ಸಿಂಧೂ ರೂಪೇಶ್ ವರ್ಗಾವಣೆಯ ಹಿಂದೆ ಇತ್ತಾ ಒತ್ತಡ..?
ನಿನ್ನೆ ತನಕ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ರೂಪೇಶ್ ಅವರು ಸಡನ್ನಾಗಿ ಆ ಸ್ಥಾನದಿಂದ ವರ್ಗಾವಣೆಗೊಂಡಿದ್ದಾರೆ. ಅವರ ಸ್ಥಾನಕ್ಕೆ ಡಾ.ರಾಜೇಂದ್ರ ಅವರು ಬಂದಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಅವರ ವರ್ಗಾವಣೆಗೆ ಏನು ಕಾರಣ ಎಂದು ಚರ್ಚೆಯಾಗುತ್ತಿದೆ. ಮೊದಲನೇಯದಾಗಿ ಇಡೀ ರಾಜ್ಯದಲ್ಲಿ ಇವರದೊಬ್ಬರದ್ದು ಮಾತ್ರ ವರ್ಗಾವಣೆಯಾಗಿರುವುದಿಲ್ಲ. ಇವರನ್ನು ಸೇರಿ ಒಟ್ಟು 13 ಐಎಎಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಹಾಗಿರುವಾಗ ಇವರ ವರ್ಗಾವಣೆಗೆ ಮಾತ್ರ ಏನೋ ದೊಡ್ಡ ಕಾರಣ ಇದೆ ಎಂದು ಬಿಂಬಿಸುವ ಅಗತ್ಯ ಇಲ್ಲ. ಇವರು ಯಶಸ್ವಿ ಜಿಲ್ಲಾಧಿಕಾರಿಯಾ ಅಥವಾ ವಿಫಲ ಜಿಲ್ಲಾಧಿಕಾರಿಯ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ಜಿಲ್ಲೆ ಎಂದರೆ ಅಲ್ಲಿ ನೂರಾರು ಸಮಸ್ಯೆಗಳಿರುತ್ತವೆ. ಅದರಲ್ಲಿಯೂ ಕೊರೋನಾ ವಿಷಯದಲ್ಲಿ ಸಾವಿರ ಸವಾಲುಗಳು ಇದ್ದವು. ಅದು ಜಿಲ್ಲಾಧಿಕಾರಿ ಕಚೇರಿಯ ಕ್ಲಾರ್ಕ್ ನಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ತನಕ ಎಲ್ಲರಿಗೂ ಹೊಸದು. ಹಾಗಿರುವಾಗ ಕೊರೋನಾ ನಿಯಂತ್ರಣ ಮಾಡುವಲ್ಲಿ ಎಡವಟ್ಟಾಗಿದ್ದರೂ ಅದು ಸಾಮೂಹಿಕ ವೈಫಲ್ಯ. ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರೂ ಅದು ಎಲ್ಲರ ಸಂಘಟಿತ ಪ್ರಯತ್ನ ವಿನ: ಒಬ್ಬ ಜಿಲ್ಲಾಧಿಕಾರಿಯಿಂದ ಎಲ್ಲವೂ ಮಾಡಲು ಸಾಧ್ಯವಿಲ್ಲ. ಅವರೇನೂ ದೇವರು ಅಲ್ಲ. ದೇವಲೋಕದಿಂದ ಇಳಿದು ಬಂದವರೂ ಅಲ್ಲ.
