ಖಾದರ್ ಕಿಟ್ ನಲ್ಲಿ ಕೊಳೆತ ಬಟಾಟೆ ಮತ್ತು ನೀರುಳ್ಳಿ ಎಂದದ್ದು ಕಾಂಗ್ರೆಸ್ ಕಾರ್ಯಕರ್ತರು!!
ಖಾದರ್ ಸಾಹೇಬ್ರು ಜನರಿಗೆ ದಿನಸಿ ಸಾಮಾನುಗಳನ್ನು ಹೊಂದಿದ ಕಿಟ್ ಗಳನ್ನು ಅಲ್ಲಲ್ಲಿ ವಿತರಿಸುತ್ತಾ ಫೋಟೋಗಳನ್ನು ತೆಗೆಯುತ್ತಾ ರಾಜ್ಯ, ಕೇಂದ್ರದ ಮೇಲೆ ಆರೋಪಗಳನ್ನು ಮಾಡುತ್ತಾ ಆರಾಮವಾಗಿ ಇದ್ದಾರೆ. ಆದರೆ ಅವರ ಕಿಟ್ ಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಜನ ಅದನ್ನು ಬಿಚ್ಚಿದರೆ ಒಳಗೆ ಏನಿದೆ? ನಿನ್ನೆ ನನಗೊಂದು ಆಡಿಯೋ ಮೇಸೆಜ್ ಬಂದಿದೆ. ಇಬ್ಬರು ಕಾಂಗ್ರೆಸ್ಸ್ ಕಾರ್ಯಕರ್ತರು ಪರಸ್ಪರ ಮಾತನಾಡುತ್ತಾ ಖಾದರ್ ಹಂಚಲು ಕೊಟ್ಟಿರುವ ಕಿಟ್ ಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆಡಿಯೋ ಪಕ್ಕಾ ಮಲಯಾಳಿ ಮಿಶ್ರಿತ ಉರ್ದು ಇದೆ. ವಿಷಯ ಏನೆಂದರೆ ಖಾದರ್ ತಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ಮನೆಮನೆಗೆ ಹಂಚಿ ಪ್ರಚಾರ ತೆಗೆದುಕೊಳ್ಳಿ ಎಂದು ಕೊಟ್ಟಿರುವ ಕಿಟ್ ನಲ್ಲಿ ಐದು ಕಿಲೋ ಅಕ್ಕಿ, ಒಂದಿಷ್ಟು ಬಟಾಟೆ, ಒಂದಿಷ್ಟು ನೀರುಳ್ಳಿ ಮತ್ತು ಸ್ವಲ್ಪ ಮೆಣಸಿನ ಹುಡಿ ಇದೆ. ಆದರೆ ಇವರು ಕೊಡುತ್ತಿರುವ ಬಟಾಟೆ ಮತ್ತು ನೀರುಳ್ಳಿಯನ್ನು ಪದಾರ್ಥಕ್ಕೆ ಬಳಸಿದರೆ ಆ ಪದಾರ್ಥವನ್ನು ಬಿಸಾಡಬೇಕಾದಿತು. ಯಾಕೆಂದರೆ ಹೆಚ್ಚಿನ ಬಟಾಟೆ ಮತ್ತು ನೀರುಳ್ಳಿ ಕೊಳೆತು ಹೋಗಿವೆ. ಜನರಿಗೆ ಅದನ್ನು ಕೊಟ್ಟರೆ ಶಹಬ್ಬಾಶ್ ಗಿರಿ ಅಲ್ಲ ಚಪ್ಪಲಿ ಏಟು ಬೀಳಬಹುದು. ಆ ಕಿಟ್ ಗಳನ್ನು ಹಂಚುವ ಕಾರ್ಯಕರ್ತರು ಇನ್ನೊಂದು ಸಲ ಆ ಏರಿಯಾದಲ್ಲಿ ಕಾಲು ಇಡದಂತೆ ಆಗಬಹುದು. ಯಾಕೆಂದರೆ ಕಿಟ್ ಕೊಡುವಾಗ ಸಂತೋಷದಿಂದ ಸ್ವೀಕರಿಸುವ ಜನರು ಅದನ್ನು ತೆರೆದು ನೋಡುವಾಗ ಈ ಕಾರ್ಯಕರ್ತರು ಅಲ್ಲಿಂದ ಹೋಗಿರುತ್ತಾರೆ. ಆದರೆ ಕೆಲವು ಜನ ತೆಗೆದುಕೊಂಡವರು ಈಗಾಗಲೇ ಕಿಟ್ ತೆರೆದು ನೋಡಿ ನಂತರ ಕೊಳೆತ ಬಟಾಟೆ ಮತ್ತು ನೀರುಳ್ಳಿಗಳ ಬಗ್ಗೆ ಕೊಟ್ಟವರಿಗೆ ಫೋನ್ ಮಾಡಿ ಬೈದಿದ್ದಾರೆ. ಇದರಿಂದ ಅದೇ ಕಿಟ್ ಗಳನ್ನು ಹಂಚಲು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಿಂಜರಿಕೆ ಇದೆ.
