ಬಿಜೆಪಿ ಮುಖಂಡರೇ ಸಿಎಎ ವಿರೋಧಿಗಳ ಮನೆಮನೆ ಭೇಟಿ ಮಾಡಿ!!
ನಿರೀಕ್ಷೆಯಂತೆ ಭಾರತೀಯ ಜನತಾ ಪಾರ್ಟಿಯ ಕೇಂದ್ರೀಯ ನಾಯಕತ್ವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜನರಿಗೆ ಅರ್ಥವಾಗುವಂತೆ ತಿಳಿಸಿ ಎಂದು ದೇಶಾದ್ಯಂತ ಇರುವ ತನ್ನ ನಾಯಕರಿಗೆ ಸೂಚನೆ ನೀಡಿದೆ. ಅವರು ಹಾಗೆ ಹೇಳಿದ್ದೇ ತಡ ಇಲ್ಲಿ ಮನೆಮನೆಗೆ ಭೇಟಿ, ಸಿಎಎ ಬಗ್ಗೆ ಜಾಗೃತಿ ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದಿಷ್ಟು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಆಯ್ದ ಮನೆಗಳಿಗೆ ಹೋಗಿ ಅವರಿಗೆ ಕರಪತ್ರವೊಂದನ್ನು ಕೊಟ್ಟು ಕೈ ಮುಗಿದು ಫೋಟೋಗೆ ಪೋಸ್ ಕೊಟ್ಟು ಬರುತ್ತಿದ್ದಾರೆ.
ನಾನು ಹೇಳುವುದಾದರೆ ಇದರಿಂದ ಏನು ಸಾಧಿಸಿದಂತೆ ಆಗುವುದಿಲ್ಲ. ಹೆಚ್ಚೆಂದರೆ ಬಿಜೆಪಿ ಮುಖಂಡರಿಗೆ ತಮ್ಮ ಕಾಯ್ದೆಯ ಬಗ್ಗೆ ಪೂರ್ಣ ವಿಶ್ವಾಸ ಇದೆ ಎನ್ನುವ ಮಾಹಿತಿ ಹೋಗಬಹುದೇ ವಿನ: ಬೇರೆನೂ ಆಗುವುದಿಲ್ಲ. ಇಲ್ಲಿ ಮೊದಲು ನೋಡಬೇಕಾಗಿರುವುದು ಸಿಎಎ ಎನ್ನುವ ವಿಷಯಕ್ಕೆ ಯಾಕೆ ವಿರೋಧ ಬಂದಿದೆ ಮತ್ತು ಯಾಕೆ ಬಂದಿದೆ ಎನ್ನುವ ಕಾರಣ ಹುಡುಕಬೇಕು. ಈ ವಿಚಾರದ ಬಗ್ಗೆ ನಾಲ್ಕು ಕ್ಯಾಟಗರಿ ಮಾಡೋಣ. ಮೊದಲನೇಯದಾಗಿ ಪ್ರಧಾನಿ ನರೇಂದ್ರ ಮೋದಿಯವರು ಏನು ಮಾಡಿದರೂ ಅದು ದೇಶದ ಒಳ್ಳೆಯದಕ್ಕೆ ಮಾಡುತ್ತಾರೆ ಎನ್ನುವ ಧೈರ್ಯ, ವಿಶ್ವಾಸ ಇರುವರು ಪ್ರತಿಭಟನೆ ಮಾಡುವುದಿಲ್ಲ. ಅವರಿಗೆ ಸಿಎಎ ಎಂದಲ್ಲ, ಏನು ಮಾಡಿದರೂ ಮೋದಿ ಜೈ ಎಂದು ಹೇಳಿಯೇ ಅಭ್ಯಾಸ. ಅವರಿಗೆ ಕರೆದು ಕಾರ್ಯಾಗಾರ ಮಾಡಿ ಅಂತವರೇ ಹೆಚ್ಚಿರುವ ಏರಿಯಾಗಳಿಗೆ ಹೋಗಿ ಫೋಟೋ ತೆಗೆದರೆ ಅದರಿಂದ ಮೋದಿ ಸರಕಾರಕ್ಕೆ ಆಗುವ ಪ್ರಯೋಜನ ಏನೂ ಇಲ್ಲ. ಇನ್ನು ಎರಡನೇಯ ಕ್ಯಾಟಗರಿ ಯಾರೆಂದರೆ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದವರು. ಅವರು ಬಿಜೆಪಿಯ ಪೂರ್ಣ ಪ್ರಮಾಣದ ಹಿತೈಷಿಗಳೇ ಆಗಬೇಕಾಗಿಲ್ಲ. ಅಂತವರು ಇಂತಹ ವಿವಾದಾತ್ಮಕ ಕಾಯಿದೆ ಬಂದ ಕೂಡಲೇ ಅದನ್ನು ಅಧ್ಯಯನ ಮಾಡುವ ಪ್ರಯತ್ನ ಮಾಡುತ್ತಾರೆ. ಅವರು ಒಂದು ಸಲ ಅರ್ಥ ಮಾಡಿಕೊಂಡರೆ ಮುಗಿಯಿತು. ಅವರು ನಾಲ್ಕು ಜನರಿಗೆ ಹೇಳಿ ಅರ್ಥ ಮಾಡಿಸುತ್ತರೆ. ಅವರು ಪ್ರತಿಭಟನೆಗೆ ಹೋಗುವುದಿಲ್ಲ. ಅಂತವರ ಮನೆಮನೆಗೆ ಹೋಗುವುದು ಕೇವಲ ಔಪಚಾರಿಕವಾಗಿ ಉಳಿಯುತ್ತೆ ವಿನ: ಎಗೈನ್ ನೋ ಯೂಸ್. ಮೂರನೇ ಕ್ಯಾಟಗರಿ ಯಾವುದೋ ನಾಯಕರ ಮಾತಿಗೆ ಮರುಳಾಗಿ ಸಿಎಎ ಬಗ್ಗೆ ಪ್ರತಿಭಟನೆ ಮಾಡಲು ಇಳಿದವರು. ಅವರಿಗೆ ಸಿಎಎ ಬಗ್ಗೆ ಆತಂಕ ಇದೆ. ಅವರಿಗೆ ಕಾಂಗ್ರೆಸ್, ಎಡಪಕ್ಷಗಳು ಒಂದಿಷ್ಟು ಗಾಳಿ ಹಾಕಿದರೆ ಪ್ರತಿಭಟನೆಗೆ ಇಳಿಯುತ್ತಾರೆ. ಇನ್ನು ಕೊನೆಯ ಮತ್ತು ನಾಲ್ಕನೇ ಕ್ಯಾಟಗರಿ ನೀವು ಏನು ಮಾಡಿದರೂ ಇಂತವರು ಪ್ರತಿಭಟನೆ ಮಾಡದೇ ಸುಮ್ಮನೆ ಬಿಡುವವರಲ್ಲ. ಅವರು ಒಂದು ರೀತಿಯಲ್ಲಿ ಮಲಗಿದಂತೆ ನಟಿಸುವವರು. ಅವರಿಗೆ ನೀವು ಏನು ಭೋದನೆ ಮಾಡಿದರೂ ಅವರು ಪ್ರತಿಭಟನೆ ಮಾಡುವುದು ಗ್ಯಾರಂಟಿ. ಅಂತವರನ್ನು ನೀವು ಏನು ಮಾಡಲಿಕ್ಕೆ ಆಗುವುದಿಲ್ಲ. ಈಗ ಬಿಜೆಪಿ ಮುಖಂಡರು ಮನೆಮನೆ ಭೇಟಿಯಲ್ಲಿ ಮನವರಿಕೆ ಮಾಡಬೇಕಾಗಿರುವುದು ಮೂರನೇ ಕ್ಯಾಟಗರಿಯವರನ್ನ ಅಂದರೆ ಗೋಡೆಯ ಮೇಲೆ ಕುಳಿತು ಸಿಎಎ ಬಗ್ಗೆ ದ್ವಂದ್ವತೆ ಇದ್ದು ಆತಂಕ ವ್ಯಕ್ತಪಡಿಸುವ ಯುವಕರನ್ನ.
ಅದನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರಾ? ನಿಮ್ಮದೇ ಕ್ಷೇತ್ರದಲ್ಲಿ ನೀವು ಹುಲಿಗಳು. ನಿಮಗೆ ವೋಟ್ ಕೊಟ್ಟು ಗೆಲ್ಲಿಸಿದವರ ನಾಲ್ಕು ಮನೆಗಳಿಗೆ ಹೋಗಿ ಕೈ ಮುಗಿದರೆ ಅವರು ಯಾವುದಕ್ಕೆ ಬಂದಿದ್ದಿರಿ ಎಂದು ಕೂಡ ಕೇಳುವುದಿಲ್ಲ. ಅಂತವರಿಗೆ ಹೋಗಿ ಸಿಎಎ ಬಗ್ಗೆ ಏನು ಹೇಳುವುದು. ನಾನು ಹೇಳುವುದಾದರೆ ಎಲ್ಲಿ ಮೂರನೇ ಕ್ಯಾಟಗರಿಯವರು ಜಾಸ್ತಿ ಇದ್ದಾರೆ, ಅಲ್ಲಿ ಹೋಗಿ ಮನೆಮನೆ ಭೇಟಿ ಮಾಡುವ ಕಾರ್ಯಕ್ರಮವನ್ನು ಹಾಕಬೇಕು. ದೊಡ್ಡ ದೊಡ್ಡ ಸಭೆಗಳಿಗಿಂತ ಕಾರ್ನರ್ ಮೀಟಿಂಗ್ ಗಳಿಗೆ ಆದ್ಯತೆ ಕೊಡಬೇಕು. ಉದಾಹರಣೆಗೆ ಈ ತಿಂಗಳು ಕೇಂದ್ರದ ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಬಂದು ಅವರದ್ದೇ ಪಕ್ಷದವರ ಮುಂದೆ ಮಾತನಾಡಿ ನಾಲ್ಕು ಚಪ್ಪಳೆ ಹೊಡೆಸಿ ಪೊಲೀಸ್ ಇಲಾಖೆಗೆ ಎರಡು ದಿನ ಟೆನ್ಷನ್ ಕೊಡುವುದಕ್ಕಿಂತ ಉಳ್ಳಾಲದಂತಹ ಏರಿಯಾದಲ್ಲಿ ನಾಲ್ಕು ಕಾರ್ನರ್ ಮೀಟಿಂಗ್ ಮಾಡಲಿ. ಉಳ್ಳಾಲದ ಜನರಿಗೆ ಪಾಪ ಯಾವಾಗ ನೋಡಿದರೂ ದಾರಿ ತಪ್ಪಿಸುವ ಭಾಷಣ ನೋಡಿ ನೋಡಿ ಸಾಕಾಗಿದೆ. ಅಂತಹ ಕಡೆ ಐದೈದು ಸಾವಿರ ಜನ ಸೇರುವ ನಾಲ್ಕು ಕಾರ್ಯಕ್ರಮ ಮಾಡಿ ಬಂದವರಿಗೆ ಗೃಹ ಸಚಿವರೊಂದಿಗೆ ಸಂವಾದ ಮಾಡುವ ಅವಕಾಶ ಕೂಡ ಕೊಡಲಿ. ಪ್ರಭಾವಿ ಮುಸ್ಲಿಂ ಮುಖಂಡರು ನಿಜಕ್ಕೂ ಸಿಎಎ ಬಗ್ಗೆ ಆತಂಕ ಇರುವ ಯುವಕರನ್ನು ಕರೆದುಕೊಂಡು ಬಂದು ಅವರಿಂದ ಬೇಕಾದರೆ ಪ್ರಶ್ನೆ ಕೇಳಿಸಲಿ. ನಿಜಕ್ಕೂ ಅನುಮಾನ ಇದ್ದರೆ ಅದನ್ನು ಅಮಿತ್ ಶಾ ಹೋಗಲಾಡಿಸಲಿ.
ಅದರೊಂದಿಗೆ ರಾಜ್ಯ ಮುಖಂಡರು ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮನೆಮನೆ ಭೇಟಿ ಕೊಡುವ ನಾಯಕರಿಗೆ ಮುಖ್ಯವಾಗಿ ಮೂರನೇ ಕ್ಯಾಟಗರಿ ಜನರನ್ನೇ ಆಯ್ದುಕೊಂಡು ಮನವರಿಕೆ ಮಾಡಿಕೊಡಲು ಹೇಳಲಿ. ನೀವು ನಿಮ್ಮದೇ ಮತಬ್ಯಾಂಕಿನ ಇಪ್ಪತ್ತು ಮನೆಗಳಿಗೆ ಹೋಗಿ ಬರುವುದಕ್ಕಿಂತ ಸಿಎಎ ಬಗ್ಗೆ ವಿರೋಧ ಮಾಡುತ್ತಿರುವ ಮೂರು ಮನೆಗಳಿಗೆ ಹೋಗುವುದು ಹೆಚ್ಚು ಪ್ರಯೋಜನಕಾರಿ. ಬಿಜೆಪಿ ನಾಯಕರು ನಾನು ಹೇಳಿದ ವಿಷಯದ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ!
Leave A Reply