ಇನ್ನು ಅವರ ವರ್ಗಾವಣೆಗೆ ರಾಜಕೀಯ ನಾಯಕರ, ಜನಪ್ರತಿನಿಧಿಗಳ ಒತ್ತಡ ರಾಜ್ಯ ಸರಕಾರದ ಮೇಲೆ ಇತ್ತು ಎಂದು ಅನೇಕರ ಅಂಬೋಣ. ಇದ್ದರೂ ಇರಬಹುದು. ಇಲ್ಲದೆಯೂ ಇರಬಹುದು. ಯಾಕೆಂದರೆ ಇದೆ ಎಂದು ಹೇಳಲು ನಾನೇನೂ ಜನಪ್ರತಿನಿಧಿಗಳ ಚೇಂಬರ್ ನೊಳಗೆ ಅವರೊಂದಿಗೆ ಕುಳಿತು ” ಜಿಲ್ಲಾಧಿಕಾರಿಯವರನ್ನು ಇಲ್ಲಿಂದ ಕಳುಹಿಸಿಬಿಡಿ, ನಮಗೆ ಬೇಡವೇ ಬೇಡಾ” ಎಂದು ಹೇಳಿಲ್ಲ ಮತ್ತು ಅವರ್ಯಾರು ನನಗೆ ಕರೆದು ” ಸಿಂಧೂ ರೂಪೇಶ್ ಅವರನ್ನು ಇಲ್ಲಿಂದ ಕಳುಹಿಸೋಣ, ನಿಮ್ಮ ಅಭಿಪ್ರಾಯ ಹೇಳಿ ಕಾಮತರೇ” ಎಂದು ಕೇಳಿಯೂ ಇಲ್ಲ. ಆದ್ದರಿಂದ ಕಣ್ಣಿಂದ ನೋಡಿದವನ ಹಾಗೆ ನಾನು ಜಡ್ಜ್ ಮೆಂಟ್ ಕೊಡುವುದಿಲ್ಲ. ಮಾತನಾಡುವವರು ಮಾತನಾಡಬಹುದು. ಅದು ಅವರ ಸ್ವಾತಂತ್ರ್ಯ. ಆದರೆ ನಾನು ಮಾತ್ರ ದಾಖಲೆ ಇಲ್ಲದೆ ಹೇಳಲು ಹೋಗುವುದಿಲ್ಲ. ಹಾಗಂತ ಜನಪ್ರತಿನಿಧಿಗಳಿಗೆ ಗೊತ್ತೆ ಆಗದೇ ಟ್ರಾನ್ಸಫರ್ ಆಯಿತು ಎಂದು ನಾನು ಹೇಳುವುದೂ ಇಲ್ಲ. ಇವರು ಒತ್ತಡ ಹಾಕಿಲ್ಲ ಎಂದು ಕೂಡ ಹೇಳಲಾರೆ. ಇನ್ನು ಜಿಲ್ಲಾಧಿಕಾರಿಯಾಗಿ ಸಿಂಧೂ ಅವರು ತಮಗೆ ಇದ್ದ ಅಧಿಕಾರದಲ್ಲಿ ಏನು ಮಾಡಬಹುದೋ ಅದನ್ನು ಮಾಡಿದ್ದಾರೆ. ಕೊರೋನಾ ನಿಯಂತ್ರಣದ ಸಭೆಗಳಲ್ಲಿ ಸಂಸದರ, ಉಸ್ತುವಾರಿ ಸಚಿವರ, ಶಾಸಕರ ಅಭಿಪ್ರಾಯಗಳನ್ನು ಕೇಳಿ ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ಏನು ಮಾಡುವುದರಿಂದ ನಿಯಂತ್ರಣ ಆಗುತ್ತೆ ಎಂದು ಲೆಕ್ಕ ಹಾಕಿ ಮಾಡಿದ್ದಾರೆ. ಬಹುಶ: ಈಗ ಬಂದಿರುವ ಹೊಸ ಜಿಲ್ಲಾಧಿಕಾರಿಯವರು ಒಂದಿಷ್ಟು ಹೊಸ ಐಡಿಯಾಗಳೊಂದಿಗೆ ರಂಗಕ್ಕೆ ಇಳಿದರೆ ಕೊರೋನಾ ನಿಯಂತ್ರಣ ಮಾಡಿದರೂ ಆಶ್ಚರ್ಯವಿಲ್ಲ. ಹಾಗಂತ ನಾನು ಮೊದಲೇ ಹೇಳಿದ ಹಾಗೇ ಡಿಸಿಗಳು ದೇವರಲ್ಲ.
