ಎಂತೆಂತವರನ್ನು ಹುಡುಕಿ ಸಚಿವರನ್ನಾಗಿ ಮಾಡಿದ್ರು ಮೋದಿ!!

ನೀವು ನರೇಂದ್ರ ಮೋದಿಯವರ ಈ ಬಾರಿಯ ಸಚಿವ ಸಂಪುಟದ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸುವಾಗ ಒಂದು ವಿಷಯ ಗಮನಿಸಿರಬಹುದು. ಶ್ರೀ ಪ್ರತಾಪ್ ಸಿಂಗ್ ಸಾರಂಗಿ ಎನ್ನುವ ಹೆಸರನ್ನು ಕರೆದಾಗ ಒಬ್ಬ ಸಣಕಲು ದೇಹದ, ಬಿಳಿ ಉದ್ದನೆಯ ಗಡ್ಡವನ್ನು ಬಿಟ್ಟಂತಹ, ಜನಸಾಮಾನ್ಯರ ಧಿರಿಸಿನಲ್ಲಿದ್ದ ಒಬ್ಬ ವ್ಯಕ್ತಿ ಎದ್ದು ಬಂದು ಮೈಕಿನ ಮುಂದೆ ಬಂದು ನಿಲ್ಲುತ್ತಾರೆ. ಅವರಿಗೆ ರಾಜ್ಯ ಸಹಾಯಕ ಸಚಿವರ ಸ್ಥಾನವನ್ನು ನೀಡಲಾಗಿದೆ. ಓಡಿಶಾದ ಗ್ರಾಮೀಣ ಭಾಗದ ಹಿನ್ನಲೆಯಿಂದ ಬಂದ ಈ ವ್ಯಕ್ತಿ ಯಾವತ್ತೂ ರಾಷ್ಟ್ರಪತಿ ಭವನದ ಅಂಗಳದಲ್ಲಿ ದೇಶದ ಪ್ರಧಾನಿಯವರ ಪಕ್ಕದಲ್ಲಿ ನಿಂತು ತಾವು ಕೂಡ ಸಚಿವರಾಗಬಹುದು ಎಂದು ಅಂದುಕೊಂಡಿರೋ ಇಲ್ಲವೋ. ಒಟ್ಟಿನಲ್ಲಿ ಜನಸಾಮಾನ್ಯರು ಕಾಣುವ ಕನಸಿನ ಪ್ರತಿಬಿಂಬದಂತೆ ನಿಲ್ಲುವ ವ್ಯಕ್ತಿಯ ಹೆಸರು ಸಾರಂಗಿ ಪ್ರತಾಪ್ ಸಿಂಗ್.
ಸೋಲಿಸಿದ್ದು ಕೋಟ್ಯಾಧಿಪತಿಯನ್ನು…
ಇವತ್ತು ಸಾರಂಗಿ ಇದೇ ದೇಶದಲ್ಲಿ ಸುದ್ದಿಯಲ್ಲಿದ್ದಾರೆ. ಅನೇಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇವರನ್ನು ಕೊಂಡಾಡಿದ್ದಾರೆ. ಇವರು ಇಡೀ ರಾಷ್ಟ್ರಕ್ಕೆ ಪರಿಚಯವಾದದ್ದು ಆ ಒಂದು ಫೋಟೋದಿಂದ. ಅದ್ಯಾವುದು ಎಂದರೆ ಇವರಿಗೆ ಪ್ರಮಾಣ ವಚನ ಸ್ವೀಕರಿಸಲು ಪ್ರಧಾನಮಂತ್ರಿ ಕಚೇರಿಯಿಂದ ದೂರವಾಣಿ ಕರೆ ಬಂದಾಗ ಇವರು ಜೋಳಿಗೆಯನ್ನು ಹೆಗಲ ಮೇಲೆ ಹಾಕಿ ತಮ್ಮ ಹಳೆ ಮನೆಯ ಹೊರಗೆ ನಿಂತ ಒಂದು ಫೋಟೋ ಫುಲ್ ವೈರಲ್ ಆಗಿತ್ತು. ಸಾರಂಗಿ ಪ್ರಮಾಣ ವಚನ ಸ್ವೀಕರಿಸಲು ಮುಂದೆ ಬಂದಾಗ ಮೋದಿಜಿಯವರನ್ನು ಬಿಟ್ಟರೆ ಅತೀ ಹೆಚ್ಚು ಚಪ್ಪಾಳೆ ಸಿಕ್ಕಿದ್ದು ಇವರಿಗೆ ಮಾತ್ರ. ಯಾಕೆಂದರೆ ಪ್ರತಾಪ್ ಸಿಂಗ್ ಪ್ರಥಮ ಬಾರಿ ಲೋಕಸಭೆಗೆ ಪ್ರವೇಶಿಸಿರಬಹುದು. ಆದರೆ ಓಡಿಶಾ ಜನರ ಪಾಲಿಗೆ ಅವರು ಓಡಿಶಾ ರಾಜ್ಯದ ಮೋದಿ. ಇವರು ಸೋಲಿಸಿದ್ದು ರವೀಂದ್ರ ಕುಮಾರ್ ಜಿನ್ ಎನ್ನುವ ಹಾಲಿ ಸಂಸದರನ್ನು. ರವೀಂದ್ರ ಕುಮಾರ್ ಓಡಿಶಾದ ಪ್ರಬಲ ಪ್ರಾದೇಶಿಕ ಪಕ್ಷ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರು. ಸಾರಂಗಿಯವರ ಒಟ್ಟು ಆಸ್ತಿ ಸುಮಾರು ಹದಿನೈದು ಲಕ್ಷ. ರವೀಂದ್ರ ಕುಮಾರ್ ಅವರು ಅಷ್ಟು ಮೊತ್ತವನ್ನು ಚುನಾವಣೆಯಲ್ಲಿ ಒಂದೇ ದಿನದಲ್ಲಿ ಖರ್ಚು ಮಾಡಿರಬಹುದು. ಆದರೂ ಹಣಬಲದ ಮುಂದೆ ಜನಬಲವೇ ದೊಡ್ಡದು ಎಂದು ಸಾರಂಗಿ ನಿರೂಪಿಸಿದ್ದಾರೆ.
ಕಳೆದ ಬಾರಿ 2014 ರಲ್ಲಿಯೂ ಇದೇ ಸಾರಂಗಿ ಪ್ರತಾಪ್ ಬಿಜೆಪಿ ಟಿಕೆಟಿನಿಂದ ಬೋಲಸಾರ್ ನಲ್ಲಿ ಸ್ಪರ್ಧಿಸಿದ್ದರು. ಆದರೆ ಗೆಲುವು ಸಾಧ್ಯವಾಗಿರಲಿಲ್ಲ. ಅದರ ಮೊದಲು 2009 ರಲ್ಲಿ ಇವರು ಓಡಿಶಾ ವಿಧಾನಸಭೆಯಲ್ಲಿ ಶಾಸಕರಾಗಿದ್ದರು. ಆದರೆ ಪಕ್ಷೇತರರಾಗಿ. ಅದರ ಅರ್ಥ ಬಿಜೆಪಿ ಟಿಕೆಟ್ ಕೊಟ್ಟಿರಲಿಲ್ಲ ಎಂದಲ್ಲ. ಬಿಜೆಪಿ ಟಿಕೆಟ್ ಕೊಟ್ಟಿತ್ತು. ಆದರೆ ಅದನ್ನು ತೆಗೆದುಕೊಂಡು ಬರುವಾಗ ಬಸ್ಸಿನ ನೂಕುನುಗ್ಗಲಿನಲ್ಲಿ ಟಿಕೆಟ್ ಬಿದ್ದು ಹೋಗಿತ್ತು. ಕೊನೆಯ ಕ್ಷಣದಲ್ಲಿ ಏನೂ ಮಾಡಲಾಗದೇ ಸಾರಂಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಚುನಾವಣೆಯ ಉದ್ದಕ್ಕೂ ಸೈಕಲ್ ಮತ್ತು ಬಾಡಿಗೆ ರಿಕ್ಷಾದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರತಾಪಚಂದ್ರ ಅವರು ಸುಮಾರು 12 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಬಜರಂಗದಳದ ಮಾಜಿ ರಾಜ್ಯ ಸಂಚಾಲಕರಾಗಿದ್ದ ಪ್ರತಾಪಚಂದ್ರ ಅವರು ವಿಶ್ವ ಹಿಂದೂ ಪರಿಷತ್ ನ ಪ್ರಮುಖ ನಾಯಕರಲ್ಲಿ ಒಬ್ಬರು. ಸದ್ಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ ಇಲಾಖೆ ಅವರಿಗೆ ಸಿಕ್ಕಿದೆ.
