ಲಸಿಕೆ ಫ್ರೀ ಕಳುಹಿಸುತ್ತೇವೆ, ನೀವು ಜನರಿಗೆ ಮಾರಿ ಜಿಎಸ್ ಟಿ ನಷ್ಟ ತುಂಬಿಸಿಕೊಳ್ಳಿ ಎಂದರೆ!!
ಇನ್ನು ಕೆಲವು ದಿನ ಮಾಧ್ಯಮಗಳಲ್ಲಿ ಒಂದೇ ಬೊಬ್ಬೆ. ಕೊರೊನಾ ಲಸಿಕೆ ಸಿಕ್ಕೆ ಬಿಟ್ಟಿದೆ ಎಂದೇ ಎಲ್ಲರದ್ದು ಒಂದೇ ಸಂಭ್ರಮ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದರೆ ಈ ಲಸಿಕೆಯನ್ನು 130 ಕೋಟಿ ಜನಸಂಖ್ಯೆ ಉಳ್ಳ ಭಾರತದಂತಹ ರಾಷ್ಟ್ರಗಳಲ್ಲಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಹಂಚುವುದು ಹೇಗೆ ಎನ್ನುವುದೇ ಈಗ ಉಳಿದಿರುವ ಪ್ರಶ್ನೆ. ಇನ್ನು ಇದಕ್ಕೆ ಜನಸಾಮಾನ್ಯರು ಹಣ ಕೊಡಲು ಇದೆಯಾ? ಕೊಡಲು ಇದ್ದರೆ ಎಷ್ಟು? ಮೋದಿ, ಯಡಿಯೂರಪ್ಪ ಅದರಲ್ಲಿಯೂ ಹಣ ಮಾಡಿದ್ರು ಎಂದು ಟೀಕೆ ಈಗಲೇ ವಿರೋಧ ಪಕ್ಷಗಳು ಫಿಕ್ಸ್ ಮಾಡಬಹುದಾ? ಇನ್ನು ಉಚಿತ ಕೊಡುವುದು ಬಿಡುವುದು ರಾಜ್ಯ ಸರಕಾರಕ್ಕೆ ಬಿಟ್ಟಿದ್ದು, ನಾವು ಫ್ರೀಯಾಗಿ ಕೊಡುತ್ತೇವೆ, ಲಸಿಕೆ ಮಾರಿ ಜಿಎಸ್ ಟಿಯಲ್ಲಿ ಆದ ನಷ್ಟ ಭರಿಸಿಕೊಳ್ಳಿ ಎಂದು ಕೇಂದ್ರ ಹೇಳಿದರೆ ಅಲ್ಲಿ ಮತ್ತೆ ರಾಜ್ಯಗಳಿಗೆ ಬಿಸಿತುಪ್ಪ. ಇನ್ನು ಲಸಿಕೆ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ಬಂತು ಎಂದೇ ಇಟ್ಟುಕೊಳ್ಳೋಣ. ಆಧಾರ್ ಕಾರ್ಡ್ ತೋರಿಸಿ ತೆಗೆದುಕೊಳ್ಳಬೇಕಾ? ಇಲ್ಲಿ ಕೂಡ ನನಗೆ ಮೊದಲು ಸಿಗಲಿ, ಅವನಿಗೆ ಮೊದಲಿಗೆ ಕೊಡಿಸಿ ಎಂದು ಶಾಸಕರಿಗೆ, ಮೇಯರ್ ಅವರಿಗೆ, ಮನಪಾ ಸದಸ್ಯರಿಗೆ ಶಿಫಾರಸ್ಸು ಮಾಡಿ ಎಂದು ಹಿತೈಷಿಗಳ ಫೋನ್ ಕರೆ ಬರಬಹುದಾ? ಏನಾಗಬಹುದು ಕಥೆ.
ಇನ್ಸಫ್ಲೂಯೆನ್ಸ್ ಮಾಡಿಸದಿದ್ರೆ ಕೋಪ, ಚುನಾವಣೆಗೆ ನೋಡುತ್ತೇವೆ ಎಂದು ಧಮ್ಕಿ. ಇನ್ನು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯಿಂದ ನಮ್ಮಲ್ಲಿಯೂ ಕೊಡಿಸುವ ವ್ಯವಸ್ಥೆ ಮಾಡಿ ಎಂದು ಜನಪ್ರತಿನಿಧಿಗಳಿಗೆ ದಂಬಾಲು. ಪರ್ಮಿಷನ್ ಸಿಕ್ಕಿದ ನಂತರ ನಮ್ಮಲ್ಲಿ ಅಡ್ಮಿಟ್ ಆದವರಿಗೆ ಮಾತ್ರ ಎಂದು ಆಸ್ಪತ್ರೆಗಳ ಹೊಸ ನಿಯಮ. ಮತ್ತೆ ಅವರಿಂದ ಹೆಚ್ಚುವರಿ ಬಿಲ್ ವಸೂಲಿ. ಪುನ: ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹೀಗೆ ರಗಳೆ ಮಾಡುತ್ತಿರುವ ಆಸ್ಪತ್ರೆಗಳಿಗೆ ಭೇಟಿ, ಫ್ರೀಯಾಗಿ ಕೊಡಮಾಡದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಮಾಧ್ಯಮಗಳ ಮುಂದೆ ಆಸ್ಪತ್ರೆಗಳಿಗೆ ಎಚ್ಚರಿಕೆ, ವೆನಲಾಕ್ ನಲ್ಲಿ ಕೊರೊನಾ ಲಸಿಕೆ ಖಾಲಿಯಾಗಿದೆ, ಬಡವರು ಕ್ಯೂ ನಿಂತಿದ್ದಾರೆ ಎಂದು ವಿರೋಧ ಪಕ್ಷದವರಿಂದ ಸುದ್ದಿಗೋಷ್ಟಿ, ಯಾವುದೋ ವೈದ್ಯರು ಅದು ಹೌದು ಎಂದು ಒಪ್ಪಿಗೆ ಹೇಳಿಕೆ, ಅದು ಪತ್ರಿಕೆಗಳಲ್ಲಿ ಪ್ರಿಂಟ್. ಅದನ್ನೇ ಹಿಡಿದುಕೊಂಡು ಮರುದಿನ ಕಾಂಗ್ರೆಸ್ ನವರಿಂದ ಆಸ್ಪತ್ರೆಗಳ ಮುಂದೆ ಪ್ರತಿಭಟನೆ, ಮೋದಿಗೆ ಸರಿಯಾಗಿ ಲಸಿಕೆ ಕಳುಹಿಸಲು ಆಗಲಿಲ್ಲ, ಸಂಸದರೇ ಮಾತನಾಡಿ ಎಂದು ಮಾಜಿಗಳ ಘೋಷಣೆ, ರಾತ್ರಿ ಟಿವಿಗಳಲ್ಲಿ ಚರ್ಚೆ, ಅಲ್ಲಿ ಜಿಲ್ಲಾಧಿಕಾರಿಯವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿ ಯಾರೂ ಗೊಂದಲಕ್ಕೆ ಈಡಾಗಬೇಡಿ, ಲಸಿಕೆ ಕೊರತೆ ಇದೆ, ಆದರೆ ಆದಷ್ಟು ಬೇಗ ಪೂರೈಸುತ್ತೇವೆ ಎಂದು ಸಮಜಾಯಿಷಿಕೆ. ಜನರಿಗೆ ಅರ್ಧ ಗೊಂದಲ, ಅರ್ಧ ಸಮಾಧಾನ. ಅಷ್ಟೊತ್ತಿಗೆ ಸಮುದಾಯ ಆರೋಗ್ಯ ಕೇಂದ್ರಗಳಿಗೂ ಕೊಡಿಸಿ ಎಂದು ಜನರ ಒತ್ತಾಯ, ಕೊಡಿಸದಿದ್ದರೆ ಗ್ರಾಮ ಪಂಚಾಯತ್ ಚುನಾವಣೆಗಳಿಗೆ ವೋಟ್ ಹಾಕದಿದ್ದರೆ ಏನು ಮಾಡುವುದು ಎಂದು ಹೆದರುವ ಜನಪ್ರತಿನಿಧಿಗಳಿಂದ ಜಿಲ್ಲಾಧಿಕಾರಿಯವರೊಂದಿಗೆ ಸಭೆ, ಮುಖ್ಯಮಂತ್ರಿಯವರೊಡನೆ ಸಭೆ, ಮನವಿ ಸಲ್ಲಿಕೆ ಫೋಟೋ, ವಿಡಿಯೋ. ಇತ್ತ ರಾಹುಲ್ ಗಾಂಧಿಯಂತವರು ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತಾವು ಕೂಡ ಕ್ಯೂನಲ್ಲಿ ಜನಸಾಮಾನ್ಯರಂತೆ ನಿಂತು ಲಸಿಕೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಅನುಕಂಪದ ನಾಟಕ. ಅತ್ತ ಸಂಸದ ಸುಬ್ರಹ್ಮಣ್ಯಸ್ವಾಮಿಯವರು ಟಿವಿಗಳಿಗೆ ಬೈಟ್ ಕೊಟ್ಟು ಕೆಲವರು ಡ್ರಗ್ಸ್ ಮನೆಗೆ ತರಿಸಿಕೊಳ್ಳುತ್ತಾರೆ, ಆದರೆ ಲಸಿಕೆಗೆ ಕ್ಯೂನಲ್ಲಿ ನಿಂತು ಡ್ರಾಮ ಮಾಡುತ್ತಾರೆ ಎಂದು ಹೇಳಿಕೆ. ಅದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಅವರು ಹಾಗೆ ಯಾರಿಗೆ ಹೇಳಿದ್ದು ಎನ್ನುವ ಪ್ರಶ್ನೆ ಇಟ್ಟು ವ್ಯಾಪಕ ಚರ್ಚೆ. ಇತ್ತ ಕಮ್ಯೂನಿಸ್ಟರಿಂದ ಲಸಿಕೆಯ ದೊಡ್ಡ ಪ್ರತಿಕೃತಿ ಮಾಡಿ ಅದಕ್ಕೆ ಬೆಂಕಿ ಕೊಟ್ಟು ನಮಗೆ ನಿಮ್ಮ ಲಸಿಕೆ ಬೇಡಾ, ಜೀವ ಬೇಕಾದರೆ ಕೊಡುತ್ತೇವೆ, ಲಸಿಕೆಯಲ್ಲಿ ಮೋದಿ ವಿಷ ಹಾಕಿರಬಹುದು ಎಂದು ಪ್ರತಿಭಟನೆ. ಬಿಜೆಪಿ ಸರಕಾರ ಇಲ್ಲದ ರಾಜ್ಯಗಳಲ್ಲಿ ನಮಗೆ ಕೇಂದ್ರದ ಲಸಿಕೆ ಬೇಡಾ, ಬೇಕಾದರೆ ಚೀನಾದ್ದು ತರಿಸುತ್ತೇವೆ ಎಂದು ಘೋಷಣೆ. ಇತ್ತ ಕ್ಯೂನಲ್ಲಿ ನಿಂತ ಜನರು ನೂಕುನುಗ್ಗಲಿಗೆ, ಬಿಸಿಲಿನ ಝಳಕ್ಕೆ, ಕೊರೊನಾ ಹರಡಿದ್ದ ಪರಿಣಾಮ ಕೆಲವು ಸಾವು, ಇದಕ್ಕೆ ಮೋದಿ ಕಾರಣ ಎಂದು ವಿರೋಧಿಗಳಿಂದ ಭಾರತ್ ಬಂದ್ ಘೋಷಣೆ. ಹೀಗೆ ಇನ್ನೇನೂ ಮುಂದಿನ ವರ್ಷದ ಆರಂಭದಲ್ಲಿ ನೋಡಲು ಇದೆಯೋ ಎನ್ನುವ ಆತಂಕ ನನ್ನದು.
ರಾಮದೇವ್ ಬಾಬಾ ಹಾಗೂ ಡಾ|ಗಿರಿಧರ್ ಕಜೆಯವರು ತಮ್ಮದು ಕೊರೊನಾ ಔಷಧಿ ಎಂದು ಹೇಳಿಕೊಳ್ಳುವಂತಿಲ್ಲ, ಬೇಕಾದ್ರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನ ಎಂದು ಹೇಳಿಕೊಳ್ಳಲಿ ಎಂದು ಇಂಡಿಯನ್ ಮೆಡಿಕಲ್ ಕೌನ್ಸಿಲ್ ತರಹದ್ದು ಯಾವುದೋ ಒಂದು ಕೇಂದ್ರಕ್ಕೆ ಒತ್ತಡ ತಂದು ಯಶಸ್ವಿಯಾಗಿದ್ದು ನಮಗೆಲ್ಲಾ ಗೊತ್ತೆ ಇದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತದ್ದು ಎಂದು ಬೇಕಾದರೂ ಹೇಳಲಿ ಎಂದು ಅವರು ಹೇಳಿದ್ದೇ ತಡ ಚಿಪ್ಸ್ ನಿಂದ ಹಿಡಿದು ಅಡುಗೆ ಎಣ್ಣೆಯನ್ನು ಸೇರಿಸಿ ಗೋಡೆಗೆ ಹೊಡೆಯುವ ಪೇಂಟ್ ತನಕ ಎಲ್ಲವೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಲೇಬಲ್ ಹಾಕಿ ಬಂದಿದೆ. ಇಂತವುದರಲ್ಲಿ ರೋಗ ನಿರೋಧಕ ಶಕ್ತಿ ನಿಜಕ್ಕೂ ಹೆಚ್ಚಿಸುವುದು ಇದೆಯಾ ಎಂದು ಯಾರೂ ಪರಿಶೀಲಿಸಿಲ್ಲ. ಆದರೆ ಆಯುರ್ವೇದದ ತಯಾರಕರು ಮಾತ್ರ ನಮ್ಮಲ್ಲಿ ಔಷಧಿ ಇದೆ ಎಂದು ಸಣ್ಣ ಹೇಳಿಕೆ ಕೊಟ್ಟರೂ ಆಲೋಪತಿಗಳಿಗೆ ಚಳಿ ಜ್ವರ ಬಂದು ಬಿಡುತ್ತೆ!
Leave A Reply