ಜಾಮೀನಿನ ಮೇಲೆ ಹೊರಗಿರುವ ರಾಘವೇಂದ್ರ ಏನಿದು ಅಧಿಕಪ್ರಸಂಗ!!

ಕೈಲಾಗದವರು ಮೈಯೆಲ್ಲಾ ಪರಚಿಕೊಂಡರು ಎನ್ನುವ ಮಾತಿದೆ. ಹಾಗೇ ಕಾಶೀಮಠದ ಪರಿತ್ಯಕ್ತ ಯತಿ ರಾಘವೇಂದ್ರರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈಗಿನ ಕಾಶೀಮಠಾಧೀಶರಾದ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಗಳ ಮೇಲೆ ಕೇಸು ದಾಖಲಿಸಿದ್ದಾರೆ. ಆ ಮೂಲಕ ತಾವು ಕಾಶೀಮಠದ ಹಣವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿ ಜೈಲು ಪಾಲಾದದ್ದನ್ನು ಜನರಿಗೆ ನೆನಪಿಸಿದ್ದಾರೆ. ರಾಘವೇಂದ್ರರಿಗೆ ಇದು ಅಗತ್ಯವಿರಲಿಲ್ಲ. ಜಾಮೀನಿನ ಮೇಲೆ ಹೊರಗೆ ಇರುವವರು ಸುಮ್ಮನೆ ತಮ್ಮ ಪಾಡಿಗೆ ಇರುವುದು ಬಿಟ್ಟು ಅಧಿಕಪ್ರಸಂಗದ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ಆಗಿರುವುದೇನು?
ಕಾಶೀಮಠದ ಪರಿತ್ಯಕ್ತ ಯತಿ ರಾಘವೇಂದ್ರ ತೀರ್ಥ ಅವರು ಕಾಶೀಮಠ ಸಂಸ್ಥಾನ, ವಾರಣಾಸಿಯ ಕಾಶೀಮಠಾಧೀಶರಾದ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರ ಮೇಲೆ ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ {ಎಫ್ ಐ ಆರ್} ಕ್ರೈಂ ನಂಬ್ರ 61/2019 ದಾಖಲಿಸಿದ್ದಾರೆ. ಅವರ ದಾವೆ ಏನೆಂದರೆ ಈಗಿನ ಮಠಾಧೀಶರಾಗಿರುವ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರು ಬ್ಯಾಂಕಿನ ಕೆಲವು ನಿಶ್ಚಿತ ಅವಧಿಯ ಠೇವಣಿಗಳನ್ನು (ಎಫ್ ಡಿ) ಸಂಸ್ಥಾನದ ಹೆಸರಿಗೆ ವರ್ಗಾಯಿಸಿದ್ದಾರೆ ಎನ್ನುವುದು ವಾದ. ಆದರೆ ವಾಸ್ತವ ಸಂಗತಿ ಏನೆಂದರೆ:
1. 1994ರಲ್ಲಿ ರಾಘವೇಂದ್ರ ತೀರ್ಥರಿಗೆ ಅಂದಿನ ಮಠಾಧಿಪತಿಗಳಾಗಿದ್ದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳು ಕೆಲವು ಅಧಿಕಾರ ಮತ್ತು ಕರ್ತವ್ಯವನ್ನು ವರ್ಗಾಯಿಸಿದ್ದರು. ಆದರೆ ಆ ಅಧಿಕಾರ ಮತ್ತು ಕರ್ತವ್ಯವನ್ನು ದುರುಪಯೋಗಪಡಿಸಿದ ರಾಘವೇಂದ್ರ ತೀರ್ಥರು ಕಾಶೀಮಠಕ್ಕೆ ಒಳಪಟ್ಟ ಹಣವನ್ನು ಅಕ್ರಮವಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ತಮ್ಮ ಹೆಸರಿನಲ್ಲಿ ಬ್ಯಾಂಕಿನಲ್ಲಿ ನಿಶ್ಚಿತ ಅವಧಿಯ ಠೇವಣಿಯನ್ನಾಗಿ (ಎಫ್ ಡಿ) ಇಟ್ಟಿದ್ದರು. ಕಾಶೀಮಠದ ಅಡಿಟರ್ ಗಳು ಅದನ್ನು ತಪ್ಪು ಎಂದು ವಿನಂತಿಸಿದ್ದರೂ ಅದಕ್ಕೆ ಕ್ಯಾರೇ ಅನ್ನದ ರಾಘವೇಂದ್ರರು ತಮ್ಮ ಸ್ವಾರ್ಥ ಮತ್ತು ಲಾಲಸೆಗಾಗಿ ಮಠದ ಹಣದ ಮೇಲೆ ಕೆಟ್ಟದೃಷ್ಟಿ ಇಟ್ಟಿದ್ದರು. ಅದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದು ಆ ಹಣದ ಮೂಲವನ್ನು ಅವರು ರಾಘವೇಂದ್ರರಲ್ಲಿ ಪ್ರಶ್ನಿಸಿದ್ದರು. ಆ ಪ್ರಕಾರವಾಗಿ ಕಾನೂನಾತ್ಮಕವಾಗಿ ರಾಘವೇಂದ್ರರಿಗೆ ನೋಟಿಸು ಕೂಡ ಹೋಗಿತ್ತು. ಅಷ್ಟೇ ಅಲ್ಲದೇ ರಾಘವೇಂದ್ರ ತೀರ್ಥರು ತಮ್ಮ ವೈಯಕ್ತಿಕ ಹೆಸರಿನಲ್ಲಿ ಮಠದ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿದ್ದು ಸಂಸ್ಥಾನದ ಬ್ಯಾಲೆನ್ಸ್ ಶೀಟ್ ನಲ್ಲಿ ತಾಳೆಯಾಗಿತ್ತು. ಅದನ್ನು ರಾಘವೇಂದ್ರರು ಆದಾಯ ಇಲಾಖೆಯ ಅಧಿಕಾರಿಗಳ ಎದುರು ತಾವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಹಣ ಹೊಡೆದ್ದದ್ದು ಸಾಬೀತಾಗಿದೆ..
ಈ ನಡುವೆ ರಾಘವೇಂದ್ರರು ತಿರುಪತಿಯ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿ ತಮ್ಮನ್ನು ಕಾಶೀಮಠ ಸಂಸ್ಥಾನ ವಾರಣಾಸಿಯ ಮಠಾಧಿಪತಿಯನ್ನಾಗಿ ಘೋಷಿಸಬೇಕೆಂದು ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಪ್ರತಿದಾವೆ ಹೂಡಿ ರಾಘವೇಂದ್ರರು ಕಾಶೀಮಠ ಸಂಸ್ಥಾನದ ಯಾವುದೇ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನ್ಯಾಯಲಯವನ್ನು ಕೋರಿದ್ದಾರೆ. ಅದನ್ನು ನ್ಯಾಯಾಲಯ ಪುರಸ್ಕರಿಸಿದೆ. ಅದರ ನಂತರ ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ತೀರ್ಪು ನೀಡಿ ರಾಘವೇಂದ್ರರು ಸಂಸ್ಥಾನ ಕಾಶೀಮಠದ ಯಾವುದೇ ವಿಷಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಪ್ರಕರಣ ತಿರುಪತಿಯ ನ್ಯಾಯಾಲಯದಲ್ಲಿ ನಡೆಯುವಾಗಲೇ ತಿರುಮಲದ ಕಾಶೀಮಠದ ಮೇಲೆ ರಾಘವೇಂದ್ರ ತೀರ್ಥರು ಅಕ್ರಮ ಹಕ್ಕು ಸ್ಥಾಪಿಸಿದ್ದು ಅಲ್ಲಿ ಭಕ್ತರಿಂದ ಮತ್ತು ವಿವಿಧ ಮೂಲಗಳಿಂದ ಸಂಗ್ರಹವಾದ ಹಣವನ್ನು ಮಠದ ನಿಯಮಾವಳಿಯಂತೆ ಬ್ಯಾಂಕಿನಲ್ಲಿ ಜಮೆ ಮಾಡದೇ ಅದನ್ನು ತಾವೇ ವೈಯಕ್ತಿಕವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ. ಆ ಬಗ್ಗೆ ಆಂಧ್ರಪ್ರದೇಶದ ಸಿಬಿಸಿಐಡಿಯಲ್ಲಿ ರಾಘವೇಂದ್ರ ಹಾಗೂ ಅವರ ಹಿಂಬಾಲಕರ ಮೇಲೆ ಕೇಸು ದಾಖಲಾಗಿದ್ದು ಆ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆ ಪ್ರಕರಣದಲ್ಲಿ ರಾಘವೇಂದ್ರರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿದ್ದು ಪ್ರಸ್ತುತ ಅವರು ಜಾಮೀನಿನಲ್ಲಿ ಹೊರಗೆ ಇದ್ದಾರೆ.