ಇನ್ನು ಕೊನೆಯದಾಗಿ ಸಿಂಧೂ ರೂಪೇಶ್ ವರ್ಗಾವಣೆಗೂ ಅಕ್ರಮ ದನ ಸಾಗಾಟದ ವಿಷಯಕ್ಕೂ ಲಿಂಕ್ ಸಿಕ್ಕಿ ಬಿಟ್ಟಿದೆ. ಇವರು ಮೊನ್ನೆಯಷ್ಟೇ ಒಂದು ಹೇಳಿಕೆ ಕೊಟ್ಟು ” ಅಕ್ರಮ ದನ ಸಾಗಾಟ ಮಾಡುವವರನ್ನು ತಡೆದು ಹಲ್ಲೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು” ಎನ್ನುವ ಅರ್ಥದ ಮಾತುಗಳನ್ನು ಆಡಿದ್ದರು. ಅದಕ್ಕೆ ವಿರುದ್ಧವಾಗಿ ಯಾವುದೋ ವಾಟ್ಸಪ್ ಗ್ರೂಪಿನಲ್ಲಿ ಡಿಸಿ ವಿರುದ್ಧ ಆಕ್ರೋಶದ ಮಾತುಗಳು ಕೇಳಿ ಬಂದಿದ್ದವು. ಡಿಸಿ ವಿರುದ್ಧ ಹಿಂದೂ ಸಂಘಟನೆಗಳು ತಿರುಗಿ ಬೀಳುವ ಪ್ರಸಂಗ ಬಂದಿತ್ತು. ಆದರೆ ಗಿಡುಗ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿಯಾಯಿತು ಎನ್ನುವಂತೆ ಆ ಹೇಳಿಕೆ ಕೊಟ್ಟ ಕೆಲವೇ ಗಂಟೆಯೊಳಗೆ ಸಿಂಧೂ ಟ್ರಾನ್ಸಫರ್ ಹೊರಗೆ ಬಿದ್ದಿದೆ. ಇಲ್ಲಿ ನಾನು ಹೇಳುವುದೇನೆಂದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದು ಒಬ್ಬ ಜಿಲ್ಲಾಧಿಕಾರಿಯಾಗಿ ಅವರ ಕರ್ತವ್ಯ. ಆದರೆ ಅದೇ ಅಕ್ರಮ ಗೋಸಾಗಾಟ ಮಾಡುವವರನ್ನು ಕೂಡ ಬಿಡುವುದಿಲ್ಲ ಎಂದು ಹೇಳಿದ್ದರೆ ಅದು ಸರಿಯಾಗುತ್ತಿತ್ತು. ಈಗ ಏನಾಗಿದೆ ಎಂದರೆ ಅಕ್ರಮ ಸಾಗಾಟ ಮಾಡಿ, ನಿಮ್ಮನ್ನು ಯಾರಾದರೂ ತಡೆದರೆ ಅವರಿಗೆ ನಾವು ತಕ್ಕ ಶಾಸ್ತ್ರಿ ಮಾಡುತ್ತೇವೆ ಎಂದು ಹೇಳಿದ ಹಾಗೆ ಆಗಿತ್ತು. ಈ ನಿಟ್ಟಿನಲ್ಲಿ ಈಗ ಹಿಂದೂ ಸಂಘಟನೆಗಳಿಗೆ ಸಿಂಧೂ ವರ್ಗಾವಣೆ ಖುಷಿ ಕೊಟ್ಟಿದೆ.
ಒಂದಂತೂ ನಿಜ, ಇವರ ವರ್ಗಾವಣೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಜಿಲ್ಲಾಧಿಕಾರಿ ಬಂದು ಅವರ ಬುದ್ಧಿಮತ್ತೆಯಿಂದ ಕೊರೋನಾ ನಿಯಂತ್ರಣಕ್ಕೆ ಬಂದು ಸಾವು ನೋವು ಕಡಿಮೆಯಾದರೆ ಅಷ್ಟೇ ಸಾಕು. ಯಾರು ಜಿಲ್ಲಾಧಿಕಾರಿಯಾದರೇನು, ಜಿಲ್ಲೆ ಚೆನ್ನಾಗಿರಬೇಕು. ಯಾರೂ ಶಾಶ್ವತರಲ್ಲ, ವರ್ಗಾವಣೆಗೊಂಡವರು, ವರ್ಗಾವಣೆ ಮಾಡಿದವರೂ……
Leave A Reply