ಸುರೇಶ್ ಪ್ರಭು ಸಚಿವರಾಗಿಲ್ಲ…
ಇನ್ನು ಈ ಬಾರಿಯ ಇನ್ನೊಂದು ಆಶ್ಚರ್ಯಕರ ಬೆಳವಣಿಗೆ ಎಂದರೆ ಸುರೇಶ್ ಪ್ರಭು ಅವರಿಗೆ ಮಂತ್ರಿಮಂಡಲದಲ್ಲಿ ಮೊದಲ ಹಂತದಲ್ಲಿ ಸ್ಥಾನ ಸಿಕ್ಕಿಲ್ಲ. ಜೈಶಂಕರ್ ಅವರಿಗೆ ವಿದೇಶಾಂಗ ಇಲಾಖೆ ಕೊಡುವ ಮೂಲಕ ಯಾರಿಗೆ ಯಾವುದು ಕೊಟ್ಟರೆ ಒಳ್ಳೆಯದು ಎಂದು ಮೋದಿ ತೋರಿಸಿಕೊಟ್ಟಿದ್ದಾರೆ. ಜೈಶಂಕರ್ ಮೂಲತ: ರಾಜಕೀಯ ವ್ಯಕ್ತಿ ಅಲ್ಲ. ಅವರು ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. ಪ್ರಪಂಚದ ವಿವಿಧ ರಾಷ್ಟ್ರಗಳ ಜೊತೆ ಅವರಿಗೆ ವಿದೇಶಾಂಗ ನೀತಿಯ ಬಗ್ಗೆ ಅಪಾರ ಜ್ಞಾನವಿದೆ. ಅಂತವರನ್ನು ಹುಡುಕಿ ಮೋದಿ ವಿದೇಶಾಂಗ ಸಚಿವರನ್ನಾಗಿ ಮಾಡಿದ್ದಾರೆ. ನಿರೀಕ್ಷೆಯಂತೆ ಅಮಿತ್ ಶಾ ಗೃಹಮಂತ್ರಿಯಾಗಿದ್ದಾರೆ. ನಮ್ಮ ರಾಜ್ಯದಿಂದ ಬೇರೆ ಕೆಲವರಿಗೆ ಸಚಿವ ಸ್ಥಾನ ಸಿಕ್ಕೆ ಬಿಡುತ್ತದೆ ಎಂದು ಹೇಳಲಾಗುತ್ತಿತ್ತು. ಸಿಕ್ಕಿಲ್ಲ. ಆ ಬಗ್ಗೆ ಚರ್ಚೆ ಅನಗತ್ಯ. ಯಾಕೆಂದರೆ ಮೇಲೆ ಕುಳಿತಿರುವವರು ಮೋದಿ. ಎಲ್ಲರೂ ಅವರ ಹೆಸರಿನಿಂದಲೇ ಗೆದ್ದದ್ದು!!
Leave A Reply