ಪೊಲೀಸರೇ ಕಲ್ಲು ಕೊಟ್ಟು ಹೊಡೆಸಿಕೊಂಡರು ಎಂದು ಹೇಳುವುದು ಮಾತ್ರ ಬಾಕಿ!!
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಹೊರಗೆ ದಬ್ಬಲ್ಪಟ್ಟ ಒಬ್ಬನೇ ಒಬ್ಬ ನಾಗರಿಕ ಇದ್ದಾನಾ ಎಂದು ಪ್ರತಿಭಟನೆ ಮಾಡುತ್ತಿರುವವರಲ್ಲಿ ಕೇಳಿ. ಇಲ್ಲ ಎನ್ನುತ್ತಾರೆ. ಈ ಕಾಯ್ದೆಯಿಂದ ಭಾರತದಲ್ಲಿ ಹುಟ್ಟಿ, ಬೆಳೆದ ಯಾವುದಾದರೂ ಮುಸ್ಲಿಮರಿಗೆ ಇವತ್ತು ಅಥವಾ ಮುಂದೆ ಯಾವತ್ತಾದರೂ ತೊಂದರೆ ಆಗುತ್ತದೆ ಎನ್ನುವ ಗ್ಯಾರಂಟಿ ಇದೆಯಾ ಎಂದು ಕೇಳಿ. ಪ್ರತಿಭಟನಾಕಾರರು ಇಲ್ಲ ಎನ್ನುತ್ತಾರೆ. ಹಾಗಾದರೆ ಭಾರತದ ರೈಲು, ಬಸ್ಸು, ಸೊತ್ತುಗಳು ನಿಮಗೆ ಏನು ತೊಂದರೆ ಕೊಟ್ಟವು ಎಂದು ಅದನ್ನು ಸುಟ್ಟು ಹಾಕುತ್ತಿದ್ದೀರಿ ಎಂದು ಕೇಳಿ. ಉತ್ತರ ” ಮುಂದೆ ಮುಸಲ್ಮಾನರಿಗೆ ಏನಾದರೂ ತೊಂದರೆ ಆಗಬಹುದು” ಎನ್ನುವ ಉತ್ತರ ಬಂದರೂ ಬರಬಹುದು. ಸರಿಯಾಗಿ ನೋಡಿದರೆ ಈ ಉತ್ತರದಲ್ಲಿಯೇ ಗ್ಯಾರಂಟಿ ಇಲ್ಲ. ಆದರೂ ಮೋದಿ ಸರಕಾರ ಮುಸ್ಲಿಮರಿಗೆ ಏನೋ ಮಾಡಲಿದೆ ಎನ್ನುವ ಆತಂಕವನ್ನು ಹಬ್ಬಿಸುವ ಷಡ್ಯಂತ್ರ ನಡೆಸಲಾಗುತ್ತಿದೆ. ಇನ್ನು ದೆಹಲಿ ಪೊಲೀಸರು ಕೂಡ ಮೋದಿ ಸರಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಂಬಿಸುವ ಕೆಲಸ ದೆಹಲಿಯ ಆಪ್ ಸರಕಾರ ಮಾಡುತ್ತಿದೆ. ಅವರ ಪ್ರಕಾರ ದೆಹಲಿಯಲ್ಲಿ ಬಸ್ಸುಗಳಿಗೆ ಬೆಂಕಿ ಕೊಟ್ಟಿರುವುದು ಸ್ವತ: ಪೊಲೀಸರು. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾಧ್ಯಮಗಳಲ್ಲಿ ಇದೇ ಮಾತನ್ನು ಹೇಳುತ್ತಾ ಬರುತ್ತಿದ್ದಾರೆ. ಅದಕ್ಕೆ ಸರಿಯಾಗಿ ಅವರಿಗೆ ಬೇಕಾಗಿರುವವರು ಸೋಶಿಯಲ್ ಮಿಡಿಯಾಗಳಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಕ್ಯಾನ್ ತೆಗೆದುಕೊಂಡು ಹೋಗಿ ಅದನ್ನು ಬಸ್ಸಿನ ಒಳಗೆ ಸುರಿಯುತ್ತಿರುವ ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಕೆಲವು ಟಿವಿ ಚಾನೆಲ್ ಗಳಲ್ಲಿ ಅದನ್ನೇ ನಿಜವೆಂದು ತೋರಿಸಲಾಗುತ್ತಿದೆ. ಈ ಮೂಲಕ ಪೊಲೀಸರೇ ಬಸ್ಸಿಗೆ ಬೆಂಕಿ ಕೊಟ್ಟಿದ್ದಾರೆ ಎಂದು ಬಿಂಬಿಸಲಾಗುತ್ತಿದೆ.
