ಡಿಕೆಶಿ ತಾಯಿ ಹೇಳಿಕೆಯ ಹಿಂದೆ ಸತ್ಯ ಇದ್ದಂತೆ ಕಾಣುತ್ತಿದೆ!
ನನ್ನ ಮಗನ ಇವತ್ತಿನ ಪರಿಸ್ಥಿತಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರಣ ಎಂದು ಮಾಧ್ಯಮಗಳಲ್ಲಿ ಹೇಳಿಕೆ ಕೊಟ್ಟಿರುವವರು ಡಿಕೆಶಿವಕುಮಾರ್ ಅವರ ತಾಯಿ. ಆ ತಾಯಿ ನೇರವಾಗಿ ಹೀಗೆ ಆರೋಪ ಮಾಡುತ್ತಿರಬೇಕಾದರೆ ಅವರಿಗೆ ಏನೋ ಸತ್ಯ ಗೊತ್ತಿರಬೇಕು. ಇಲ್ಲದಿದ್ದರೆ ಹುಟ್ಟು ಕಾಂಗ್ರೆಸ್ಸಿನ ಮನೆಯೊಂದರ ಯಜಮಾನಿ ಹೀಗೆ ತಮ್ಮದೇ ಪಕ್ಷದ ದಂಡನಾಯಕನೊಬ್ಬನ ಮೇಲೆ ಹೀಗೆ ಆರೋಪ ಹಾಕುತ್ತಾರೆ ಎಂದರೆ ಅವರು ತುಂಬಾ ಯೋಚಿಸಿಯೇ ಹಾಕಿರುತ್ತಾರೆ. ಡಿಕೆ ಶಿವಕುಮಾರ್ ಅವರ ಸಮಸ್ತ ಆಸ್ತಿ ಈ ರೀತಿ ಐಟಿ ಇಲಾಖೆಯ ಕಣ್ಣಿಗೆ ಬಿದ್ದು ಡಿಕೆಶಿ ಈ ಪರಿ ದಯನೀಯ ಸ್ಥಿತಿಗೆ ಬಂದಿದ್ದಾರೆ ಎಂದರೆ ಅದರ ಹಿಂದೆ ಏನಾದರೂ ವ್ಯವಸ್ಥಿತ ಪ್ರಯತ್ನ ಸಿಎಂ ಸಿದ್ಧರಾಮಯ್ಯನವರದ್ದು ಕೂಡ ಇದ್ದೇ ಇದೆ ಎಂದು ಬಿಜೆಪಿಯವರು ಒಳಗೊಳಗೆ ಮಾತನಾಡಿಕೊಳ್ಳುವುದು ವಿಶೇಷವಲ್ಲ. ಅದು ಬಿಜೆಪಿ ನಾಯಕರ ಅನಿಸಿಕೆ ಮಾತ್ರ ಆಗಿರಬಹುದು. ಆದರೆ ಡಿಕೆಶಿ ತಾಯಿ ಅನಿಸಿಕೆ ಹೇಳಿದ್ದಿಲ್ಲ. ಖಡಾಖಂಡಿತವಾಗಿ ಮಾತನಾಡಿದ್ದಾರೆ. ಆ ದೃಶ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಮುಂದಿನ ಬಾರಿ ಕಾಂಗ್ರೆಸ್ ಬಹುಮತದಲ್ಲಿ ಅಧಿಕಾರಕ್ಕೆ ಬಂದರೆ ಡಿಕೆಶಿ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಅಕಾಂಕ್ಷಿ ಎನ್ನುವುದು ಕಾಂಗ್ರೆಸ್ಸಿನ ಒಳಹರಿವನ್ನು ಗೊತ್ತಿರುವವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ತಾನು ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂದೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹುದ್ದೆಯನ್ನು ಕೇಳಿದ್ದರು ಡಿಕೆಶಿ. ಅದಕ್ಕಾಗಿ ಪಟ್ಟು ಹಿಡಿದು ದೆಹಲಿಯಲ್ಲಿ ಝಂಡಾ ಕೂಡ ಹೂಡಿ ಪರಮೇಶ್ವರ್ ಅವರಿಗೆ ಪ್ರಬಲ ಪೈಪೋಟಿ ಕೂಡ ನೀಡಿದ್ದರು. ಪರಮೇಶ್ವರ್ ಕೂಡ ಗೃಹ ಮಂತ್ರಿ ಇರಲಿ, ಕೆಪಿಸಿಸಿ ಸ್ಥಾನ ಬೇಡಾ ಎನ್ನುವ ನಿರ್ಧಾರಕ್ಕೆ ಬಂದಿದ್ರು. ಆದರೆ ನೀವು ಗೃಹ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ. ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಿರಿ. ಒಂದು ವೇಳೆ ಚುನಾವಣೆಗೆ 10 ತಿಂಗಳು ಇರುವಾಗ ದಲಿತ ನಾಯಕನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿದರೆ ಕಾಂಗ್ರೆಸ್ ದಲಿತ ವಿರೋಧಿ ಎನ್ನುವ ಹಣೆಪಟ್ಟಿ ಅಂಟಿಕೊಳ್ಳುತ್ತದೆ. ಡಿಕೆಶಿಯವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡೋಣ. ಚುನಾವಣೆ ಆದ ನಂತರ ಯಾವ ನಾಯಕ ಎಷ್ಟು ಶಾಸಕರನ್ನು ಗೆಲ್ಲಿಸಿಕೊಂಡು ಬರುತ್ತಾರೆ, ಅದರ ಮೇಲೆ ಮುಖ್ಯಮಂತ್ರಿ ಯಾರು ಎಂದು ಹೈಕಮಾಂಡ್ ಡಿಸೈಡ್ ಮಾಡುತ್ತದೆ ಎಂದು ಸೋನಿಯಾ ಮತ್ತು ಅಹ್ಮದ್ ಪಟೇಲ್, ರಾಹುಲ್ ಗಾಂಧಿ ಮುಂದೆ ಹೇಳಿದರೋ ಅದರ ನಂತರ ಡಿಕೆಶಿ ತನ್ನ ಪೂರ್ಣ ಆರ್ಥಿಕ ಬಲವನ್ನು ಪಣವಾಗಿಟ್ಟು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವ ಕಂಕಣ ಧರಿಸಿ ದೆಹಲಿಯಿಂದ ಬೆಂಗಳೂರಿಗೆ ಬಂದರು. ಅದಕ್ಕೆ ಸರಿಯಾಗಿ ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್ಸಿಗೆ ಒಂದಿಷ್ಟು ಸೀಟ್ ಕಡಿಮೆಯಾದರೆ ಜೆಡಿಎಸ್ ಸಹಾಯಕ್ಕೆ ಬರಲಿ ಎಂದು ಕುಮಾರಸ್ವಾಮಿಯವರೊಂದಿಗೆ ಕೈಕುಲುಕಿ ಸಮಸ್ಕಾರ ಎಂದರು. ಅಲ್ಲಿಗೆ ಡಿಕೆಶಿ ಸಿಎಂ ಪೋಸ್ಟಿಗೆ ತಯಾರಾಗುತ್ತಿದ್ದಂತೆ ಎಚ್ಚೆತ್ತುಕೊಂಡವರು ಸಿದ್ಧರಾಮಯ್ಯ.
ರಾಜಕೀಯ ಪಂಡಿತರು ಹೇಳುವ ಹಾಗೆ ಕಳೆದ ಬಾರಿ ಹೇಗೋ ಪರಮೇಶ್ವರ್ ಅವರನ್ನು ಕೊರಟಗೆರೆಯಲ್ಲಿ ಸೋಲಿಸಲು ಕಾಂಗ್ರೆಸ್ಸಿನ ಪ್ರಭಾವಿ ಹುಲಿಗಳು ಯಶಸ್ವಿಯಾದಂತೆ ಈ ಬಾರಿ ಡಿಕೆಶಿಯನ್ನು ಅಷ್ಟು ಸುಲಭವಾಗಿ ಸೋಲಿಸುವುದು ಕಷ್ಟ. ಹಾಗಿರುವಾಗ ಡಿಕೆಶಿ ಚುನಾವಣೆಯ ಹೊಸ್ತಿಲಲ್ಲಿ ಮುಗ್ಗರಿಸಿ ಬೀಳುವಂತೆ ಮಾಡಿದರೆ ಸಿಎಂ ಸ್ಥಾನಕ್ಕೆ ಸ್ಪರ್ಧಿಗಳೆ ಇರುವುದಿಲ್ಲ. ಪರಮೇಶ್ವರ್ ಅವರನ್ನು ಹೇಗಾದರೂ ಸಮಾಧಾನ ಮಾಡಬಹುದು. ಆದರೆ ಡಿಕೆಶಿ ಹಟ ಮಾಡಿ ಸಾಧಿಸುವ ಸಾಮರ್ಥ್ಯ ಇರುವವರು. ಅವರನ್ನು ಬೀಳಲು ಖೆಡ್ಡಾ ದೊಡ್ಡದಾಗಬೇಕು. ಅದನ್ನು ಸಿದ್ದು ಮಾಡಿದ್ದರಾ? ಬಿಜೆಪಿಯವರು ಹೇಳಿದ್ರೆ ನಂಬುವುದು ಕಷ್ಟ. ಆದರೆ ಡಿಕೆಶಿ ಮನೆಯ ಒಳಗೆ ಹೀಗೆ ಅಸಮಾಧಾನ ಮೂಡಿದೆ ಎಂದರೆ ಆ ತಾಯಿಗೆ ಸತ್ಯ ಗೊತ್ತಿದೆ ಎಂದೇ ಅರ್ಥ.
Leave A Reply