ಇವತ್ತು ನಾನು ಮೂರು ಕ್ಯಾಟಗರಿಯವರನ್ನು ನಿಮಗೆ ಪರಿಚಯಿಸುತ್ತೇನೆ. ಒಂದನೇಯದಾಗಿ ಶ್ರೀಮಂತರು ಅಥವಾ ಅನುಕೂಲಸ್ಥರು. ಎರಡನೇಯದಾಗಿ ಮಧ್ಯಮ ವರ್ಗದವರು. ಮೂರನೇಯದಾಗಿ ಬಡವರು. ಶ್ರೀಮಂತಿಕೆ ವರವಲ್ಲ ಮತ್ತು ಬಡತನ ಶಾಪವಲ್ಲ. ಕಷ್ಟಗಳು ಪ್ರತಿಯೊಬ್ಬರಿಗೂ ಇವೆ. ಆದರೆ ಬೇರೆ ಬೇರೆ ರೀತಿಯಲ್ಲಿ. ಇರುವೆಯ ಕಷ್ಟ ಇರುವೆಗೆ ಮಾತ್ರ ಗೊತ್ತು. ಆನೆಯ ಕಷ್ಟ ಆನೆಗೆ ಮಾತ್ರ ಗೊತ್ತು. ಅನುಕೂಲಸ್ಥರು ಅಂದರೆ ಮೊದಲ ಕ್ಯಾಟಗರಿಯವರು ಒಂದು ವರ್ಷ ಆದಾಯ ಬರದೇ ಇದ್ದರೂ ಯಾವುದೇ ಟೆನ್ಷನ್ ಇಲ್ಲದೇ ಬದುಕಬಲ್ಲರು. ಅವರ ಒಂದಿಷ್ಟು ಬ್ಯಾಂಕ್ ಬ್ಯಾಲೆನ್ಸ್ ಕರಗಬಹುದೇ ವಿನ: ಅವರು ವಿಚಲಿತರಾಗುವ ಪರಿಸ್ಥಿತಿ ಇರುವುದಿಲ್ಲ. ಎರಡನೇಯ ಕ್ಯಾಟಗರಿಯವರು ಮನೆಬಾಡಿಗೆ ಅಥವಾ ಅಂಗಡಿ ಬಾಡಿಗೆ, ಸ್ಕೂಲ್ ಫೀಸ್, ಸಾಲದ ಕಂತುಗಳಿಗೆ ಒಂದಿಷ್ಟು ಟೆನ್ಷನ್ ಮಾಡುತ್ತಾರೆ ವಿನ: ನಾಳೆ ಅನ್ನಕ್ಕೆ ಅಕ್ಕಿ ಎಲ್ಲಿಂದ ತರುವುದು ಎನ್ನುವುದು ಅಷ್ಟು ದೊಡ್ಡ ಸವಾಲಲ್ಲ. ಅದರಲ್ಲಿ ಇನ್ನೊಂದು ಕೆಳಮಧ್ಯಮ ವರ್ಗದವರು ಇದ್ದಾರೆ. ಅವರ ಈ ಮೇಲಿನ ಟೆನ್ಷನ್ ಜೊತೆ ನಿರಂತರ ಎರಡು ತಿಂಗಳು ಹೀಗೆ ಆದರೆ ಮುಂದೇನು ಎಂದು ಅಂದುಕೊಳ್ಳುತ್ತಾರೆ. ಮೂರನೇಯ ಕ್ಯಾಟಗರಿ ಬಡವರು. ಅವರಿಗೆ ಒಂದು ವಾರದ ಮೇಲೆ ಉಪವಾಸವೇ ಗತಿ ಎನ್ನುವಂತಹ ಪರಿಸ್ಥಿತಿ. ಇನ್ನು ಅದಕ್ಕಿಂತಲೂ ತೀರ ಬಡವರು ಎಂದರೆ ಇವತ್ತು ದುಡಿದು ನಾಳೆ ಊಟ ಮಾಡುವವರು. ಈಗ ಜಿಲ್ಲಾಡಳಿತ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುತ್ತಿರುವುದು ಮೂರನೇ ಕ್ಯಾಟಗರಿಯವರಿಗೆ.
