ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಬಿಜೆಪಿ ಸಂಸದರೊಂದಿಗೆ ಕರಾವಳಿಯ ಸಂಸದರು ಎತ್ತಿನಹೊಳೆ ಉಳಿಸಲಿ!!
ಗ್ರೀನ್ ಟ್ರಿಬ್ಯೂನಲ್ ಎತ್ತಿನಹೊಳೆ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದೆ. ಈ ಮೂಲಕ ಎತ್ತಿನಹೊಳೆ ತಿರುವು ಯೋಜನೆ ಕಾಮಗಾರಿ ಇನ್ನು ಸಮರೋಪಾದಿಯಲ್ಲಿ ನಡೆಯಲಿದೆ. ಅಲ್ಲಿ ಪಶ್ಚಿಮ ಘಟ್ಟಗಳನ್ನು ಕೊರೆದು ಅದರ ಒಡಲಲ್ಲಿ ಹಾಕಲಾಗುತ್ತಿರುವ ಪೈಪುಗಳಲ್ಲಿ ನೀರು ಹೋಗುತ್ತಾ? ಆ ಗ್ಯಾರಂಟಿ ಯಾರಿಗೂ ಇಲ್ಲ. ಕೇವಲ ಕುಡಿಯುವ ನೀರಿನ ಯೋಜನೆ ಎನ್ನುವ ಒಂದೇ ಕಾರಣಕ್ಕೆ ಇದಕ್ಕೆ ಅನುಮತಿ ಸಿಕ್ಕಿದೆ. ಹದಿಮೂರು ಸಾವಿರ ಕೋಟಿ ರೂಪಾಯಿ ಯೋಜನೆ ಜಾರಿಯಾಗುವ ಹೊತ್ತಿನಲ್ಲಿ ಅದು ಎಷ್ಟು ಸಾವಿರ ಕೋಟಿಗೆ ಹೋಗುತ್ತದೆ ಎನ್ನುವುದು ದೇವರಿಗೆ ಗೊತ್ತು. ಆದರೆ ಕುಡಿಯುವ ನೀರು ನಿಜಕ್ಕೂ ಅಲ್ಲಿ ಹೋಗದೇ ಇದ್ದರೆ ನಮ್ಮ ತೆರಿಗೆಯ ಹಣ ವೇಸ್ಟ್ ಆಗಲ್ವಾ, ಅದು ಕೂಡ ಸಾವಿರಾರು ಕೋಟಿ. ಒಂದೆರಡು ಸಾವಿರ ಅಲ್ಲ.
ವಾಸ್ತವ ಬೇರೆ ಇದೆ..
ಎರಡನೇಯದಾಗಿನ್ ಗ್ರೀನ್ ಟ್ರಿಬ್ಯೂನಲ್ ನ್ಯಾಯಾಧೀಶರು ಈ ಪ್ರಕರಣವನ್ನು ಇತ್ಯರ್ಥ ಪಡಿಸಲು ಐದು ವರ್ಷ ತೆಗೆದುಕೊಂಡರು. ಅದರೊಂದಿಗೆ ತಾವು ಕೊಟ್ಟ ತೀರ್ಪಿಗೆ ರಾಜ್ಯ ಸರಕಾರದ ವಿವಿಧ ಇಲಾಖೆಗಳು ಕೊಟ್ಟಿರುವ ದಾಖಲೆಗಳೇ ಆಧಾರ ಎಂದು ಹೇಳಿದ್ದಾರೆ ಅಂದರೆ ಅವರು ಕೊಟ್ಟ ತೀರ್ಪಿಗೆ ಯಾವುದೇ ವಾಸ್ತವಿಕ ಆಧಾರಗಳು ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಒಂದು ವೇಳೆ ಗ್ರೀನ್ ಟ್ರಿಬ್ಯೂನಲ್ ಗಳು ತೀರ್ಪು ಕೊಡುವುದೇ ಆದರೆ ನಾನು ವಿನಂತಿಸುವುದೇನೆಂದರೆ ಅದರ ನ್ಯಾಯಾಧೀಶರು ಗ್ರೌಂಡ್ ರಿಯಾಲಿಟಿ ನೋಡಿ ತೀರ್ಪು ಕೊಡಬೇಕು. ರಾಜ್ಯ ಸರಕಾರದ ಅಧಿಕಾರಿಗಳು ಕೊಡುವ ದಾಖಲೆಗಳನ್ನು ನಂಬಿಯೇ ತೀರ್ಪು ಕೊಡಬಾರದು. ಯಾಕೆಂದರೆ ಅಧಿಕಾರಿಗಳು ತಮಗೆ ಬೇಕಾದ ಹಾಗೆ, ತಮ್ಮನ್ನು ಆ ಸ್ಥಾನಕ್ಕೆ ನೇಮಿಸಿದವರಿಗೆ ಬೇಕಾದ ಹಾಗೆ ದಾಖಲೆ ಸೃಷ್ಟಿಸುತ್ತಾರೆ. ಅದನ್ನು ನಂಬಿ ತೀರ್ಪು ಕೊಟ್ಟರೆ ಅದು ಪರಿಸರದ ಮೇಲೆ ಅಪ್ಪಟ ಅನ್ಯಾಯವಾಗುತ್ತದೆ. ಒಂದು ವೇಳೆ ದಾಖಲೆಗಳನ್ನು ನೋಡಿಯೇ ತೀರ್ಪು ಕೊಡುವುದಾಗಿದ್ದರೆ ಅದಕ್ಕೆ ಐದು ವರ್ಷ ಬೇಕಾಗಿರಲಿಲ್ಲ. ಐದು ವಾರದೊಳಗೆ ಕೊಟ್ಟು ಬಿಡಬಹುದಿತ್ತು.
