ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಗೆ ನಾಮಕರಣ…!!
ಮುಹೂರ್ತ ಕೂಡಿ ಬಂದಿದೆ. ಮೂರು ವರ್ಷಗಳಿಗಿಂತಲೂ ಹಿಂದಿನ ಹೋರಾಟ ಒಂದು ತಾತ್ವಿಕ ಸ್ವರೂಪ ಪಡೆದುಕೊಂಡು ಅದರ ಕೊನೆಯ ಕ್ಷಣ ಬುಧವಾರ ಬೆಳಿಗ್ಗೆ ಬಂದಾಗಿದೆ. ಹೌದು, ಹಂಪನಕಟ್ಟೆಯಿಂದ ಬಾವುಟಗುಡ್ಡೆಯಾಗಿ ಜ್ಯೋತಿ ಸರ್ಕಲ್ ತನಕ ಹೋಗುವ ರಸ್ತೆಗೆ ಇನ್ನು ಮುಂದೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ನಾಮಕರಣವಾಗಲಿದೆ. ಈ ಮೂಲಕ ವಿಜಯ ಬ್ಯಾಂಕ್ ನ ಹಾಲಿ, ಮಾಜಿ ನೌಕರರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.
ಈ ರಸ್ತೆಗೆ ಲೈಟ್ ಹೌಸ್ ಹಿಲ್ ರೋಡ್ ಎಂದೇ ಕರೆಯಲಾಗುತ್ತಿತ್ತು. ಆದರೆ ಅಲ್ಲಿಂದ ಲೈಟ್ ಹೌಸ್ ಯಾವತ್ತೋ ಕಳಚಿಹೋಗಿದೆ. ಅದರ ನಂತರ ಅದನ್ನು ಸಂತ ಎಲೋಶಿಯಸ್ ಕಾಲೇಜು ರಸ್ತೆ ಎಂದು ಕರೆಯುತ್ತಿದ್ದೇವೆ ಎಂದು ಕಾಲೇಜಿನವರು ಹೊಸ ವರಸೆ ತೆಗೆದರು. ಈ ಹಂತದಲ್ಲಿ ಒಂದು ಸಮುದಾಯದ ವೋಟ್ ತಪ್ಪುತ್ತದೆ ಎಂದು ಆಗಿನ ಶಾಸಕರು (ಈಗ ಮಾಜಿ) ತಮ್ಮ ಸರಕಾರದಲ್ಲಿ ಪ್ರಭಾವ ಬಳಸಿ ಆಗಿನ ನಗರಾಭಿವೃದ್ಧಿ ಸಚಿವರಾಗಿದ್ದ ರೋಶನ್ ಬೇಗ್ ಅವರಿಂದ ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ರಸ್ತೆಗೆ ಇಡುವುದರ ವಿರುದ್ಧ ತಡೆಯಾಜ್ಞೆ ತಂದರು.
ಅವರಿಗೆ ಅದು ಅನಗತ್ಯವಾಗಿತ್ತು. ಆದರೆ ಒಂದು ಸಮುದಾಯದವರಿಗೆ ಬೇಸರವಾಗುತ್ತದೆ ಎನ್ನುವ ಕಾರಣಕ್ಕೆ ಅವರು ಪಾಲಿಕೆಯಲ್ಲಿ ನಿಯಮಬದ್ಧವಾಗಿ ಮಂಜೂರಾಗಿದ್ದ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದರು. ಅದರ ನಂತರ ವಿಜಯಾ ಬ್ಯಾಂಕಿನ ನಿವೃತ್ತ ಉದ್ಯೋಗಿಗಳ ಸಂಘದವರು ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ಹೋದರು. ನ್ಯಾಯಾಲಯ ಯಥಾಸ್ಥಿತಿಯನ್ನು ಕಾಪಾಡುವಂತೆ ನಿರ್ದೇಶನ ನೀಡಿತ್ತು. ಆ ಆದೇಶದಲ್ಲಿ ಗೊಂದಲಕಾರಿ ಅಂಶ ಇದೆ ಎನ್ನುವ ಕಾರಣಕ್ಕೆ ಅದೇ ಸಂಘಟನೆಯವರು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯಕ್ಕೂ ಹೋದರು. ಅಂತಿಮವಾಗಿ ನ್ಯಾಯಾಲಯ ಈ ಒಟ್ಟು ವಿಚಾರವನ್ನು