ಮೈಸೂರಿನಲ್ಲಿ ಜಂಬೂಸವಾರಿ ಇದ್ದರೆ ನಮ್ಮಲ್ಲಿ ಹುಲಿವೇಷ ಯಾಕಿಲ್ಲ!!

ನಮ್ಮಲ್ಲಿ ಕುದ್ರೋಳಿಯಲ್ಲಿ ನಡೆಯುವ ನವರಾತ್ರಿಯ ಸಂಭ್ರಮವನ್ನು ಮಂಗಳೂರು ದಸರಾ ಎಂದೇ ಕರೆಯುತ್ತಾರೆ. ಜಿಲ್ಲೆ, ರಾಜ್ಯ, ದೇಶದಲ್ಲಿಯೂ ನಮ್ಮ ಮಂಗಳೂರು ದಸರಾಗೆ ತನ್ನದೇ ಆಗಿರುವ ಹೆಸರಿದೆ. ಇನ್ನು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಪೂಜಿಸುವ ಶ್ರೀ ಶಾರದಾ ಮಾತೆಯ ಉತ್ಸವಕ್ಕೆ ಇನ್ನೇನೂ ನೂರು ವರ್ಷ ತುಂಬಲು ಬೆರಳೆಣಿಕೆಯ ವರ್ಷಗಳು ಮಾತ್ರ ಬಾಕಿ. ಜಿಲ್ಲೆಯಲ್ಲಿ ಅನೇಕ ಕಡೆ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಸ್ಥಾಪಿಸಿ ಶಾರದೋತ್ಸವವನ್ನು ಆಚರಿಸಲಾಗುತ್ತದೆ. ಎಲ್ಲಾ ಸಾರ್ವಜನಿಕ ಶಾರದೋತ್ಸವಗಳು ಬಹಳ ವಿಜೃಂಭಣೆಯಿಂದ ಶೋಭಾಯಾತ್ರೆಯೊಂದಿಗೆ ಮುಕ್ತಾಯವಾಗುತ್ತವೆ. ಆ ಬಳಿಕ ಮುಂದಿನ ವರ್ಷದ ತನಕ ನಾವು ಕಾಯಬೇಕು. ಕುದ್ರೋಳಿ ದೇವಸ್ಥಾನದಲ್ಲಿಯೂ ನವರಾತ್ರಿ ಆಚರಿಸಿ ಈ ಬಾರಿ ಶೋಭಾಯಾತ್ರೆ ಇಲ್ಲದೆ ಅಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಅದೇ ರೀತಿಯಲ್ಲಿ ರಥಬೀದಿ ವೆಂಕಟರಮಣ ದೇವಸ್ಥಾನದಲ್ಲಿಯೂ ರಾಜಾಂಗಣದಲ್ಲಿಯೇ ಈ ಬಾರಿ ಮೂರ್ತಿಯ ನಿರ್ಮಾಣ ನಡೆಯುತ್ತಿದೆ. ಇದರಿಂದ ಸಭಾಂಗಣಕ್ಕೆ ಶಾರದಾ ಮಾತೆಯ ವಿಗ್ರಹವನ್ನು ತರುವ ಯಾತ್ರೆಯೂ ಸಾರ್ವಜನಿಕವಾಗಿ ಇರುವುದಿಲ್ಲ. ನವರಾತ್ರಿಯನ್ನು ಕೇಂದ್ರ ಸರಕಾರ, ರಾಜ್ಯ ಸರಕಾರದ ಮಾರ್ಗಸೂಚಿಯಂತೆ ನಡೆಸಲು ಎಲ್ಲಾ ಸಾರ್ವಜನಿಕ ಮಂಡಳಿಗಳು ಈಗಾಗಲೇ ನಿರ್ಧರಿಸಿವೆ.
