ಪೊಲೀಸ್ ಸಿಬ್ಬಂದಿಗಳಿಗೆ ರಜೆ ಕೊಡ್ತೀರೋ ಅಥವಾ ನೀವೆ ರಜೆ ಮೇಲೆ ಹೋಗ್ತೀರೋ!!
ನಿಮಗೆ ಎರಡು ವರ್ಷಗಳ ಹಿಂದೆ ನೆನಪಿರಬಹುದು. ಕೆಳಹಂತದ ಪೊಲೀಸ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು. ಆಗ ಗೃಹ ಸಚಿವರಾಗಿದ್ದ ಈಗಿನ ಉಪ ಮುಖ್ಯಮಂತ್ರಿ ಪರಮೇಶ್ವರ್ ಪ್ರತಿಭಟನಾಕಾರರ ಬಳಿಗೆ ಬಂದು ಬೇಡಿಕೆಗಳನ್ನು ಕೇಳಿದ್ದರು. ಅದೆಲ್ಲ ನಡೆದು ಈಗ ಎರಡು ವರ್ಷಗಳಾಗಿ ಹೋಗಿವೆ. ಪೊಲೀಸ್ ಸಿಬ್ಬಂದಿಗಳ ಬೇಡಿಕೆಗಳಲ್ಲಿ ಮುಖ್ಯವಾಗಿದ್ದ ವಾರಕ್ಕೊಂದು ರಜೆ ಎನ್ನುವ ಮನವಿಗೆ ಯಾರೂ ಕ್ಯಾರೇ ಎಂದಿಲ್ಲ. ಕೇಳಿದರೆ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ ಎಂದು ಸಬೂಬು ಹೇಳಿ ರಜೆ ಕೊಡುವ ಕಾನ್ಸೆಪ್ಟನ್ನು ಮುಂದಕ್ಕೆ ತಳ್ಳುತ್ತಲೇ ಹೋಗಲಾಗುತ್ತಿದೆ. ಅಂದರೆ ರಜೆ ಎನ್ನುವುದು ಕೆಳಹಂತದ ಪೊಲೀಸರ ಪಾಲಿಗೆ ಮರಿಚೀಕೆಯೇ ಆಗಿಹೋಗಿದೆ. ಅದೇ ಪಕ್ಕದ ಮಹಾರಾಷ್ಟ್ರ ಮತ್ತು ಇತ್ತಗಿನ ಆಂಧ್ರದಲ್ಲಿ ಪೊಲೀಸರಿಗೆ ನಿಯಮಿತವಾಗಿ ವಾರದ ರಜೆ ಸಿಗುತ್ತಿದೆ. ವಾರದ ರಜೆ ಎಂದ ಕೂಡಲೇ ಆದಿತ್ಯವಾರವೇ ಕೊಡಬೇಕು ಎಂದು ನಾನು ಹೇಳುತ್ತಿಲ್ಲ. ಅದನ್ನು ಪೊಲೀಸ್ ಸಿಬ್ಬಂದಿಗಳು ಕೂಡ ಬಯಸುತ್ತಿಲ್ಲ. ಈ ಹೋಟೇಲು, ಪತ್ರಿಕೆ, ಟಿವಿ ಸಹಿತ ಅನೇಕ ಸಂಸ್ಥೆಗಳಲ್ಲಿ ಎಲ್ಲರಿಗೂ ಆದಿತ್ಯವಾರವೇ ರಜೆ ಇರುತ್ತೆ ಎಂದು ಹೇಳಲು ಆಗುವುದಿಲ್ಲ. ಕೆಲವರಿಗೆ ಸೋಮವಾರ, ಕೆಲವರಿಗೆ ಶುಕ್ರವಾರ ಹೀಗೆ ವಾರವನ್ನು ಹಂಚಿಕೊಂಡು ರಜೆ ಇರುತ್ತದೆ. ಅದನ್ನು ಆ ತಿಂಗಳ ಮೊದಲೇ ವೇಳಾಪಟ್ಟಿ ಸಿದ್ಧಪಡಿಸಿ ಬೋರ್ಡಿಗೆ ಹಾಕಿರುತ್ತಾರೆ. ಯಾರ ರಜೆ ಇರುತ್ತೆ ಆ ದಿನ ಆ ಕೆಲಸ ಅನಿವಾರ್ಯ ಇದ್ದರೆ ಬೇರೆಯವರಿಗೆ ವಹಿಸಲಾಗುತ್ತದೆ. ಹಾಗೇ ನಿಮಗೂ ವಾರಕ್ಕೆ ಒಂದು ದಿನ ರಜೆ ಫಿಕ್ಸ್ ಮಾಡುವ ಕೆಲಸ ಮಾಡಲಾಗುವುದು ಎಂದು ಗೃಹಮಂತ್ರಿಗಳು ಹೇಳಿದ್ದರಿಂದ ಪೊಲೀಸ್ ಸಿಬ್ಬಂದಿಗಳು ನಂಬಿದ್ದರು.
ಆ ಸೌಭಾಗ್ಯ ಪೊಲೀಸ್ ಸಿಬ್ಬಂದಿಗಳಿಗೆ ಇಲ್ಲ…
ಆದರೆ ಇತ್ತೀಚೆಗೆ ಎರಡನೇ ಶನಿವಾರದೊಂದಿಗೆ ನಾಲ್ಕನೇ ಶನಿವಾರ ಕೂಡ ರಜೆ ಘೋಷಿಸಿರುವುದು ಸರಕಾರಿ ನೌಕರರಿಗೆ. ಬೆಳಿಗ್ಗೆ ಹತ್ತೂವರೆಗೆ ಬಂದು ಹನ್ನೊಂದು ಗಂಟೆಗೆ ಚಾಗೆ ಹೋಗಿ ಹನ್ನೊಂದುವರೆಯಿಂದ ಒಂದೂವರೆ ತನಕ ಫ್ಯಾನ್ ಕೆಳಗೆ ಕುಳಿತು ಸಮಯ ದೂಡಿ ನಂತರ ಊಟಕ್ಕೆ ಹೋದವರು ಮೂರು ಗಂಟೆಗೆ ಬಂದು ಮತ್ತೆ ನಾಲ್ಕು ಗಂಟೆಗೆ ಚಾ, ಸಿಗರೇಟು ಎಂಂದು ಹೋಗಿ ಐದು ಗಂಟೆಗೆ ರೈಟ್ ಪೊಯಿ ಎನ್ನುವ ಸರಕಾರಿ ನೌಕರಿಯಲ್ಲಿ ಇರುವವರಿಗೆ ಮತ್ತೆ ನಾಲ್ಕನೇ ಶನಿವಾರ ರಜೆ ಮಂಜೂರಾಗಿದೆ. ಅದರೊಂದಿಗೆ ಆ ಹಬ್ಬ, ಈ ಹಬ್ಬ, ಸಿಎಲ್, ಸಿಕ್ ಲಿವ್ ಅದು ಇದು ಎಂದು ರಜೆಗಳಿಗೆ ಕೊರತೆ ಇಲ್ಲ. ಕೆಲಸ ಮಾಡುವಾಗ ಕೂಡ ಇಡೀ ದಿನ ಫೋನಿನಲ್ಲಿ ಇದ್ದು ಬಂದ ನಾಗರಿಕರ ಬಳಿ ಸರಿಯಾಗಿ ಮುಖ ಕೊಟ್ಟು ಮಾತನಾಡದ ಸರಕಾರಿ ನೌಕರರಿಗೆ ಮತ್ತೆ ರಜೆ ಬೇಕಾ? ಅದು ಒಂದು ರೀತಿಯಲ್ಲಿ ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟಷ್ಟು ಒಳ್ಳೆಯದು ಆಗಿದೆ. ಆದರೆ ಆ ಸೌಭಾಗ್ಯ ಪೊಲೀಸ್ ಸಿಬ್ಬಂದಿಗಳಿಗೆ ಇಲ್ಲ. ಸರಕಾರಿ ಉದ್ಯೋಗದಲ್ಲಿ ಅತ್ಯಂತ ಕಠಿಣವಾಗಿರುವ ಬೆರಳೆಣಿಕೆಯ ಕ್ಷೇತ್ರಗಳಲ್ಲಿ ಪೊಲೀಸ್ ಸೇವೆಯೂ ಒಂದು. ಇವರು ಬಿಸಿಲು, ಮಳೆ, ಬಂದ್, ಹಬ್ಬ, ಹರಿದಿನ ಎನ್ನದೇ ಸೇವೆ ಸಲ್ಲಿಸಬೇಕು. ಉಳಿದ ಕ್ಷೇತ್ರಗಳಲ್ಲಿ ಮಕ್ಕಳ ಹುಟ್ಟಿದ ಹಬ್ಬ, ಪತ್ನಿಯ ಹೆರಿಗೆ ಎಂದು ವಾರದ ಮೊದಲೇ ರಜೆಗೆ ಅರ್ಜಿ ಹಾಕುವವರು ಇದ್ದಾರೆ. ಆದರೆ ಪೊಲೀಸ್ ಡಿಪಾರ್ಟ್ ಮೆಂಟ್ ನಲ್ಲಿ ಮಗುವಿನ ಭರ್ತಡೇ ದಿನವೇ ತಕ್ಷಣ ಬಾ ಎನ್ನುವ ಸಂದೇಶ ಹೋಗುವುದುಂಟು. ಅತ್ಯಂತ ಹೆಚ್ಚು ಒತ್ತಡದಲ್ಲಿ ಈ ಸಿಬ್ಬಂದಿಗಳು ಕೆಲಸ ಮಾಡಬೇಕಾಗುತ್ತದೆ.
ಸರಕಾರ ಉಳಿದರೆ ಸಾಕೆಂಬ ಚಿಂತೆ…
ಇನ್ನು ಪೊಲೀಸ್ ಸಿಬ್ಬಂದಿಗಳ ಜೀವನ ಕೂಡ ರಿಸ್ಕ್. ಉನ್ನತ ಸ್ತರದ ಅಧಿಕಾರಿಗಳು ಎಲ್ಲದರಲ್ಲಿಯೂ ಕಾನ್ಸಸ್ಟೇಬಲ್, ಎಎಸ್ ಐ ಗಳನ್ನೇ ಎದುರು ಹಾಕಿ ಕೊನೆಗೆ ತಾವು ರಂಗಪ್ರವೇಶ ಮಾಡುವುದುಂಟು. ರೌಡಿಗಳಿಂದ, ಕಳ್ಳಕಾಕರಿಂದ, ದರೋಡೆಕೋರರಿಂದ ದಾಳಿಗೊಳಗಾಗಿ ಪ್ರಾಣತೆತ್ತವರಲ್ಲಿ ಅನೇಕ ಪೊಲೀಸ್ ಸಿಬ್ಬಂದಿಗಳಿದ್ದಾರೆ. ಟ್ರಾಫಿಕ್ ಪೊಲೀಸರು ಎಷ್ಟೋ ಸಂದರ್ಭಗಳಲ್ಲಿ ಪ್ರಾಣ ತ್ಯಜಿಸಿದ್ದೂ ಇದೆ.
ಹೀಗಿರುವಾಗ ನಾಲ್ಕನೇ ಶನಿವಾರ ರಜೆ ಕೊಡಬೇಕಾಗಿದ್ದೂ ಯಾರಿಗೆ? ನಾಲ್ಕನೇ ಬಿಡಿ, ವಾರದಲ್ಲಿ ಒಂದಾದರೂ. ದಿನಕ್ಕೆ ಹನ್ನೆರಡು ಗಂಟೆ ಕೆಲಸ ಮಾಡುವ ಪೊಲೀಸರು ನಿಜಕ್ಕೂ ವಾರಕ್ಕೆ ಎರಡು ದಿನ ರಜೆ ಪಡೆದುಕೊಳ್ಳಲು ಅರ್ಹರಿದ್ದಾರೆ. ಅತ್ಯಂತ ಒತ್ತಡದ ಸಂದರ್ಭದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳ ಮನಸ್ಸು ಖುಷಿಯಿಂದ ಇರಬೇಕಾದರೆ ರಜೆ ಅನಿವಾರ್ಯ. ಆದರೆ ಇವರ ವರ್ಷದ 15 ದಿನದ ಕ್ಯಾಶುವಲ್ ರಜೆಯನ್ನು ಕಟ್ ಮಾಡಿ ರಾಜ್ಯ ಸರಕಾರ ಅದನ್ನು ಹತ್ತಕ್ಕೆ ತಂದು ನಿಲ್ಲಿಸಿದೆ. ಈ ಸರಕಾರದಿಂದ ಇನ್ನೇನೂ ನಿರೀಕ್ಷೆ ಮಾಡಲು ಸಾಧ್ಯ. ಸರಕಾರ ಉಳಿಸಲು ಒದ್ದಾಡುತ್ತಿರುವ ಪರಮೇಶ್ವರ್, ಗೃಹಸಚಿವ ಎಂಬಿ ಪಾಟೀಲ್ ಅವರಿಗೆ ಅವರ ಸರಕಾರ ಉಳಿದರೆ ಸಾಕೆಂಬ ಚಿಂತೆ. ಅವರಿಗೆ ಪೊಲೀಸ್ ಸಿಬ್ಬಂದಿಗಳ ನೆನಪಾದರೂ ಎಲ್ಲಿಯದೂ!
Leave A Reply