ನೀವು ಈ ಬಾರಿ ಮನೆ ತೆರಿಗೆ ಕಟ್ಟಲು ಹೋಗುವಾಗ ಕಸ ತೆರಿಗೆ ಜಾಸ್ತಿಯಾಗಿರುವುದು ಅನುಭವಕ್ಕೆ ಬರಲಿದೆ. ಹಿಂದೆ ಎಷ್ಟಿತ್ತು ಎನ್ನುವುದನ್ನು ನಿಮಗೆ ವಿವರಿಸುತ್ತೇನೆ. ನೀವು ಐನೂರು ಚದರ ಅಡಿ ಅಳತೆಯ ಮನೆಯಲ್ಲಿ ವಾಸಿಸುವರಾದರೆ ನಿಮಗೆ ವರ್ಷಕ್ಕೆ 15 ರೂಪಾಯಿ ಕಟ್ಟಬೇಕಾಗಿತ್ತು. ನೀವು ಆ ಮನೆಯಲ್ಲಿ ಒಬ್ಬರೇ ಇರಲಿ ಅಥವಾ ನಾಲ್ಕು ಜನ ಇರಿ ಅದು ಪಾಲಿಕೆಗೆ ಸಂಬಂಧವೇ ಇರಲಿಲ್ಲ. ಕೆಲವು ಮನೆಗಳಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರೂ ಕೆಲವು ಮನೆಗಳಲ್ಲಿ ಗಂಡ, ಹೆಂಡತಿ, ಅತ್ತೆ, ಮಾವ, ಇಬ್ಬರು ಮಕ್ಕಳು ಇದ್ದರೂ ಕಟ್ಟಬೇಕಾದ ಮೊತ್ತ ಒಂದೇ ಇತ್ತು. ಅದು ಬೇರೆ ವಿಷಯ. 500 ರಿಂದ 1000 ಚದರ ಅಡಿವರೆಗೆ 30 ರೂಪಾಯಿ, 1000 ದಿಂದ 1500 ಚದರ ಅಡಿವರೆಗೆ 50 ರೂಪಾಯಿ ಕಟ್ಟಬೇಕಾಗುತ್ತಿತ್ತು. ಆದರೆ ಈ ಬಾರಿ ನೀವು 2020-2021 ನೇ ಸಾಲಿನ ಮನೆತೆರಿಗೆಯೊಂದಿಗೆ ಕಟ್ಟಬೇಕಾಗಿರುವ ಕಸ ತೆರಿಗೆ ಮೂರುವರೆ ಪಾಲು ಹೆಚ್ಚಾಗಿದೆ. ಐನೂರು ಚದರ ಅಡಿ ಇರುವ ಮನೆಯವರು ಐವತ್ತು ರೂಪಾಯಿ ಕಟ್ಟಬೇಕಾಗಿ ಬರುತ್ತಿದೆ. ಹಾಗೇ 500 ರಿಂದ 1000 ಚದರ ಅಡಿ ಇರುವ ಮನೆಯವರು ನೂರು ರೂಪಾಯಿ ಕಟ್ಟಬೇಕಾಗಿ ಬರುತ್ತಿದೆ. ನಿಮಗೆ ಈಗ ಅನಿಸುತ್ತಾ ಇರಬಹುದು. ಭಾರತೀಯ ಜನತಾ ಪಾರ್ಟಿಯವರು ಅಧಿಕಾರಕ್ಕೆ ಬಂದ ಕೂಡಲೇ ಏಕಾಏಕಿ ಕಸ ತೆರಿಗೆಯನ್ನು ಜಾಸ್ತಿ ಮಾಡಿಬಿಟ್ಟರು ಎನ್ನುವ ಅಭಿಪ್ರಾಯ ಎಲ್ಲಾ ಕಡೆ ವ್ಯಕ್ತವಾಗುವ ಸಾಧ್ಯತೆ ಇದೆ. ಅದಕ್ಕೆ ಸತ್ಯಾಂಶ ಗೊತ್ತಾಗಲಿ ಎನ್ನುವ ಕಾರಣಕ್ಕೆ ಇಲ್ಲಿ ವಿಷಯ ಸ್ಪಷ್ಟಪಡಿಸುತ್ತಿದ್ದೇನೆ. ಕಸ ತೆರಿಗೆ ಏರಿಸಿರುವುದು ಬಿಜೆಪಿ ಅಲ್ಲವೇ ಅಲ್ಲ. ಯಾಕೆಂದರೆ ಬಿಜೆಪಿ ಇನ್ನು ಪಾಲಿಕೆಯಲ್ಲಿ ಅಧಿಕಾರ ಸ್ವೀಕರಿಸಿಲ್ಲ. ಇದನ್ನು ಹೆಚ್ಚಿಸಿರುವುದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ 2019 ರಲ್ಲಿ ಇದ್ದ ಕಾಂಗ್ರೆಸ್ ಆಡಳಿತದ ಸರಕಾರ. 2019 ರ ಫೆಬ್ರವರಿಯಲ್ಲಿ ಇನ್ನೇನೂ ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವಷ್ಟರಲ್ಲಿ ಕಾಂಗ್ರೆಸ್ಸಿನವರು ಕಸ ತೆರಿಗೆಯನ್ನು ಹೆಚ್ಚಿಸಿಬಿಟ್ಟರು. ಅದು ಕೂಡ 15 ರೂಪಾಯಿಯಿಂದ ಐವತ್ತು ರೂಪಾಯಿಗೆ ಮತ್ತು 30 ರೂಪಾಯಿಯಿಂದ ನೇರವಾಗಿ ನೂರು ರೂಪಾಯಿಗೆ. ಆದರೆ ಕಾಂಗ್ರೆಸ್ಸಿವರು ಬುದ್ಧಿವಂತರು. ತಾವು ತೆರಿಗೆ ಹೆಚ್ಚಿಸಿದ್ದು ಜನರಿಗೆ ಗೊತ್ತಾಗಿ ಚುನಾವಣಾ ವರ್ಷದಲ್ಲಿ ಅದು ತಮ್ಮ ಸೋಲಿಗೆ ನಾಂದಿ ಹಾಡುತ್ತೆ ಎಂದು ಗ್ಯಾರಂಟಿ ಇದ್ದ ಕಾರಣ ಆ ವರ್ಷ ಜಾರಿಗೆ ತರಲು ಹೋಗಿರಲಿಲ್ಲ. ತಡೆ ಹಿಡಿದುಕೊಂಡರು. ನಂತರ ಚುನಾವಣೆ ನಡೆದು ಕಾಂಗ್ರೆಸ್ ಸೋತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ವರ್ಷದಿಂದ ಆ ಪರಿಷ್ಕೃತ ಕಸ ತೆರಿಗೆ ಕೂಡ ಹೆಚ್ಚಾಗಲಿದೆ.