ಈಗ ಎರಡೂ ಭಾಗಗಳಲ್ಲಿ ಬಿಜೆಪಿಯೇ…
ಮೂರನೇಯದಾಗಿ ಎತ್ತಿನಹೊಳೆ ತಿರುವು ಯೋಜನೆ ವಿರೋಧಿ ಹೋರಾಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಷ್ಟರ ಮಟ್ಟಿಗೆ ದೊಡ್ಡದೇ ಎನ್ನುವಂತೆ ಪ್ರಾರಂಭವಾಗಿತ್ತು. ಅನೇಕ ಪರಿಸರ ಪ್ರೇಮಿ ಹೋರಾಟಗಾರರು ತನು, ಮನ, ಧನ ಸುರಿದು ಹೋರಾಟ ಮಾಡಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಹೂಡಬೇಕಾದರೆ ಅದಕ್ಕೆ ತುಂಬಾ ಹಣ ಬೇಕಾಗುತ್ತದೆ. ಸುಪ್ರೀಂಕೋರ್ಟ್ ಮತ್ತು ಗ್ರೀನ್ ಟ್ರಿಬ್ಯೂನಲ್ ನಲ್ಲಿ ಪ್ರಕರಣ ಇದ್ದರೆ ಅದಕ್ಕೆ ಎಷ್ಟು ಕೋಟಿ ಬೇಕಾಗುತ್ತದೆ ಎನ್ನುವುದು ಅದರಲ್ಲಿ ಹೋರಾಟ ಮಾಡಿದವರಿಗೆ ಮಾತ್ರ ಗೊತ್ತು. ಈಗ ಈ ಎಲ್ಲಾ ಹೋರಾಟದ ಮೇಲೆ ತಣ್ಣೀರು ಎರಚಿದಂತೆ ಆಗಿದೆ. ಈಗಲೇ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತಾರಕಕ್ಕೆ ಏರಿದೆ. ಇನ್ನು ಎತ್ತಿನಹೊಳೆ ಕಾಮಗಾರಿ ಮುಂದುವರೆಯುತ್ತಿದ್ದಂತೆ ಈ ಸಮಸ್ಯೆ ಮುಂದಿನ ವರ್ಷ ಮತ್ತಷ್ಟು ಜಾಸ್ತಿ ಆಗಲಿದೆ. ಹೇಳುವುದಕ್ಕೆ ಜೂನ್ ನಿಂದ ಸೆಪ್ಟೆಂಬರ್ ತನಕ ಹೆಚ್ಚಾಗಿ ಉಳಿಯುವ ಮಳೆ ನೀರು ತೆಗೆದುಕೊಂಡು ಹೋಗುವ ಯೋಜನೆ ಎನ್ನಲಾಗುತ್ತದೆ. ಆದರೆ ಇಲ್ಲಿ ಈ ಬಾರಿಯೇ ಮಳೆ ಕಡಿಮೆಯಾಗಲಿದೆ. ಅದರೊಂದಿಗೆ ಮಳೆಯ ನೀರು ಹೆಚ್ಚಾಗಿ ಸಮುದ್ರಕ್ಕೆ ಹೋಗುತ್ತದೆ ಎನ್ನುವುದೇ ತಪ್ಪು ವಾದ. ಮಳೆಯ ನೀರು ಸಮುದ್ರಕ್ಕೆ ಹೋಗದಿದ್ದರೆ ಅದು ಪ್ರಕೃತಿಯ ಮೇಲೆ ಆಗುವ ಇನ್ನೊಂದು ಅತ್ಯಾಚಾರ. ನಾವು ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದ ಜನರಿಗೆ ನೀರು ಕೊಡಲು ವಿರೋಧಿಯಲ್ಲ. ಆದರೆ ಅದಕ್ಕಾಗಿ ಕಳೆದುಹೋಗಲಿರುವ ನಮ್ಮ ಅಮೂಲ್ಯ ಕಾಡುಗಳನ್ನು ನಾವು ಮತ್ತೆ ಹಿಂದಕ್ಕೆ ತರಲು ಆಗುವುದಿಲ್ಲ. ನೀರಂತೂ ಅಲ್ಲಿಗೆ ಹೋಗಲ್ಲ. ಅದರೊಂದಿಗೆ ನಮ್ಮ ಅಮೂಲ್ಯ ಪ್ರಕೃತಿ ಸಂಪತ್ತು ನಮ್ಮನ್ನು ಬಿಟ್ಟು ಹೋಗಲಿದೆ.
ಅಂತಿಮವಾಗಿ ನಾನು ಹೇಳುವುದು ಇಷ್ಟೇ. ಈಗ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಲೋಕಸಭಾ ಸದಸ್ಯರು ಬಿಜೆಪಿಯವರು. ಹಿಂದೆ ಈ ಮೂರು ಕಡೆ ಕಾಂಗ್ರೆಸ್ಸಿತ್ತು. ನಮ್ಮ ಕರಾವಳಿಯಲ್ಲಿ ಮೂರು ಸಂಸದರು ಬಿಜೆಪಿಯವರು. ಒಟ್ಟಿಗೆ ಕುಳಿತುಕೊಂಡು ಒಂದು ನಿರ್ಧಾರಕ್ಕೆ ಬರಲಿ. ನಾಗರಿಕರನ್ನು ಅಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ನಳಿನ್, ಶೋಭಾ, ಅನಂತ ಕುಮಾರ್ ಹೆಗ್ಡೆಯವರು ಜವಾಬ್ದಾರಿ ತೆಗೆದುಕೊಳ್ಳಿ!
Leave A Reply