ಶವ ನಿನ್ನ ಮನೆಯಲ್ಲಿಯೂ ಇಡಬಹುದಲ್ಲ, ಖಾದರ್!!
ಮಾಜಿ ಆರೋಗ್ಯ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಅವರು ಹತಾಶೆಗೊಳಗಾಗಿದ್ದಾರಾ? ಕೊರೊನಾ ವಿರುದ್ಧದ ಸಮರದಲ್ಲಿ ಈ ಜಿಲ್ಲೆಯ ಬಿಜೆಪಿಯ ಏಳು ಜನ ಶಾಸಕರು ಮಾಡುತ್ತಿರುವ ಸೇವಾಕಾರ್ಯದಿಂದ ಟೆನ್ಷನ್ ಗೆ ಬಿದ್ದಿದ್ದಾರಾ? ತಾವು ಇನ್ಯಾವತ್ತೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಕನಸಿನಲ್ಲಿಯೂ ಸಾಧ್ಯವಿಲ್ಲ ಎಂದು ಭ್ರಮನಿರಸನಗೊಂಡು ಬಿಟ್ಟರಾ? ಎಲ್ಲದಕ್ಕಿಂತ ಹೆಚ್ಚಾಗಿ ಬೇರೆ ಕ್ಷೇತ್ರದ ಶಾಸಕರು ತಮ್ಮ ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ಬಂದು ಸಾವಿರಗಟ್ಟಲೆ ಕಿಟ್ ವಿತರಿಸುತ್ತಿರುವುದು ಖಾದರ್ ನಿದ್ರೆಗೆಡಿಸಿಬಿಟ್ಟಿದೆಯಾ? ಯಾವುದು ನಿಜ ಮತ್ತು ಖಾದರ್ ಯಾಕೆ ಹೀಗೆ ತಮ್ಮ ಘನತೆಯನ್ನು ಮರೆತು ವರ್ತಿಸಿದರು ಎಂದು ಸಭ್ಯ ಅಧಿಕಾರಿಗಳು ಯೋಚಿಸಿ ಸುಸ್ತಾಗಿದ್ದಾರೆ.
ಹಿಂದೆಯಿಂದ ಹೇಗೆ ಇರಲಿ ಸಾಮಾನ್ಯವಾಗಿ ಎದುರಿನಿಂದ ತಮ್ಮ ಒರಗೆಯ ಶಾಸಕರು ಸಿಕ್ಕಿದರೆ ನಾಟಕೀಯವಾಗಿಯಾದರೂ ನಗು ತಂದುಕೊಂಡು ಮಾತನಾಡುವುದು ಖಾದರ್ ಜಾಯಮಾನ. ಅದರಿಂದಲೇ ಖಾದರ್ ವಿರುದ್ಧ ಅಂತಹ ಪ್ರತಿಭಟನಾರ್ಥಕ ನಡುವಳಿಕೆ ಇಲ್ಲಿನ ಶಾಸಕರಿಂದ ಕಂಡುಬಂದಿರುವುದು ಕಡಿಮೆ. ಮೊನ್ನೆ ಲಾಕ್ ಡೌನ್ ನ ಒಂದು ದಿನ ಸ್ವತ: ಖಾದರ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಆಪ್ತಸ್ನೇಹಿತರಂತೆ ಬೇರೆ ಬೇರೆ ಬೈಕಿನಲ್ಲಿ ಒಟ್ಟಿಗೆ ನಗರ ಸಂಚಾರ ಮಾಡುವಾಗ ನಮ್ಮ ಶಾಸಕರು ಎಷ್ಟು ಅನೋನ್ಯವಾಗಿದ್ದಾರೆ ಎಂದು ಸಮಾಧಾನ ಪಟ್ಟವರೆಷ್ಟೋ ಜನ. ಅಂತಹ ಖಾದರ್ ಕೆಲವೇ ದಿನಗಳ ಅಂತರದಲ್ಲಿ ಅದೇ ವೇದವ್ಯಾಸ ಕಾಮತ್ ಅವರಿಗೆ ವೈಯಕ್ತಿಕ ಮಟ್ಟದಲ್ಲಿ ಟೀಕಿಸುತ್ತಾರೆ ಎಂದರೆ ಕಾನೂನು ಪದವೀಧರ ಶಾಸಕ ಖಾದರ್ ಅವರಿಗೆ ವಿದ್ಯೆಯೊಂದಿಗೆ ವಿನಯ ಬರಲಿಲ್ಲವೇ ಎನ್ನುವುದು ಈಗ ಉಳಿದಿರುವ ಪ್ರಶ್ನೆ. ಅದಕ್ಕೆ ವೇದಿಕೆಯಾಗಿ ಹೋದದ್ದು ಬುಧವಾರದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಡುವಿನ ಪ್ರಮುಖ ಸಭೆ.
ಮೀಟಿಂಗ್ ನಡೆಯುವಾಗ ಖಾದರ್ ಅವರು ಅಟಕಾಯಿಸಿಕೊಂಡದ್ದು ಒಂದೇ ಹೇಳಿಕೆಗೆ ” ನೀವು ಶವ ರಾಜಕೀಯ ಮಾಡಿದ್ದೀರಿ, ಶವ ಹಿಡಿದುಕೊಂಡು ಊರಿಡೀ ತಿರುಗಾಡಿದ್ದೀರಿ” ಅದಕ್ಕೆ ಕಾಮತ್ ಅವರು ” ನಾವು ಶವವನ್ನು ಎಲ್ಲಾ ಕಡೆ ತೆಗೆದುಕೊಂಡು ಹೋಗಿಲ್ಲ” ಎಂದಿದ್ದಾರೆ. ಆದರೆ ಖಾದರ್ ಮತ್ತೆ ಮತ್ತೆ ಅದೇ ವಿಷಯವನ್ನು ಎತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಯವರು “ಶವವನ್ನು ತೆಗೆದುಕೊಂಡು ನಗರವೀಡಿ ಸುತ್ತಾಡಿಲ್ಲ” ಎಂದು ಸ್ಪಷ್ಟನೆ ಕೊಟ್ಟರೂ ಖಾದರ್ ಕೇಳುವ ಸ್ಥಿತಿಯಲ್ಲಿ ಇರಲೇ ಇಲ್ಲ. ಕಡೆಗೆ ಶಾಸಕ ಕಾಮತ್ ಅವರೆಡೆ ತಿರುಗಿದ ಶಾಸಕ ಖಾದರ್ ” ಹಾಗಾದರೆ ಶವ ನೀನು ಮನೆಯಲ್ಲಿ ಇಟ್ಟಿದ್ದಿಯಾ?” ಎಂದು ಕಾಮತ್ ಅವರಲ್ಲಿ ಕೇಳಿದ್ದಾರೆ. ಇದು ಖಾದರ್ ಅಸಭ್ಯದ ಪರಾಕಾಷ್ಟೆ.
ನಾವು ದಕ್ಷಿಣ ಕನ್ನಡ ಜಿಲ್ಲೆಯವರು ಸಾಮಾನ್ಯವಾಗಿ ಶಿಷ್ಠಾಚಾರದ ಪರಿಧಿಯಲ್ಲಿಯೇ ಮಾತನಾಡುತ್ತೇವೆ. ಆದರೆ ಖಾದರ್ ಅವರ ಹತಾಶೆ, ಸಂಕಟ ಎಷ್ಟರಮಟ್ಟಿಗೆ ಅವರಲ್ಲಿ ಇಂತಹ ಮಾತುಗಳನ್ನು ಹೊರಡಿಸುತ್ತಿದೆ ಎಂದರೆ ಅವರಿಗೆ ಒಂದು ವಿಷಯ ಅರ್ಥವಾಗಿದೆ. ತಾವು ಲಾಕ್ ಡೌನ್ ಅವಧಿಯಲ್ಲಿ ಜನರನ್ನು ಸರಿಯಾಗಿ ನೋಡಿಕೊಂಡಿಲ್ಲ. ಹಾಗಿರುವಾಗ ಈ ರೀತಿಯ ಕಳಪೆ ಹೇಳಿಕೆ ಕೊಟ್ಟು ತಮ್ಮ ಸಮುದಾಯದ ಜನರನ್ನು ಸಂತೃಪ್ತಿಗೊಳಿಸೋಣ ಎಂದು ನಿರ್ಧರಿಸಿಬಿಟ್ಟಿದ್ದಾರೆ. ಅದಕ್ಕಾಗಿ ಹೀಗೆ ಮಾತನಾಡಿದ್ದಾರೆ.
