ತೋಡಿನಲ್ಲಿ ಕುಳಿತು ಕಮೀಷನ್ ತಿನ್ನುವವರಿಗೆ ಪಾಲಿಕೆ ಅಧಿಕಾರಿಗಳು ಎನ್ನುತ್ತಾರೆ!!
2018 ರಂದು ಇದೇ ತಿಂಗಳ ಅಂತ್ಯಕ್ಕೆ ವರುಣ ಕುಟುಂಬ ಸಮೇತ ಮಂಗಳೂರಿಗೆ ಟೂರ್ ಗೆ ಬಂದಿದ್ದ. ಇಲ್ಲಿಯೇ ಮೂರ್ನಾಕು ದಿನ ಟೆಂಟ್ ಹಾಕಿ ಇಡೀ ನಗರವನ್ನು ಸುತ್ತಾಡಿದ್ದ. ಅವನು ಮಂಗಳೂರನ್ನು ಎಷ್ಟು ಪ್ರೀತಿಸಿದ್ದ ಎಂದರೆ ಅನೇಕ ದಿನಗಳ ತನಕ ಅವನು ಬಂದು ಹೋದ ಕುರುಹು ಇಲ್ಲಿಯೇ ಉಳಿದಿತ್ತು. ಅದೆಲ್ಲಾ ಆಗಿ ಈಗ ಒಂದು ವರ್ಷ. ಮಳೆರಾಯ ಭೂಮಿಗೆ ಕೊಟ್ಟ ಗಿಫ್ಟ್ ಇನ್ನು ಅಲ್ಲಲ್ಲಿ ಹಾಗೆ ಇದೆ. ಈ ಬಾರಿ ಯಾಕೋ ವರುಣನಿಗೆ ಮಂಗಳೂರು ನೆನಪಿಲ್ಲವೇನೋ ಎಂದು ಅನಿಸುತ್ತಿದೆ. ಇವತ್ತಲ್ಲ ನಾಳೆ ಮಕ್ಕಳು ಅಜ್ಜಿಮನೆಗೆ ಬಂದ ಹಾಗೆ ವರುಣ ವಾರದೊಳಗೆ ಮಂಗಳೂರಿಗೆ ಬರಲಿದ್ದಾನೆ. ಅವನ ಬರುವಿಕೆಯನ್ನು ಸ್ವಾಗತಿಸಲು ನಾವು ಸಿದ್ಧರಿದ್ದೆವೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. ನನ್ನ ಕೋರಿಕೆ ಇಷ್ಟೇ. ಶಾಸಕರೇ, ದಯವಿಟ್ಟು ಅಧಿಕಾರಿಗಳನ್ನು ಇನ್ನೊಮ್ಮೆ ಕರೆಸಿ ಫೈನಲ್ ವಾರ್ನಿಂಗ್ ಮಾಡಿಬಿಡಿ. ಅವರು ಅಸಡ್ಡೆಯಿಂದ ಹೂಳು ತೆಗೆಸದೆ ರಾಜಕಾಲುವೆಗಳು ತುಂಬಿ ನೀರು ರಸ್ತೆಯ ಮೇಲೆ ಹರಿದರೆ ಜನ ಅಧಿಕಾರಿಗಳನ್ನು ದೂರುವುದಿಲ್ಲ. ಬೈಯುವುದು ಶಾಸಕರಿಗೆ. ಆ ಕಾರಣದಿಂದ ಅಧಿಕಾರಿಗಳಿಂದ ಕೆಲಸ ಮಾಡಿಸುವ ಜವಾಬ್ದಾರಿ ನಿಮ್ಮದು. ಯಾವುದೇ ತೊಂದರೆ ಆಗದೇ ಮಳೆಗಾಲ ಮುಗಿದರೆ ಆಗಲೂ ಕ್ರೆಡಿಟ್ ನಿಮಗೆನೆ ಕೋಡೋಣ.
ಸ್ಪೆಶಲ್ ಗ್ಯಾಂಗ್ ಹುಟ್ಟಿಕೊಳ್ಳುವ ಹೊತ್ತು..
ಅಧಿಕಾರಿಗಳಿಗೆ ಈ ಬಾರಿ ಒಳ್ಳೆಯದೇ ಆಗಿತ್ತು. ಪಾಲಿಕೆಯಲ್ಲಿ ಚುನಾಯಿತ ಸರಕಾರ ಇಲ್ಲ. ಮತ್ತೊಂದೆಡೆ ಲೋಕಸಭಾ ಚುನಾವಣೆ. ಇನ್ನೊಂದು ಕಡೆ ರಾಜ್ಯ ಸರಕಾರ ಇವತ್ತು ಬೆಳಿಗ್ಗೆ ಬೀಳುತ್ತೇ, ಮಧ್ಯರಾತ್ರಿ ಬೀಳುತ್ತೇ ಎನ್ನುವ ವಾತಾವರಣ. ರಾಜಕಾಲುವೆ ಕ್ಲೀನಾದರೆಷ್ಟು, ಬಿಟ್ಟರೆಷ್ಟು ಎನ್ನುವ ವಾತಾವರಣ ಇತ್ತು. ಹಾಗಂತ ಕೆಲಸ ಮಾಡದಿದ್ದರೆ ಕಮೀಷನ್ ಬೇಡಾ ಎಂದು ಹೇಳುವ ಮನಸ್ಸು ನಮ್ಮ ಅಧಿಕಾರಿಗಳದ್ದಲ್ಲ. ಅದನ್ನು ಸರಿಯಾಗಿ ವಸೂಲು ಮಾಡುತ್ತಾರೆ. ರಾಜಕಾಲುವೆ ಕ್ಲೀನ್ ಮಾಡುವುದಕ್ಕೆ ಒಂದೂಕಾಲು ಕೋಟಿ ಮೀಸಲಿಡಲಾಗಿದೆ. ಇನ್ನು ಹೂಳು ತೆಗೆಯಲು ಮೂರು ಕೋಟಿ. ರಾಜಕಾಲುವೆ ಸ್ವಚ್ಚವಾಗಲಿ, ಬಿಡಲಿ, ಚರಂಡಿಗಳ ಹೂಳು ತೆಗೆಯಲಿ, ಬಿಡಲಿ ಅಧಿಕಾರಿಗಳಿಗೆ ಸಿಗಬೇಕಾದ ಕಮೀಷನ್ ಸಿಕ್ಕೇ ಸಿಗುತ್ತದೆ. ಕೇಳಿದ್ರೆ ಪಾಲಿಕೆಯ ಕಮೀಷನರ್ ಎಲ್ಲಾ ಕಡೆ ಕ್ಲೀನ್ ಆಗಿದೆ ಎಂದು ಹೇಳುತ್ತಾರೆ. ಪರಿಸರ ಅಭಿಯಂತರರು ಸಣ್ಣಚರಂಡಿಗಳು ಕ್ಲೀನ್ ಆಗಿದೆ ಎಂದೇ ಹೇಳುತ್ತಾರೆ. 10% ತೋಡುಗಳು ಕ್ಲೀನ್ ಆಗಿದೆ. ಉಳಿದ ಕಥೆ ದೇವರಿಗೆ ಮಾತ್ರ ಗೊತ್ತು. ಅಷ್ಟಕ್ಕೂ ಒಂದು ಮೀಟರ್ ಅಗಲದ ಚರಂಡಿಗಳನ್ನು ಕ್ಲೀನ್ ಮಾಡುವ ಗುತ್ತಿಗೆ ಇರುವುದು ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರಿಗೆ. ಅವರು ಮಾಡುವುದಿಲ್ಲ. ಯಾಕೆಂದರೆ ಅದನ್ನು ಮಾಡುವುದಕ್ಕೆಂದೇ ಮಳೆಗಾಲದಲ್ಲಿ ಒಂದು ಸ್ಪೆಶಲ್ ಗ್ಯಾಂಗ್ ನೇಮಕವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿದೆ.
ಎಷ್ಟು ಕೋಟಿಯ ಬಿಲ್..
ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಒಟ್ಟು ವಾರ್ಡ್ 60. ಒಂದೊಂದು ವಾರ್ಡಿಗೂ ಮಳೆಗಾಲದ ಮೂರು ತಿಂಗಳಿಗೆ ಒಂದೊಂದು ಸ್ಪೆಶಲ್ ಗ್ಯಾಂಗ್ ಇಡಲಾಗುತ್ತದೆ. ಪ್ರತಿ ಸ್ಪೆಶಲ್ ಗ್ಯಾಂಗ್ ಗೂ ತಿಂಗಳಿಗೆ ಒಂದು ಲಕ್ಷ ಬಿಲ್ ಆಗುತ್ತದೆ. ಅದರರ್ಥ ಮೂರು ತಿಂಗಳಿಗೆ ಮೂರು ಲಕ್ಷ ಆಯಿತು. ಹಾಗೆ ಅರವತ್ತು ವಾರ್ಡಿಗೆ ಮೂರು ಲಕ್ಷದಂತೆ ಎಷ್ಟಾಯಿತು. ಒಂದು ಕೋಟಿ ಎಂಭತ್ತು ಲಕ್ಷವಾಯಿತು. ಒಂದು ವೇಳೆ ಆಂಟೋನಿ ವೇಸ್ಟ್ ನವರು ಕ್ಲೀನ್ ಮಾಡಿದ್ದರೆ ಇವರಿಗೆ ಅಂದರೆ ಸ್ಪೆಶಲ್ ಗ್ಯಾಂಗ್ ಗೆ ಕೊಡುವ ಹಣ ಉಳಿಯುತ್ತಿತ್ತಾ? ಕೇಳುವವರು ಯಾರು? ಒಟ್ಟಿನಲ್ಲಿ ಮಳೆಗಾಲ ಬಂತೆಂದರೆ ಮದುವೆ ಶುಭಸಮಾರಂಭಗಳ ಸೀಸನ್ ಮುಗಿದಂತೆ. ಆದರೆ ಪಾಲಿಕೆಗೆ ಕಮೀಷನ್ ಹಣವನ್ನು ತಿನ್ನಲು ಇಡೀ ವರ್ಷ ಸೀಸನ್!
Leave A Reply