ಗಲ್ಲು ಶಿಕ್ಷೆ ಕೊಡುವುದನ್ನು ಲೈವ್ ಆಗಿ ತೋರಿಸಿದರೆ ಅತ್ಯಾಚಾರಗಳು ಕಡಿಮೆಯಾಗಬಹುದು!!
ಏಳು ವರ್ಷ, ಮೂರು ತಿಂಗಳು ಮತ್ತು ನಾಲ್ಕು ದಿನಗಳು ಬೇಕಾದವು. ನಾಲ್ಕು ಕ್ರಿಮಿಗಳನ್ನು ಹೊಸಕಿ ಹಾಕಲು. ಅವರ ಸಾವು ಎಲ್ಲರಿಗೂ ಗೊತ್ತಾಗಬೇಕು. ನಮ್ಮಲ್ಲಿ ಅತ್ಯಾಚಾರಿಗಳನ್ನು ನಡುಮೈದಾನದಲ್ಲಿ ಕಟ್ಟಿ ಹಾಕಿ ಕಲ್ಲು ಹೊಡೆದು ಸಾಯಿಸುವ ಪದ್ಧತಿ ಇಲ್ಲ. ಇದ್ದಿದ್ದರೆ ಅತ್ಯಾಚಾರಗಳು ಎಷ್ಟೋ ಕಡಿಮೆಯಾಗುತ್ತಿದ್ದವು. ಬಹುಶ: ಕಾನೂನಿನ ಮೇಲೆ ಹೆದರಿಕೆ ಇಲ್ಲದೆ ಇರುವುದರಿಂದ ಅತ್ಯಾಚಾರಗಳು ಹೆಚ್ಚುತ್ತಾ ಇರಬಹುದು ಎನ್ನುವುದು ಪ್ರತಿಯೊಬ್ಬರ ಅಭಿಪ್ರಾಯ.
ಹಾಗಾದರೆ ಕಾನೂನಿನ ಮೇಲೆ ಹೆದರಿಕೆ ಬರುವುದು ಹೇಗೆ? ಒಂದೋ ಶಿಕ್ಷೆಗಳು ಬೇಗ ಜಾರಿಯಾಗಬೇಕು ಅಥವಾ ಹೀಗೆ ಅಪರೂಪಕ್ಕೆ ಒಮ್ಮೆ ಉಗ್ರ ರೂಪದ ಶಿಕ್ಷೆ ಆದಾಗ ಅದನ್ನು ಲೈವ್ ಆಗಿ ರಾಷ್ಟ್ರಮಟ್ಟದ ವಾಹಿನಿಗಳು ತೋರಿಸಲು ಅವಕಾಶ ನೀಡಬೇಕು. ಅತ್ಯಾಚಾರ ಒಂದು ಮನಸ್ಥಿತಿ ಎಂದು ಹೇಳುತ್ತಾರೆ. ಹಾಗಾದರೆ ಆ ಮನಸ್ಥಿತಿಯನ್ನು ಬದಲಾಯಿಸುವ ಕಾರ್ಯ ಯಾಕೆ ಆಗಬಾರದು. ನಮ್ಮ ಸಂವಿಧಾನಕ್ಕೆ ಅದರ ಹುಟ್ಟಿನಿಂದ ಇಲ್ಲಿಯ ತನಕ ಅನೇಕ ಬಾರಿ ತಿದ್ದುಪಡಿ ಮಾಡಲಾಗಿದೆ. ಹಿಂದಿನ ಪ್ರಧಾನಮಂತ್ರಿಗಳು ಮಾಡಲಾಗದೇ ಬಿಟ್ಟದ್ದನ್ನು ನಮ್ಮ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಮಾಡಿ ತೋರಿಸಿದ್ದಾರೆ. ಈಗ ಮೋದಿಯವರು ಇನ್ನೊಂದು ಮಹತ್ತರ ಕಾರ್ಯ ಮಾಡಬೇಕಿದೆ. ಅದೇನೆಂದರೆ ಅತ್ಯಾಚಾರ ಪ್ರಕರಣಗಳಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿದ ನಂತರ ಮತ್ತೆ ತಡ ಮಾಡದೇ ಆರೋಪಿಗಳಿಗೆ ಶಿಕ್ಷೆ ಅನುಷ್ಟಾನ ಮಾಡಿಬಿಡಬೇಕು.
