ಮೂಡಬಿದ್ರೆ ದೇವಸ್ಥಾನದ ದಲಿತೆ ವಿವಾದ ಅಸಲಿಯೇತ್ತೇನು??
“ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕರ್ತವ್ಯ ನಿರತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ” ಎನ್ನುವ ವಾಕ್ಯವನ್ನು ವಾಹಿನಿಯೊಂದು ಜನರ ಮುಂದೆ ಇಟ್ಟಿದೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಓದಿದ, ಟಿವಿಯಲ್ಲಿ ನೋಡಿದ ಜನಸಾಮಾನ್ಯರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ ಇಂತಹ ವಾಕ್ಯ ಓದಿ ಅದೇ ಸತ್ಯ ಎಂದು ಅಂದುಕೊಳ್ಳುವ ಮೊದಲು ಅಲ್ಲಿ ನಡೆದಿರುವುದು ಇದೇನಾ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ದಲಿತೆ ಎನ್ನುವ ಕಾರಣಕ್ಕೆ ದೇವಸ್ಥಾನದ ಹೊರಗೆ ಕಳುಹಿಸಿದ್ದರೆ ಮಾತ್ರ ತಪ್ಪು. ಅದು ಬಿಟ್ಟು ಅರ್ಚಕರು ಊಟ ಮಾಡುವ ಕಡೆ ಹೋದಾಗ ನಿಮಗೆ ಬೇರೆ ಕಡೆ ಇದೆ, ಅಲ್ಲಿ ಹೋಗಿ ಹೊರಗಿನ ಅಂಗಣದಲ್ಲಿ ವ್ಯವಸ್ಥೆ ಮಾಡಿದ್ದರೆ ಅದು ತಪ್ಪು ಅಲ್ಲ. ಇನ್ನು ಯಾವುದೇ ವ್ಯಕ್ತಿ ಅದು ಪುರುಷ ಅಥವಾ ಮಹಿಳೆ ಯಾರೇ ಆಗಿರಲಿ ತಾನು ದಲಿತ ಅಥವಾ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಅಥವಾ ಯಾವುದೇ ಜಾತಿ ಎಂದು ಬರೆದು ಅದನ್ನು ಕುತ್ತಿಗೆಗೆ ನೇತು ಹಾಕಿಕೊಳ್ಳುವುದಿಲ್ಲ. ಆದ್ದರಿಂದ ಒಬ್ಬ ವ್ಯಕ್ತಿಯನ್ನು ನೋಡಿದ ಕೂಡಲೇ ಆತ ಇದೇ ಜಾತಿ ಎಂದು ನಿಖರವಾಗಿ ಹೇಳುವುದು ಸಾಧ್ಯವಿಲ್ಲ. ಹಾಗಿರುವಾಗ ಪೊಲೀಸ್ ಸಮವಸ್ತ್ರದಲ್ಲಿರುವ ಪೊಲೀಸ್ ಪೇದೆಯನ್ನು ದಲಿತೆ ಎಂದು ಹೊರಗೆ ಹಾಕುವುದು ಹೇಗೆ ಸಾಧ್ಯ. ಹೀಗೆ ಯಾವುದನ್ನು ಸರಿಯಾಗಿ ವಿಮರ್ಶೆ ಮಾಡದೇ ಯಾರೋ ಹೇಳಿದ್ದು ಅಥವಾ ಕೇಳಿದ್ದು ಕೇವಲ ಟಿಆರ್ ಪಿ ಎನ್ನುವ ಕಾರಣಕ್ಕೆ ನ್ಯೂಸ್ ಅಥವಾ ಲಿಂಕ್ ಶೇರ್, ಲೈಕ್ ಆಗುತ್ತದೆ ಎನ್ನುವ ಕಾರಣಕ್ಕೆ ಬರೆದರೆ ಹೇಗೆ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡಬಿದ್ರೆ ಎನ್ನುವ ತಾಲೂಕು ಇದೆ. ಇಲ್ಲಿ ಕಡಂದಲೆ ಎನ್ನುವ ಊರು ಇದೆ. ಕಡಂದಲೆಯಲ್ಲಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಇದೆ. ಇಲ್ಲಿ ವರ್ಷಪ್ರತಿಯಂತೆ ಷಷ್ಟಿ ಮಹೋತ್ಸವ ನಡೆದಿದೆ. ಇದಕ್ಕೆ ಸುಮಾರು ಹತ್ತು ಸಾವಿರದಷ್ಟು ಭಕ್ತರು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದ್ದಾರೆ. ದೇವಸ್ಥಾನದ ಹೊರಗೆ ವಿಶಾಲವಾದ ಚಪ್ಪರ ಹಾಕಿ ಅಲ್ಲಿ ಸಾರ್ವಜನಿಕರಿಗೆ ಅನ್ನಪ್ರಸಾದ ಬಡಿಸಲಾಗುತ್ತದೆ. ದೇವಳದ ಒಳಗೆ ಅರ್ಚಕರಿಗೆ ಮಾತ್ರ ಬಡಿಸುವ ಸಂಪ್ರದಾಯ ಇದೆ. ಇದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಪೊಲೀಸರನ್ನು ಕೂಡ ಅಗತ್ಯಕ್ಕೆ ಬೇಕಾಗುವಷ್ಟು ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗುತ್ತದೆ. ಹಾಗೆ ಊಟದ ಸಮಯವಾಗಿದ್ದ ಕಾರಣ ಭಕ್ತರು ಊಟ ಸೇವಿಸುತ್ತಿರುವಾಗ ಅಲ್ಲಿ ನಿಂತಿದ್ದ ಮಹಿಳಾ ಪೊಲೀಸ್ ಪೇದೆಯನ್ನು ಯಾರೋ ಸ್ವಯಂಸೇವಕರು “ಇಲ್ಲಿ ಯಾಕೆ ನಿಂತಿದ್ದೀರಿ, ದೇವಸ್ಥಾನದ ಒಳಗೆ ಒಳಗೆ ಹೋಗಿ ಊಟ ಮಾಡಿ” ಎಂದು ಹೋಗುವ ದಾರಿ ತೋರಿಸಿದ್ದಾರೆ. ಸಂಪ್ರದಾಯದ ಅರಿವಿರದೇ ಇದ್ದ ಮಹಿಳಾ ಪೊಲೀಸ್ ಪೇದೆ ಅರ್ಚಕರು ಊಟ ಮಾಡುವ ಕಡೆ ತೆರಳಿದ್ದಾರೆ. ಆಗ ಅಲ್ಲಿ ಊಟ ಬಡಿಸುತ್ತಿದ್ದ ವ್ಯಕ್ತಿಯೊಬ್ಬರು ” ನಿಮಗೆ ಇಲ್ಲಿ ಅಲ್ಲ, ಹೊರಗೆ ಹೋಗಿ” ಎಂದು ಹೇಳಿದ್ದಾರೆ. ಬಹುಶ: ಗಡಿಬಿಡಿಯಲ್ಲಿ ಒಂದಿಷ್ಟು ಜೋರು ಧ್ವನಿಯಲ್ಲಿಯೇ ಹೇಳಿರಬಹುದು. ಆದರೆ ಅಲ್ಲಿ ಅವಮಾನಿಸುವ ಉದ್ದೇಶ ಇರಲೇ ಇಲ್ಲ. ಆದರೆ ಇದರಿಂದ ಏನಾಗಿದೆ ಎಂದರೆ ದಲಿತೆಯನ್ನು ಅವಮಾನಿಸಲಾಗಿದೆ ಎನ್ನುವ ಸುದ್ದಿ ಹರಡಿಸಲಾಗಿದೆ. ದೇವಸ್ಥಾನದಲ್ಲಿ ಒಂದಿಷ್ಟು ಜನ ಬಿಜೆಪಿ ಮತ್ತು ಒಂದಿಷ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದಾರೆ. ದೇವಸ್ಥಾನಕ್ಕೆ ಮತ್ತು ಜಿಲ್ಲೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಒಂದು ಗುಂಪು ದಲಿತೆಗೆ ಅವಮಾನ ಎಂದು ಈ ಘಟನೆಯನ್ನು ಬಿಂಬಿಸಿದ್ದಾರೆ.
ನಿಜಕ್ಕೂ ಇಲ್ಲಿ ಜಾತಿಯ ವಿಷಯ ಬಂದೇ ಇಲ್ಲ. ಆದರೆ ಕೆಲವು ಕುತಂತ್ರಿಗಳ ಸಂಚಿನಿಂದ ಜಿಲ್ಲೆಯ ಹೆಸರು ಹಾಳು ಮಾಡುವ ಉದ್ದೇಶದಲ್ಲಿ ಅವರು ಪ್ರಯತ್ನಶೀಲರಾಗಿದ್ದರು. ಅದನ್ನೇ ಕೆಲವು ಪತ್ರಕರ್ತರು ತಪ್ಪು ತಪ್ಪಾಗಿ ಬಿಂಬಿಸಿ ನ್ಯೂಸ್ ಮಾಡಿದ್ದಾರೆ!!
Leave A Reply