ಪಾಲಿಕೆಯ ಫುಟ್ ಪಾತ್ ಮೇಲಿರುವ ಕಾಂಕ್ರೀಟ್ ಸ್ಲ್ಯಾಬ್ ಗಳು ಗುತ್ತಿಗೆದಾರರ ಖಾಸಗಿ ಕೆಲಸಕ್ಕೆ!!

ನಾನು ಬರೆಯುತ್ತಿರುವ ಪ್ರತಿ ಜಾಗೃತಿ ಅಂಕಣವನ್ನು ಪಾಲಿಕೆಯ ನೂತನ ಸದಸ್ಯರು ಒಂದಿಷ್ಟು ಓದಿ ಅರ್ಥ ಮಾಡಿಕೊಂಡು ತಾವು ಮುಂದಿನ ದಿನಗಳಲ್ಲಿ ಏನು ಮಾಡಬಹುದು ಎಂದು ಆಯೋಚಿಸಿದರೆ ಬಹುಶ: ಪಾಲಿಕೆಯಲ್ಲಿ ಆಗುತ್ತಿರುವ ಆರ್ಥಿಕ ಸೋರಿಕೆಗೆ ಒಂದಿಷ್ಟು ತಡೆ ಹಾಕಬಹುದು. ಯಾಕೆಂದರೆ ಪಾಲಿಕೆಯ ಸದಸ್ಯರು ನಮ್ಮ ಸ್ಥಳೀಯ ಆಡಳಿತದ ಕಾಲಾಳುಗಳಂತೆ. ನಮ್ಮ ನಿಮ್ಮ ತೆರಿಗೆಯ ಹಣವನ್ನು ಹೇಗೆ ಉಳಿಸಬೇಕು ಎನ್ನುವುದನ್ನು ಕೂಡ ನೋಡಬೇಕು.
ಈಗ ಏನಾಗುತ್ತಿದೆ ಎಂದರೆ ಚೆನ್ನಾಗಿರುವ ಚರಂಡಿಗಳನ್ನೇ ಸರಿ ಮಾಡುವುದು, ಯಾವುದು ಸರಿಯಿಲ್ಲವೋ ಅದನ್ನು ಹಾಗೆ ಬಿಡುವುದು. ಅಷ್ಟೇ ಅಲ್ಲ ಸರಿಯಾದ ಚರಂಡಿಗಳ ಮೇಲೆ ಹಾಕಿರುವ ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ತೆಗೆದು ಗುತ್ತಿಗೆದಾರರು ತಮ್ಮ ಬೇರೆ ಕೆಲಸಕ್ಕೆ ತೆಗೆದುಕೊಂಡು ಹೋಗುವುದು. ಇದೇ ನಿರಂತರವಾಗಿ ನಡೆಯುತ್ತದೆ. ಈ ಬಗ್ಗೆ ಧ್ವನಿ ಎತ್ತಲು ಯಾರೂ ಹೋಗಲ್ಲ. ಇದರಿಂದ ಇಂಜಿನಿಯರ್ ಹಾಗೂ ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿಯಿಂದ ಸೋರಿಕೆಯಾಗುತ್ತಿರುವುದು ನಮ್ಮ ತೆರಿಗೆಯ ಹಣ. ಬೇಕಾದರೆ ಪಾಲಿಕೆಯ ಕಟ್ಟಡದ ಎದುರು ಒಂದು ಚರಂಡಿ ಮತ್ತು ಅದರ ಮೇಲೆ ಫುಟ್ ಪಾತ್ ನಿರ್ಮಾಣವಾಗುತ್ತಿರುವುದನ್ನು ನೀವು ನೋಡಿರಬಹುದು. ಅದರ ಎದುರು ಆಚೇ ಬದಿ ಸೈಬಿನ್ ಕಾಂಪ್ಲೆಕ್ಸ್ ಎದುರು ಬಳ್ಳಾಲ್ ಭಾಗ್ ಕಡೆ ಹೋಗುವ ರಸ್ತೆಯ ಫುಟ್ ಪಾತ್ ಮತ್ತು ಚರಂಡಿಯನ್ನು ಸರಿ ಮಾಡುವ ಕಾಮಗಾರಿಯನ್ನು ಕೂಡ ಮಾಡುತ್ತಿದ್ದಾರೆ. ಸರಿಯಾಗಿ ನೋಡಿದರೆ ರಿಪೇರಿ ಆಗಬೇಕಾದ ಫುಟ್ ಪಾತ್ ಮತ್ತು ಚರಂಡಿಗಳು ಮಂಗಳೂರಿನಲ್ಲಿ ಸಾಕಷ್ಟಿವೆ. ಉದಾಹರಣೆಗೆ ಪಿವಿಎಸ್ ನಿಂದ ಕುದ್ಮುಲ್ ರಂಗರಾವ್ ಹಾಸ್ಟೆಲ್ ಕಡೆ ಹೋಗುವ ಫುಟ್ ಪಾತ್ ನೋಡಿದರೆ ನಿಮಗೆ ಅದರ ಪರಿಸ್ಥಿತಿ ಗೊತ್ತಾಗುತ್ತದೆ. ಆ ಭಾಗದ ಕಾರ್ಪೋರೇಟರ್ ಎರಡನೇ ಬಾರಿ ಗೆದ್ದಿದ್ದಾರೆ. ಇನ್ನು ಸಿಟಿ ಸೆಂಟರ್ ಎದುರು ಕೂಡ ಡ್ರೈನೇಜ್ ನೀರು ಚರಂಡಿಯಿಂದ ಹೊರಗೆ ಬರುತ್ತದೆ. ಯಾಕೆಂದರೆ ಅರ್ಧಂಬರ್ಧ ನಿರ್ಮಾಣವಾಗಿರುವ ಒಳಚರಂಡಿಗಳು. ಅದನ್ನೆಲ್ಲಾ ಸರಿ ಮಾಡುವುದು ಬಿಟ್ಟು ಯಾವುದೋ ಸರಿ ಇರುವ ಚರಂಡಿಗಳನ್ನು ಸರಿ ಮಾಡಲು ಹೊರಟಿರುವ ಮಂಗಳೂರು ಮಹಾನಗರ ಪಾಲಿಕೆ ಏನನ್ನು ಸಾಧಿಸಲು ಹೊರಟಿದೆ.
ಇನ್ನು ಲೇಡಿಹಿಲ್ ಸರ್ಕಲ್ ನಿಂದ ಕರಾವಳಿ ಉತ್ಸವ ಗ್ರೌಂಡ್ ಕಡೆ ಹೋಗುವ ರಸ್ತೆಯ ಎರಡು ಬದಿ ಚರಂಡಿ ಮತ್ತು ಅದರ ಮೇಲೆ ಫುಟ್ ಪಾತ್ ನಿರ್ಮಿಸಲಾಗಿದೆ. ಅವು ಚೆನ್ನಾಗಿಯೇ ಇದ್ದ ಚರಂಡಿ ಮತ್ತು ಫುಟ್ ಪಾತ್. ಅಲ್ಲಿ ಚರಂಡಿ ಮೇಲಿರುವ ಫುಟ್ ಪಾತ್ ಸ್ಲ್ಯಾಬ್ ಕೆಲವು ಕಡೆ ಹೋಗಿದ್ದರೆ ಅಷ್ಟೇ ಭಾಗಕ್ಕೆ ಬೇರೆ ಹಾಕಬಹುದಿತ್ತು. ಆದರೆ ಅದಕ್ಕಾಗಿ ಪ್ರತ್ಯೇಕವಾಗಿ 4.5 ಕೋಟಿ ರೂಪಾಯಿ ಖರ್ಚು ಮಾಡುವ ಅಗತ್ಯ ಏನಿತ್ತು? ಇದೇನಾಗಿದೆ ಎಂದರೆ ಹೇಗೂ ಅಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿರುವುದರಿಂದ ಬಿಲ್ಡರ್ ಗಳು ಕಟ್ಟಿರುವ ಎಫ್ ಎ ಆರ್ ಹಣ ಪಾಲಿಕೆಯಲ್ಲಿ ಸಾಕಷ್ಟಿದೆ. ಅದನ್ನು ಮುಗಿಸಿ ಕಮೀಷನ್ ಹಂಚಿಕೊಳ್ಳುವ ಆತುರ ಹಿಂದಿನ ಬಾರಿ ಆಡಳಿತ ಮಾಡಿದ ಕಾಂಗ್ರೆಸ್ಸಿಗೆ ಇತ್ತು. ಅದಕ್ಕಾಗಿ ಕಳೆದ ಬಾರಿ ಆಡಳಿತಾವಧಿಯಲ್ಲಿ ಅರ್ಜೆಂಟಲ್ಲಿ ಟೆಂಡರ್ ಕೂಡ ಕರೆಯಲಾಗಿತ್ತು. ಈ ಮೂಲಕ ಒಳ್ಳೆಯ ಚರಂಡಿ ಮತ್ತು ಫುಟ್ ಪಾತ್ ಗಳನ್ನೇ ಇವರು ಮತ್ತೆ ರಿಪೇರಿ ಮಾಡುತ್ತಾ ಅದರ ಕಾಂಕ್ರೀಟ್ ಸ್ಲ್ಯಾಬ್ ತೆಗೆದುಕೊಂಡು ಹೋಗುತ್ತಿದ್ದಾರೆ. ಇಂಜಿನಿಯರಿಂಗ್ ವಿಭಾಗದವರನ್ನು ಕೇಳಿದರೆ ಆ ಸ್ಲ್ಯಾಬ್ ಗಳು ಉಪಯೋಗಕ್ಕೆ ಇಲ್ಲ ಎನ್ನುತ್ತಾರೆ. ಅದು ಶುದ್ಧ ಸುಳ್ಳು. ನಿಜ ಹೇಳಬೇಕಾದರೆ ಇಂಜಿನಿಯರಿಂಗ್ ವಿಭಾಗದವರು ಗುತ್ತಿಗೆದಾರರಿಗೆ ಪ್ರಶ್ನೆಯೇ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಇಂಜಿನಿಯರಿಂಗ್ ವಿಭಾಗದವರು ಮನಸ್ಸು ಮಾಡಿದರೆ ಆ ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ಕೆಲವು ಕಡೆ ಅಗತ್ಯವಾಗಿ ಬೇಕಾಗಿರುವ ಕಡೆ ಶಿಫ್ಟ್ ಮಾಡಿಸಿ ಅಲ್ಲಿ ಜೋಡಿಸಬಹುದು. ಕೆಲವು ಕಡೆ ಫುಟ್ ಪಾತ್ ನಲ್ಲಿ ಅಲ್ಲಲ್ಲಿ ಸ್ಲ್ಯಾಬ್ ಹೋಗಿ ಅವು ಕತ್ತಲಲ್ಲಿ ಜನರನ್ನು ಆಹುತಿ ತೆಗೆದುಕೊಳ್ಳುವ ಹಂತದಲ್ಲಿವೆ. ಅಲ್ಲಿ ಬಳಸಬಹುದು. ಆದರೆ ಇಂಜಿನಿಯರಿಂಗ್ ವಿಭಾಗದವರು ಹಾಗೆ ಮಾಡಲು ಹೋಗುವುದಿಲ್ಲ. ಯಾಕೆಂದರೆ ಹೊಸದು ಮಾಡಿದ್ದಷ್ಟು ಇವರಿಗೆಲ್ಲಾ ಪ್ರಸಾದ ಸಿಗುತ್ತದೆ. ಜನರ ಹಣ ಉಳಿಸಿದರೆ ಏನು ಸಿಗುತ್ತದೆ ಎನ್ನುವ ಧೋರಣೆ!
Leave A Reply