ಹಾಗೆ ಒಬ್ಬ ಕಾರ್ಯಕರ್ತ ಇನ್ನೊಬ್ಬನಿಗೆ ಫೋನ್ ಮಾಡಿ ವಿಚಾರಿಸುತ್ತಿರುವುದು ಅದೇ ಭಯದಿಂದ. ನಿನಗೆ ಬಂದಿರುವ ಕಿಟ್ ನಲ್ಲಿ ಕೂಡ ಬಟಾಟೆ ಮತ್ತು ನೀರುಳ್ಳಿ ಹೀಗೆ ಇರಬಹುದು. ಇದನ್ನು ಕೊಟ್ಟರೆ ನಮ್ಮ ಮರ್ಯಾದೆ ಹೋಗಬಹುದು ಎನ್ನುವುದು ಕರೆ ಮಾಡಿದವನ ಆತಂಕ. ನಾನು ಖಾದರ್ ಅವರಲ್ಲಿ ವಿನಂತಿ ಮಾಡುವುದೆಂದರೆ ಐದು ಕಿಲೋ ಅಕ್ಕಿಗೆ 200 ರೂಪಾಯಿ ಆಗಬಹುದು. ನೀವು ಕೊಟ್ಟ ನೀರುಳ್ಳಿ ಮತ್ತು ಬಟಾಟೆ ಸೇರಿದರೆ ಹೆಚ್ಚೆಂದರೆ 60 ರೂಪಾಯಿ ಆಗಬಹುದು. ಮೆಣಸು ಮತ್ತು ಪ್ಯಾಕಿಂಗ್, ಟ್ರಾನ್ಸಪೋರ್ಟ್ ಸೇರಿದರೆ ಒಟ್ಟು ಮುನ್ನೂರು ರೂಪಾಯಿ ಮಾಲ್. ಅದನ್ನು ನೀವು ಎಷ್ಟು ಮಂದಿಗೆ ಕೊಟ್ಟರೂ ನಿಮ್ಮ ಆಸ್ತಿ ಕರಗುವುದಿಲ್ಲ. ಹಾಗಿರುವಾಗ ಹತ್ತು ರೂಪಾಯಿ ಹೆಚ್ಚು ಖರ್ಚಾದರೂ ಪರವಾಗಿಲ್ಲ, ಒಳ್ಳೆಯ ವಸ್ತುಗಳನ್ನೇ ಕೊಡಿ. ಯಾಕೆಂದರೆ ತೆಗೆದುಕೊಳ್ಳುವವರು ಬಡವರು ಎಂದು ಕೇವಲವಾಗಿ ಅಂದುಕೊಳ್ಳಬೇಡಿ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಉಪವಾಸ ಬೇಕಾದರೆ ಕುಳಿತುಕೊಳ್ಳುತ್ತಾರೆ, ಆದರೆ ಕೈ ಒಡ್ಡಿ ತೆಗೆದುಕೊಳ್ಳುವವರಲ್ಲ. ನಮ್ಮ ಸ್ವಾಭಿಮಾನಕ್ಕೆ ಬೆಲೆ ಕಟ್ಟಬೇಡಿ. ನಾಳೆ ಹಾಳಾದ ಬಟಾಟೆ ಮತ್ತು ನೀರುಳ್ಳಿ ಕೊಟ್ಟ ಶಾಪ ನಿಮಗೆ ಬೇಡಾ. ನಾನು ಅವರಿಗೆ ಮಾತ್ರ ಅಲ್ಲ, ಕಿಟ್ ಕೊಡುತ್ತಿರುವ ಎಲ್ಲರಿಗೂ ಹೇಳುವುದು ಒಂದೇ. ದಯವಿಟ್ಟು ನೀವು ನೂರು ಜನರಿಗೆ ಕೊಡಲು ಆಗದಿದ್ದರೆ ಎಂಭತ್ತು ಜನರಿಗೆ ಮಾತ್ರ ಕೊಟ್ಟಲು ಪರವಾಗಿಲ್ಲ. ತಿನ್ನುವಂತದ್ದೇ ಕೊಡಿ. ಕಳಪೆ ಗುಣಮಟ್ಟದ ವಸ್ತು