ಯಾಕೆಂದರೆ ಅತ್ಯಾಚಾರ ಆರೋಪಿಗಳು ಅಷ್ಟೊತ್ತಿಗಾಗಲೇ ಮೂರ್ನಾಕು ನ್ಯಾಯಾಲಯಗಳನ್ನು ಸುತ್ತಿ ಬಂದಾಗಿರುತ್ತದೆ. ಅವರಿಗೆ ಎಷ್ಟು ಸಿಗಬೇಕಿತ್ತೋ ಅಷ್ಟು ಉಸಿರಾಡುವ ಅವಕಾಶ ಕೊಡಲಾಗಿರುತ್ತದೆ. ಅದರ ನಂತರ ಆ ಪಾಪಿಗಳು ಈ ಭೂಮಿಯ ಮೇಲೆ ಇರಲು ಯೋಗ್ಯರಾಗಿ ಇರುವುದಿಲ್ಲ. ಅಂತವರಿಗೆ ಮತ್ತೆ ರಾಷ್ಟ್ರಪತಿಗಳಿಂದ ಕ್ಷಮಾದಾನದ ಅರ್ಜಿ ಕೊಡುವ ವಿಷಯ ಬರಬಾರದು. ಅಂತವರಿಗೆ ಕ್ಷಮೆ ಎನ್ನುವ ಶಬ್ದವೇ ಅರ್ಥಹೀನ. ಹಾಗಿರುವಾಗ ಕ್ಷಮಾದಾನದ ವಿಷಯ ಎಲ್ಲಿಂದ ಬಂತು. ಅಪಾತ್ರರಿಗೆ ದಾನ ಮಾಡಬಾರದು ಎಂದು ಶಾಸ್ತ್ರಗಳಲ್ಲಿಯೇ ಉಲ್ಲೇಖ ಇದೆ. ಹಾಗಿರುವಾಗ ಅತ್ಯಾಚಾರಿ ಅಷ್ಟೇ ಅಲ್ಲ ಸಾಯುವವರೆಗೆ ಹಿಂಸೆ ಕೊಟ್ಟು ಅವರು “ಹತ್ಯಾಚಾರಿ” ಗಳಾಗಿರುತ್ತಾರೆ. ಅಂತಹ ಅಪಾತ್ರರಿಗೆ ಕ್ಷಮೆ ಕೊಡಲು ಸಾಧ್ಯವಾ? ಕ್ಷಮಾದಾನದಂತಹ ಒಂದು ಕಾನೂನು ಯಾಕೆ ಬಂತೋ ದೇವರಿಗೆ ಗೊತ್ತು. ನಿರ್ಭಯಾ ಪ್ರಕರಣದಲ್ಲಿ ಕ್ಷಮಾದಾನ ಸಿಕ್ಕಿಲ್ಲ. ಆದರೆ ಅಪರಾಧಿಗಳು ಅನಾವಶ್ಯಕವಾಗಿ ಸಮಯ ದೂಡುವಂತಾಯಿತು. ಇದರಿಂದ ಏನಾಗುತ್ತದೆ ಎಂದರೆ ಆ ಹೆಣ್ಣುಮಗಳ ತಾಯಿ, ತಂದೆಯ ಮನಸ್ಸಿನಲ್ಲಿ ಎಷ್ಟು ನೋವು ಹೆಚ್ಚಾಗಲ್ಲ. ಅತ್ಯಾಚಾರಿಗಳಿಗೆ ಗಲ್ಲು ಆದ ಕೂಡಲೇ ಅವರ ಮಗಳು ಹಿಂತಿರುಗಿ ಬರುವುದಿಲ್ಲ. ಆದರೆ ಸ್ವರ್ಗದಲ್ಲಿರುವ ಆ ಆತ್ಮ ಒಂದು ಸಲ ಸಮಾಧಾನದ ನಿಟ್ಟುಸಿರು ಬಿಟ್ಟಿರಬಹುದು. ಇನ್ನು ಅತ್ಯಾಚಾರಗಳು ಕಡಿಮೆಯಾಗಲು ಶಿಕ್ಷೆಯನ್ನು ಲೈವ್ ಆಗಿ ತೋರಿಸಬೇಕು ಎಂದು ಈ ಜಾಗೃತ ಅಂಕಣದ ಪ್ರಾರಂಭದಲ್ಲಿ ಬರೆದಿದ್ದೇನೆ. ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡುವ ಮೊದಲು ಅವರ ಮುಖಕ್ಕೆ ಹತ್ತಿ ಬಟ್ಟೆಯನ್ನು ಸುತ್ತಿ ತರಲಾಗುತ್ತದೆ. ಗಲ್ಲು ಶಿಕ್ಷೆ ನೀಡುವ ಸ್ಥಳವನ್ನು ಅದಕ್ಕೆ ಗುರಿಯಾಗಿರುವ ಅಪರಾಧಿಗಳಿಗೆನೆ ತೋರಿಸುವ ಕ್ರಮ ಇಲ್ಲ ಎನ್ನುವ ನಿಯಮ ಇದೆ. ಅವರಿಗೆ ತೋರಿಸದಿದ್ದರೆ ಪರವಾಗಿಲ್ಲ, ಅದನ್ನು ಪ್ರಪಂಚ ನೋಡಲಿ.ಆಗ ಮುಂದೆ ಅಂತಹ ವಿಕಟ ಕೃತ್ಯವನ್ನು ಮಾಡಲು ಹೊರಡುವ ವ್ಯಕ್ತಿಗಳಿಗೆ ಹೆದರಿಕೆ ಮನಸ್ಸಿನ ಮೂಲೆಯಲ್ಲಿ ಸಣ್ಣಗೆ ಕೆಮ್ಮಿದಂತೆ ಆಗುತ್ತದೆ.
ಇಲ್ಲದಿದ್ದರೆ ಒಬ್ಬ ಆರೋಪಿಗೆ ಹೆದರಿಕೆಯೇ ಇರುವುದಿಲ್ಲ. ತನ್ನ ಊರಿನ ನ್ಯಾಯಾಲಯದಿಂದ ಸುಪ್ರೀಂಕೋರ್ಟ್ ಅಲ್ಲಿಂದ ಆ ಪೀಠ, ಈ ಪೀಠ, ಮರು ಪರಿಶೀಲನಾ ಅರ್ಜಿ, ರಾಷ್ಟ್ರಪತಿ ಕ್ಷಮಾದಾನ ಅರ್ಜಿ, ಅದರ ಬಳಿಕ ಮತ್ತೆ ಆ ರಾಜ್ಯದ ಹೈಕೋರ್ಟ್ ಗೆ ಬಂದು ಅದು ಅನುಷ್ಟಾನಕ್ಕೆ ಬರುವಷ್ಟರಲ್ಲಿ ಎಷ್ಟು ವರ್ಷಗಳು ಆಗಲಿವೆ ಎನ್ನುವ ಅಂದಾಜು ಸ್ವತ: ಆ ಪ್ರಕರಣ ಕೈಗೆತ್ತಿಕೊಂಡಿರುವ ವಕೀಲರಿಗೂ ಇರುವುದಿಲ್ಲ. ಇನ್ನು ಎಷ್ಟೋ ಅತ್ಯಾಚಾರ ಪ್ರಕರಣಗಳು ಹೈಕೋರ್ಟ್ ಮುಂದೆ ಹೋಗುವುದಿಲ್ಲ. ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದೆ ಬಿದ್ದು ಹೋಗುತ್ತವೆ. ಹಾಗಿರುವಾಗ ನಿರ್ಭಯಾ ಪ್ರಕರಣ ನ್ಯಾಯಾಂಗ ಇತಿಹಾಸದಲ್ಲಿ ಒಂದು ಮೈಲುಗಲ್ಲು ಆಗಬೇಕು. ಮೋದಿಯವರು ಮುಸಲ್ಮಾನ ಮಹಿಳೆಯರಿಗಾಗಿ ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ. ಇನ್ನು ಅತ್ಯಾಚಾರ ಪ್ರಕರಣಗಳ್ಲಿ ಜಾತಿ, ಧರ್ಮ, ಪಂಗಡದ ವಿಷಯವೇ ಬರುವುದಿಲ್ಲ. ಆಕೆ ಕೇವಲ ಹೆಣ್ಣುಮಗಳು ಮಾತ್ರ ಆಗಿರುತ್ತಾಳೆ. ಮೋದಿ ಏನಾದರೂ ಮಾಡುತ್ತಾರಾ !!
Leave A Reply