ಮೈಸೂರು ದಸರಾ ಈ ಬಾರಿ ಸಂಪ್ರದಾಯದಂತೆ ನಡೆಯಲಿದೆ ಎಂದು ರಾಜ್ಯ ಸರಕಾರ ಘೋಷಿಸಿದೆ. ಗಜಪಡೆಗಳ ಆಗಮನದೊಂದಿಗೆ ಸಂಪ್ರದಾಯಕ್ಕೆ ಯಾವುದೇ ದಕ್ಕೆಯಾಗದೇ ದಸರಾ ನಡೆಯಲಿರುವುದು ನಮಗೂ ಖುಷಿ ಕೊಡುವ ಸಂಗತಿ. ಇರಲಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಕಿಕೊಟ್ಟಿರುವ ಮಾರ್ಗಸೂಚಿಗಳಂತೆ ದಸರಾ ಮೈಸೂರಿನಲ್ಲಿ ಆಚರಿಸಲ್ಪಡುವುದು ಪಕ್ಕಾ. ಈ ರಾಜ್ಯದ ಪ್ರಜೆಯಾಗಿ ನಮ್ಮ ನಾಡಹಬ್ಬ ದಸರಾ ಚೆನ್ನಾಗಿ ನಡೆಯಲಿ ಎಂದು ನಾವೆಲ್ಲರೂ ಆಶಿಸೋಣ. ಆದರೆ ಮೈಸೂರು ದಸರಾ ಆಚರಿಸುವ ಸಂಭ್ರಮದ ನಡುವೆ ನಮ್ಮ ಮಂಗಳೂರು ದಸರಾವನ್ನು ನಮ್ಮ ರಾಜ್ಯ ಸರಕಾರ ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ನಮ್ಮ ದಸರಾ ಎಂದರೆ ಹುಲಿವೇಷ ಅಥವಾ ತುಳುವಿನಲ್ಲಿ ಪಿಲಿನಲಿಕೆಯ ಸಂಭ್ರಮ. ಕರಾವಳಿಯಲ್ಲಿ ಹುಲಿವೇಷ ಇಲ್ಲದೇ ದಸರಾ ಹಬ್ಬವೇ ಇಲ್ಲ. ನಮಗೆ ನವರಾತ್ರಿ ಎಂದರೆ ದೇವಿ ದೇವಸ್ಥಾನಗಳಲ್ಲಿ ಪೂಜೆ, ಹೋಮ, ಹವನದಲ್ಲಿ ಭಕ್ತಿ ಶ್ರದ್ಧೆಯಿಂದ ಪಾಲ್ಗೊಳ್ಳುವುದಷ್ಟೇ ಅಲ್ಲ, ದೇವಸ್ಥಾನ ಮತ್ತು ಮನೆಯಂಗಳದಲ್ಲಿ ಹುಲಿವೇಷವನ್ನು ಕುಣಿಸುವುದು ಕೂಡ ಶತಮಾನದಿಂದ ನಡೆದುಬಂದ ಸಂಪ್ರದಾಯ. ಅಸಂಖ್ಯಾತ ಜನ ಹರಕೆಯ ರೂಪದಲ್ಲಿಯೂ ಹುಲಿವೇಷವನ್ನು ಹಾಕುತ್ತಾರೆ. ಇಡೀ ದೇಶದಲ್ಲಿ ತುಳುನಾಡಿನಲ್ಲಿ ಹಾಕುವಷ್ಟು ಸಂಪ್ರದಾಯಬದ್ಧವಾಗಿ ಹುಲಿವೇಷವನ್ನು ಹಾಕುವ ಕ್ರಮ ಇಲ್ಲ. ನಮ್ಮಲ್ಲಿ ಹುಲಿವೇಷ ಹಾಕುವವರು ನಿಷ್ಟೆಯಿಂದ ಬರಿಮೈಯಲ್ಲಿ ಬಣ್ಣ ಬಳಿದು ಅದಕ್ಕೆ ಸೂಟ್ ಆಗುವ ಶಿರಸ್ತಾಣ ಧರಿಸಿ ಸಂಪ್ರದಾಯಬದ್ಧವಾಗಿ ಕುಣಿದು ಜನರ ಮೆಚ್ಚುಗೆ ಗಳಿಸುವುದು ನಡೆದು ಬಂದಿದೆ. ಆ ಚೆಂಡೆಯ ಧ್ವನಿ ಮತ್ತು ಹುಲಿಗಳ ಕುಣಿತ ನೋಡುವುದೇ ಮನಸ್ಸಿಗೆ ಖುಷಿ. ಅದನ್ನು ಮಕ್ಕಳಿಗೆ ತೋರಿಸಲು ನಮ್ಮ ತುಳುನಾಡಿನಿಂದ ಹೊರಗೆ ಹೋಗಿ ನೆಲೆಸಿರುವ ನಮ್ಮವರು ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಬೇರೆ ರಾಜ್ಯ, ದೇಶಗಳಲ್ಲಿರುವ ಕರಾವಳಿಗರು ದಸರಾಗೆ ಮಂಗಳೂರು, ಉಡುಪಿಗೆ ಬರುವುದೇ ಹುಲಿವೇಷವನ್ನು ಕಣ್ಣುತುಂಬಿಕೊಳ್ಳಲು.