ಆದರೆ ವಿಷಯ ಏನೆಂದರೆ ಮೂರನೇಯವರಿಗಿಂತ ಜಾಸ್ತಿ ಇದನ್ನು ಎರಡನೇ ಮತ್ತು ಕೆಲವು ಕಡೆ ಒಂದನೇ ಕ್ಯಾಟಗರಿಯವರು ಕೂಡ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಲೇ ಇವತ್ತು ಕಿಟ್ ನೈಜ ವ್ಯಕ್ತಿಗಳಿಗೆ ತಲುಪುತ್ತಿಲ್ಲ. ಒಂದು ಕ್ಷೇತ್ರದಲ್ಲಿ ಮೂರನೇ ಕ್ಯಾಟಗರಿಯ ಜನ ಎಷ್ಟಿದ್ದಾರೆ ಎಂದು ಗುರುತಿಸಿ ಅವರಿಗೆ ಮಾತ್ರ ಕೊಡುವ ಕೆಲಸ ಮಾಡಿದರೆ ಇವತ್ತು ಬಂದಿರುವ ಸಮಸ್ಯೆ ಸಮಸ್ಯೆನೇ ಅಲ್ಲ. ಆದರೆ ಪಕ್ಕದ ಮನೆಯವನಿಗೆ ಸಿಕ್ಕಿದೆ. ನನಗೆ ಸಿಕ್ಕಿಲ್ಲ ಎಂದು ಹೆಚ್ಚಿನವರು ಅಂದುಕೊಳ್ಳುತ್ತಿರುವುದಿಂದ ಮತ್ತು ಅದಕ್ಕಾಗಿ ದಂಬಾಲು ಬೀಳುತ್ತಿರುವುದರಿಂದ ಜಿಲ್ಲಾಡಳಿತ, ಜನಪ್ರತಿನಿಧಿಗಳು ಕೈ ಕಾಲು ಹೊಡೆಯುವ ಸ್ಥಿತಿ ಬಂದಿದೆ. ಕೊಡುವುದಿಲ್ಲ ಎಂದು ಕಾರ್ಪೋರೇಟರ್ ಅಥವಾ ಶಾಸಕ ಹೇಳಿದರೆ “ವೋಟ್ ಕೇಳುವಾಗ ಬರ್ತೀರಲ್ಲ” ಎಂದು ಬ್ಲ್ಯಾಕ್ ಮೇಲ್ ಬೇರೆ. ಹೀಗಾಗಿ ಹೆದರಿ ಉಳ್ಳವರಿಗೂ ಕಿಟ್ ಕೊಡಬೇಕಾದ ಪರಿಸ್ಥಿತಿ. ಇನ್ನು ಕೆಲವರು ಸರಕಾರದ ಸೌಲಭ್ಯವನ್ನು ಹಕ್ಕು ಎಂದು ಅಂದುಕೊಂಡಿದ್ದಾರೆ. ಯಾರೋ ಒಬ್ಬ ಕಾರ್ಯಕರ್ತ ತನ್ನ ಪಕ್ಷದ ಮುಖಂಡರು ಕಳುಹಿಸಿಕೊಟ್ಟ ಕಿಟ್ ಅನ್ನು ಹೊತ್ತು ತಂದು ಮನೆಯ ಬಾಗಿಲಲ್ಲಿ ಇಟ್ಟರೆ ಆ ಟೇರೆಸ್ ಮನೆಯ ಮಾಲೀಕ ” ಇಲ್ಲಿ ಯಾಕೆ ಇಟ್ಟು ಹೋಗ್ತಿಯಾ, ಒಳಗೆ ಇಟ್ಟು ಹೋಗಕ್ಕೆ ಆಗಲ್ವಾ?” ಎಂದು ಜೋರು ಮಾಡಿರುವ ಘಟನೆಗಳು ಕೂಡ ನಡೆದಿವೆ. ಇನ್ನು ಕೆಲವರು ಶಾಸಕರ ಕಚೇರಿಗೆ ಫೋನ್ ಮಾಡಿ ಕಿಟ್ ಮನೆ ಬಾಗಿಲಿಗೆ ಬಂದಾಗ “ಓ ತಂದ್ರಾ, ನಮಗೆ ಅಗತ್ಯ ಇರಲಿಲ್ಲ. ನೀವು ತರ್ತಿರಾ, ಇಲ್ವಾ ಎಂದು ನೋಡಲು ಫೋನ್ ಮಾಡಿದ್ದೆ” ಎಂದು ವ್ಯಂಗ್ಯವಾಗಿ ಹೇಳಿ ಕಿಟ್ ಒಳಗೆ ತೆಗೆದುಕೊಂಡು ಹೋದದ್ದು ಇದೆ. ಇನ್ನು ಕೆಲವರು ತಮ್ಮ ಪ್ರಭಾವ ಬಳಸಿ ಕಾರ್ಪೋರೇಟರ್ ಗಳು ತಂದ ಕಿಟ್ ಗಳನ್ನು ತಮಗೆ ಬೇಕಾದವರಿಗೆ ಕೊಡಿಸಿ ಒಳ್ಳೆಯವರಾದದ್ದು ಇದೆ. ಇದರಿಂದ ಕಿಟ್ ವಿತರಣೆ ಎನ್ನುವುದು ದೊಡ್ಡ ಜೋಕ್ ಆಗಿ ಹೋಗಿದೆ.
