ಹೋರ್ಡಿಂಗ್ ಗೋಲ್ ಮಾಲ್ ಹೇ ಸಬ್ ಗೋಲ್ ಮಾಲ್ ಹೇ…!
ಈ ದಿನದಂದು ಮಂಗಳೂರಿನ ಅತೀ ದೊಡ್ಡ ಬ್ರಹ್ಮಾಂಡ ಭ್ರಷ್ಟಾಚಾರವನ್ನು ನಿಮ್ಮ ಮುಂದೆ ಇಡಬೇಕು ಎಂದು ಅನಿಸುತ್ತಿದೆ. ಹಾಗಾಗಿ ಬರೆಯುತ್ತಿದ್ದೆನೆ. ನನ್ನ ಪ್ರಕಾರ ಇದು ಒಂದು ಅಂಕಣದಲ್ಲಿ ಮುಗಿಯುವಂತದ್ದಲ್ಲ. ಬರೆಯುತ್ತಾ ಹೋದರೆ ಒಂದು ಸರಣಿಯಲ್ಲಿ ಇದನ್ನು ಬರೆಯಬೇಕೆಂದಿದ್ದೇನೆ. ನಾನು ಇದಕ್ಕೆ ಹೋರ್ಡಿಂಗ್ ಗೋಲ್ ಮಾಲ್ ಸರಣಿ ಎಂದು ಹೆಸರಿಡುತ್ತಿದ್ದೇನೆ. ಅದರ ಮೊದಲ ಸಂಚಿಕೆ ಇದು. ಏಕೆಂದರೆ ಬೆಂಗಳೂರಿನಲ್ಲಿಯೂ ಇಂತಹ ಗೋಲ್ ಮಾಲ್ ನಡೆದಿದೆ. ಅದು ಸುಮಾರು 2 ಸಾವಿರ ಕೋಟಿಯದ್ದು. ಬೆಂಗಳೂರಿಗೆ ಹೋಲಿಸಿದರೆ ನಮ್ಮದು ಅಷ್ಟು ದೊಡ್ಡ ನಗರವೂ ಅಲ್ಲ. ಇಲ್ಲಿನದು ಅಷ್ಟು ದೊಡ್ಡ ಭ್ರಷ್ಟಾಚಾರವೂ ಅಲ್ಲ. ಆದರೆ ಮಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಹೋರ್ಡಿಂಗ್ ನಲ್ಲಿ ಎಷ್ಟು ದೊಡ್ಡ ಗೋಲ್ ಮಾಲ್ ಆಗುತ್ತಿರುತ್ತದೆ ಎಂದರೆ ನೀವು ದಂಗಾಗಿ ಹೋಗುತ್ತಿರಿ. ಅದರ ಹಿಂದಿನ ಅಷ್ಟು ದೊಡ್ಡ ದೊಡ್ಡ ಮಂಡೆಗಳ ಭ್ರಷ್ಟಾಚಾರವನ್ನು ನಾನು ಹೊರಗೆ ಎಳೆಯುತ್ತೇನೆಯಾ? ನಾನು ನನ್ನ ಟೇಬಲಿನ ಮುಂದೆ ಹರಡಿ ಕುಳಿತಿರುವ ಈ ದಾಖಲೆಗಳ ರಾಶಿಯನ್ನು ನೋಡುವಾಗ ಇದಕ್ಕೆ ಇವತ್ತು ಒಳ್ಳೆಯ ದಿನದ ಮುಹೂರ್ತ ಸಿಕ್ಕಿದ್ದು ಮಾತ್ರ ನಿಜ.
