ಪಾಲಿಕೆಯ ಪಾಸುಗಳ ಹಣೆಬರಹ ಬೇಗ ತಿಳಿಸಿ!!
ಅರ್ಜೆಂಟಾಗಿ ನಮ್ಮ ಉಸ್ತುವಾರಿ ಸಚಿವರು ಅಥವಾ ಸಂಸದರು ಒಂದು ನಿರ್ಧಾರಕ್ಕೆ ಬಂದು ಬಿಡಬೇಕು ಅಥವಾ ಜಿಲ್ಲಾಧಿಕಾರಿ ಅಥವಾ ಪೊಲೀಸ್ ಕಮೀಷನರ್ ಅವರಲ್ಲಿ ಒಬ್ಬರಾದರೂ ಕನಿಷ್ಟ ಟ್ವೀಟ್ ಮಾಡಿಯಾದರೂ ಒಂದು ಗೊಂದಲ ಪರಿಹರಿಸಬೇಕು. ಅದೇನೆಂದರೆ ಮಂಗಳೂರು ಮಹಾನಗರ ಪಾಲಿಕೆಯಿಂದ ಈಗಾಗಲೇ ಕೊಟ್ಟಿರುವ ಪಾಸುಗಳು ನಿಜಕ್ಕೂ ಅಸ್ತಿತ್ವವನ್ನು ಹೊಂದಿದೆಯಾ ಎನ್ನುವುದು.
ಲಾಕ್ ಡೌನ್ ಘೋಷಣೆ ಆದ ನಂತರ ಪಾಲಿಕೆ ವ್ಯಾಪ್ತಿಯಲ್ಲಿ ಊಟ ಹಂಚುವವರಿಗೆ, ಕಿಟ್ ಕೊಡುವವರಿಗೆ, ಆರೋಗ್ಯ ಕಾರ್ಯಕರ್ತರಿಗೆ, ಡ್ರೈನೇಜ್ ಮತ್ತು ವಾಟರ್ ವಾಲ್ ನಿರ್ವಹಣೆ ಮಾಡುವವರಿಗೆ, ನೀರು ಲೀಕೆಜ್ ಆದರೆ ಸರಿ ಮಾಡುವವರಿಗೆ, ರಖಂ ಜಿನಸಿ ಮತ್ತು ತರಕಾರಿಯವರಿಂದ ಚಿಲ್ಲರೆ ವ್ಯಾಪಾರಸ್ಥರಿಗೆ ಹೀಗೆ ಸುಮಾರು 3000 ಜನರಿಗೆ ಪಾಸ್ ನೀಡಲಾಗಿತ್ತು. ಆದರೆ ಈಗ ಕಳೆದ ಐದು ದಿನಗಳಿಂದ ಆ ಪಾಸು ಇದ್ದವರನ್ನು ಪೊಲೀಸರು ನಿಲ್ಲಿಸುತ್ತಿದ್ದಾರೆ. ಪಾಲಿಕೆಯ ಈ ಪಾಸು ಈಗ ನಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಆನ್ ಲೈನ್ ನಲ್ಲಿ ಆಹಾರ ಪೂರೈಸುವ ಝೋಮೆಟೋ, ಸುಗ್ಗಿ ನಂತವರು ಸಹಾಯಕ ಕಮೀಷನರ್ (ಎಸಿ) ಯವರಿಂದ ಆನ್ ಲೈನ್ ನಲ್ಲಿ ಅರ್ಜಿ ಹಾಕಿ ಪಾಸು ಮಂಜೂರು ಮಾಡಿಕೊಂಡಿರುವುದರಿಂದ ಅವರಿಗೆ ಸದ್ಯ ಏನೂ ತೊಂದರೆ ಇಲ್ಲ. ಆದರೆ ಸದ್ಯ ಎಸಿಯವರು ಕೂಡ ಆನ್ ಲೈನ್ ನಲ್ಲಿ ಕೊಡುವ ಪಾಸುಗಳನ್ನು ನಿಲ್ಲಿಸಿಬಿಟ್ಟಿದ್ದಾರೆ. ಈಗ ಇತ್ತ ಪಾಲಿಕೆಯವರ ಪಾಸು ನಡೆಯುವುದಿಲ್ಲ, ಎಸಿಯವರ ಪಾಸು ಬಂದ್ ಆಗಿರುವುದರಿಂದ ನಿಜವಾಗಿಯೂ ಪಾಸಿನ ಅಗತ್ಯ ಇದ್ದವರು ಏನು ಮಾಡಬೇಕು.