ವಾಸ್ತವ ಏನೆಂದರೆ ದೆಹಲಿಯಲ್ಲಿ ಪ್ರತಿಭಟನಾಕಾರರು ಬಸ್ಸಿನ ಸೀಟುಗಳಿಗೆ ಬೆಂಕಿ ಹಚ್ಚಿಬಿಟ್ಟಿದ್ರು. ಅದನ್ನು ನಂದಿಸಲು ಪೊಲೀಸ್ ಸಿಬ್ಬಂದಿಯೊಬ್ಬರು ಕ್ಯಾನ್ ನಲ್ಲಿ ನೀರು ತೆಗೆದುಕೊಂಡು ಹೋಗಿ ಸುರಿಯುತ್ತಿದ್ದರು. ಆದರೆ ದೆಹಲಿ ಡಿಸಿಎಂ ಅದನ್ನು ಪೆಟ್ರೋಲ್ ಸುರಿಯುತ್ತಿದ್ದಾರೆ ಎನ್ನುವಂತೆ ಹೇಳಿಬಿಡುತ್ತಿದ್ದಾರೆ. ಹೀಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸುಳ್ಳು ಸುದ್ದಿ, ಕಲ್ಪಿತ ಕಥೆಗಳನ್ನು ಹೇಳುವುದರಿಂದ ಗಲಭೆ ಜಾಸ್ತಿಯಾಗುತ್ತದೆ ವಿನ: ಕಡಿಮೆಯಾಗುವುದಿಲ್ಲ.
ಇಲ್ಲಿಯ ತನಕ ಪ್ರತಿಭಟನಾಕಾರರು ಸುಟ್ಟಿರುವ ರೈಲು ಬೋಗಿಗಳನ್ನು, ಬಸ್ಸುಗಳನ್ನು, ರೈಲ್ವೆ ನಿಲ್ದಾಣಗಳನ್ನು ಲೆಕ್ಕ ಹಾಕಿದರೆ ಅದೆಷ್ಟು ಕೋಟಿ ನಷ್ಟ ಎಂದು ಲೆಕ್ಕ ಯಾರಿಗೆ ಸಿಗುತ್ತೆ. ಅದನ್ನು ಮತ್ತೆ ನಮ್ಮ ನಿಮ್ಮ ತೆರಿಗೆಯ ಹಣದಿಂದಲೇ ಸರಿ ಮಾಡಬೇಕು. ಅದು ಬಿಟ್ಟು ನಷ್ಟವನ್ನು ಪ್ರತಿಭಟನಾಕಾರರು ತುಂಬಿಕೊಡುತ್ತಾರಾ?
ಇನ್ನು ಗಲಭೆ ಜಾಸ್ತಿ ಆಗಲಿ ಎನ್ನುವ ಕಾರಣಕ್ಕೆ ಮಂಗಳೂರಿನಲ್ಲಿಯೂ ಕೆಲವು ಸಂಘಟನೆಗಳು ಅನಾವಶ್ಯಕ ಪ್ರತಿಭಟನೆ ಮಾಡುತ್ತಿವೆ. ತಮ್ಮ ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಕೂಡ ಪಡೆಯುತ್ತಿಲ್ಲ. ಸುಮ್ಮನೆ ಮುಖ್ಯರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆ ಮಾಡುವುದು, ರಸ್ತೆ ತಡೆ ಮಾಡುವುದು, ರಸ್ತೆ ಜಾಮ್ ಮಾಡುವುದು ಮಾಡುತ್ತಲೇ ಬರುತ್ತಿದ್ದಾರೆ. ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸರು ಸೂಕ್ತ ಕ್ರಮ ಕೈಗೊಂಡರೆ ಲಾಠಿಚಾರ್ಜ್ ಎನ್ನುತ್ತಾರೆ. ಇನ್ನು ದೆಹಲಿಯಲ್ಲಿ ಆಮ್ ಆದ್ಮಿಗೆ ಮತ್ತು ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿಗೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಯನ್ನು ವಿರೋಧಿಸುವುದು ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ಅದರೊಂದಿಗೆ ಕಾಂಗ್ರೆಸ್ಸಿನಲ್ಲಿರುವ ಕೆಲವು ಮುಖಂಡರಿಗೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲು ಈ ಪ್ರತಿಭಟನಾ ನಾಟಕ ಬೇಕಾಗಿದೆ. ಅದು ಬಿಟ್ಟರೆ ಅವರನ್ನು ಸೇರಿಸಿ ಎಲ್ಲರಿಗೂ ಗೊತ್ತು, ಪ್ರತಿಭಟನೆ ಮಾಡುತ್ತಿರುವವರಿಗೆ ಮೋದಿಯನ್ನು ವಿರೋಧ ಮಾಡುವುದು ಬಿಟ್ಟು ಬೇರೆ ಏನೂ ಬೇಕಾಗಿಲ್ಲ. ಆದ್ದರಿಂದ ಪೊಲೀಸರನ್ನು ಪ್ರತಿಭಟನಾಕಾರರು ಕಲ್ಲಿನಿಂದ ಹೊಡೆದರೂ ಪೊಲೀಸರೇ ಕಲ್ಲು ಕೊಟ್ಟು ಹೊಡೆಸಿಕೊಂಡರು ಎಂದು ಹೇಳಲು ಮೋದಿ ವಿರೋಧಿಗಳು ಹಿಂಜರಿಯಲಿಕ್ಕಿಲ್ಲ!
Leave A Reply