ಮೈಸೂರಿನಲ್ಲಿ ಜಂಬೂಸವಾರಿ ಎಷ್ಟು ಫೇಮಸ್ ಆಗಿದೆಯೋ ನಮ್ಮಲ್ಲಿ ಹುಲಿವೇಷ ಅಷ್ಟೇ ಫೇಮಸ್. ಆದ್ದರಿಂದ ಯಾವುದೇ ಕಾರಣಕ್ಕೂ ಈ ಬಾರಿ ಹುಲಿವೇಷ ಮಿಸ್ ಆಗದಂತೆ ನೋಡಿಕೊಳ್ಳುವ ಹೊಣೆ ನಮ್ಮ ಕರಾವಳಿಯ ಶಾಸಕರದ್ದು. ಹುಲಿವೇಷ ಯಾವುದೇ ಜಾತಿ, ಮತ, ಪಕ್ಷ ಎಂದು ಆಗುವುದಿಲ್ಲ. ಹುಲಿವೇಷ ಕುಣಿಯುವುದರಿಂದ ಮತ್ತು ಅದನ್ನು ನೋಡುವುದಕ್ಕೂ ಕೊರೊನಾಗೂ ಸಂಬಂಧವೇ ಇಲ್ಲ. ದೇವರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಎಲ್ಲರೂ ಇದನ್ನು ಗಮನಿಸಲೇಕು.
ಇನ್ನು ಈ ಬಾರಿ ಪಟಾಕಿ ಸಿಡಿಸುವುದಕ್ಕೂ ಜಿಲ್ಲಾಡಳಿತ ಅಂಕುಶ ಹಾಕಿದೆ. ನಮ್ಮಲ್ಲಿ ಬಡವನಿಂದ ಶ್ರೀಮಂತರ ತನಕ ಎಲ್ಲರೂ ತಮ್ಮ ತಮ್ಮ ಮಟ್ಟದಲ್ಲಿ ಪಟಾಕಿ ಖರೀದಿಸಿ ಸುಡುವುದು ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಈಗ ಕೊರೊನಾ ಇರುವುದರಿಂದ ಪಟಾಕಿ ಸುಡಬಾರದು ಎಂದರೆ ಅರ್ಥ ಏನು? ನಾನು ಜಾತ್ರೆಗಳಲ್ಲಿ, ಸಾರ್ವಜನಿಕವಾಗಿ ಪಟಾಕಿ ಸುಡುವ ಬಗ್ಗೆ ಹೇಳುತ್ತಿಲ್ಲ. ಅದು ಇದ್ದರೂ ಏನೂ ತೊಂದರೆ ಇಲ್ಲ. ಆದರೆ ಮನೆಯ ಅಂಗಳದಲ್ಲಿ ನಾವು ನಮ್ಮ ಜೇಬಿನ ಸೈಜಿಗೆ ತಕ್ಕಂತೆ ಒಂದಿಷ್ಟು ಪಟಾಕಿ ತಂದು ಸಂಭ್ರಮಿಸಿದರೆ ಅದರಿಂದ ಜಿಲ್ಲಾಡಳಿತಕ್ಕೆ ಆತಂಕ ಯಾಕೆ? ಪಟಾಕಿ ಹೊಡೆಯುವುದರಿಂದ ಹೇಗೆ ಕೊರೊನಾ ಬರುತ್ತದೆ? ಇದಕ್ಕೆ ವೈಜ್ಞಾನಿಕ ತಳಹದಿ ಇದೆಯಾ? ಸುಮ್ಮನೆ ಏನೋ ಯೋಚಿಸಿ ಏನೋ ನಿರ್ಭಂಧಿಸುವುದರಿಂದ ನಮ್ಮ ಆಚರಣೆಗೆ ಅಡ್ಡಿಪಡಿಸುವ ಯೋಚನೆಯನ್ನು ನಮ್ಮ ಆಡಳಿತ ವರ್ಗ ಬಿಡಬೇಕು. ಒಂದು ವೇಳೆ ಕಾಂಗ್ರೆಸ್ ಹೀಗೆ ಮಾಡಿದ್ದಿದ್ದರೆ ಬಿಜೆಪಿಯ ಅಪರೂಪದ ಕಾರ್ಯಕರ್ತನಿಂದ ಹಿಡಿದು ಸಚಿವ, ಸಂಸದರ ತನಕ ಎಲ್ಲರೂ ಬೊಬ್ಬೆ ಹೊಡೆದು ಹಿಂದೂ ಆಚರಣೆಗೆ ಅಡ್ಡಿಪಡಿಸುವ ಕಾಂಗ್ರೆಸ್ ಸರಕಾರಕ್ಕೆ ಬೆವರು ಇಳಿಸುತ್ತಿರಲಿಲ್ಲವಾ, ಹಾಗಿರುವಾಗ ಮೇಲಿನಿಂದ ಕೆಳಗಿನ ತನಕ ಬಿಜೆಪಿ ಸರಕಾರವೇ ಇರುವಾಗ ಹಿಂದೂ ಆಚರಣೆಗೆ ಅಡ್ಡಿ ಬರುವುದು ನೋಡುವಾಗ ಆಶ್ಚರ್ಯವಾಗುತ್ತದೆ!
Leave A Reply