ಪದಾರ್ಥಗಳನ್ನು ಕೊಡಲೇಬೇಡಿ. ಯಾರೂ ಕೂಡ ನಿಮ್ಮ ಬಳಿ ಬಾದಾಮಿ, ಗೊಡಂಬಿ, ದಾಕ್ಷಿ ಕೇಳುವುದಿಲ್ಲ. ಆದರೆ ಕೊಡುವ ಮೂಲಭೂತ ವಸ್ತುಗಳನ್ನು ಗುಣಮಟ್ಟದ್ದೇ ಕೊಡಿ. ಇಲ್ಲದಿದ್ದರೆ ಒಳ್ಳೆಯದು ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳಬೇಕಾದಿತು. ನಾಮಕಾವಸ್ತೆ ಕೊಡುವುದರಿಂದ ತೆಗೆದುಕೊಂಡವರಿಗೂ ಪ್ರಯೋಜನವಿಲ್ಲ, ನಿಮಗೂ ದೇವರು ಕ್ಷಮಿಸಲ್ಲ.
ಇನ್ನು ಇವತ್ತು ರಾತ್ರಿ 9 ಗಂಟೆಗೆ 9 ನಿಮಿಷಗಳ ತನಕ ಮನೆಯ ವಿದ್ಯುತ್ ಬಲ್ಬ್ ಗಳನ್ನು ಆರಿಸಿ ಮನೆಯ ಬಾಲ್ಕನಿ ಅಥವಾ ಬಾಗಿಲ ಬಳಿ ನಿಂತು ದೀಪ ಹೊತ್ತಿಸಿ. ದೀಪ ಇಲ್ಲದಿದ್ದರೆ ಕ್ಯಾಂಡಲ್, ಅದೂ ಇಲ್ಲವಾದರೆ ಟಾರ್ಚ್. ಕೊನೆಗೆ ಏನೂ ಇಲ್ಲದಿದ್ದರೆ ಮೊಬೈಲ್ ಫೋನಿನ ಫ್ಲಾಶ್ ಲೈಟ್. ಇದರಿಂದ ನೀವು ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಆದರೆ ಕೊಡಬಹುದಾದದ್ದು ವಿಶ್ವಾಸ. ಯಾರು ಸೊಂಕೀತರಿದ್ದಾರೋ ಅವರಲ್ಲಿ ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ ಎನ್ನುವ ವಿಶ್ವಾಸ ಮೂಡಿಸಬಹುದು. ಇದಕ್ಕೆ ಹಲವು ವೈಜ್ಞಾನಿಕ ಆಯಾಮಗಳನ್ನು ಕೂಡ ಹಲವರು ನೀಡುತ್ತಿದ್ದಾರೆ. ಆದರೆ ಒಂದಂತೂ ನಿಜ, ಕೈಯಲ್ಲಿ ಬೆಳಕು ಮತ್ತು ಮನದಲ್ಲಿ ಪ್ರಾರ್ಥನೆಯಿಂದ ಹೊಸ ಭರವಸೆಯನ್ನು ಬೆಳಗಿಸಬಹುದು. ಆದರೆ ಮೋದಿಯವರನ್ನು ಟೀಕಿಸುವ ಭರದಲ್ಲಿ ಖಾದರ್ ಅವರಿಗೆ ತಮ್ಮ ಕಿಟ್ ನಲ್ಲಿರುವ ಬಟಾಟೆ ಮತ್ತು ನೀರುಳ್ಳಿ ಕೊಳೆತದ್ದು ಗೊತ್ತೆ ಆಗಲಿಲ್ಲವಲ್ಲ ಎನ್ನುವುದೇ ಈಗ ಬೇಸರದ ಸಂಗತಿ.!
Leave A Reply