ನನ್ನ ಒಳ್ಳೆಯ ಪರಿಚಯಸ್ಥರಾದ ನಮೃತಾ ಎನ್ ಶೆಣೈ ಎನ್ನುವವರು ನಿತ್ಯ ಬೀದಿಬದಿ ನಾಯಿಗಳಿಗೆ ಆಹಾರ ಹಾಕುತ್ತಾರೆ. ಅದು ನಿಜಕ್ಕೂ ಪುಣ್ಯದ ಕಾರ್ಯ. ಅವರು ಬೀದಿನಾಯಿಗಳಿಗಾಗಿಯೇ ಪ್ರತ್ಯೇಕ ಆಹಾರ ಬೇಯಿಸಿ ತಂದು ಡೊಂಗರಕೇರಿ, ಕೊಡಿಯಾಲ್ ಗುತ್ತು ಭಾಗಗಳಲ್ಲಿ ಹಂಚುತ್ತಾರೆ. ಇವರು ತರುವ ಆಹಾರಕ್ಕಾಗಿಯೇ ಕಾದು ಕುಳಿತುಕೊಳ್ಳುವ ಬೀದಿ ನಾಯಿಗಳ ಗುಂಪೇ ದೊಡ್ಡದಿದೆ. ಅವರಿಗೆ ನಾನು ಪಾಲಿಕೆ ವತಿಯಿಂದ ಪಾಸು ಕೊಡಿಸಿದ್ದೆ. ಇನ್ನು ನನ್ನ ಫ್ಲಾಟಿನಲ್ಲಿ ಒಬ್ಬರು ಮಂಗಳೂರು ನಗರದ ಸುಮಾರು 40 ಮನೆಗಳಲ್ಲಿ ವಾಸಿಸುವ ವೃದ್ಧ ಜೀವಗಳಿಗೆ ನಿತ್ಯ ಆಹಾರ ಒದಗಿಸುವ ಕಾಯಕ ಮಾಡಿಕೊಂಡಿದ್ದಾರೆ. ಅವರು ತರುವ ಆಹಾರವನ್ನೇ ಕಾದು ಕುಳಿತುಕೊಳ್ಳುವ ಜೀವಗಳನ್ನು ನೋಡುವಾಗ ಅಯ್ಯೋ ಅನಿಸುತ್ತದೆ. ನಾನು ಅವರಿಗೂ ಪಾಸು ಕೊಡಿಸಿದ್ದೆ. ಈಗ ಪೊಲೀಸರು ಇವರಿಬ್ಬರನ್ನು ತಡೆದು ಪಾಲಿಕೆ ಕಡೆಯಿಂದ ಸಿಕ್ಕಿರುವ ಪಾಸುಗಳು ನಡೆಯುವುದಿಲ್ಲ ಎಂದು ಖಂಡಾತುಂಡವಾಗಿ ಹೇಳಿದ್ದಾರೆ. ಈಗ ಇದರಿಂದ ಅವರಿಬ್ಬರಿಗೂ ಬೇಸರವಾಗಿದೆ.