ರಾಜ್ಯ ಸರಕಾರದ ವಿವೇಚನೆಗೆ ಬಿಟ್ಟಿತ್ತು. ಈ ನಡುವೆ ರಾಜ್ಯದಲ್ಲಿ ಚುನಾವಣೆ ನಡೆದು ಮಂಗಳೂರು ನಗರ ದಕ್ಷಿಣಕ್ಕೆ ಹೊಸ ಶಾಸಕರ ಆಯ್ಕೆ ಆಯಿತು. ಆದರೆ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಬಂದಿರಲಿಲ್ಲ. ಆ ನಂತರ ಮತ್ತೆ ಒಂದು ವಿಷಯದ ಬಳಿಕ ಬಿಜೆಪಿ ಸರಕಾರ ಬಂದು ಬಿಡ್ತು. ಆದರೆ ಉಪಚುನಾವಣೆ, ಕೊರೊನಾ ಅದು ಇದು ಎಂದು ಅಂತಿಮವಾಗಿ ತಡವಾಗಿ ಈಗ ಮುಹೂರ್ತ ಕೂಡಿ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಒಟ್ಟು ವಿಷಯದ ಕುರಿತು ವಿಸ್ತ್ರತ ವರದಿ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆ ಕಮೀಷನರ್ ಅವರಿಗೆ ಆದೇಶ ನೀಡಿದ್ದರು. ಆ ನಿಟ್ಟಿನಲ್ಲಿ ಕಮೀಷನರ್ ಅವರು ಸಂಪೂರ್ಣ ಘಟನಗಳ ಬಗ್ಗೆ ವಿವರವಾಗಿ ಲಿಖಿತ ವರದಿಯನ್ನು ಮುಖ್ಯಮಂತ್ರಿಯವರಿಗೆ ಒಪ್ಪಿಸಿದ್ದರು. ಈಗ ಮುಖ್ಯಮಂತ್ರಿಯವರಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಈ ಮೂಲಕ ಲೈಟ್ ಹೌಸ್ ಇಲ್ಲದ ರಸ್ತೆಗೆ ಆ ರಸ್ತೆಯಲ್ಲಿಯೇ ಬಹುಕಾಲದಿಂದ ಕೆಲಸ ನಿರ್ವಹಿಸುತ್ತಿದ್ದ ವಿಜಯಾ ಬ್ಯಾಂಕಿನ ಸ್ಥಾಪಕರ ಹೆಸರು ಬಂದಿದೆ.
ಮೂಲ್ಕಿ ಸುಂದರರಾಮ ಶೆಟ್ಟಿಯವರು ಕೇವಲ ಆ ರಸ್ತೆಗೆ ಸೀಮಿತರಾದವರಲ್ಲ. ಅವರು ಇಡೀ ಕರಾವಳಿಗೆ ಬೇಕಾದವರು. ಅವರು ವಿಜಯಾ ಬ್ಯಾಂಕ್ ಸ್ಥಾಪಿಸಿ ಸಾವಿರಾರು ಜನರ ಬದುಕಿಗೆ ಆಧಾರಸ್ತಂಭವಾಗಿದ್ದರು. ಅಂತವರ ಹೆಸರು ಇಡಲು ಯಾವತ್ತೂ ಹಿಂದೆ ಮುಂದೆ ನೋಡಲೇಬಾರದು. ಆದರೆ ಹಿಂದಿನ ಸರಕಾರ ಆ ತಪ್ಪು ಮಾಡಿತ್ತು. ಅದಕ್ಕೆ ಪ್ರಾಯಶ್ಚಿತ್ತವೂ ಆಗಿದೆ. ಇಂತಹ ಅನೇಕ ರಸ್ತೆಗಳಿಗೆ, ವೃತ್ತಗಳಿಗೆ ಯಾರದ್ಯಾರದ್ದೋ ಹೆಸರು ಇದೆ. ಅವುಗಳಿಗೆ ನಮ್ಮ ಪುರಾಣ ಪುರುಷರ, ಸಾಮಾಜಿಕ ಚಿಂತಕರ, ಅಸಂಖ್ಯಾತ ಜನರ ಬದುಕಿಗೆ ಬೆಳಕು ನೀಡಿದ ಮಹನೀಯರ ಹೆಸರು ಇಟ್ಟರೆ ತುಂಬಾ ಒಳ್ಳೆಯದು. ಈ ಮೂಲಕ ನಾವು ಆ ಸಾಧಕರನ್ನು ಮುಂದಿನ ತಲೆಮಾರಿಗೆ ತಲುಪಿಸಿದಂತಾಗುತ್ತದೆ. ಆ ಕೆಲಸ ತಡವಾಗಿಯೂ ಆಗುತ್ತಿದೆ. ಇದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ….
Leave A Reply