ಸಂದೀಪ್ ಪಾಟೀಲ್ ಹೋದ್ರು! ಅಕ್ರಮಿಗಳು ಹಬ್ಬ ಮಾಡಿದ್ರು!
ಸಂದೀಪ್ ಪಾಟೀಲ್ ಅವರನ್ನು ಇನ್ನಷ್ಟು ದಿನ ಉಳಿಸಬಹುದಿತ್ತು ಎನ್ನುವ ವಾಕ್ಯದೊಂದಿಗೆ ಇವತ್ತಿನ ಜಾಗೃತಿ ಸಂಚಿಕೆಯನ್ನು ಪ್ರಾರಂಭಿಸುತ್ತಿದ್ದೇನೆ. ಒಂದು ಸಮಾಧಾನ ಎಂದರೆ ಸಂದೀಪ್ ಪಾಟೀಲ್ ಅವರು ಬಿಟ್ಟು ಹೋಗುತ್ತಿರುವ ಜಾಗಕ್ಕೆ ಅವರಷ್ಟೇ ಜನಸ್ನೇಹಿ ಮತ್ತು ಅಷ್ಟೇ ದಕ್ಷ ಅಧಿಕಾರಿ ಬರುತ್ತಿದ್ದಾರೆ. ಅವರ ಹೆಸರು ಡಾ.ಸುಬ್ರಹ್ಮಣ್ಯೇಶ್ವರ್ ರಾವ್. ಸಿಬಿಐ ಸಂಸ್ಥೆ ತನಕ ಹೋಗಿ ಸೇವೆ ಸಲ್ಲಿಸಿ ಬಂದಿರುವ ಡಾ.ಸುಬ್ರಹ್ಮಣ್ಯೇಶ್ವರ್ ರಾವ್ ಮಂಗಳೂರು ಕಮೀಷನರ್ ಆಗಿ ಬರುತ್ತಿರುವುದು ನಮಗೆ ಖುಷಿಯ ವಿಷಯ. ಅದಲ್ಲದೇ ಕೋಟ್ಯಾಂತರ ರೂಪಾಯಿ ಹಗರಣದ ಆರೋಪಿ ಮನ್ಸೂರ್ ಪ್ರಕರಣದ ತನಿಖೆಗೆ ಸಂದೀಪ್ ಪಾಟೀಲ್ ಅವರಂತಹ ಅಧಿಕಾರಿಯೇ ಬೇಕಾಗಿರುವುದರಿಂದ ಮಂಗಳೂರು ಅನಿವಾರ್ಯವಾಗಿ ಸಂದೀಪ್ ಪಾಟೀಲ್ ಅವರನ್ನು ಬೀಳ್ಕೋಡಬೇಕಾಗಿದೆ.
ಅಷ್ಟಕ್ಕೂ ಸಂದೀಪ್ ಪಾಟೀಲ್ ಅವರ ಹಠಾತ್ ವರ್ಗಾವಣೆಯಿಂದ ಯಾರಿಗೇನು ಲಾಭ. ಮೊದಲನೇಯದಾಗಿ ಗಾಂಜಾ ವ್ಯಾಪಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿರಬಹುದು. ನಿನ್ನೆ ರಾತ್ರಿ ಪಾರ್ಟಿ ಮಾಡಿರಬಹುದು. ಯಾಕೆಂದರೆ ಸಂದೀಪ್ ಪಾಟೀಲ್ ಇದ್ದಷ್ಟು ದಿನ ಗಾಂಜಾ ವ್ಯಾಪಾರಿಗಳಿಗೆ ಅದು ಹಲಗೆಯ ಮೇಲಿನ ನಡಿಗೆಯಾಗಿತ್ತು. ಜಸ್ಟ್ ಮಿಸ್ ಆದರೆ ಪಾಟೀಲ್ ಬಲೆಯಲ್ಲಿ ಬಿದ್ದು ಒದ್ದಾಡುವ ಪರಿಸ್ಥಿತಿ ಇತ್ತು. ಅನೇಕ ಗಾಂಜಾ ವ್ಯಾಪಾರಿಗಳನ್ನು ಮಾತ್ರವಲ್ಲ, ಗಾಂಜಾ ಕಿಂಗ್ ಪಿನ್ ಗಳನ್ನು ಕೂಡ ಜೈಲಿನ ಸಲಾಕೆಗಳ ಹಿಂದೆ ಕುಳ್ಳಿರಿಸಿ ಅವರ ಬೆನ್ನಮೂಳೆ ಮುರಿದ ಖ್ಯಾತಿ ಸಂದೀಪ್ ಪಾಟೀಲ್ ಅವರದ್ದು. ಇನ್ನು ಎರಡನೇಯದ್ದಾಗಿ ಕ್ರಿಕೆಟ್ ಬೆಟ್ಟಿಂಗ್. ಬಹುಶ: ಸಂದೀಪ್ ಪಾಟೀಲ್ ಅವರು ಮಂಗಳೂರಿನಲ್ಲಿ ಇದ್ದಷ್ಟು ದಿನ ಕ್ರಿಕೆಟ್ ಬೆಟ್ಟಿಂಗ್ ಆಡುವವರಿಗೆ ಕರಾಳ ಮಾಸವಾಗಿತ್ತು. ಪಾಟೀಲ್ ಮುಗಿಬಿದ್ದು ಬೆಟ್ಟಿಂಗ್ ದಂಧೆಯವರ ಹಿಂದೆ ಬಿದ್ದಿದ್ದರು. ಅವರು ರೇಡ್ ಮಾಡಿದ ಸಂಖ್ಯೆಗಳೇ ಅದಕ್ಕೆ ಸಾಕ್ಷಿ. ಬಹುಶ: ಬೆಟ್ಟಿಂಗ್ ಜಾಲದವರು ಕೂಡ ನಿನ್ನೆ ರಾತ್ರಿ ನೆಮ್ಮದಿಯ ನಿದ್ರೆ ಮಾಡಿರಬಹುದು. ಇನ್ನು ಗೋಕಳ್ಳರಂತೂ ತಾವು ಕೊಲ್ಲುವ ಗೋವಿನ ಹಾಲನ್ನು ಮೊದಲು ಹಿಂಡಿ ಅದನ್ನು ಕುಡಿದು ಸಂಭ್ರಮಿಸಿ ನಂತರ ಕಟುಕರಿಗೆ ಒಪ್ಪಿಸಿರಬಹುದು. ಯಾಕೆಂದರೆ ಗೋಕಳ್ಳರು ನಿದ್ರೆಯಲ್ಲಿಯೂ ಸಂದೀಪ್ ಪಾಟೀಲ್ ಹೆಸರು ಕೇಳಿದರೆ ಬೆಚ್ಚಿಬೀಳುತ್ತಿದ್ದರು. ಗೋಕಳ್ಳರ ಪೇರೇಡ್ ಮಾಡಿಸಿ ದನಗಳನ್ನು ಕದ್ದರೆ ಆವತ್ತೆ ನಿಮಗೆ ಒಂದು ಗತಿ ಕಾಣಿಸಬೇಕಾಗಬಹುದು ಎಂದು ಪರೋಕ್ಷವಾಗಿ ಎಚ್ಚರಿಕೆ ಕೊಡುವ ಮೂಲಕ ಗೋಕಳ್ಳತನ ಕೂಡ ಕಡಿಮೆಯಾಗುವಂತೆ ಮಾಡಿದ್ದರು.
ಇನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ದಾರಿ ತಪ್ಪಲು ಮುಖ್ಯ ಕಾರಣವಾಗಿದ್ದ ಜುಗಾರಿ ಅಡ್ಡೆ, ಸ್ಕಿಲ್ ಗೇಮ್ಸ್ , ಇಸ್ಪೀಟ್, ವೇಶ್ಯಾವಾಟಿಕೆ ಸಹಿತ ಅನೇಕ ಅಡ್ಡದಾರಿಗಳನ್ನು ಬಂದ್ ಮಾಡಿಸಿದ ಶ್ರೇಯಸ್ಸು ಸಂದೀಪ್ ಪಾಟೀಲ್ ಅವರಿಗೆ ಸಲ್ಲುತ್ತದೆ. ಅದೇ ರೀತಿಯಲ್ಲಿ ಈ ಬಾರಿಯ ಚುನಾವಣೆಯನ್ನು ಕೂಡ ಯಾವುದೇ ಅಹಿತಕರ ಘಟನೆ ಇಲ್ಲದೆ ನಡೆಸಿಕೊಟ್ಟ ಕೀರ್ತಿ ಪಾಟೀಲ್ ಅವರಿಗೆ ಸಲ್ಲಬೇಕು. ಯಾವುದೇ ದೊಡ್ಡ ವಿಷಯವಾಗಿರಲಿ ಅಥವಾ ತಮ್ಮ ವಾರದ ಫೋನ್ ಇನ್ ಕಾರ್ಯಕ್ರಮಗಳಿಗೆ ಬರುವ ಜನಸಾಮಾನ್ಯರ ಕರೆಗಳಾಗಿರಲಿ ಪ್ರತಿಯೊಂದಕ್ಕೂ ಸ್ಪಂದಿಸುತ್ತಿದ್ದವರು ಇದೇ ಸಂದೀಪ್ ಪಾಟೀಲ್. ಬಸ್ ಗಳು ಸ್ಟಾಪ್ ಗಳಲ್ಲಿ ನಿಲ್ಲುವುದಿಲ್ಲ ಎನ್ನುವುದರಿಂದ ಹಿಡಿದು ಟ್ರಾಫಿಕ್ ಜಾಮ್ ತನಕ ಪಾಟೀಲ್ ಜನರ ಕರೆಗಳಿಗೆ ಉತ್ತರಿಸಿ ತಕ್ಷಣ ರಸ್ತೆಗಳಿಗೆ ಇಳಿದು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರು. ಇಷ್ಟೆಲ್ಲವನ್ನು ಕೇವಲ ಐದು ತಿಂಗಳು ಒಂದು ವಾರದ ಅಂತರದಲ್ಲಿ ಮಾಡಿರುವ ಸಂದೀಪ್ ನಮ್ಮ ನಗರವನ್ನು ಬಿಟ್ಟು ಹೋಗಿಬಿಟ್ಟಿದ್ದಾರೆ.
ನಾನು ಪ್ರಾರಂಭದಲ್ಲಿ ಹೇಳಿದ ಹಾಗೆ ಅಕ್ರಮಿಗಳಿಗೆ ನಿನ್ನೆಯಿಂದ ಹಬ್ಬವಾಗಿರಬಹುದು. ಹಾಗಂತ ಶ್ರಾವಣ ಸಂಭ್ರಮ ಅಕ್ರಮ ಮಾಡುವವರಿಗೆ ಬರಲು ಹೊಸ ಕಮೀಷನರ್ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ. ಯಾಕೆಂದರೆ ಬಂದಿರುವವರು ಡಾ.ಸುಬ್ರಹ್ಮಣ್ಯೇಶ್ವರ್ ರಾವ್. ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದವರು. ಎಸ್ ಪಿ ಪಂಕಜ್ ಠಾಕೂರ್ ಹೇಗೆ ತಮ್ಮ ಕಚೇರಿಯ ಬಾಗಿಲನ್ನು ಜನಸಾಮಾನ್ಯರಿಗೆ ತೆರೆದಿಟ್ಟಿದ್ದರೂ ಅದನ್ನು ಅಕ್ಷರಶ: ಪಾಲಿಸಿದವರು ರಾವ್. ಪಾಟೀಲ್ ಅವರು ಮಾಡಿರುವ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ. ಅವರ ಮೇಲೆ ವಿಶ್ವಾಸವಿದೆ. ಅಕ್ರಮಿಗಳಿಗೆ ಮುಂದಿದೆ ಹೊಸ ಮಾರಿಹಬ್ಬ!!!
Leave A Reply