ಪಾಲಿಕೆಯಲ್ಲಿ ಕೇಳಿದ್ರೆ ನಾವು ತಿಂಗಳಿಗೆ ಎರಡು ಕೋಟಿಯಷ್ಟು ತ್ಯಾಜ್ಯ ಸಂಗ್ರಹಣಾ ಕಾರ್ಯಕ್ಕೆ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ ಹಣ ಪಾವತಿಸಬೇಕಾಗುತ್ತದೆ. ಆದ್ದರಿಂದ ಜನರ ಮೇಲೆ ಕಸ ತೆರಿಗೆಯನ್ನು ಹೆಚ್ಚಿಸಿದ್ದೇವೆ ಎಂದು ಹೇಳುತ್ತಾರೆ. ಇವರು ಎರಡು ಕೋಟಿಯಷ್ಟು ಕೊಡುವುದು ಅವರ ಮತ್ತು ಆಂಟೋನಿಯವರ ನಡುವಿನ ಒಪ್ಪಂದ. ಹತ್ತು ರೂಪಾಯಿ ಕೆಲಸಕ್ಕೆ ಇವರು ನೂರು ರೂಪಾಯಿ ಕೊಡುತ್ತಾರೆ ಎಂದು ಅದಕ್ಕೆ ಜನ ತಲೆ ಕೊಡಲು ಆಗುತ್ತದೆಯಾ? ಅಷ್ಟಕ್ಕೂ ಇವರು 2 ಕೋಟಿ ಕೊಡುವುದರಿಂದ ಆಗಿರುವ ಮಹಾ ಸಾಧನೆ ಯಾವುದು? 160 ರಸ್ತೆ ಗುಡಿಸುವವರು ಇರಬೇಕಾದ ಕಡೆಯಲ್ಲಿ ಇವರ ಬಳಿ ಆರು ಜನರಿದ್ದಾರೆ. ಯಾವ ರಸ್ತೆಗಳನ್ನು ಇವರು ಸಮರ್ಪಕವಾಗಿ ಗುಡಿಸುತ್ತಾರೆ. ಯಾವ ರಸ್ತೆಗಳಿಂದ ಸರಿಯಾಗಿ ಕಸ ತೆಗೆದುಕೊಂಡು ಹೋಗುತ್ತಾರೆ. ಯಾವ ಒಂದು ಮೀಟರ್ ಚರಂಡಿಯನ್ನು ಇವರು ಸ್ವಚ್ಚ ಮಾಡುತ್ತಾರೆ ಎನ್ನುವುದನ್ನು ಪಾಲಿಕೆ ಅಧಿಕಾರಿಗಳು ನೋಡುತ್ತಾರಾ? ಎರಡು ಕೋಟಿ ಕೊಡಲು ಇದೆ ಎಂದು ಜನರಿಂದ ಸುಲಿಗೆ ಮಾಡುವುದು ಸರಿನಾ? ಯಾಕೋ ಬಿಜೆಪಿಯವರು ಅಧಿಕಾರಕ್ಕೆ ಬಂದ ಕೂಡಲೇ ತಾವು ಮಾಡದ ತಪ್ಪಿಗೆ ಜನರಿಂದ ಕೇಳುವ ಸ್ಥಿತಿ ಬಂದು ಒದಗಿದೆ. ನೀರಿನ ದರ, ಕಸ ತೆರಿಗೆ ಎರಡೂ ಏರಿಸಿದ್ದು ಯಾರೋ, ಕೇಳಬೇಕಾದ್ದು ಯಾರೋ. ಒಟ್ಟಿನಲ್ಲಿ ಜನ ಈ ಬಗ್ಗೆ ಪ್ರಶ್ನಿಸಬೇಕಾಗಿದೆ. ಸರಿಯಾಗಿ ತ್ಯಾಜ್ಯಗಳನ್ನು ತೆಗೆದುಕೊಂಡು ಹೋಗಿ ತಮ್ಮ ರಸ್ತೆ ಸ್ವಚ್ಚವಾಗಿಡುವ ಕೆಲಸ ಮಾಡಿದರೆ ಆಗ ಜನ ಹಣ ಕೊಡಲು ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದರೆ ನಾವು ಮನೆಕೆಲಸದವರಿಗೆ ಜೋರು ಮಾಡಲ್ವಾ? ಹಾಗೆ ಇಲ್ಲೂ ಮಾಡಬೇಕಿದೆ. ಆಗುತ್ತಾ ?
Leave A Reply