ಪಾಸುಗಳನ್ನು ಕೊಡುವುದು ಜಿಲ್ಲಾಡಳಿತದ ಸ್ವನಿರ್ಧಾರ ಎನ್ನುವುದನ್ನು ನಾನು ಒಪ್ಪುತ್ತೇನೆ. ಅವರು ಬೇಕಾಬಿಟ್ಟಿಯಾಗಿ ಪಾಸು ಹಂಚಬೇಕು ಎಂದು ನಾನು ಬಯಸುವುದಿಲ್ಲ. ಆದರೆ ಈಗ ನೀಡಿರುವ ಪಾಲಿಕೆ ಕಡೆಯ ಪಾಸುಗಳನ್ನು ಏಕಾಏಕಿ ನಿಲ್ಲಿಸಿದರೆ ಜನರು ಏನು ಮಾಡಬೇಕು. ಅವರನ್ನು ಅರ್ಥ ದಾರಿಯಲ್ಲಿ ನಿಲ್ಲಿಸಿ ಜೋರು ಮಾಡಿದರೆ, ಗಂಡಸರಿಗೆ ಹಿಂದೆ ಎರಡು ಬಾರಿಸಿ ಕಳುಹಿಸಿದರೆ ಅವರು ತಾನೆ ಏನು ಮಾಡಿಯಾರು? ಪೊಲೀಸ್ ಕಮೀಷನರ್ ಅವರು ತಮ್ಮ ಸಿಬ್ಬಂದಿಗಳಿಗೆ ಒಮ್ಮೆ ಇಂತಹ ಸೂಚನೆ ಕೊಟ್ಟಿದ್ದಾರೆ ಎಂದಾದರೆ ಅದನ್ನು ಪತ್ರಿಕೆಯ ಮೂಲಕ ತಿಳಿಸಲಿ ಅಥವಾ ಅವರು ಆಗಾಗ ಮಾಡುವಂತೆ ವಿಡಿಯೋ ಮಾಡಿ ಪ್ರಸರಿಸಲಿ. ಅದರೊಂದಿಗೆ ಈಗ ಪಾಲಿಕೆ ಕಡೆಯಿಂದ ಇರುವ ಪಾಸುಗಳ ಹಣೆಬರಹವನ್ನು ತಿಳಿಸಲಿ. ಇನ್ನು ಈ ವಿಷಯದಲ್ಲಿ ಮೇಯರ್ ಅಥವಾ ಶಾಸಕರು ಕೂಡ ಜನರಿಗೆ ಆಗಿರುವ ತೊಂದರೆಯನ್ನು ಅರ್ಥ ಮಾಡಿಕೊಳ್ಳಬೇಕು. ನೀವೆಲ್ಲ ಕೊರೊನಾ ವಿಷಯದಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದಿರಿ. ಆದರೆ ಒಂದಿಷ್ಟು ಸಾಮಾನ್ಯ ಜ್ಞಾನವಿರುವ ಪ್ರಯೋಗಗಳನ್ನು ಮಾಡಿ. ಪಾಲಿಕೆ ಮತ್ತು ಜಿಲ್ಲಾಧಿಕಾರಿ ಕಚೇರಿಯ ನಡುವೆ ಸಮನ್ವಯ ಇರಲಿ. “ಧರ್ಮ”ಕ್ಕೆ ಜನರು ಸಿಕ್ಕಿದ್ದಾರೆಂದು “ರಾಜ”ರಂತೆ ಏನೇನೋ ಮಾಡಲು ಹೋದರೆ ಜನ ಈಗ ಸಹಿಸಿಯಾರು. ಆದರೆ ನಿಮ್ಮ ಇಮೇಜ್ ಹಾಳಾಗಿ ಹೋಗುತ್ತದೆ. ಅದಕ್ಕಿಂತ ಮುಖ್ಯವಾಗಿ ಆ ಹಿರಿಯ ಜೀವಗಳ ಮತ್ತು ಬೀದಿ ಬದಿ ಕಾಯುತ್ತಿರುವ ಮೂಕಜೀವಗಳ ಶಾಪ ತಟ್ಟುತ್ತದೆ!!
Leave A Reply