
ಫೆಬ್ರವರಿ 14 ಪ್ರೇಮಿಗಳ ದಿನ ಎನ್ನುವುದನ್ನು ನಮ್ಮ ಮನಸ್ಸಿನಿಂದ ಅಳಿಸಿಹಾಕಿ ಫುಲ್ವಾಮಾ ಹುತಾತ್ಮರ ದಿನ ಎಂದು ನೆನಪಿಸಿಕೊಳ್ಳಬೇಕಾದ ಅಗತ್ಯ ಇದೆ. ಫೆಬ್ರವರಿ 14 ರಂದು ಯುವಕ, ಯುವತಿಯರು ಬೀಚ್, ಪಾರ್ಕ್, ಪಬ್, ಮಾಲ್ ಗಳಲ್ಲಿ ಸುತ್ತುವ ಬದಲು ಅದೇ ಹಣದಲ್ಲಿ ವೀರ ಯೋಧರ ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ಜ್ಞಾನವನ್ನು ಸಂಪಾದಿಸಬಹುದು. ಒಂದು ವೇಳೆ ಪುಸ್ತಕ ಖರೀದಿಸಲು ಮನಸ್ಸಿಲ್ಲದಿದ್ದರೆ ಸುತ್ತಾಡಿ ವ್ಯರ್ಥ ಮಾಡುವ ಸಮಯವನ್ನು ಲೈಬ್ರರಿಯಲ್ಲಿ ಯೋಧರ ಬಗ್ಗೆ ಇರುವ ಪುಸ್ತಕಗಳನ್ನು ಓದುವ ಮೂಲಕ ಕಳೆಯಬಹುದು. ಇನ್ನು ಒಂದಿಷ್ಟು ದೊಡ್ಡ ಮನಸ್ಸಿದ್ದರೆ ನಿಮ್ಮ ಊರಿನಲ್ಲಿಯೇ ಇರುವ ಯಾವುದಾದರೂ ಯೋಧರ ಮನೆಗೆ ಹೋಗಿ ಅಲ್ಲಿ ಅವರೊಂದಿಗೆ ಒಂದಿಷ್ಟು ಹೊತ್ತು ಕಳೆದು ಅವರಿಗೂ ನೆಮ್ಮದಿ ತರಬಹುದು. ಇದೆಲ್ಲ ಮಾಡುವುದರಿಂದ ನಿಮ್ಮ ಮನಸ್ಸಿಗೆ ನಿಜಕ್ಕೂ ಖುಷಿಯಾಗುತ್ತದೆ. ಅದರ ಬದಲು ಇವತ್ತು ಯಾವ ಬಣ್ಣದ ಡ್ರೆಸ್ ಹಾಕುವುದು, ಕೆಂಪು ಹಾಕಿದರೆ ಲವ್ ಆಗಿದೆ ಎಂದು ಸಂದೇಶಾನಾ, ಹಳದಿ ಹಾಕಿದರೆ ಏನು, ಹಸಿರು ಹಾಕಿದ್ರೆ ಅವನು ಅಥವಾ ಅವಳು ಎನು ಅಂದುಕೊಳ್ಳುತ್ತಾಳೆ, ಗ್ರೀಟಿಂಗ್ ಕಾರ್ಡ್ ಯಾವುದು ತೆಗೆದುಕೊಳ್ಳುವುದು, ಯಾವ ಅಂಗಡಿಯಲ್ಲಿ ಒಳ್ಳೆಯದು ಸಿಗುತ್ತೆ ಎಂದು ಯೋಚಿಸುತ್ತಾ ಕುಳಿತರೆ ಅದರಿಂದ ನಾವು ಸಾಧಿಸುವುದು ಏನೂ ಇಲ್ಲ. ಇನ್ನು ಫೇಸ್ ಬುಕ್, ವಾಟ್ಸಪ್ ಗಳಲ್ಲಿ ನೀವು ವೆಲೆಂಟೈನ್ ಡೇ ಬಗ್ಗೆ ಸಂಭ್ರಮ ಹಂಚಿಕೊಳ್ಳುತ್ತಾ ಕುಳಿತರೆ ಅದು ಸಮಯ ವ್ಯರ್ಥ. ಯಾಕೆಂದರೆ ವೆಲೆಂಟೇನ್ ಡೇ ಎನ್ನುವುದೇ ಒಂದು ಭ್ರಮೆ. ಮಾರ್ಕೆಟಿಂಗ್ ತಜ್ಞರು ವ್ಯಾಪಾರ ಹೆಚ್ಚಿಸಲು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿಸಿದ ಕ್ರೇಜ್ ಅನ್ನು ನಾವು ಯಾಕೆ ಇಲ್ಲಿ ಆಚರಿಸಬೇಕು. ಆ ಮೂಲಕ ಸಾಧಿಸುವುದಾದರೂ ಏನು? ನಾಳೆ ಪ್ರೇಮಿಗಳ ದಿನ ಆಚರಿಸಲು ಗುಪ್ತವಾಗಿ ಸಂಧಿಸುವ ಯುವಕ, ಯುವತಿಯರು ಅನೈತಿಕ ಮಾರ್ಗದಲ್ಲಿ ನಡೆದರೆ ಅದರಿಂದ ತಲೆಬಿಸಿ ಯಾರಿಗೆ? ಕುಡಿದು ಕುಪ್ಪಳಿಸಿ ವಾಂತಿ ಮಾಡಿಕೊಂಡು ಅಪಘಾತ ಮಾಡಿಕೊಂಡರೆ ಅದನ್ನು ಎದುರಿಸುವುದು ಯಾವ ಅಪ್ಪ, ಅಮ್ಮನಿಗೆ ಬೇಕು? ಅದರ ಬದಲಿಗೆ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ಸಹಿತ ಇಡೀ ಕುಟುಂಬ ವರ್ಗದವರನ್ನು ಬಿಟ್ಟು ದೇಶರಕ್ಷಣೆಗಾಗಿ ಸಮವಸ್ತ್ರ ಧರಿಸಿ ಗಡಿಗೆ ಹೊರಟ ವೀರ ಯೋಧರು ತಮ್ಮ ಪ್ರಾಣ ಕಳೆದುಕೊಂಡ ಆ ಫುಲ್ವಾಮಾ ಘಟನೆಯ ಬಗ್ಗೆ ಒಂದಿಷ್ಟು ಯೋಚಿಸಿ. ಅವರಿಗೆ ಆವತ್ತು ಸಾವು ಅಂತಹ ಘಳಿಗೆಯಲ್ಲಿ ಬಂದೆರಗುತ್ತೆ ಎನ್ನುವ ಸುಳಿವು ಕೂಡ ಇರಲಿಲ್ಲ. ಅವರು ಆಗ ತಾನೆ ರಜೆ ಮುಗಿಸಿ ಮನೆಯಲ್ಲಿ ಹೆಂಡತಿ, ಮಕ್ಕಳನ್ನು ಮುದ್ದಿಸಿ, ಅಮ್ಮ, ಅಪ್ಪನ ಆರ್ಶೀವಾದ ಪಡೆದು ಊರಿಗೆ ಟಾಟಾ ಹೇಳುತ್ತಾ ಹೊರಟರಲ್ಲ, ಅವರಿಗೆ ಮರುದಿನ ಕರಾಳ ಛಾಯೆಯೊಂದು ತಮ್ಮ ಪಕ್ಕ ಬಂದು ನಿಲ್ಲುತ್ತೆ ಎನ್ನುವ ಸಣ್ಣ ಅನುಮಾನವಾದರೂ ಇತ್ತಾ?
ಒಬ್ಬೊಬ್ಬ ಯೋಧ ಎಂದರೆ ಆತ ದೇಶದ ಸಂಪತ್ತು. ನಲ್ವತ್ತು ಯೋಧರನ್ನು ಕಳೆದುಕೊಳ್ಳುವುದೇಂದರೆ ಅದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಮದರ್ ಡೇ, ಫಾದರ್ ಡೇ ಇನ್ನೊಂದು ಮತ್ತೊಂದು ಇಲ್ಲ. ನಾವು ದಿನನಿತ್ಯ ತಾಯಿಯನ್ನು, ತಂದೆಯನ್ನು ಗೌರವಿಸುವ ಸಂಸ್ಕೃತಿಯವರು. ನಮಗೆ ಅದಕ್ಕೆ ಮತ್ತೊಂದು ದಿನ ಬೇಡಾ. ನಮ್ಮಲ್ಲಿ ಕೈ ಹಿಡಿದ ಹೆಂಡತಿ ಅಥವಾ ಗಂಡನನ್ನು ಪ್ರೀತಿಸುವ ಸಂಪ್ರದಾಯ. ಅದಕ್ಕಾಗಿ ಪ್ರೇಮಿಗಳ ದಿನ ನಮಗೆ ಅಗತ್ಯ ಇಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಬಂಧಕ್ಕೆ ಬೆಲೆ ಇಲ್ಲ. ಅಲ್ಲಿ ಒಂದೇ ಗಂಡ, ಒಂದೇ ಹೆಂಡತಿ ಎನ್ನುವ ಸಂಸ್ಕೃತಿ ಇಲ್ಲ. ಅಲ್ಲಿ ವಿಚ್ಚೇದನ ಇಲ್ಲದ ಮನೆಯೇ ಇಲ್ಲ ಎನ್ನುವಷ್ಟು ಸಾಮಾನ್ಯ ಕತೆಗಳಿವೆ. ಆ ಗಾಳಿ ನಮಗೆ ಇತ್ತೀಚೆಗೆ ಜೋರಾಗಿ ಬೀಸುತ್ತಿದೆ. ಅದು ನಿಲ್ಲಬೇಕು. ಇನ್ನು ಪ್ರೇಮಿಗಳ ದಿನದ ಒಂದು ವಾರ ಮೊದಲಿನಿಂದಲೇ ಹಗ್ ಡೇ, ಕಿಸ್ ಡೇ, ರೋಸ್ ಡೇ ಅಂತ ಇನ್ನೊಂದಿಷ್ಟು ಮಣ್ಣು ಮಸಿ ಆಚರಿಸಲಾಗುತ್ತದೆಯಂತೆ. ಅದರ ಬದಲು ನಾವು ನಮ್ಮ ಇರುವಿಕೆಯನ್ನು ನಿಶ್ಚಿತ ಪಡಿಸುವ ನಮ್ಮ ಜೀವವನ್ನು ಕಾಯುವ ಯೋಧರಿಗೆ ಒಳ್ಳೆಯದಾಗಲಿ ಎಂದು ಇಲ್ಲಿಂದಲೇ ಹರಸಿದರೆ ಆ ಕಳಕಳಿ ಅವರಿಗೆ ತಲುಪುತ್ತದೆ!
- Advertisement -
Trending Now
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Hanumantha Kamath
September 22, 2023
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
Hanumantha Kamath
September 15, 2023
Leave A Reply