ಈ ಒಟ್ಟು ಕಥೆಯನ್ನು ಹೇಳುವ ಮೊದಲು ಒಂದು ಚಿಕ್ಕ ಪ್ಲಾಶ್ ಬ್ಯಾಕ್ ಗೆ ಹೋಗಬೇಕಾಗುತ್ತದೆ. ಅದು 4ವರ್ಷದ ಹಿಂದಿನ ಒಂದು ದಿನ. ಆಗ ಹೊಸದಾಗಿ ಮನಪಾದ ವಲಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದವರು ಶ್ರೀಮತಿ ಎಂ.ಕೆ.ಪ್ರಮೀಳಾ. ಮಂಗಳೂರಿನಲ್ಲಿ ಅಪರೂಪಕ್ಕಾದರೂ ಕೆಲವು ದಿಟ್ಟ ಹೆಣ್ಣು ಮಕ್ಕಳು ಆಯಕಟ್ಟಿನ ಅಧಿಕಾರ ಸ್ಥಾನದಲ್ಲಿ ಬಂದು ಕುಳಿತಿದ್ದಾರೆ. ಹಾಗೆ ವಲಯ ಆಯುಕ್ತರ ಹುದ್ದೆ ಸ್ವೀಕರಿಸಿದ ಪ್ರಮೀಳಾ ಅವರು ಕಂದಾಯ ವಿಭಾಗದ ರೆವೆನ್ಯೂ ಇನ್ಸ್ ಪೆಕ್ಟರ್ ಗಳಿಗೆ ಹಾಗೂ ಬಿಲ್ ಕಲೆಕ್ಟರ್ ಗಳಿಗೆ ಒಂದು ಆದೇಶ ಹೊರಡಿಸುತ್ತಾರೆ. “ನೀವು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋರ್ಡಿಂಗ್ ಗಳ ಬಗ್ಗೆ ಮಾಹಿತಿ ಪಡೆದು ವರದಿ ನೀಡಬೇಕು” ಇದು ಅಂತಿಂಥ ಕೆಲಸ ಅಲ್ಲ. ಹುತ್ತದೊಳಗೆ ಕೈ ಹಾಕಿ ಹಾವು ಇದೆಯಾ ಎಂದು ನೋಡಬೇಕು ಎನ್ನುವಂತಹ ಆದೇಶ ಅದು. ಸರಿ, ಮಾಹಿತಿ ಪಡೆದು ರೆವೆನ್ಯೂ ಇನ್ಸ್ ಪೆಕ್ಟರ್ ಗಳು ಹಾಗೂ ಬಿಲ್ ಕಲೆಕ್ಟರ್ ಗಳು ವರದಿ ಮಾಡಿದರು, ಅದನ್ನು ಕಂಡು ಎಲ್ಲವೂ ಸರಿಯಿದೆ, ಕಾನೂನುಬದ್ಧವಾಗಿದೆ ಎಂದು ಪ್ರಮೀಳಾ ಅವರು ಸಮಾಧಾನಪಟ್ಟರು ಎಂದು ಬರೆಯುತ್ತೇನೆ ಎಂದು ನೀವು ಭಾವಿಸಬೇಕಾಗಿಲ್ಲ. ಹಾಗೆ ಬರೆಯುವುದಾದರೆ ಅದು ಭ್ರಷ್ಟಾಚಾರ ಹೇಗೆ ಆಗುತ್ತದೆ, ಹೋಗಲಿ, ವರದಿ ನೋಡಿ ಪ್ರಮೀಳಾ ಅವರು ತಕ್ಷಣ ತನಿಖೆಗೆ ಆದೇಶ ನೀಡಿದರು ಎಂದು ಕೂಡ ಬರೆಯುವ ಸಂಭವ ಬರುವುದಿಲ್ಲ. ಏಕೆಂದರೆ ಅಷ್ಟೇ ಆಗಿದಿದ್ದರೆ ಅದು ವಿಶೇಷ ಎಂದಾಗುತ್ತಿರಲಿಲ್ಲ. ಆದರೆ ಇಲ್ಲಿ ವಿಷಯವೇ ಬೇರೆ. ಪ್ರಮೀಳಾ ಅವರು ಮಾಹಿತಿ ಒಟ್ಟು ಮಾಡಿ ವರದಿ ನೀಡಲು ಆದೇಶ ಮಾಡಿದ್ದೇ ಕೊನೆ. ವರದಿ ಇವರ ಕೈಗೆ ಬರುವ ಮೊದಲೇ ಇವರನ್ನು ಕಂದಾಯ ವಿಭಾಗದಿಂದ ಮುಕ್ತಗೊಳಿಸಲಾಗಿದೆ. ಅಷ್ಟೇ ಅಲ್ಲ, ಪ್ರಮೀಳಾ ಅವರಿಗೆ ಬೇರೆ ಯಾವುದಾದರೂ ಹುದ್ದೆ ನೀಡಿದರೂ ಅಲ್ಲಿ ಕೂಡ ನಮ್ಮ ಬುಡಕ್ಕೆ ಸಂಚಕಾರ ತರುತ್ತಾರೆ ಎಂದು ಹೆದರಿದ ಜನಪ್ರತಿನಿಧಿಗಳು ಇವರಿಗೆ ಯಾವುದೇ ಜವಾಬ್ದಾರಿ ನೀಡದೆ ಕುಳ್ಳಿರಿಸಿದ್ದರು. ಆದ್ದರಿಂದ ಪಾಲಿಕೆಯ ದಕ್ಷ ಅಧಿಕಾರಿಯೊಬ್ಬರು ಒಂದೂವರೆ ವರ್ಷದಿಂದ ಯಾವುದೇ ಹುದ್ದೆ ಇಲ್ಲದೆ, ಬರೀ ಸಂಬಳ ಮಾತ್ರ ತೆಗೆದುಕೊಂಡು ಕುಳಿತುಕೊಳ್ಳಬೇಕಾಯಿತು. ಇದು ಮನಪಾ, ಇಲ್ಲಿ ಎಲ್ಲವೂ ನಡೆಯುತ್ತದೆ.
ಹೊರಗಿನಿಂದ ವೈಟ್ ಎಂಡ್ ವೈಟ್ ಕಾಣುವ ಪಾಲಿಕೆಯ ಒಳಗೆ ಎಂತೆಂತಹ ಅವಾಂತರಗಳು ನಡೆಯುತ್ತಿವೆ ಎನ್ನುವುದನ್ನು ಕಳೆದ ಮೂರು ತಿಂಗಳಿನಿಂದ ಹೇಳುತ್ತಾ ಬರುತ್ತಿದ್ದೇನೆ. ಆದರೆ ಒಬ್ಬ ಅಧಿಕಾರಿಗೆ ಸಂಬಳ ಕೊಟ್ಟು ಯಾವುದೇ ಹುದ್ದೆ ತೋರಿಸದೆ ಸುಮ್ಮನೆ ಯಾಕೆ ಕೂರಿಸಿದರು?. ಹೋರ್ಡಿಂಗ್ ಗೋಲ್ ಮಾಲ್ ಎಷ್ಟು ಬೃಹತ್ ಭ್ರಷ್ಟಾಚಾರದ ಕೂಪ ಎಂದು. ಇದು ಒಂದು ರೀತಿಯಲ್ಲಿ ಜೇನ್ನೋಣಗಳ ಗೂಡಿಗೆ ಕೈ ಹಾಕಿದಂತೆ. ಈಗಾಗಲೇ ಅಸಂಖ್ಯಾತ ಜೇನು ನೊಣಗಳು ಅಲ್ಲಿ ಗೂಡು ಕಟ್ಟಿಕೊಂಡು ಆರಾಮವಾಗಿವೆ. ಹಾಗಿರುವಾಗ ಪ್ರಮೀಳಾ ಅವರು ಅದಕ್ಕೆ ಕಲ್ಲು ಹೊಡೆದದ್ದು ಅವರಿಗೆ ಇಷ್ಟವಾಗಲಿಲ್ಲ. ಯಾರದ್ದೂ, ಯಾವುದೇ ಪ್ರಭಾವಕ್ಕೆ ಒಳಗಾಗದೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲು ಹೊರಡುವುದು ತಪ್ಪಾ, ಮಂಗಳೂರಿನ ಮಹಾಜನತೆಯೇ ಹೇಳಬೇಕು. ಅಷ್ಟಕ್ಕೂ ಹೋರ್ಡಿಂಗ್ ಗೋಲ್ ಮಾಲ್ ಎಂದರೇನು? ವಿವರಿಸುತ್ತೇನೆ, ಬನ್ನಿ. ಯಾವುದೇ ಹೋರ್ಡಿಂಗ್ ಹಾಕುವಾಗ ಮೊದಲಿಗೆ ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು ಎಂದು ಹೇಳುತ್ತೆನೆ. ನೀವು ಹಾಕುವ ಹೋರ್ಡಿಂಗ್ ಗೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲಿದೆಯಾಎನ್ನುವುದು ಮುಖ್ಯ. ಇನ್ನು ಎಷ್ಟು ದೊಡ್ಡ ಅಳತೆಯ ಹೋರ್ಡಿಂಗ್ ಹಾಕುತ್ತೀರಿ ಎಂದು ಮನಪಾಗೆ ಸ್ಪಷ್ಟವಾಗಿ ತಿಳಿಸಬೇಕು ಎನ್ನುವುದು ಕೂಡ ಮುಖ್ಯ. ಮನಪಾಗೆ ಚಿಕ್ಕ ಅಳತೆಯದ್ದು ಎಂದು ಹೇಳಿ ನೀವು ಬಳಿಕ ಅಲ್ಲಿ ದೊಡ್ಡ ಅಳತೆಯದ್ದು ಹಾಕಿದರೆ, ಯಾರಿಗೆ ಗೊತ್ತಾಗುತ್ತೆ ಎಂದು ಅಂದುಕೊಳ್ಳಬೇಡಿ. ಯಾರಿಗೂ ಗೊತ್ತಾಗದಿದ್ದರೂ ನನಗೆ ಗೊತ್ತಗುತ್ತೆ. ಹೋರ್ಡಿಂಗ್ ಹಾಕುವುದು ಖಾಸಗಿ ಜಾಗದಲ್ಲಿ ಎಂದು ಹೇಳಿ ನಂತರ ಸರಕಾರಿ ಜಾಗವನ್ನು ಬಳಸಿ ಹೋರ್ಡಿಂಗ್ ಹಾಕುವುದು ದೊಡ್ಡ ತಪ್ಪು. ಮನಪಾ ಜಾಗದಲ್ಲಿ ಹೋರ್ಡಿಂಗ್ ಹಾಕುವುದು ಎಂದು ಸ್ಪಷ್ಟವಾಗಿ ನಮೂದಿಸಬೇಕು. ಇನ್ನೂ ಒಂದು ಬದಿಯಲ್ಲಿ ಮಾತ್ರ ಜಾಹೀರಾತು ಎಂದು ಅನುಮತಿ ಪಡೆದು ಎರಡು ಬದಿಗಳನ್ನು ಕೂಡ ಉಪಯೋಗಿಸುವುದು ಶುದ್ಧ ದಗಲ್ ಬಾಜಿ. ಮೊದಲೇ ಹೋರ್ಡಿಂಗ್ ಗಳನ್ನು ಹಾಕಿ ಎಷ್ಟೋ ದಿನಗಳ ಬಳಿಕ ಅದಕ್ಕೆ ಅನುಮತಿಯನ್ನು ಕಾಟಾಚಾರಕ್ಕೆ ಎನ್ನುವಂತೆ ಪಡೆದುಕೊಳ್ಳುವುದು ಮೋಸದ ಪರಾಕಾಷ್ಟೆ. ಹೋರ್ಡಿಂಗ್ ಗಳಿಗೆ ದೀಪದ ವ್ಯವಸ್ಥೆ ಬೇಕಾ, ಬೇಡವೇ ಎಂದು ನಮೂದಿಸದೇ ನಂತರ ನಿಯಮ ಉಲ್ಲಂಘಿಸಿ ದೀಪದ ವ್ಯವಸ್ಥೆ ಮಾಡಿಕೊಳ್ಳುವುದು. ಒಂದಾ, ಎರಡಾ, ಹೋರ್ಡಿಂಗ್ ಗೋಲ್ ಮಾಲ್ ಎಂದರೆ ಅದು ಸಾವಿರ ಕೊಳವೆಗಳ ಹುತ್ತ ಇದ್ದ ಹಾಗೆ. ಕೈ ಹಾಕಿದ್ದೇನೆ.
Leave A Reply