ಬ್ರಾಹ್ಮಣರಿಗೆ ಜಾತಿ ಪ್ರಮಾಣಪತ್ರ ಕೊಡಲು ಕೊನೆಗೂ ಬಂತು ಸಮಯ!!
ಬ್ರಾಹ್ಮಣರು ಒಂದು ಜಾತಿ ಅಲ್ವಾ ಎನ್ನುವ ವಾಕ್ಯದೊಂದಿಗೆ ಈ ಜಾಗೃತ ಅಂಕಣವನ್ನು ಪ್ರಾರಂಭಿಸಬೇಕಾಗಿದೆ. ಒಂದು ವೇಳೆ ಬ್ರಾಹ್ಮಣರದ್ದು ಒಂದು ಜಾತಿ ಎಂದಾದರೆ ಅವರಿಗೆ ಜಾತಿ ಪ್ರಮಾಣ ಪತ್ರವನ್ನು ಸರಕಾರ ಯಾಕೆ ಕೊಡಬಾರದು ಎನ್ನುವುದು ಎರಡನೇ ಪ್ರಶ್ನೆ. ಇನ್ನು ಮೂರನೇ ಮತ್ತು ಕೊನೆಯ ಪ್ರಶ್ನೆ ಎಂದರೆ ಒಂದು ವೇಳೆ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ಕೊಡಲು ಸರಕಾರ ಒಪ್ಪಿದ್ದೆ ಎಂದಾದರೆ ಅದಕ್ಕೆ ಬೇರೆಯವರು ವಿರೋಧ ಮಾಡುವುದು ಯಾಕೆ? ಈ ಮೂರು ಪ್ರಶ್ನೆಗಳನ್ನು ನಿಮ್ಮ ಮುಂದೆ ಇಟ್ಟು ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಈಗ ಮಾಡಬೇಕಿದೆ. ಬ್ರಾಹ್ಮಣರಲ್ಲಿ ಎಲ್ಲರೂ ಶ್ರೀಮಂತರಲ್ಲ. ಬಹುತೇಕ ಜನ ಮಧ್ಯಮ ವರ್ಗದವರು ಇದ್ದಾರೆ. ಅನೇಕರು ಬಡವರೂ ಇದ್ದಾರೆ. ಯಾರೋ, ಯಾವುದೋ ಕಾಲದಲ್ಲಿ ಬ್ರಾಹ್ಮಣರನ್ನು ಮೇಲ್ಜಾತಿಯವರು ಎಂದು ಕರೆದುಬಿಟ್ಟ ಕಾರಣ ಸರಕಾರ ಬ್ರಾಹ್ಮಣರಿಗೆ ಯಾವುದೇ ಉಪಕಾರ ಮಾಡುವ ಗೋಜಿಗೆ ಹೋಗಿಲ್ಲ. ಏನೋ ಅದೃಷ್ಟದಿಂದ ಆದಾಯ ಪ್ರಮಾಣಪತ್ರ ಸಿಗುತ್ತದೆ ಬಿಟ್ಟರೆ ಜಾತಿ ಪ್ರಮಾಣಪತ್ರ ಇನ್ನು ಮರಿಚೀಕೆಯಾಗಿಯೇ ಉಳಿದಿದೆ. ಇದು ತಪ್ಪು. ಈಗ ಭಾರತೀಯ ಜನತಾ ಪಾರ್ಟಿಯ ಸರಕಾರ ರಾಜ್ಯದಲ್ಲಿ ಇರುವುದರಿಂದ ಇನ್ನು ಬರುವ ದಿನಗಳಲ್ಲಿ ಜಾತಿ ಸರ್ಟಿಫೀಕೇಟ್ ಸಿಗುವ ಎಲ್ಲಾ ಸಾಧ್ಯತೆ ಇದೆ. ಆದರೆ ದುರಾದೃಷ್ಟವಶಾತ್ ಅದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಈ ಬಗ್ಗೆ ಕಿಡಿ ಕಾರುತ್ತಿದ್ದಾರೆ. ಬ್ರಾಹ್ಮಣರಿಗೆ ಏಕೆ ಪ್ರಮಾಣಪತ್ರ ನೀಡಬೇಕು ಎಂದು ನಂಜು ಕಾರುತ್ತಿದ್ದಾರೆ. ಒಂದು ವೇಳೆ ಬ್ರಾಹ್ಮಣರಿಗೆ ಜಾತಿ ಪ್ರಮಾಣಪತ್ರ ನೀಡಿದರೆ ಮುಂದೆ ಅವರು ಮೀಸಲಾತಿ ಕೂಡ ಕೇಳುತ್ತಾರೆ ಎನ್ನುವ ಸಂಶಯ ಕೆಲವರಿಗೆ ಇರುವುದರಿಂದ ಈಗ ಎದ್ದಿರುವ ವಿವಾದ ಯಾವ ಅಂತ್ಯಕ್ಕೆ ಹೋಗುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಒಬ್ಬ ವ್ಯಕ್ತಿ ಪೂಜಾರಿ ಎಂದು ಸರ್ ನೇಮ್ ಇದ್ದರೆ ಅವರಿಗೆ ಬಿಲ್ಲವ ಎಂದು ಜಾತಿ ಪ್ರಮಾಣಪತ್ರ ಸಿಗುತ್ತದೆ. ಶೆಟ್ಟಿ, ರೈ, ಆಳ್ವ ಎಂದು ಇದ್ದರೆ ಬಂಟ ಎಂದು ಜಾತಿ ಪ್ರಮಾಣಪತ್ರ ಸಿಗುತ್ತದೆ. ಹಾಗೇ ಎಸ್ ಸಿ/ಎಸ್.ಟಿಗಳಿಗೆ, ಮುಸ್ಲಿಮರಿಗೆ, ಕೈಸ್ತರಿಗೆ ಸಿಗುವ ಪ್ರಮಾಣಪತ್ರ ಬ್ರಾಹ್ಮಣರಿಗೆ ಯಾಕೆ ಇಲ್ಲ. ಇನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜು ಭಾಷಾ ಅಲ್ಪಸಂಖ್ಯಾತ ಅಡಿಯಲ್ಲಿ ಬರುತ್ತದೆ. ಇಲ್ಲಿ ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೀಟುಗಳಲ್ಲಿ ಮೀಸಲಾತಿ ಇದೆ. ಹಾಗೆ ಎ.ಜೆ. ಆಸ್ಪತ್ರೆಯಲ್ಲಿ ಬಂಟರಿಗೂ ಅಂತಹುದೇ ಅವಕಾಶಗಳಿರುತ್ತವೆ. ಆದರೆ ಕೆಎಂಸಿಯಲ್ಲಿ ನಾವು ಜಿಎಸ್ ಬಿಗಳೆಂದು ಸರ್ಟಿಫೀಕೇಟ್ ತೋರಿಸಬೇಕಾದರೆ ನಮ್ಮ ದೇವಸ್ಥಾನಗಳಲ್ಲಿ ಬರೆದು ಕೊಡುವ ಪತ್ರವನ್ನು ತೋರಿಸಬೇಕೆ ವಿನ: ಸರಕಾರ ಇಲ್ಲಿಯ ತನಕ ಕೊಡುವ ವ್ಯವಸ್ಥೆ ಇರಲಿಲ್ಲ. ಆದರೆ ಜಿಎಸ್ ಬಿಗಳಲ್ಲಿ ಬರುವ ಸರ್ ನೇಮ್ ಬೇರೆ ಜಾತಿಗಳಲ್ಲಿ ಬರುವುದಿಲ್ಲವಾದ್ದರಿಂದ ನಮ್ಮಲ್ಲಿ ಅಂತಹ ಗೊಂದಲ ಇಲ್ಲ. ಬೇಕಾದರೆ ಕೆಲವು ಸರ್ ನೇಮ್ ಗಳನ್ನೇ ತೆಗೆದುಕೊಳ್ಳಿ. ಸಾಲಿಯಾನ್, ಇದು ಬಿಲ್ಲವ, ಕುಂಬಾರ, ಮೊಗವೀರ ಎಲ್ಲದರಲ್ಲಿಯೂ ಬರುತ್ತದೆ. ಅದೇ ಜಿಎಸ್ ಬಿಗಳಲ್ಲಿ ಬರುವ ಕಾಮತ್, ಪೈ, ಶೆಣೈ ಸಹಿತ ಬಹುತೇಕ ಸರ್ ನೇಮ್ ಇದರಲ್ಲಿ ಮಾತ್ರ ಇವೆ. ಈಗ ಕೆಲವರಿಗೆ ಏನು ಆತಂಕ ಎಂದರೆ ಬ್ರಾಹ್ಮಣರಿಗೂ ಮುಂದೆ ಸರಕಾರ ಮೀಸಲಾತಿ ಕೊಡುತ್ತದೆಯಾ ಎನ್ನುವುದು. ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಪ್ರಕಾರ ಮೀಸಲಾತಿ ಫುಲ್ ಆಗಿದೆ. ಇನ್ನು ಒಂದು ವೇಳೆ ಮೀಸಲಾತಿ ಕೊಡುವುದೇ ಆದರೆ ಈಗ ಇರುವ ಮೀಸಲಾತಿ ಕ್ಯಾಟಗರಿಯಿಂದ ಯಾರನ್ನಾದರೂ ಕೈ ಬಿಡಬೇಕು. ಹಾಗೆ ಮಾಡಲು ಸದ್ಯಕ್ಕಂತೂ ಸಾಧ್ಯವಿಲ್ಲ. ಯಾಕೆಂದರೆ ಹಾಗೆ ಮಾಡಿದರೆ ಇಡೀ ದೇಶದಲ್ಲಿ ಹೊಸ ಗಲಾಟೆ ಶುರುವಾಗಬಹುದು. ಈ ಕೊರೊನಾ ವಿವಾದಗಳ ಮಧ್ಯದಲ್ಲಿ ಸರಕಾರಕ್ಕೆ ಹೊಸ ತಲೆನೋವು ತಂದುಕೊಳ್ಳುವ ಉತ್ಸಾಹ ಇಲ್ಲ. ಆದರೆ ಈಗ ಯಾರಿಗೆ ಮೀಸಲಾತಿ ಸಿಗುತ್ತಿದೆಯೋ ಅವರಲ್ಲಿ ಹಲವರು ಒಂದು ಲೆಕ್ಕದಲ್ಲಿ ಆರ್ಥಿಕವಾಗಿ ಮುಂದೆ ಬಂದ್ ಆಗಿದೆ. ಒಂದು ಕಾಲದಲ್ಲಿ ಯಾರಿಗೆ ಮೀಸಲಾತಿ ಕೊಡಬೇಕು ಎಂದು ನಿರ್ಧರಿತವಾಗಿತ್ತೋ ಅವರ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಆದಾಯ ತುಂಬಾ ಕಡಿಮೆ ಇತ್ತು. ಅದಕ್ಕಾಗಿ ಅವರಿಗೆ ಆಗ ಮೀಸಲಾತಿ ಅಗತ್ಯ ಇತ್ತು. ಆದರೆ ಈಗ ಹಾಗೆ ಇಲ್ಲ. ಮೀಸಲಾತಿಯನ್ನು ಪಡೆದುಕೊಂಡವರು ಅದಕ್ಕೆ ಅರ್ಹರಲ್ಲದಿದ್ದರೂ ಈಗಲೂ ಪಡೆದುಕೊಳ್ಳುತ್ತಿರುವುರಿಂದ ನೈಜ ಅರ್ಹರಿಗೆ ಅವಕಾಶ ವಂಚನೆಯಾಗಿದೆ. ಇದರಿಂದ ಏನಾಗಿದೆ ಎಂದರೆ ಒಬ್ಬ ಬ್ರಾಹ್ಮಣ ಉತ್ತಮ ದರ್ಜೆಯಲ್ಲಿ ಸಾಧನೆ ಮಾಡಿದರೂ ಆತನಿಗೆ ಸಿಗಬೇಕಾದ ಸೀಟು ಅಥವಾ ಹುದ್ದೆ ಬೇರೆಯವರ ಪಾಲಾಗುತ್ತಿದೆ. ಇದು ಭವಿಷ್ಯದಲ್ಲಿ ಹೇಗೆ ಆಗುತ್ತದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಈ ದೇಶದ ಮಣ್ಣಿನಲ್ಲಿ ಹುಟ್ಟಿದ ಬ್ರಾಹ್ಮಣರು ತಮ್ಮದೇ ಜಾತಿ ಪ್ರಮಾಣಪತ್ರ ಪಡೆದುಕೊಳ್ಳಲು ಇನ್ನು ಕಾಯಬೇಕಾಗಿದೆಯಲ್ಲ ಎನ್ನುವುದು ಅತ್ಯಂತ ಬೇಸರದ ಸಂಗತಿ!
Leave A Reply