ಇನ್ನು ನಮ್ಮ ಸರಕಾರಗಳು ಕಟ್ಟಡ ಕಾರ್ಮಿಕರಿಗೆ ವಿಶೇಷ ಸವಲತ್ತನ್ನು ಘೋಷಿಸಿವೆ. ಅದರ ಅರ್ಥ ಕಟ್ಟಡ ಕಾರ್ಮಿಕರಿಗೆ ಜಿಲ್ಲಾಡಳಿತದ ಖರ್ಚಿನಲ್ಲಿ ಊಟ ಕೊಡುವುದು ಅಲ್ಲ ಎಂದು ಕಟ್ಟಡ ನಿರ್ಮಾಣಕಾರರು ಅರ್ಥ ಮಾಡಿಕೊಂಡರೆ ಸಾಕು. ಇನ್ನು ಕೆಲವು ಪ್ರಚಾರ ಪ್ರಿಯರಿಗೆ ಸಾವಿರದ ವಸ್ತು ಕೊಟ್ಟು ಲಕ್ಷದ ಪ್ರಚಾರ ಪಡೆದುಕೊಳ್ಳಲು ಇದು ಬಂಗಾರದ ಅವಧಿ ಆಗಿದೆ. ಕೆಲವರು ನಾಲ್ಕು ಮನೆಗಳಿಗೆ ಸಹಾಯ ಮಾಡಿ ಹದಿನಾರು ಫೋಟ್ ತೆಗೆದು ಮೂವತ್ತು ಗ್ರೂಪುಗಳಿಗೆ ಕಳುಹಿಸುತ್ತಾರೆ. ನಾನು ಕೇಳುವುದು ಇಷ್ಟೇ. ನೀವು ದಾನ ಕೊಡುವಾಗ ಫೋಟೋ ತೆಗೆಯುವುದೇ ಆಗಿದ್ದರೆ ಸ್ವೀಕರಿಸುವವರಿಗೆ ಒಂದು ಮಾತು ಕೇಳಿ. ಅವರು ಸಣ್ಣದಾಗಿಯೂ ನಾಚಿಕೆ ಪ್ರದರ್ಶಿಸಿದರೆ ತೆಗೆಯಲು ಹೋಗಬೇಡಿ. ಬಲಗೈಯಿಂದ ಕೊಟ್ಟದ್ದು ಎಡಕೈಗೆ ಗೊತ್ತಾಗಬಾರದು ಎನ್ನುವ ಮಾತಿದೆ. ಆದರೆ ಒಬ್ಬರು ಕೊಟ್ಟದ್ದು ಇನ್ನೊಬ್ಬರಿಗೆ ಪ್ರೇರಣೆ ಆಗಿ ಅವರು ಕೂಡ ಕೊಡುವಂತಾದರೆ ಅದು ಖುಷಿ. ಆದರೆ ತೆಗೆದುಕೊಳ್ಳುವವರಿಗೆ ಫೋಟೋ ಹಿಂಸೆ ಆಗದಂತೆ ನೋಡಿಕೊಳ್ಳಿ. ಯಾಕೆಂದರೆ ಕರಾವಳಿಯ ಜನ ಸ್ವಾಭಿಮಾನಿಗಳು. ಇವತ್ತೇನೋ ಕಷ್ಟ ಬಂದಿದೆ ಎಂದು ನಿಮ್ಮ ಬಳಿ ಕೈಚಾಚಿರಬಹುದು. ಅದು ಅವರ ವೀಕ್ ನೆಸ್ ಅಲ್ಲ, ಪರಿಸ್ಥಿತಿ ಅಷ್ಟೇ. ಎಲ್ಲವನ್ನು ಮೇಲಿನವನು ನೋಡುತ್ತಿದ್ದಾನೆ. ಅವನ ತಕ್ಕಡಿ ಬೇರೆನೆ ಇದೆ!
- Advertisement -
Leave A Reply