ಟ್ರಸ್ಟ್ ಕೂಡ ಬೋಗಸ್..
ಇಷ್ಟಾಗಿಯೂ ರಾಘವೇಂದ್ರರು ಶ್ರೀ ಕಾಶೀಮಠ ಸಂಸ್ಥಾನ ವಾರಣಾಸಿ (ಬನಾರಸ್) ಎನ್ನುವ ಅನಧಿಕೃತ ಟ್ರಸ್ಟ್ ಒಂದನ್ನು ಸ್ಥಾಪಿಸಿರುವುದರ ವಿರುದ್ಧ ಕಾಶೀಮಠಾಧೀಶರಾದ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರು ತಡೆಯಾಜ್ಞೆ (ಸ್ಟೇ) ತಂದಿದ್ದು, ರಾಘವೇಂದ್ರರ ಟ್ರಸ್ಟ್ ಮತ್ತು ಅದರ ಟ್ರಸ್ಟಿಗಳ ವಿರುದ್ಧ ಕಾಶೀಮಠದ ಯತಿಪರಂಪರೆಯ ಯಾವುದೇ ಫೋಟೋ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಬಳಸಬಾರದು ಮತ್ತು ಆ ಹೆಸರಿನಲ್ಲಿ ಯಾವುದೇ ಅಕೌಂಟ್ ಗಳನ್ನು ಹೊಂದಬಾರದು ಎಂದು ತಡೆಯಾಜ್ಞೆ ತಂದಿರುತ್ತಾರೆ.
ಇಷ್ಟು ಹಿನ್ನೆಲೆ ಇರುವಾಗ ರಾಘವೇಂದ್ರರು ಈಗ ಕಾಶೀಮಠಾಧೀಶರಾಗಿರುವ ಶ್ರೀಮದ್ ಸಂಯಂಮೀಂದ್ರ ತೀರ್ಥರ ಮೇಲೆ ದೂರು ದಾಖಲಿಸಲು ಮಾಡುವ ಯಾವುದೇ ಪ್ರಯತ್ನ ಕಾನೂನಿಗೆ ವಿರುದ್ಧವಾಗಿದೆ. ಅದು ಹಿಂದೆ ನ್ಯಾಯಾಲಯಗಳು ಕೊಟ್ಟಿರುವ ತೀರ್ಪಿಗೆ ವಿರುದ್ಧವೂ ಆಗಿರುತ್ತದೆ. ರಾಘವೇಂದ್ರರು ತಮ್ಮದೆನ್ನುವ ಹಣ ಅಥವಾ ನಿಶ್ಚಿತ ಅವಧಿಯ ಠೇವಣಿಯ ಮೊತ್ತ ಅವರದ್ದು ಆಗಿರದೇ ಅದು ಕಾಶೀಮಠದ ಸಂಸ್ಥಾನದ ಹಣ ಎನ್ನುವುದು ದಾಖಲೆ ಮತ್ತು ನ್ಯಾಯಾಲಯದ ತೀರ್ಪು ಮತ್ತು ಆದಾಯ ಇಲಾಖೆಯ ತನಿಖೆಯಿಂದ ಸಾಬೀತಾಗಿದೆ. ಈಗ ಸುರತ್ಕಲ್ ನ ಕರ್ಣಾಟಕ ಬ್ಯಾಂಕಿನಲ್ಲಿರುವ ಎಫ್ ಡಿ ಕಾಶೀಮಠದ್ದಾಗಿದ್ದು ಅದಕ್ಕೂ ರಾಘವೇಂದ್ರರಿಗೆ ಯಾವುದೇ ಸಂಬಂಧವಿಲ್ಲ. ಆದರೂ ಅವರು ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಅದರ ಬಗ್ಗೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಜನರಿಗೆ ಸರಿಯಾದ ಮಾಹಿತಿ ನೀಡಬೇಕಾಗಿರುವ ಕಾರಣ ಮಂಗಳೂರಿನ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಧರ್ಮರಕ್ಷಾ ಸಭೆ ನಡೆಸಲಾಯಿತು. ಅಲ್ಲಿ ಏನೇನಾಯಿತು? ನಾನು ಏನು ಮಾತನಾಡಿದೆ? ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಹೇಳುತ್ತೇನೆ!!