ಆದರೆ ಕಾಮತ್ ಕೂಡ ಸುಲಭದಲ್ಲಿ ಬಿಡುವ ಜಾಯಮಾನದವರಲ್ಲ. ” ನೀವು ಇಟಲಿಯಿಂದ ಬೆಂಗಳೂರಿಗೆ ಬಂದ ಆ ಹುಡುಗಿಯನ್ನು ಎಲ್ಲಾ ಕಾನೂನು ಮೀರಿ ಮಂಗಳೂರಿಗೆ ಕರೆದುಕೊಂಡು ಬಂದಿಲ್ವಾ? ಅಷ್ಟೇ ಯಾಕೆ ಮಂಗಳೂರಿನಿಂದ ಒಬ್ಬರನ್ನು ಕಾಪುವಿಗೆ ಕರೆದುಕೊಂಡು ಹೋಗಿ ಲಾಕ್ ಡೌನ್ ನಿಯಮ ಮೀರಿಲ್ವಾ” ಎಂದು ಕೇಳಿದ್ದಾರೆ. ಅದಕ್ಕೆ ಧ್ವನಿಗೂಡಿಸಿದ ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಅವರು ಲಾಕ್ ಡೌನ್ ಇದ್ದರೂ ಮಾಜಿ ಸಚಿವ ರಮಾನಾಥ್ ರೈ ಅವರು ಪಾದಯಾತ್ರೆ ಅದು ಇದು ಮಾಡುತ್ತಿದ್ದಾರಲ್ಲ, ನಿಮಗೆ ಲಾಕ್ ಡೌನ್ ನಿಯಮ ಗೊತ್ತಿಲ್ವಾ?” ಎಂದು ಸರಿಯಾಗಿ ಝಾಡಿಸಿದ್ದಾರೆ.
ನಾನೀಗ ಹೇಳುವುದೇನೆಂದರೆ ರಾಜಕೀಯ ಏನೂ ಇರಬಹುದು. ಖಾದರ್ ಅವರಿಗೆ ತಮ್ಮ ಸಮುದಾಯದ ಒತ್ತಡ ಇರಬಹುದು. ತಮ್ಮ ಕ್ಷೇತ್ರದಲ್ಲಿ ಜನರು ತಮಗೆ ಸಿಗುತ್ತಿರುವ ಕಿಟ್ ಖಾದರ್ ಅವರದ್ದಲ್ಲ, ಬಿಜೆಪಿಯವರದ್ದು ಎಂದು ಮಾತನಾಡುತ್ತಿರುವುದು ಖಾದರ್ ಅವರಿಗೆ ಇರಿಸುಮುರಿಸು ಉಂಟು ಮಾಡಿರಬಹುದು. ತಮ್ಮ ಪಕ್ಷದವರ ಕಣ್ಣಿನಲ್ಲಿ ಹೀರೋ ಆಗುವ ಹಪಾಹಪಿ ಇರಬಹುದು. ಮೇಲಿನವರ ಒತ್ತಡ ಇರಬಹುದು. ಖಾದರ್ ವಿರೋಧ ಪಕ್ಷದವರ ಜೊತೆ ಬೈಕಿನಲ್ಲಿ ಸುತ್ತಾಡಿ ಚೆನ್ನಾಗಿದ್ದಾರೆ ಎನ್ನುವ ಮೂದಲಿಕೆ ಬರುತ್ತಿರಬಹುದು. ಎಲ್ಲವೂ ಇರಬಹುದು. ಆದರೆ ಸಭ್ಯತೆ. ಅದನ್ನು ಈ ಜಿಲ್ಲೆಯ ಮಣ್ಣು ಖಾದರ್ ಅವರಿಗೆ ಕಲಿಸಿದೆ ಎಂದಾದರೆ ಅವರು ಮುಂದೆ ಹೀಗೆ ಮಾತನಾಡುವುದು ಅವರಿಗೆ ಮತ್ತು ಈ ನೆಲಕ್ಕೆ ಶೋಭೆ ತರುವುದಿಲ್ಲ!
Leave A Reply