
ಶುಕ್ರವಾರ ಪಾಲಿಕೆಯಲ್ಲಿ ನಗರ ಯೋಜನಾ ಸ್ಥಾಯಿ ಸಮಿತಿಯ ಮೀಟಿಂಗ್ ನಡೆಯಲಿದೆ. ಅಲ್ಲಿ ಕ್ರಮಸಂಖ್ಯೆ 1 ರಿಂದ 33 ರತನಕ ಒಟ್ಟು 147 ಕಾಮಗಾರಿಗಳ ತನಕ ಅನುಮತಿ ಕೊಡಲು ಬರಲಿದೆ. ಆದರೆ ಈ ಕಾಮಗಾರಿಗಳಿಗೆ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಈಗಾಗಲೇ ಪೂರ್ವಭಾವಿಯಾಗಿ ಅನುಮತಿ ಕೊಟ್ಟು ಆಗಿದೆ. ಕರ್ನಾಟಕ ಮುನ್ಸಿಪಲ್ ಆಕ್ಟ್ 1976ರ ಪ್ರಕಾರ ಸ್ಥಾಯಿ ಸಮಿತಿ ಅಧ್ಯಕ್ಷರು ಪೂರ್ವಭಾವಿ ಅನುಮತಿ ಕೊಡಲು ಅಧಿಕಾರ ಇಲ್ಲ. ಆದರೆ ಇವರು ಕೊಟ್ಟುಬಿಟ್ಟಿದ್ದಾರೆ. ಇಲ್ಲಿ ಈಗ ಇರುವ ಪ್ರಶ್ನೆ ಏನೆಂದರೆ ಮೇಯರ್ ಅವರು ಆ ಕಾಮಗಾರಿಗಳಿಗೆ ಸಂಬಂಧಿಸಿದ ಫೈಲುಗಳನ್ನು ತಮ್ಮ ಚೇಂಬರ್ ನ ಕಪಾಟಿನಲ್ಲಿ ಇಟ್ಟ ಬಳಿಕ ಅದು ಹೇಗೆ ಗಾಳಿಯಲ್ಲಿ ಹಾರಿ ಹೊರಗೆ ಬಂತು ಎನ್ನುವುದೇ ಈಗ ಎದ್ದಿರುವ ಪ್ರಶ್ನೆ. ಇದು ಸಾಮಾನ್ಯ ವಿಷಯವೇ ಅಲ್ಲ. ಇದೊಂದು ದೊಡ್ಡ ಹಗರಣ. ಆದರೆ ನಮ್ಮ ಅದೃಷ್ಟಕ್ಕೆ ದಿವಾಕರ ಪಾಂಡೇಶ್ವರ್ ಅವರು ಮೇಯರ್ ಆಗಿ ಇರುವುದರಿಂದ ಅವರಿಗೆ ಈ ಹಗರಣದ ವಾಸನೆ ಗೊತ್ತಾದ ತಕ್ಷಣ ಅವರು ಅದರ ಜಾಡು ಹಿಡಿದು ಹೊರಟಿದ್ದಾರೆ. ಆ ಕಾಮಗಾರಿಗಳ ಅಂದಾಜುಪಟ್ಟಿಗಳನ್ನು ಒಟ್ಟು ಮಾಡಿ ತಮ್ಮ ಚೇಂಬರ್ ನಲ್ಲಿ ಇಟ್ಟ ನಂತರ ಅದು ಹೇಗೆ ಹೊರಗೆ ಬಂತು ಎಂದು ಅವರಿಗೆ ಶಾಕ್ ಆಗಿದೆ.
ಇದೊಂದು ಅಪ್ಪಟ ಲಫಡಾ ವ್ಯವಹಾರ. ಅದಕ್ಕೆ ನಾನು ಮೊದಲೇ ಹೇಳಿದ್ದು. ಶಾಸಕದ್ವಯರು ಪಾಲಿಕೆಗೆ ಆಯ್ಕೆಯಾಗಿ ಬಂದಿರುವ ಹೊಸ ಪಟಾಲಾಂ ಅನ್ನು ನಿಯಂತ್ರಿಸದೇ ಹೋದರೆ ಅವರು ಮುಂದಿನ ಒಂದು ವರ್ಷದ ಒಳಗೆ ಪಾಲಿಕೆಯನ್ನು ಕಡಿಮೆ ರೇಟಿಗೆ ಯಾವುದಾದರೂ ಗುಜರಿಯ ಸಾಬಿಗೆ ಮಾರಿ ಹೊರಟು ಹೋಗಲಿದ್ದಾರೆ. ಸದ್ಯ ಪಾಲಿಕೆಯೆಂಬ ಚಕ್ರವ್ಯೂಹದ ಒಳಗೆ ದಿವಾಕರ ಪಾಂಡೇಶ್ವರ್ ಒಬ್ಬರೇ ಅಭಿಮನ್ಯುವಿನಂತೆ ಹೋರಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಕಾರ್ಪೋರೇಟರ್ ಗಳ ವಿರುದ್ಧ ಮಾತ್ರವಲ್ಲ, ವಾಂತಿಯಾಗುವ ಮಟ್ಟಿಗೆ ಬಹುಮತ ಬಂದಿರುವ ತಮ್ಮದೇ ಪಕ್ಷದ ಕಾರ್ಪೋರೇಟರ್ ಗಳು ಯಾವಾಗ ಹಗರಣ ಮಾಡಿ ಪಕ್ಷಕ್ಕೆ ಮರಳು ತಿನ್ನಿಸುತ್ತಾರೆ ಎಂದು ಕೂಡ ನೋಡಬೇಕಾಗಿರುವ ಪರಿಸ್ಥಿತಿ ಬಂದಿದೆ. ಇದ್ಯಾವುದಕ್ಕೂ ಸ್ಯಾಂಕ್ಷನ್ ಕೊಡಬಾರದು ಎಂದು ಮೇಯರ್ ಆದೇಶ ಮಾಡಿದ ಕಾರಣ ಸದ್ಯ ಪರಿಸ್ಥಿತಿ ಓಕೆ. ಆದರೆ ಇದನ್ನು ಹೀಗೆ ಬಿಡಬಾರದು. ಸೂಕ್ತ ತನಿಖೆ ಮಾಡಬೇಕು. ತನಿಖೆ ಮಾಡಿದರೆ ಅವರಿಗೆ ಬೇಜಾರಾಗುತ್ತದೆ, ಇವರ ಮುಖ ಸಣ್ಣದಾಗುತ್ತದೆ ಎಂದು ಸ್ವಯಂ ಬುದ್ಧಿವಂತರೆನಿಸಿಕೊಂಡವರು ಹಿಂದೆ ಸರಿಯಬಾರದು. ಹಿಂದೆ ಕಾಂಗ್ರೆಸ್ ಅಷ್ಟು ವರ್ಷ ಅಧಿಕಾರದಲ್ಲಿದ್ದಾಗ ಕಾರ್ಫೋರೇಟರ್ಸ್, ಗುತ್ತಿಗೆದಾರರರ ಮತ್ತು ಅಧಿಕಾರಿಗಳ ನಡುವೆ ಸಮಥಿಂಗ್ ಜೋರಾಗಿಯೇ ಇತ್ತು. ಈಗ ಬಿಜೆಪಿ ಬಂದ ಬಳಿಕವೂ ಇದೇ ಮುಂದುವರೆದರೆ ಕಾಂಗ್ರೆಸ್ಸಾದರೂ ಅಷ್ಟು ವರ್ಷ ಮಾಡಿದ ನಂತರ ಜನರು ತಿರಸ್ಕರಿಸಿದ್ದರು. ಬಿಜೆಪಿ ಪಾಲಿಕೆಯಿಂದ ಆಚೆಗೆ ಒಮ್ಮೆ ಕಿಕ್ ಔಟ್ ಆದರೆ ನಂತರ ಎಂಟ್ರಿ ಕಷ್ಟ. ಅಂದ ಹಾಗೆ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವವರು ಶರತ್ ಕುಮಾರ್. ಕರೆದು ವಿಚಾರಣೆ ಮಾಡುವ ಅಧಿಕಾರ ಇಬ್ಬರೂ ಶಾಸಕರಿಗೆ ಇದೆ. ಮಾಡದೇ ಹೋಗಿ ಇದು ಮುಂದುವರೆದು ಅಥವಾ ಬಿಜೆಪಿಯವರು ಮೇಯರ್ ದಿವಾಕರ್ ಪಾಂಡೇಶ್ವರ್ ಅವರಿಗೆನೆ ಒತ್ತಡ ಹಾಕಿ ಕೈಕಟ್ಟಿ ಮೂಲೆಗೆ ತಳ್ಳಿದರೆ ಸಂಶಯವೇ ಇಲ್ಲ ಬಿಜೆಪಿಯ ಮಟ್ಟಿಗೆ ಮುಂದಿನ ಒಂದೊಂದು ದಿನವೂ ನಿದ್ರೆ ಇಲ್ಲದೇ ಮಾಡಿಬಿಡಲಿದ್ದೇನೆ. ಅಂದ ಹಾಗೆ ನನಗೆ ಟೆಕ್ಷಿಕಲ್ ಜ್ಞಾನ ಸ್ವಲ್ಪ ಕಡಿಮೆ, ಆದರೆ ಪ್ರಾಕ್ಟಿಕಲ್ ಜ್ಞಾನ ಚೆನ್ನಾಗಿಯೇ ಇದೆ. ಅದಕ್ಕೆ ಬರಿ ಕಣ್ಣುಗಳಲ್ಲಿ ಕೂಡ ಇಂತಹ ಭ್ರಷ್ಟತೆ ಎದ್ದು ಕಾಣುತ್ತದೆ!
Leave A Reply