಅಭ್ಯರ್ಥಿ ಆಗುತ್ತಿದ್ದಂತೆ ಅದರದ್ದೇ ಅಂಗಸಂಸ್ಥೆ ಇಂಟಕ್ ಮುಖಂಡರು ತಮ್ಮ ಆಕ್ರೋಶವನ್ನು ವಿಡಿಯೋ ಮಾಡುವ ಮೂಲಕ ಹೊರಗೆ ಹಾಕಿದ್ದಾರೆ. ಯಾವ ರೀತಿಯಲ್ಲಿ ಮಿಥುನ್ ತಮ್ಮ ಚಕ್ರಾಧಿಪತ್ಯವನ್ನು ಸ್ಥಾಪಿಸುವುದಕ್ಕಾಗಿ ಬೇರೆ ಉದಯೋನ್ಮುಖ ಯುವ ಕಾಂಗ್ರೆಸ್ಸಿಗರನ್ನು ತುಳಿಯುತ್ತಾ ಬಂದರು ಎಂದು ಹೇಳಿದ್ದಾರೆ. ಮಿಥುನ್ ರೈಯವರ ಪಬ್ ಗಲಾಟೆ, ಗಿರಾಕಿಗಳೊಂದಿಗೆ ಅವರ ಸಹಚರರು ನಡೆದುಕೊಂಡ ರೀತಿ, ಪುರಭವನದಲ್ಲಿ ಬೇರೆ ಯುವ ಕಾಂಗ್ರೆಸ್ಸಿಗರಿಗೆ ಹೊಡೆದದ್ದು, ಕರೋಪಾಡಿ ಕೊಲೆಯೊಂದರಲ್ಲಿ ಮಿಥುನ್ ರೈ ಪಾತ್ರ ಹೀಗೆ ಪುಂಖಾನುಪುಂಖವಾಗಿ ಮಾತನಾಡಿದ್ದಾರೆ. ಅದರೊಂದಿಗೆ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಿಥುನ್ ರೈ ಆವಾಜ್ ಹಾಕಿದ್ದ ವಿಷಯದಲ್ಲಿ ಭಟ್ ಬೆಂಬಲಿಗರಿಗೆ ಕೋಪ ಇದೆ. ಬಜರಂಗದಳ ನಿಷೇಧಿಸಬೇಕು ಎಂದು ಮಿಥುನ್ ಹೇಳಿದ್ದು ಕೇಸರಿ ಪಾಳಯದಲ್ಲಿ ಆಕ್ರೋಶ ಇದೆ. ಇದೆಲ್ಲಾ ಸೇರಿದರೆ ಮಿಥುನ್ ರೈ ಗೆಲುವಿನ ಚಾನ್ಸ್ ಎಷ್ಟಿದೆ ಎನ್ನುವುದನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತಿರುವ ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ!
Leave A Reply